Udayavani | Feb 18, 2013
ಬಸ್ ಸಂಚಾರ, ವ್ಯಾಪಾರಕ್ಕೆ ತಟ್ಟಲಿದೆ ಬಿಸಿ
ಜನಜೀವನ ಅಸ್ತವ್ಯಸ್ತ ಸಾಧ್ಯತೆ
ಬೆಂಗಳೂರು: ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಫೆ.20,21ರಂದು ಕರೆ ನೀಡಿರುವ ದೇಶವ್ಯಾಪಿ ಮುಷ್ಕರದ ಪರಿಣಾಮ ರಾಜ್ಯದಲ್ಲಿ ಜನಜೀವನ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ.
ಎರಡು ದಿನಗಳ ಮುಷ್ಕರದಲ್ಲಿ ಮೊದಲ ದಿನವಂತೂ ನಗರ ಸಾರಿಗೆ ಬಸ್‌ಗಳು ಸೇರಿದಂತೆ ರಾಜ್ಯಾದ್ಯಂತ ಬಸ್‌ಗಳ ಸಂಚಾರ, ಶಾಲಾ-ಕಾಲೇಜುಗಳು, ಮಾರುಕಟ್ಟೆಗಳಲ್ಲಿ ವಹಿವಾಟು ನಡೆಯುವ ಸಾಧ್ಯತೆಗಳು ತುಂಬಾ ಕಡಿಮೆ. ಹಾಗಾಗಿ, ಬುಧವಾರ ನಾಗರಿಕರಿಗೆ ಮುಷ್ಕರದ ಬಿಸಿ ತುಸು ಜೋರಾಗಿಯೇ ತಟ್ಟಲಿದ್ದು, ಈ ತೊಂದರೆ ಅನುಭವಿಸಲು ಸಾರ್ವಜನಿಕರು ಸಜ್ಜಾಗಬೇಕಿದೆ.
ಕಾರ್ಮಿಕ ಸಂಘಟನೆಗಳೇ ಮುಷ್ಕರಕ್ಕೆ ಕರೆ ನೀಡಿರುವುದರಿಂದ ರಾಜ್ಯದಲ್ಲಿ ಕಾರ್ಮಿಕ ವಲಯ ಕೆಲಸ ಸ್ಥಗಿತಗೊಳಿಸಿ ಮುಷ್ಕರದಲ್ಲಿ ಪಾಲ್ಗೊಳ್ಳಲು ಈಗಾಗಲೇ ನಿರ್ಧರಿಸಿರುವುದರಿಂದ ಕಾರ್ಖಾನೆಗಳು, ಆಟೋಮೊಬೈಲ್ ಉದ್ಯಮಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಕಾರ್ಯನಿರ್ವಹಿಸುವುದು ಬಹುತೇಕ ಅನುಮಾನ. ಇದೇ ವೇಳೆ ಬ್ಯಾಂಕಿಂಗ್ ಸಂಘಟನೆಗಳೂ ಕೂಡ ಮುಷ್ಕರಕ್ಕೆ ಕೈಜೋಡಿಸಿರುವುದರಿಂದ ಬ್ಯಾಂಕ್ ವಹಿವಾಟಿಗೂ ಬ್ರೇಕ್ ಬೀಳಲಿದೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಂಟೂ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಈಗಾಗಲೇ ಬೆಂಬಲ ಸೂಚಿಸಿವೆ. ಇದರಿಂದ 20ರಂದು ಬೆಳಗ್ಗೆ 8ರಿಂದ ಸಂಜೆ 6ವರೆಗೆ ರಾಜ್ಯವ್ಯಾಪಿ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ. ತಿಂಗಳ ಅಂತರದಲ್ಲಿ ಸತತ ಎರಡನೇ ಬಾರಿ ಡೀಸೆಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ತತ್ತರಿಸಿರುವ ಕೆಎಸ್‌ಆರ್‌ಟಿಸಿ ಕೂಡ ಮುಷ್ಕರಕ್ಕೆ ಪರೋಕ್ಷ ಬೆಂಬಲ ನೀಡುತ್ತಿದೆ ಎಂದು ಮೂಲಗಳು ತಿಳಿಸಿವೆ.
ಅಹಿತಕರ ಘಟನೆ ನಡೆದರೆ ಸ್ಥಗಿತ
ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ್ ಪ್ರಸಾದ್, 'ಬಸ್ ಸಂಚಾರ ಸ್ಥಗಿತಕ್ಕೆ ಸಂಬಂಧಿಸಿದಂತೆ ಅಧಿಕೃತವಾಗಿ ಯಾವುದೇ ಆದೇಶ ಹೊರಡಿಸಿಲ್ಲ. ಆದರೆ, ಎಲ್ಲಾ ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿವೆ. ಮುಷ್ಕರದ ಸಂದರ್ಭದಲ್ಲಿ ಬಸ್ ಸಂಚರಿಸುವಾಗ ಅಹಿತಕರ ಘಟನೆಗಳು ನಡೆದರೆ, ಪರಿಸ್ಥಿತಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು' ಎಂದು ಸ್ಪಷ್ಟಪಡಿಸಿದರು.
ಸಂದರ್ಭಕ್ಕೆ ಅನುಗುಣವಾಗಿ ಕ್ರಮ
'ಇನ್ನು ಶಾಲಾ-ಕಾಲೇಜುಗಳಿಗೆ ಅಧಿಕೃತವಾಗಿ ರಜೆ ಘೋಷಣೆ ಮಾಡಿಲ್ಲ. ಆದರೆ, ಸ್ಥಳೀಯ ಪರಿಸ್ಥಿತಿಯನ್ನು ಆಧರಿಸಿ, ರಜೆ ಘೋಷಿಸುವ ಅಧಿಕಾರ ಆಯಾ ಜಿಲ್ಲಾ ಉಪನಿರ್ದೇಶಕರಿಗೆ ನೀಡಲಾಗಿದೆ. ಬಂದ್ ಸಂದರ್ಭಗಳಲ್ಲಿ ಶಾಲಾ-ಕಾಲೇಜುಗಳಿಗೆ ಮೊದಲೇ ರಜೆ ಘೋಷಿಸುವುದಿಲ್ಲ. ಬಸ್ ಸಂಚಾರ ಇಲ್ಲದೆ, ವಿದ್ಯಾರ್ಥಿಗಳಿಗೆ ತೊಂದರೆಯಾದರೆ ಡಿಡಿಪಿಐಗಳು ಸಂದರ್ಭಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಲಿದ್ದಾರೆ' ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಉಮಾಶಂಕರ್ ತಿಳಿಸಿದ್ದಾರೆ.
ಬಿಗಿ ಬಂದೋಬಸ್ತ್
ಮುಷ್ಕರದ ಸಂದರ್ಭದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ರಾಜ್ಯಾದ್ಯಂತ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದೆ. ಬಂದ್ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ. ಜತೆಗೆ ಕೇಂದ್ರೀಯ ಅರೆಸೇನಾ ಪಡೆಯ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಲ್ಲದೇ, ಬೆಂಗಳೂರಿನಲ್ಲಿ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‌ಆರ್‌ಪಿ) ಮತ್ತು ನಗರ ಸಶಸ್ತ್ರ ಪಡೆ (ಸಿಎಆರ್)ನ ತುಕಡಿಗಳು ಸೇರಿದಂತೆ 12 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ ಹೇಳಿದ್ದಾರೆ.
ಬೆಂಗಳೂರು: ಬೆಂಗಳೂರು ವಿವಿ ವ್ಯಾಪ್ತಿಯಲ್ಲಿ ಫೆ. 20 ಮತ್ತು 21ರಂದು ನಡೆಯಬೇಕಿದ್ದ ಸ್ನಾತಕೋತ್ತರದ ಮೊದಲ ಸೆಮಿಸ್ಟrರ್ ಪರೀಕ್ಷೆಗಳನ್ನು ಮುಷ್ಕರದ ಹಿನ್ನೆಲೆಯಲ್ಲಿ ಫೆ. 22ಕ್ಕೆ ಮುಂದೂಡಲಾಗಿದೆ.
ಮೊದಲ ಸೆಮಿಸ್ಟರ್‌ನ ಎರಡೂ ಪರೀಕ್ಷೆಗಳನ್ನು 22ರಂದೇ ನಡೆಸಲಾಗುವುದು ಎಂದು ವಿವಿ ಹಂಗಾಮಿ ಕುಲಸಚಿವ ಸೋಮಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.