ಬಿ.ಎಸ್.
ಕಾಸರಗೋಡು-ಸೀತಾಂಗೋಳಿ ರಸ್ತೆಯ ಮಾಯಿಪ್ಪಾಡಿ ಸೇತುವೆ ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಹಂತದಲ್ಲಿದ್ದು, ದುರಂತಕ್ಕಾಗಿ ಕಾಯುತ್ತಿದ್ದ ಲೋಕೋಪಯೋಗಿ ಇಲಾಖೆ ಕೊನೆಗೂ ಕಣ್ಣು ತೆರೆದಿದೆ. ಸೇತುವೆ ಯನ್ನು ಮುಚ್ಚುವಂತೆ ಇಲಾಖೆ ಇದೀಗ ಆದೇಶ ನೀಡಿದ್ದು ಕಾನೂನಿನ ಮುಂದೆ ಪಾರಾಗುವ ಮಾರ್ಗ ಕಂಡುಕೊಂಡಿದೆ.
ಪ್ರತಿದಿನ ಹತ್ತಾರು ಬಸ್‌ಗಳು, ನೂರಾರು ವಾಹನಗಳು ಓಡಾಟ ನಡೆಸುವ ಈ ಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದು ಯಾವುದೇ ಕ್ಷಣದಲ್ಲಿ ಭೀತಿಯಲ್ಲಿತ್ತು. ಆದರೆ ಲೋಕೋಪಯೋಗಿ ಇಲಾಖೆ ಸೇತುವೆಯ ಬಳಿಯಲ್ಲಿ ಎರಡು ವರ್ಷಗಳ ಹಿಂದೆ ಸೂಚನಾ ಫಲಕವೊಂದನ್ನು ಸ್ಥಾಪಿಸಿ ಮೌನವಾಗಿ ಕುಳಿತಿತ್ತು.
ಇಲಾಖೆಯ ಸೂಚನಾ ಫಲಕದಲ್ಲಿ ಸೇತುವೆ ಶಿಥಿಲಗೊಂಡಿದೆ ಭಾರ ಇಳಿಸಿ ತೆರಳುವಂತೆ ದಾಖಲಿಸಲಾಗಿದ್ದರೂ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ.
ಸಂಚಾರ ನಿಷೇಧ : ಭಾರೀ ದುರಂತವೊಂದು ಖಚಿತವಾಗಿದ್ದ ಈ ಸೇತುವೆಯ ಭೀತಿ ಮೂಡಿಸುವ ಸ್ಥಿತಿಯನ್ನು ಕಳೆದ ವರ್ಷ "ಉದಯವಾಣಿ' ಸಚಿತ್ರ ವರದಿಯೊಂದಿಗೆ ಪ್ರಕಟಿಸಿತ್ತು. ಇದೀಗ ಲೋಕೋಪಯೋಗಿ ಇಲಾಖೆ ಸೇತುವೆಯ ಶಕ್ತಿ ಕ್ಷಯಗೊಂಡಿದೆ ಎಂಬ ನಿರ್ಧಾರಕ್ಕೆ ಬಂದಿದ್ದು ಇದರ ಮೂಲಕ ಸಂಚಾರ ನಿಷೇಧಿಸಲು ಆದೇಶ ನೀಡಿದೆ.
ಮಾಯಿಪ್ಪಾಡಿಯಲ್ಲಿ ಪರ್ಯಾಯ ಸೇತುವೆ ನಿರ್ಮಿಸಲು 75 ಲಕ್ಷ ರೂ. ವೆಚ್ಚದ ಯೋಜನೆ ಯೊಂದನ್ನು ಇಲಾಖೆ ತಯಾರಿಸಿ ಸರಕಾರಕ್ಕೆ ಸಲ್ಲಿಸಿದ್ದರೂ ಇದಕ್ಕೆ ಮಂಜೂರಾತಿ ದೊರೆತಿಲ್ಲ.
ಸರಕಾರದ ಮೇಲೆ ಒತ್ತಡ ಹೇರಲು ಶಾಸಕರು ಸಾಕಷ್ಟು ಆಸಕ್ತಿ ವಹಿಸಿಲ್ಲವೆಂಬ ಆರೋಪವೂ ಕೇಳಿಬಂದಿದೆ. ಸೇತುವೆಯ ದುರಸ್ತಿ ಕೆಲಸಗಳನ್ನು ಸಕಾಲದಲ್ಲಿ ನಡೆಸದೇ ಇರುವುದು ಕೂಡಾ ಇದು ಶಿಥಿಲಗೊಳ್ಳಲು ಕಾರಣವಾಗಿದೆ. ನೂರಾರು ವರ್ಷಗಳ ಸೇತುವೆಗಳು ಭದ್ರ ವಾಗಿದ್ದರೂ ಮೂವತ್ತು ವರ್ಷಗಳ ಹಿಂದೆಯಷ್ಟೆ ನಿರ್ಮಿಸಿದ್ದ ಈ ಸೇತುವೆ ಪೂರ್ಣವಾಗಿ ಶಿಥಿಲಗೊಂಡಿರುವುದೂ ವಿಶೇಷವಾಗಿದೆ.
ಬದಲಿ ವ್ಯವಸ್ಥೆಯಿಲ್ಲ : ಕಾಸರಗೋಡು - ಸೀತಾಂಗೋಳಿ ದಾರಿಯಲ್ಲಿ ಇಪ್ಪತ್ತರಷ್ಟು ಬಸ್‌ಗಳು ಒಂದು ನೂರಕ್ಕೂ ಹೆಚ್ಚು ಬಾರಿ ಈ ಸೇತುವೆ ಮೇಲೆ ಹಾದುಹೋಗುತ್ತಿದ್ದರೆ ನೂರಾರು ಖಾಸಗಿ ವಾಹನಗಳು ಸಂಚರಿಸುತ್ತಿವೆ. ಜಿಲ್ಲೆಯ ಪ್ರಮುಖ ಕೈಗಾರಿಕಾ ಪ್ರಾಂಗಣವಾದ ಕಿನ್‌ಫ್ರಾ, ಕೇಂದ್ರ ಸರಕಾರದ ನವರತ್ನ ಸಂಸ್ಥೆಯಾದ ಎಚ್‌ಎಎಲ್ ಫ್ಯಾಕ್ಟರಿ ಮೊದಲಾದೆಡೆಗೆ ಕಾಸರಗೋಡಿನಿಂದ ತೆರಳಲು ಅತೀ ಸನಿಹದ ದಾರಿಯೆಂಬ ನೆಲೆಯಲ್ಲಿ ಈ ರಸ್ತೆಯಲ್ಲಿ ಪ್ರತಿದಿನ ನೂರಾರು ಘನವಾಹನಗಳು ತೆರಳುತ್ತಿದ್ದವು. ಜಿಲ್ಲೆಯ ಪ್ರಸಿದ್ಧ ಕ್ಷೇತ್ರಗಳಾದ ಮಧೂರು ಕ್ಷೇತ್ರ, ಅನಂತಪುರ ಕ್ಷೇತ್ರ, ಮಾಯಿಪ್ಪಾಡಿ ಅರಮನೆ,ಜಿಲ್ಲಾ ಅಧ್ಯಾಪಕ ತರಬೇತಿ ಕೇಂದ್ರ, ಫಾರ್ಮಸಿ ಕಾಲೇಜು ಮೊದಲಾದೆಡೆಗಳಿಗೆ ತೆರಳಲು ಈ ದಾರಿ ಅನಿವಾರ್ಯವಾಗಿದೆ.
ಇದೀಗ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಸೇತುವೆ ಮುಚ್ಚಲು ಲೋಕೋಪಯೋಗಿ ಇಲಾಖೆ ಆದೇಶಿಸಿದ್ದು, ಪ್ರಯಾಣಿಕರಿಗೆ ತೀವ್ರ ಆತಂಕ ಮೂಡಿಸಿದೆ. ಈ ಹಿಂದೆ ಸೇತುವೆ ಶಿಥಿಲಗೊಂಡಿದೆ ಭಾರ ಇಳಿಸಿ ತೆರಳಿ ಎಂಬ ಸೂಚನಾಫಲಕ ಸ್ಥಾಪಿಸಿದಾಗ ಅದನ್ನು ಅನುಷ್ಠಾನಕ್ಕೆ ತರಲು ಯಾವುದೇ ನಿಯಂತ್ರಣವಿರಲಿಲ್ಲ, ಇದೀಗ ಸಂಚಾರ ನಿಷೇಧದ ಆದೇಶಕ್ಕೂ ಇದೇ ಗತಿಯೇ ಎಂಬ ಸಂದೇಹವೂ ಮೂಡಿದೆ.