Sunday, May 19, 2013
Last Updated: 5:31:18 AM IST
  • ನಾನೆಲ್ಲಿರುವೆ:
  • ಮುಖಪುಟ ಅಭಿಪ್ರಾಯ ನಾಗರಿಕ ಪತ್ರಿಕೊದ್ಯಮ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಬಲು ರುಚಿ ಅಲಸಂಡೆ

      • ಗಣೇಶ ಕುಳಮರ್ವ

        ಫ್ಯಾಬೇಸಿ ಎಂಬ ಸಸ್ಯ ಕುಟುಂಬಕ್ಕೆ ಸೇರಿದ ಅಲಸಂಡೆ ಭಾರತೀಯ ಮೂಲದ ಒಂದು ಪೌಷ್ಠಿಕಾಂಶಯುಕ್ತ ಹಸುರು ತರಕಾರಿ. ಅಲಸಂಡೆ ಎಳತಾಗಿರುವಾಗ ತಿನ್ನಲು ಬಲು ರುಚಿ. ಕಾಣಲು ಇದು ಬಳ್ಳಿಯಂತಿರುವುದಲ್ಲದೆ ಇದೊಂದು ಬಳ್ಳಿಯಲ್ಲಿ ಬೆಳೆಯುವ ತರಕಾರಿ ಕೂಡ ಹೌದು.

        ಅಲಸಂಡೆಯ ಇತಿಹಾಸದ ಪ್ರಕಾರ ""ಅದು ಭಾರತದಲ್ಲಿ ಹುಟ್ಟಿ ಚೀನ ಮತ್ತು ಪೂರ್ವದ ಇತರ ರಾಷ್ಟ್ರಗಳಿಗೆ ಪಸರಿಸಿತು'. ಆಫ್ರಿಕಾದ ಕಾಡುಗಳಲ್ಲಿ ಇದನ್ನೇ ಹೋಲುವ ಹಲವು ಸಸ್ಯ ಪ್ರಭೇದಗಳು ಕಾಣಸಿಗುತ್ತವೆಯಂತೆ. ಆದ್ದರಿಂದ ಸಸ್ಯಶಾಸ್ತ್ರಜ್ಞರು ಇದರ ಮೂಲ "ಆಫ್ರಿಕಾ' ಇರಬಹುದು ಎಂದು ಅನುಮಾನಿಸಿದ್ದಾರೆ.

        ವೈವಿಧ್ಯ ಹೆಸರು: ಅವಿಭಜಿತ ದಕ್ಷಿಣ ಕನ್ನಡದಲ್ಲಿ ಅಲಸಂಡೆ ಎಂದು ಕರೆಯುವ ಈ ತರಕಾರಿಯನ್ನು ಬೇರೆ ಬೇರೆ ಕಡೆಗಳಲ್ಲಿ ವಿವಿಧ ಹೆಸರುಗಳಿಂದ ಗುರುತಿಸುವರು. ಆಂಗ್ಲ ಭಾಷೆಯಲ್ಲಿ ಈಗ "cowpea'  ಎನ್ನಲಾಗುತ್ತದೆ. ಮೊದಲು "callivance' ಎನ್ನುತ್ತಿದ್ದರು. ಮೈಸೂರಿನ ಕೆಲವೆಡೆ "ಕಾರಮಣಿ', "ತರಗುಣಿ', ಕುರÕಂದಿ ಮತ್ತೆ ಕೆಲವೆಡೆ ಅಲಸಂದೆ ಎಂದೆಲ್ಲ ಕರೆಯುತ್ತಾರೆ.

        ಪೌಷ್ಟಿಕಾಂಶ: ಅಲಸಂಡೆಯಲ್ಲಿ ಉತ್ತಮ ಪೌಷ್ಟಿಕಾಂಶಗಳಿವೆ. ಮುಖ್ಯವಾಗಿ ಕಬ್ಬಿಣ, "ಎ', "ಬಿ1', "ಬಿ2' ಜೀವಸತ್ವ, ಪಿಷ್ಟ, ಕೊಬ್ಬು, ಸಸಾರಜನಕ, ಸುಣ್ಣ, ಸೋಡಿಯಂ, ರಂಜಕ, ನಯಾಸಿನ್‌ ಇತ್ಯಾದಿ. ಪೌಷ್ಟಿಕಾಂಶಗಳಲ್ಲದೆ ಮಾನವ ದೇಹಕ್ಕೆ ಅಗತ್ಯವಾದ ಕೆಲವು  "ಅಮೈನೋ ಆಮ್ಲ'ಗಳನ್ನು ಹೊಂದಿದೆ.

        ಔಷಧವಾಗಿ: ಅಲಸಂಡೆ ಬಳಸಿ ತಯಾ ರಿಸಿದ ಪದಾರ್ಥಗಳ ಸೇವನೆಯಿಂದ ಮಲಬದ್ಧತೆ ನಿವಾರಣೆಯಾಗಬಲ್ಲದು. ಅಲಸಂಡೆಯ ಒಣಗಿದ ಕಾಳುಗಳನ್ನು ಬೇಯಿಸಿದ ನೀರನ್ನು  ಪ್ರತಿದಿನ ಒಂದು ಲೋಟ ಕುಡಿಯುವುದರಿಂದ ಆಮಪಿತ್ತ ಶಮನವಾಗುವುದು.

        ಅಲಸಂಡೆಯ ಎಳೆಯ ಹಸುರು ಕಾಳನ್ನು  ಬೆಲ್ಲದೊಂದಿಗೆ ಸೇವಿಸುವುದರಿಂದ ಬಾಯಿ ಹುಣ್ಣು, ಅಲಸಂಡೆಯಿಂದ ತಯಾರಿಸಿದ ಹುರಿ ಗಾಳನ್ನು ಪ್ರತಿ ನಿತ್ಯ ಒಂದು ಹಿಡಿ ಯಂತೆ ಸೇವಿಸಿದರೆ ನರದೌರ್ಬಲ್ಯ ಇಲ್ಲದಾಗುವುದು. ಅಲಸಂಡೆ ಕಾಳುಗಳ ಹೆಚ್ಚಿನ ಸೇವನೆ ಹೊಟ್ಟೆ ಉಬ್ಬರಿಸುವಿಕೆಗೆ ಕಾರಣವಾದೀತು. ಎಸಿಡಿಟಿ ತೊಂದರೆ ಇರುವವರು ಈ ಬಗ್ಗೆ ಎಚ್ಚರ ವಹಿಸುವುದು ಅಗತ್ಯ.

        ಅಡುಗೆ: ಅಲಸಂಡೆಯನ್ನು ಬಳಸಿ ನಾನಾ ವಿಧದ ರುಚಿಕಟ್ಟಾದ ಅಡುಗೆಗ ಳನ್ನು ತಯಾರಿಸಲಾಗುತ್ತದೆ. ಮುಖ್ಯವಾಗಿ ಪಲ್ಯ, ಹುಳಿ, ಎಳೆಯ ಕಾಳಿನಿಂದ ಸಾರು, ಸಾಂಬಾರು ಇತ್ಯಾದಿ. ಅಲ್ಲದೆ ಪಲಾವು ತಯಾರಿ ವೇಳೆಯೂ ಇದನ್ನು ಬೀನ್ಸ್‌ ಬದಲಾಗಿ ಬಳಕೆ ಮಾಡುತ್ತಾರೆ. ಇದರ ಕಾಳಿನಿಂದ ತಯಾರಿಸುವ ಹುರಿಗಾಳು ಬಳ ತಿನ್ನಲು ಸ್ವಾದಿಷ್ಟಕರವಾಗಿರುತ್ತದೆ.

        ಕೃಷಿ: ಇದೊಂದು ಅಲ್ಪಾವಧಿ ಬೆಳೆಯಾಗಿದ್ದು, ಎಲ್ಲ ತರದ ಮಣ್ಣುಗಳಲ್ಲೂ ಬೆಳೆಯ ಬಹುದು. ಆದರೆ ನೀರು ಬಹು ಬೇಗನೆ ಇಂಗಿ ಹೋಗುವ ಮರಳು ಮಿಶ್ರಿತ ಗೊಡ್ಡು ಉತ್ತಮ. ಚೆನ್ನಾಗಿ ಬಸಿದು ಹೋಗುವ ಮರಳು ಮಿಶ್ರಿತ ಕೆಂಪು ಅಥವಾ ಕಪ್ಪು ಮಣ್ಣುಗಳಲ್ಲೂ ಅಲಸಂಡೆ ಉತ್ತಮ ಇಳುವರಿ ನೀಡುತ್ತದೆ. ಸಮತಟ್ಟಾದ ಪ್ರದೇಶಗಳಲ್ಲಿ ಇದನ್ನು ಬೇಸಗೆ, ಮಳೆಗಾಲಗಳೆರಡರಲ್ಲೂ ಬೆಳೆಯ ಬಹುದು. ಇದರಲ್ಲಿ ಮಳೆಗಾಲದ, ಬೇಸಗೆ ಕಾಲಗಳಲ್ಲಿ ಬೆಳೆಯಲು ಬೇರೆ ಬೇರೆ ತಳಿಗಳಿವೆ.

        ಬಿತ್ತನೆ: ಸಾಮಾನ್ಯವಾಗಿ ಮೇ- ಜುಲೈ ಹಾಗೂ ಡಿಸೆಂಬರ್‌ - ಜನವರಿ ತಿಂಗಳುಗಳಲ್ಲಿ ಅಲಸಂಡೆ ಕೃಷಿ ಮಾಡುತ್ತಾರೆ. ವಿಪರೀತ ಚಳಿ ಅಥವಾ ಸೆಕೆ ಇಲ್ಲದ ಪ್ರದೇಶಗಳಲ್ಲಿ ವರ್ಷವಿಡೀ ಬೆಳೆಯ ಬಹುದು. ಸುಮಾರು 3 ಫೀಟ್‌ ಅಗಲದ ಕಾಲುವೆಗಳನ್ನು ತಯಾರಿಸಿ. ಕಾಲುವೆಯಲ್ಲಿರುವ ಮಣ್ಣಿಗೆ ಸ್ವಲ್ಪ ಸುಡುಮಣ್ಣು ಅಥವಾ ಬೂದಿ ಮಿಶ್ರ ಮಾಡಿ.

        ಅದರಲ್ಲಿ 1ರಿಂದ 1 1/2 ಫೀಟ್‌ ದೂರದಲ್ಲಿ ಸಣ್ಣ ಗುಳಿಗಳನ್ನು  ಮಾಡಿ ಬೀಜ ಬಿತ್ತಬೇಕು. ಮಳೆಗಾಲಕ್ಕೆ ಎತ್ತರದ ಮಡಿಗಳಾದರೆ ಸೂಕ್ತ. ಬಿತ್ತನೆ ವೇಳೆ ಪ್ರತಿ ಕುಳಿಗಳಲ್ಲಿ 3-4 ಬೀಜ ಹಾಕಿ, ಅವು ಮೊಳಕೆ ಬಂದಾಗ ಹೆಚ್ಚುವರಿ ಗಿಡಗಳನ್ನು ಕೀಳಬೇಕು. ಪ್ರತಿಯೊಂದು ಕುಳಿಗಳಲ್ಲೂ ಎರಡು ಸಸಿ ಉಳಿಸಿ.

        ಗಿಡ ಮೊಳಕೆ ಬಂದು ಒಂದು ವಾರದಲ್ಲಿ  ಸೊಪ್ಪು ಹಾಗೂ ಸ್ವಲ್ಪ ಹಟ್ಟಿಗೊಬ್ಬರ ಹಾಕಬೇಕು. ಮತ್ತೂಂದು ವಾರದಲ್ಲಿ ಬಳ್ಳಿ ಹಬ್ಬಲು ಸಹಕಾರಿಯಾಗುವಂತೆ ಗಿಡದ ಬುಡದಲ್ಲಿ ಕೋಲುಗಳನ್ನು ಆಸರೆಯಾಗಿ ನೆಡಬೇಕು. ಸುಮಾರು ಎರಡು ದಿನಗಳಿಗೊಮ್ಮೆ ಗಿಡಗಳಿಗೆ ನೀರುಣಿಸುವುದು ಅಗತ್ಯ. ಹವಾಮಾನ ವನ್ನು ಅನುಸರಿಸಿ ಅದರಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಕಾಯಿ ಬೆಳೆಯುವ ಸಮಯದಲ್ಲಿ ಗಿಡಗಳಲ್ಲಿ  ತೇವಾಂಶದ ಕೊರತೆ ಉಂಟಾಗಬಾರದು.

        ಕೊಯ್ಲು: ನಾರಿಲ್ಲದ ಎಳತು ಕಾಯಿಗಳನ್ನು ಕೊಯ್ಯಬೇಕು. ಗಿಡದಲ್ಲಿ ಕಾಯಿಗಳು ಮೂಡಿ 10ರಿಂದ 15 ದಿನಗಳಲ್ಲಿ ಕೊಯ್ಲು ಮಾಡಿದರೆ ಕಾಯಿ ಎಳತಾ ಗಿದ್ದು, ನಾರಿನಿಂದ ಮುಕ್ತವಾಗಿರುತ್ತದೆ.

        ಗೊಬ್ಬರ: ಅಲಸಂಡೆ ಕೃಷಿಗೆ ಗೊಬ್ಬರ ವಾಗಿ ಸೊಪ್ಪು, ಬೂದಿ, ಸುಡುಮಣ್ಣು, ಹಟ್ಟಿಗೊಬ್ಬರ, ಆಕಳಗಂಜಳ, ನೆಲಗಡಲೆ ಹಿಂಡಿ, ಆಡಿನ ಹಿಕ್ಕೆ, ಮೊಲದ ಹಿಕ್ಕೆ ಇತ್ಯಾದಿಗಳನ್ನು ಬಳಸುತ್ತಾರೆ. ಅಲ್ಲದೆ ಪ್ರತಿದಿನ ಹಿತ್ತಿಲಲ್ಲಿ ಸಿಗುವ ಬಾಡಿದ ಹೂಗಳು, ಪದಾರ್ಥಕ್ಕೆ ತರಕಾರಿ ತುಂಡರಿಸಿದಾಗ ಎಸೆಯುವ ತರಕಾರಿ ಸಿಪ್ಪೆ, ತಿರುಳು, ಚಹಾದ ಕರಿ, ಈರುಳ್ಳಿ ಕಸ ಇತ್ಯಾದಿಗಳನ್ನೂ ಬಳಸಬಹುದು.

        ತಳಿಗಳು

        ಅಲಸಂಡೆಯಲ್ಲಿ ಸ್ಥಳೀಯ ತಳಿ ಗಳಲ್ಲದೆ ಬೇರೆ ಬೇರೆ ಋತುಮಾನ ಗಳಿಗೆ ಅನುಗುಣ ವಾಗಿ ವಿವಿಧ ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ.

        ಪೂಸಾ ಫ‌ಲ್ಗುಣಿ: ಇದು ಬೇಸಗೆ ಕಾಲಕ್ಕೆ ಸೂಕ್ತವೆನಿಸಿದ ತಳಿ. ಪೊದೆಯಾಕಾರದಲ್ಲಿ ಗಿಡ್ಡವಾಗಿ ಬೆಳೆಯುವ ಅಲಸಂಡೆಯಾಗಿದೆ. ಕಡು ಹಸುರು ಬಣದಿಂದ ಕೂಡಿದ ಸುಮಾರು 12.5 ಸೆಂ.ಮೀ. ಉದ್ದ ಕಾಯಿಗಳನ್ನು ಬಿಡುತ್ತದೆ.
        ಪೂಸಾ ದೋಫ‌ಸಲಿ: ಬೇಸಗೆ ಹಾಗೂ ಮಳೆಗಾಲ ಎರಡಕ್ಕೂ ಸೂಕ್ತ ವಾದ ತಳಿ ಇದಾಗಿದೆ. ಸುಮಾರು 18 ಸೆಂ.ಮೀ. ಉದ್ದ ಕಾಯಿಗಳನ್ನು ಬಿಡುತ್ತದೆ.

        ಪೂಸಾ ಬರ್ಸಾತಿ: ಇದು ಮಳೆಗಾಲಕ್ಕೆ ಮಾತ್ರ ಸರಿ ಎನಿಸುವ ತಳಿಯಾಗಿದೆ. ಸುಮಾರು 25ರಿ,ದ 27 ಸೆಂ.ಮೀ. ನಷ್ಟು ಉದ್ದ ಕಾಯಿಗಳನ್ನು ಬಿಡುತ್ತದೆ.

        ಎಸ್‌ 288: ಇದೊಂದು ವರ್ಷಾದ್ಯಂತ ಕೃಷಿ ಮಾಡಲು ಸೂಕ್ತ ವಾಗಿರುವ ತಳಿಯಾಗಿದೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus