Sunday, May 26, 2013
Last Updated: 12:24:08 AM IST
  • ನಾನೆಲ್ಲಿರುವೆ:
  • ಮುಖಪುಟ ಅಭಿಪ್ರಾಯ ನಾಗರಿಕ ಪತ್ರಿಕೊದ್ಯಮ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಮೂರು ದಶಕದ ಯಾತ್ರೆ

      • ಯೋಗೀಶ್‌ ಕೈರೋಡಿ, ರತ್ನದೇವ್‌ ಪುಂಜಾಲಕಟ್ಟೆ

        ಕೆಲವು ವರ್ಷಗಳ ಹಿಂದೆಲ್ಲಾ ನಮ್ಮ ಹಳ್ಳಿಜನಕ್ಕೆ ಬೇಕಾದ ಜವುಳಿ, ಬಳೆ, ಅಡುಗೆ ಪಾತ್ರೆ ಮುಂತಾದ ಅಗತ್ಯವಸ್ತುಗಳು ವ್ಯಾಪಾರಿಗಳ ಮೂಲಕ ಮನೆಬಾಗಿಲಿಗೆ ಬರುತ್ತಿದ್ದವು ಇಂತಹ ವ್ಯಾಪಾರಿಗಳನ್ನು ನಮ್ಮ ಜನ ವ್ಯಾಪಾರಿಗಳೆಂದು ನೋಡದೆ ತಮ್ಮ ಬಂಧುಬಳಗದ ಭಾಗವಾಗಿಯೇ ನೋಡುತ್ತಿದ್ದರು. ಯಾಕೆಂದರೆ ಇಂತಹ ವ್ಯಾಪಾರಿಗಳ ಪರಿಚಯ, ಕೊಡು-ಕೊಳ್ಳುವಿಕೆಯ ಬಾಂಧವ್ಯ ದೀರ್ಘ‌ ಕಾಲದ್ದು,

        ಚಿಕ್ಕಪುಟ್ಟ ಪರಿಕರಗಳಿಗಾಗಿ ಪೇಟೆಗೆ ಹೋಗಿ ಬರುವ ಕಷ್ಟದಿಂದ ಪಾರುಮಾಡುತ್ತಿದ್ದ ಇಂತಹ ಮನೆ ಮನೆಗೆ ಬರುವ ವ್ಯಾಪಾರಿ ಆಪದ್ಭಾಂಧವ. ಪೇಟೆಗೆ ಹೋಗಿ ಬರುವುದು ಅಂದು ಅಷ್ಟು ಸುಲಭ ಸಾಧ್ಯವೂ ಅಲ್ಲ. ಆದರೆ ಇಂದು ಮನೆ ಮನೆ ಬಂದು ವ್ಯಾಪಾರ ಮಾಡುವವರ ಮಹತ್ವ ಕಡಿಮೆಯಾಗಿದೆ.

         ಆದರೆ ಮೂಡುಬಿದಿರೆ ಸಮೀಪದ ಪುಚ್ಚಮೊಗರಿನ ಎಸ್‌.ಎಂ. ಇಬ್ರಾಹಿಂ ಮಾತ್ರ ತನ್ನ  25ರ ಹರೆಯದಿಂದ ಅಲ್ಯೂಮೀನಿಯಂ ಪಾತ್ರೆಗಳನ್ನು ಮನೆ ಮನೆಗೆ ತೆರಳಿ ವ್ಯಾಪಾರ ಮಾಡುತ್ತಾ ಬಂದವರು ಇಂದು ತಮ್ಮ 60ರ ವಯಸ್ಸಿನಲ್ಲೂ ಮುಂದುವರಿಸುತ್ತಿದ್ದಾರೆ.

        ದಕ್ಷಿಣ ಕನ್ನಡದ ಮೂಲೆ ಮೂಲೆಗೂ ತೆರಳಿ ಅಗತ್ಯ ಪಾತ್ರೆಗಳನ್ನು ನೀಡುತ್ತಿರುವ ಇವರು ಬಾಜನದ ಬ್ಯಾರಿ (ಪಾತ್ರೆಯ ವ್ಯಾಪಾರಿ) ಎಂದೇ ಚಿರಪರಿಚಿತರು.

        ತಾನು ವ್ಯಾಪಾರಕ್ಕೆ ತೊಡಗಿದ ಅವಧಿಯಲ್ಲಿ ಕೆ.ಜಿ.ಗೆ 18 ರೂಪಾಯಿ ಇದ್ದದ್ದು ಇಂದು 260 ರೂಪಾಯಿಗೆ ಏರಿದೆ. ಆ ಸಮಯದಲ್ಲಿ ದಿನವೊಂದಕ್ಕೆ 16 ಕೆ.ಜಿ ಮಾರಾಟವಾದರೆ ಇಂದು 10 ಕೆ.ಜಿ.ಯಷ್ಟು ಮಾರಾಟವಾಗುತ್ತಿದೆ. ಆದರೆ ಹಿಂದಿನ ಪಾತ್ರೆಗಳಷ್ಟು ಇಂದಿನ ಪಾತ್ರೆಗಳು ದೀರ್ಘ‌ ಬಾಳಿಕೆ ಬರುತ್ತಿಲ್ಲ. ಗುಣಮಟ್ಟ  ಕುಸಿದಿದೆ ಎಂದು ಜನರು ಆರೋಪಿಸುತ್ತಾರೆ ಎಂದು ತಮ್ಮ ಅನುಭವವನ್ನು  ಹಂಚಿಕೊಳ್ಳುತ್ತಾರೆ.

        ಹಿಂದೆಲ್ಲಾ ತೀರ್ಥಹಳ್ಳಿ , ಭದ್ರಾವತಿ ಮುಂತಾದ ಕಡೆಯು ಕಾಲ್ನಡಿಗೆಯಲ್ಲಿ ದೊಡ್ಡ ಬುಟ್ಟಿಯಲ್ಲಿ ವಿವಿಧ ಆಕಾರದ ಪಾತ್ರೆ ವೈವಿಧ್ಯಗಳನ್ನು ಹೊತ್ತು ಕೊಂಡು ವ್ಯಾಪಾರ ಮಾಡಿದವರು.

         ಇತ್ತೀಚೆಗೆ ವಯಸ್ಸಾಗಿರುವುದರಿಂದ ಅಜೆಕಾರ್‌, ಬೆಳ್ತಂಗಡಿ, ಗುರುವಾಯನಕೆರೆ, ಬಂಟ್ವಾಳ,  ಮುಡಿಪು, ವಾಮದಪದವು, ಹೊಕ್ಕಾಡಿಗೋಳಿ, ನಾರಾವಿ ಪರಿಸರವನ್ನು ತನ್ನ ಜಂಗಮ ಪಾತ್ರೆಯ ವ್ಯಾಪಾರ ಕೇಂದ್ರವಾಗಿ ಇಟ್ಟುಕೊಂಡವರು. ಹಳ್ಳಿ ಹಳ್ಳಿಗಳ  ಬಹುತೇಕ ಯಾರಿಗೂ ತನ್ನ ಹೆಸರು ತಿಳಿಯದಿದ್ದರೂ ಬಿಳಿ ಪಂಚೆ, ಬಿಳಿ ಷರ್ಟು, ಬೆಳ್ಳಗಿನ ವಿಶಾಲ ಮುಖದ, ದೃಢಕಾಯದ ದೊಡ್ಡ ಗಾತ್ರದ ಹೊಳಪಾದ ಪಾತ್ರೆಗಳನ್ನು ಹೊತ್ತು ಗಂಭೀರ ನಡೆಯಲ್ಲಿ ಹಸನ್ಮುಖೀಯಾಗಿ ಅಮ್ಮಾ ಬಾಜನ ಬೋಡೆ ಎಂದು ಮನೆಮನೆಗೆ ಬರುವ ಜಂಗಮ ಪಾತ್ರೆಧಾರಿಯ ಚಿತ್ರ ಹಳ್ಳಿಗರಲ್ಲಿ   ಸ್ಥಾವರಗೊಂಡಿದೆ.

        ನರನಾಡಿಯ ಪರಿಚಯ ಉಳ್ಳವರು

        ಶುಕ್ರವಾರದ ಹೊರತಾಗಿ ಪ್ರತಿದಿನವೂ ತನ್ನ ಕಾರ್ಯಕ್ಷೇತ್ರದಲ್ಲಿ ಬ್ಯುಸಿಯಾಗಿರುವ ಇವರು ಅಂಗಡಿ ಮೂಲಕ ಮಾರಾಟ ಮಾಡುವುದು ಬಂಧನವೆಂಬ ಭಾವನೆ ತಳೆದವರು.  ಮುಕ್ತ ಸುತ್ತಾಟದ ಅನುಭವ ದೊಡ್ಡದು. ಜನರು ಇಟ್ಟಿರುವ ಪ್ರೀತಿ, ವಿಶ್ವಾಸ ದೊಡ್ಡದು. ಈ ಬಗೆಯ ಸಂತೋಷವನ್ನು ದುಡ್ಡಿನ ಮೂಲಕ ಅಳತೆ ಮಾಡುವುದು ಅಸಾಧ್ಯ. ತನ್ನ ವೃತ್ತಿಯಲ್ಲಿ ಅಪಾರ ಗೌರವ ಸಂತೃಪ್ತಿ ಇರುವುದು ಅವರ ಮಾತಿನ ಮೂಲಕ ವ್ಯಕ್ತವಾಗುತ್ತದೆ.

        ಹೊಸಮನೆಗೆ ಬೇಕಾದ ಸಂಪೂರ್ಣ ಪಾತ್ರೆ ಪರಿಕರಗಳನ್ನು ನೇರ ಕಂಪೆನಿಯಿಂದ ಮನೆಮಾಲಿಕರಿಗೆ ಒದಗಿಸಿದ ಹಿರಿಮೆ ಇವರದ್ದು. ತನ್ನ ದಿನದ ದುಡಿಮೆಯಲ್ಲಿ ಕನಿಷ್ಠ 10 ರೂಪಾಯಿಯನ್ನಾದರೂ ಅಶಕ್ತರಿಗೆ ದಾನಮಾಡುವ ಪರಿಪಾಠ ರೂಢಿಸಿಕೊಂಡು ಬಂದ ಸಾಹೇಬರ ಜೀವನಾನುಭವ ದೊಡ್ಡದು. ಪ್ರೀತಿ-ಪ್ರಾಮಾಣಿಕತೆ ಮೊದಲಾದ ಮೌಲ್ಯಗಳು ನಮ್ಮೆಲ್ಲಾ ಮತ-ಪಂಗಡಗಳ ಸಂಕುಚಿತತೆಯನ್ನು ಮೀರಿದ್ದು ಎಂಬಂಶ ಇವರ ಜೀವನ ಯಾತ್ರೆಯಿಂದ ತಿಳಿದು ಬರುತ್ತದೆ.

        ಬದಲಾದ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯ ವಿವೇ ಚನೆಗೆ ನೇರ ಮಾರುಕಟ್ಟೆ  ಪದ್ಧತಿಯ ಅವಲೋಕನಕ್ಕೆ , ಪಜೀತಿಯ ನೂರಾರು ನವಿರಾದ ಪ್ರಸಂಗಗಳ ಸಂಗ್ರಹಕ್ಕೆ ಎಸ್‌.ಎಂ. ಇಬ್ರಾಹಿಂ ತೆರೆದ ಪುಸ್ತಕ. ಬಹುತೇಕ ಯಾರಿಗೂ ತನ್ನ ಹೆಸರು ತಿಳಿಯದಿದ್ದರೂ ಬಿಳಿ ಪಂಚೆ, ಬಿಳಿ ಷರ್ಟು, ಬೆಳ್ಳಗಿನ ವಿಶಾಲ ಮುಖದ ದೃಢ ಕಾಯದ ದೊಡ್ಡ ಗಾತ್ರದ ಹೊಳಪಾದ ಪಾತ್ರೆಗಳನ್ನು ಹೊತ್ತು ಗಂಭೀರ ನಡೆಯಲ್ಲಿ ಹಸನ್ಮುಖೀಯಾಗಿ ಅಮ್ಮಾ ಬಾಜನ ಬೋಡೆ ಎಂದು ಮನೆಮನೆಗೆ ಬರುವ ಜಂಗಮ ಪಾತ್ರೆಧಾರಿಯ ಚಿತ್ರ ಹಳ್ಳಿಗರಲ್ಲಿ ಸ್ಥಾವರಗೊಂಡಿದೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus