Thursday, May 17, 2012
Last Updated: 1:59:49 PM IST
  • ನಾನೆಲ್ಲಿರುವೆ:
  • ಮುಖಪುಟ ಅಭಿಪ್ರಾಯ ನಾಗರಿಕ ಪತ್ರಿಕೊದ್ಯಮ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಇದು ಆಮೆ ನಡಿಗೆ

      • ಪ್ರದೀಪ್‌ ಬೇಕಲ್‌

        ನಿರ್ಮಾಣ ಕಾಲಾವಧಿ ಸಂದು ಹಲವು ತಿಂಗಳುಗಳೇ ಸರಿದು ಹೋದರೂ ರಸ್ತೆ ಅಭಿವೃದ್ಧಿ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ.

        ಬಂದಡ್ಕ-ಬಳಾಂತೋಡು ಲೋಕೋಪಯೋಗಿ ರಸ್ತೆಗೆ ಈ ಗತಿ ಬಂದಿದೆ. ಗುತ್ತಿಗೆದಾರರ ಮತ್ತು ಲೋಕೋಪಯೋಗಿ ಇಲಾಖೆಯ ನೌಕರರ ಮಧ್ಯೆ ಮುಸುಕಿನ ಗುದ್ದಾಟ ರಸ್ತೆ ಅಭಿವೃದ್ಧಿ ಕಾಮಗಾರಿ ವಿಳಂಬಗೊಳ್ಳಲು ಮುಖ್ಯ ಕಾರಣವೆಂದು ಸಾರ್ವತ್ರಿಕ ಆರೋಪ ಕೇಳಿ ಬಂದಿದೆ.

        ಮಲಬಾರ್‌ ಪ್ಯಾಕೇಜ್‌ನಲ್ಲಿ ಸೇರ್ಪಡೆಗೊಳಿಸಿ ಬಂದಡ್ಕ-ಬಳಾಂತೋಡು ರಸ್ತೆಯನ್ನು ಅಗಲಗೊಳಿಸಿ ಡಾಮರೀಕರಣಕ್ಕೆ 3.25 ಕೋಟಿ ರೂ. ಮಂಜೂರು ಮಾಡಲಾಗಿತ್ತು. ಎರಡು ವರ್ಷಗಳ ಹಿಂದೆ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗಿತ್ತು. 11 ತಿಂಗಳಲ್ಲಿ ರಸ್ತೆ ಕಾಮಗಾರಿ ಪೂರ್ತಿಗೊಳಿಸಲು ಕಾಲಾವಧಿ ನಿಗದಿಗೊಳಿಸಲಾಗಿತ್ತು. ಆದರೆ ವರ್ಷ ಎರಡು ಸಂದರೂ ರಸ್ತೆ ಕಾಮಗಾರಿ ಪೂರ್ತಿಯಾಗಿಲ್ಲ.

        ಬಂದಡ್ಕ-ಬಳಾಂತೋಡು ರೂಟ್‌ನಲ್ಲಿ 9.200 ಕಿಲೋ ಮೀಟರ್‌ ದೂರಕ್ಕೆ ರಸ್ತೆಯನ್ನು ಅಗಲಿಗೊಳಿಸಲು ಯೋಜಿಸಲಾಗಿತ್ತು. ಆದರೆ ಕಾಮಗಾರಿ ಆರಂಭಗೊಂಡು 8 ಕಿ.ಮೀ. ರಸ್ತೆಯನ್ನು ಅಗಲಗೊಳಿಸಿ, ಸೋಲಿಂಗ್‌ ನಡೆಸಿ ಡಾಮರೀಕರಣಕ್ಕೆ ಸಾಮಗ್ರಿಗಳನ್ನು ರಸ್ತೆ ಬದಿಯಲ್ಲಿ ಇಳಿಸಲಾಗಿತ್ತು. ಎಂಟು ಕಿ.ಮೀ. ದೂರದ ರಸ್ತೆ ಕಾಮಗಾರಿ ಬಹುತೇಕ ಮುಗಿಯುತ್ತಿದ್ದಂತೆ ಎಸ್ಟಿಮೇಟ್‌ನಲ್ಲಿ ಹೇಳಿದ ಮೊತ್ತವನ್ನು ಪೂರ್ಣವಾಗಿ ವ್ಯಯಿಸಲಾಯಿತೆಂದು ಗುತ್ತಿಗೆದಾರರು ಹೇಳುತ್ತಿದ್ದಾರೆ.

        ರಸ್ತೆಯನ್ನು ಅಗಲಗೊಳಿಸುವ ಕಾಮಗಾರಿಗಾಗಿ ಚರಂಡಿಯನ್ನು ಎತ್ತರಿಸಬೇಕಾಗಿ ಬಂದುದರಿಂದ ನಿಗದಿತ ಟೆಂಡರ್‌ ಮೊತ್ತ ಮುಗಿದು ಹೋಗಲು ಕಾರಣವೆಂದು ಗುತ್ತಿಗೆದಾರರು ಸಬೂಬು ನೀಡುತ್ತಾರೆ. ಮಲಬಾರ್‌ ಪ್ಯಾಕೇಜ್‌ನಲ್ಲಿ ಮಂಜೂರು ಮಾಡಿದ ಮೊತ್ತದ ಕಾಮಗಾರಿಗೆ ಇನ್ನೊಂದು ಎಸ್ಟಿಮೇಟ್‌ ಮಾಡಲು ಸಾಧ್ಯತೆಯಿಲ್ಲದಿರುವುದರಿಂದ ದುರಸ್ತಿ ಕಾರ್ಯ ಎಂಬ ಹೆಸಿರನಲ್ಲಿ ರಸ್ತೆ ಕಾಮಗಾರಿಯನ್ನು ಪೂರ್ತಿಗೊಳಿಸಲು ಮತ್ತೆ 30 ಲಕ್ಷ ರೂ. ಮಂಜೂರು ಮಾಡಿದೆ.

        ಬಳಾಂತೋಡು ಸೇತುವೆಯಿಂದ ಪೇಟೆವರೆಗಿನ ಭಾಗದಲ್ಲಿ ಪ್ರಾಥಮಿಕ ಕಾಮಗಾರಿಯನ್ನೂ ಆರಂಭಿಸಿಲ್ಲ. ಕಾಮಗಾರಿಗೆ ಮೊತ್ತ ಮಂಜೂರು ಮಾಡಿದ ಹಣದಲ್ಲಿ ಕಾಮಗಾರಿ ಪೂರ್ತಿಗೊಳಿಸುವ ಮುನ್ನವೇ ಅದೇ ಯೋಜನೆಗೆ ದುರಸ್ತಿ ಕಾರ್ಯ ಎಂಬ ಹೆಸರಿನಲ್ಲಿ ನಿಧಿ ಮಂಜೂರು ಮಾಡಿದ ಪ್ರಶ್ನೆಗೆ ಉತ್ತರವಿಲ್ಲದಂತಾಗಿದೆ.

        ಎರಡು ಪಂಚಾಯತ್‌ಗಳು ಮತ್ತು ಎರಡು ತಾಲೂಕುಗಳನ್ನು ಪರಸ್ಪರ ಸಂಪರ್ಕಿಸುವ ಈ ರಸ್ತೆ ಮಲೆನಾಡು ನಿವಾಸಿಗಳಿಗೆ ಬಹಳಷ್ಟು ಪ್ರಯೋಜನವಾಗಲಿದೆ. ರಸ್ತೆ ಕಾಮಗಾರಿ ವಿಳಂಬವಾಗುತ್ತಿದ್ದರೂ ರಾಜಕೀಯ ಪಕ್ಷಗಳ ಮುಖಂಡರು ಮೌನಕ್ಕೆ ಶರಣಾದ ಬಗ್ಗೆ ಸ್ಥಳೀಯರು ಕೆಂಡಾಮಂಡಲವಾಗಿದ್ದಾರೆ.

        ಎರಡು ವರ್ಷಗಳ ಹಿಂದೆ ಈ ರೂಟ್‌ನಲ್ಲಿ ಐದು ಬಸ್‌ಗಳು ಸೇವೆ ನಡೆಸುತ್ತಿದ್ದವು. ರಸ್ತೆ ಕಾಮಗಾರಿ ಆರಂಭಿಸಿ ದಂದಿನಿಂದ ನಿಲುಗಡೆಗೊಂಡ ಬಸ್‌ ಸರ್ವೀಸ್‌ ಮತ್ತೆ ಆರಂಭಗೊಂಡಿಲ್ಲ. ಬಸ್‌ ಪ್ರಯಾಣ ನಿಲುಗಡೆಗೊಂಡದ್ದರಿಂದ ಸ್ಥಳೀಯ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

        ಸ್ಥಳೀಯ ನಿವಾಸಿಗಳು ಅನುಭವಿಸುತ್ತಿರುವ ನರಕ ಯಾತನೆಯನ್ನು ಕಂಡೂ ಕಾಣದಂತೆ ಸಂಬಂಧಪಟ್ಟ ಅಧಿಕಾರಿ ಗಳು ನಟಿಸುತ್ತಿದ್ದಾರೆ. ಈ ರಸ್ತೆ ಅಭಿವೃದ್ಧಿಯ ಬಗ್ಗೆ ಪ್ರತಿಕ್ರಿಯಿಸಲೂ ಹಿಂಜರಿಯುತ್ತಿದ್ದಾರೆ. ಈ ರಸ್ತೆ ಕಾಮಗಾರಿ ನಿಲುಗಡೆಗೊಂಡಿರುವುದರಿಂದ ಸ್ಥಳೀಯ ನಿವಾಸಿಗಳು ಆಕ್ರೋಶಗೊಂಡಿದ್ದು, ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದ್ದಾರೆ.


      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus