ಗಣೇಶ ಕುಳಮರ್ವ
ಭಾರತದ ಪುರಾತನ ಕಲಾಪ್ರಕಾರಗಳಲ್ಲಿ ಒಂದೆನಿಸಿರುವ ಸಾಂಝಿ ಕಲೆ ಕಾಗದವನ್ನು ಚಿತ್ತಾಕರ್ಷಕವಾಗಿ ಕತ್ತರಿಸುವ ಮನೋಜ್ಞ ಕಲೆಯಾಗಿದೆ.
ಉಪಯೋಗಿಸಿದ ಯಾವುದೇ ಹಾಳೆ ಅಥವಾ ಖಾಲಿ ಕಾಗದವೇ ಇರಬಹುದು ಅದನ್ನು ನಿರುಪಯುಕ್ತ ಎಂದು ಕಸದ ಬುಟ್ಟಿಗೆ ಹಾಕಬೇಕೆಂದಿಲ್ಲ. ಬದಲಾಗಿ ವಿವಿಧ ರೀತಿಯಲ್ಲಿ ಕತ್ತರಿಸಿ ಅವುಗಲ್ಲಿ ಬೇರೆ ಬೇರೆ ಕಲಾಕೃತಿಗಳನ್ನು ರಚಿಸಬಹುದು. ಇದು ಭಾರತದ ಪುರಾತನ ಕಲಾಪ್ರಕಾರಗಳಲ್ಲಿ ಒಂದು. ಕಾಗದವನ್ನು ಚಿತ್ತಾಕರ್ಷಕವಾಗಿ ಕತ್ತರಿಸುವ ಈ ಕಲೆಗೆ "ಸಾಂಝಿ' ಎನ್ನುತ್ತಾರೆ.
ಸಾಂಝಿ ಕಲೆಯಲ್ಲಿ ಬಣ್ಣ, ಕುಂಚಗಳ ಹಂಗಿಲ್ಲದೆ ಕತ್ತರಿ, ಚಾಕುಗಳನ್ನು ಬಳಸಿ ಸುಂದರವಾದ ಆಕೃತಿ ಗಳನ್ನು ರಚಿಸಲಾಗುತ್ತದೆ. ಇದು ಕಲಾವಿದನ ಕೈಚಳಕ, ನೈಪುಣ್ಯಕ್ಕೆ ಸಾಕ್ಷಿ. ಇದರಲ್ಲಿ ಹೆಚ್ಚಿನ ದೈಹಿಕ ಶ್ರಮದ ಬಳಕೆಯಿಲ್ಲ. ಬದಲಾಗಿ ಕಲಾಗಾರನ ಸೃಜನಶೀಲ ಗುಣ, ಚಾಣಾಕ್ಷತನ ಹಾಗೂ ಚಾಕಚಕ್ಯತೆ ವ್ಯಕ್ತವಾಗುತ್ತದೆ.
ಭಕ್ತಿ ಮಾರ್ಗದ ಕೊಡುಗೆ

ಈ ಕಲೆಯು ನಮ್ಮ ದೇಶದಲ್ಲಿ ಹಲವಾರು ಶತಮಾನಗಳಿಂದ ಚಾಲ್ತಿಯಲ್ಲಿದೆ. ಉತ್ತರ ಭಾರತದಲ್ಲಿ ಸಾಂಝಿ ಕಲೆ ತುಂಬಾ ಪ್ರಾಮುಖ್ಯ ಪಡೆದಿದೆ. ಭಕ್ತಿ ಮಾರ್ಗದ ಕೊಡುಗೆಯಾಗಿ ಇದು ಬೆಳೆದು ಬಂದಿದೆ. ಈ ಕಲಾಕೃತಿಗಳನ್ನು ಮೊದಲಿಗೆ ದೇವಾಲಯಗಳಲ್ಲಿ ಮಾತ್ರ ಬಳಸುತ್ತಿದ್ದರಂತೆ. ಅನಂತರ ಸಾರ್ವಜನಿಕರ ಉಪಯೋಗಕ್ಕೂ ಬಂದಿತು. ಇಂದು ರಂಗೋಲಿ ಹಾಕಲು ಬಳಸುವ ವಿವಿಧ ವಿನ್ಯಾಸದ ತಟ್ಟೆಗಳ ಕಲ್ಪನೆ ಭಕ್ತಿ ಪಂಥದ ಕಾಲದಲ್ಲೇ ಇತ್ತು. ಆಗ ಕಾಗದಗಳನ್ನು ಕೆಲವೊಂದು ದೇವರುಗಳ ಆಕಾರದಲ್ಲಿ ಕತ್ತರಿಸಿ ಅವುಗಳ ಮೇಲೆ ಬಣ್ಣದ ಹುಡಿಗಳನ್ನು ಹರಡಿ ಅನಂತರ ಕಾಗದವನ್ನು ಮೆಲ್ಲನೆ ಮೇಲಕ್ಕೆತ್ತಿ ಸುಂದರವಾದ ಚಿತ್ರಗಳನ್ನು ಬಿಡಿಸುತ್ತಿದ್ದರು.
ಹಬ್ಬ ಹರಿದಿನಗಳ ಸಂದರ್ಭ ದೇವಾಲಯ ಗಳಲ್ಲಿ, ಕೆಲವು ಮನೆಗಳ ಮುಂದೆಯೂ ಇವುಗಳೇ ವಿಶೇಷ ಆಕರ್ಷಣೆ. "ಸಾಂಝಿ'ಯಲ್ಲಿ ಕೃಷ್ಣನ ಬಾಲ ಲೀಲೆಗಳನ್ನು ಪ್ರದರ್ಶಿಸುವ ಕಲಾಕೃತಿ
ಗಳನ್ನು ಹೆಚ್ಚಾಗಿ ತಯಾರಿಸುತ್ತಿದ್ದರು. ಈ ಕಲೆ ಕೇವಲ ಉತ್ತರ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಬದಲಾಗಿ ದಕ್ಷಿಣದ ಕೇರಳ, ಕರ್ನಾಟಕದಲ್ಲಿಯೂ ವಿವಿಧೆಡೆಗಳಲ್ಲಿ ಬಳಕೆಯಲ್ಲಿವೆ.
ದೇಶಗಳ ಸಂಸ್ಕೃತಿಯ ಪ್ರತೀಕ

ಭಾರತದ ಜನಪದ ಕಲೆಯೆಂದೇ ಗುರುತಿಸಲ್ಪಟ್ಟಿ ರುವ "ಸಾಂಝಿ'ಯನ್ನು ಹೋಲುವ ಅನೇಕ ಕಲಾಪ್ರಕಾರ ಗಳು ಹಲಧಿವಾರು ದೇಶಗಳಲ್ಲಿ ಕಾಣಬಹುದು. ವಿವಿಧ ರಾಷ್ಟ್ರಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುತ್ತಿವೆ. ಚೀನಾ ಹಾಗೂ ಜಪಾನ್‌ಗಳಲ್ಲಿ "ಕಿರಿ-ಗಾಮಿ', "ಕಿಪಿ-ಇ', "ಮನ್-ಕಿರಿ', "ಸೆನ್-ಶಿ', "ಜಿಯಾನ್-ಝಿ' ಮೊದಲಾದ ಹೆಸರುಗಳಿಂದ ಗುರುತಿಸಲ್ಪಟ್ಟಿವೆ. ಪೋಲ್ಯಾಂಡ್‌ನಲ್ಲಿ "ವಿಚಿನಾನಿಕಿ', ಸ್ಪೇನ್‌ನಲ್ಲಿ "ಆಪೆಲ್ ಪಿಕಡೊ' ಫ್ರಾನ್ಸ್ ನಲ್ಲಿ "ಡೆಕೋಪರ್', ಅಮೆರಿಕದಲ್ಲಿ "ಪೆಪಿಟೋಮನಿ' ಎಂಬ ಹೆಸರಿನಲ್ಲಿ ಈ ಕಲೆ ಪ್ರಚಲಿತದಲ್ಲಿದೆ.
ವಿದ್ಯಾವಂತರಾಗಿರಬೇಕಿಲ್ಲ

ಸಾಂಝಿ ಕಲಾವಿದರಾಗಲು ಯಾವುದೇ ಶಾಲೆ, ಕಾಲೇಜುಗಳಲ್ಲಿ ಓದಿರಬೇಕಿಲ್ಲ. ಇದು ವ್ಯಕ್ತಿಯ ಆಸಕ್ತಿ, ಚಿಂತನೆ ಮತ್ತು ಕೈಚಳಕವನ್ನು ಅವಲಂಬಿಸಿದೆ. ಎಂಥವರಿಗೂ ಇದನ್ನು ಸುಲಭ ವಾಗಿ ಅಭ್ಯಸಿಸಬಹುದು. ಈ ಕಲೆಯನ್ನು ಯಾವುದೇ ಒಂದು ವರ್ಗ ಅಥವಾ ಜನಾಂಗಕ್ಕೆ ಸೇರಿದವರೇ ಅಭಿವೃದ್ಧಿಪಡಿಸಿರುವುದಲ್ಲ. ಇದು ಜನಪದ ಕಲೆಯಾಗಿದ್ದು, ಒಬ್ಬರಿಂದೊಬ್ಬರಿಗೆ ಕಲಿಸಲ್ಪಟ್ಟು, ಮುಂದುವರಿದುಕೊಂಡು ಬಂದಿದೆ.
ಮದುವೆ, ಮುಂಜಿಗಳ ಸಂದರ್ಭ ಮನೆ ಮಂಟಪಗಳ ಅಲಂಕಾರಕ್ಕಾಗಿಯೂ ಈ ಕಲೆಯನ್ನು ಬಳಸುತ್ತಾರೆ. ಉತ್ತರ ಕನ್ನಡದ ಕುಮಟಾ, ಕಾರವಾರ, ಶಿರಸಿ, ಸಿದ್ದಾಪುರ ಮುಂತಾದೆಡೆಗಳಲ್ಲಿ ಇದನ್ನು "ಪರ್ಪರೆ' ಎಂದು ಕರೆಯುತ್ತಾರೆ.
ಇಂತಹ ಅನೇಕ ಕಲೆಗಳು ಭಾರತದ ವಿವಿಧೆಡೆಗಳಲ್ಲಿವೆ. ಆದರೆ ಆಧುನೀಕರಣದಿಂದಾಗಿ ಅವು ಇಂದು ಮೂಲೆ ಸೇರಿ ನಶಿಸಿ ಹೋಗುತ್ತಿವೆ. ನಮ್ಮ ದೇಶದ ಸಾಂಸ್ಕೃತಿಕ ಸಂಪತ್ತುಗಳಾದ ಅಂತಹ ಕಲೆಗಳನ್ನು ಗುರುತಿಸಿ, ಉಳಿಸಿ, ಬೆಳೆಸುವತ್ತ ಸರಕಾರಗಳು ಗಮನ ಹರಿಸಬೇಕಿದೆ.