Sunday, May 26, 2013
Last Updated: 11:56:36 AM IST
  • ನಾನೆಲ್ಲಿರುವೆ:
  • ಮುಖಪುಟ ಅಭಿಪ್ರಾಯ ನಾಗರಿಕ ಪತ್ರಿಕೊದ್ಯಮ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಆಟಿಡ್‌ ಬತ್ತೆ ಕಳೆಂಜೆ

      • ಜಯ ಮಣಿಯಂಪಾರೆ

        ಆಟಿಡ್‌ ಬತ್ತೆ ಕಳೆಂಜೆ ಮಾರಿ ಕಳೆಪ್ಪೆನೋ
        ಮೂಡಾಯಿದ ಮಾರಿನ್‌ ಮೂಡಾಯಿಗ್‌ ಕೊಂಡೊಪೆನೋ
        ಆಟಿದ ಮುಪ್ಪೊ ದಿನ ಮಾಮಿ ಬಂಡಾರೊ ಬಾರೆದ ಕಂಡೆ ತಿಂದೆನೋ
        ಕಳಂಜೆ ಬಂಜಿ ಬಳಪುಂಡೆ ಮುಂಡಿದ ಕಂಡೆ ತಿಂದೆನೊ ದೊಂಡೆ ಮೂರುಂಡೆ
        ಬಾಕಿಲ್‌ ಬಾಕಿಲ್‌ ಪೊಪೆನೋ ಕಳೆಂಜೆ ಮಾರಿ ಕಳೆಪ್ಪೆನೋ
        ಆಟಿಡ್‌ ಬತ್ತೆನೋ ಕಳೆಂಜೆ ಸೋಣೊಡು ಪೋಪೆನೋ.....


        ಈ ರೀತಿಯಾಗಿ ಜಾನಪದ ಹಾಡುಗಾರನ ತೆಂಬರೆಯ ಲಯಬದ್ಧ ಬಡಿತಕ್ಕೆ ಕೈಯಲ್ಲಿರುವ ಓಲೆ ಕೊಡೆ ತಿರುಗಿಸಿ ಕೊಂಡು, ಕಾಲು ಆಡಿಸುತ್ತಾ ಆಟಿಕಳಂಜ ಮನೆಯ ಅಂಗಳದಲ್ಲಿ ಕುಣಿದನೆಂದರೆ ಆಷಾಢದಲ್ಲಿ ಕಾಟ ಕೊಡುವ ಪ್ರೇತಾತ್ಮಗಳು ಕಾಲು ಕೀಳುತ್ತವೆ ಎಂಬುದು ತುಳುನಾಡಿನಲ್ಲಿ ಹಿಂದಿನಿಂದಲೂ ಚಾಲ್ತಿಯಲ್ಲಿರುವ ಜನಪದ ನಂಬಿಕೆ. ಮುಖಕ್ಕೆ ಹಳದಿ ರಂಗು, ಕೆಂಪು ಚಲ್ಲಣ, ಕಾಲಿಗೆ ಚಿಕ್ಕ ಗಗ್ಗರ, ಸೊಂಟಕ್ಕೆ ಎಳೆ ತೆಂಗಿನ ಗರಿಗಳ ತಿರಿ, ತಲೆಗೆ ಕದಿರ್ಮುಡಿ, ಕೈಯಲ್ಲಿ ಓಲೆಕೊಡೆ ದಪ್ಪನೆಯ ಕರಿಹುಬ್ಬು, ಪೊದೆಯಂತಹ ಕರಿಮೀಸೆ ಇದು ಆಟಿಕಳಂಜನ ರುದ್ರ ರಮಣೀಯ ವೇಷಭೂಷಣ.

        ಆಟಿಯ ಹಸಿವು, ರೋಗ ರುಜಿನ, ಕಷ್ಟ ಕೋಟಲೆ ತುಳುನಾಡಿನಲ್ಲಿ ಇನ್ನೂ ಹಲವಾರು ನಂಬಿಕೆಗಳಿಗೆ ಜನ್ಮ ನೀಡಿವೆ. ಆಟಿ ಅಮಾವಾಸ್ಯೆಯಂದು ನಡೆಯುವ ಪ್ರೇತ ಮದುವೆ ಅಂತಹ ನಂಬಿಕೆಗಳಲ್ಲಿ ಒಂದಾಗಿದೆ.

        ವಿಶೇಷವಾಗಿ ಸತ್ತವರ ಮಾಸವೆಂದೆ ಉಲ್ಲೇಖೀಸಲ್ಪಡುವ ಈ ತಿಂಗಳಲ್ಲಿ ಸತ್ತವರಿಗೆ ಬಳಸುವುದು ಮತ್ತು ಪ್ರೇತಾತ್ಮ ಮದುವೆ ಮಾಡಿಸುತ್ತಾರೆ. ಅವಿವಾಹಿತ ಗಂಡು-ಹೆಣ್ಣುಗಳು ರೋಗ ರುಜಿನಕ್ಕೆ ಅಥವಾ ದುರ್ಮರಣಕ್ಕೆ ಬಲಿಯಾದರೆ ಮುಂದೆ ಅವರ ಪ್ರೇತಾತ್ಮಗಳಿಗೆ ಮದುವೆ ನಡೆಸಿ ಮೋಕ್ಷ ಪ್ರಾಪ್ತಿಸುವ ಕ್ರಮವೇ ಪ್ರೇತಾತ್ಮ ಮದುವೆ. ಗತಿಸಿದ ಪ್ರೇತಾತ್ಮಗಳು ಈ ಮಾಸದಲ್ಲಿ ಭೂಲೋಕ ಸಂಚಾರ ಮಾಡುತ್ತವೆ ಆದ್ದರಿಂದ ರಾತ್ರಿ ಸಂಚಾರ ಮಾಡಬಾರದೆಂಬ ನಂಬಿಕೆಯೂ ಇದೆ.

        ಮಳೆಗಾಲದಲ್ಲಿ ಆರ್ಥಿಕ ಕೊರತೆ ಹೆಚ್ಚಾಗಿ ಬಾಧಿಸುವುದು ಆಷಾಢ ಮಾಸದಲ್ಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕಾಯಕವಿಲ್ಲದ ಈ ತಿಂಗಳಲ್ಲಿ ಎಲ್ಲದಕ್ಕೂ ಬರಗಾಲ ತೀವ್ರವಾಗಿ ಕಾಡುತ್ತಿರುತ್ತದೆ. ಇದೇ ಪರಿಕಲ್ಪನೆಯ ಕಾರಣದಿಂದ ನವ ವಿವಾಹಿತೆಯಾದ ಹೆಣ್ಣು ಮಗಳು ಆಷಾಢ ಕಳೆಯಲು ತವರು ಮನೆಗೆ ಹೋಗುವ ಸಂಪ್ರದಾಯ ವಾಡಿಕೆಯಲ್ಲಿದೆ.

        ಬೇಸಗೆ ಹಾಗೂ ಮಳೆಯ ಸ್ಥಿತ್ಯಂತರ ಕಾಲವಾದ್ದರಿಂದ ಈ ಬದಲಾದ ವಾತಾವರಣದೊಂದಿಗೆ ಬರುವ ಮಹಾ ಮಾರಿಯಂತಿರುವ ರೋಗರುಜಿನಗಳ ಉಪಶಮನಕ್ಕೆ ಆಚರಿಸುವ ಎರಡು ರೀತಿಯ ಸಂಪ್ರದಾಯವನ್ನು ಈ ಮಾಸದಲ್ಲಿ ಕಾಣಬಹುದು. ವೈದ್ಯಕೀಯ ಇರಾದೆಗೆ ಹೊಂದಿಕೊಂಡು ಆಟಿ ಅಮಾವಾಸ್ಯೆಯಂದು ಹಾಲೆ ಮರದ ಕೆತ್ತೆ ರಸ ಸೇವನೆ ಒಂದಾದರೆ, ತುಳುನಾಡಿನ ಧಾರ್ಮಿಕ ಹಿನ್ನೆಲೆಗೆ ಹೊಂದಿಕೊಂಡ ಭೂತರಾಧನೆಯ ಆಟಿಕಳಂಜ ಇನ್ನೊಂದಾಗಿದೆ. ಆಟಿ ಅಮಾವಾಸ್ಯೆಯಂದು ಬೆಳಂಬೆಳಗ್ಗೆ ಹಾಲೆ ಮರದ ಕೆತ್ತೆ ತಂದು ಅದನ್ನು ಗುದ್ದಿ ರಸ ತೆಗೆದು ಅದರೊಂದಿಗೆ ಬೆಳ್ಳುಳ್ಳಿ, ಕರಿಮೆಣಸು ಗುದ್ದಿ ಹಾಕಿ ಬರಿ ಹೊಟ್ಟೆಗೆ ಕುಡಿಯುತ್ತಾರೆ. ಬಳಿಕ ಮೆಂತ್ಯೆಯ ಗಂಜಿ ಊಟ ಮಾಡುತ್ತಾರೆ. ಉಷ್ಣ ಕಳೆಯಲು ಇದು ಒಳ್ಳೆಯದು. ಇದರಿಂದಾಗಿ ಇಡೀ ವರ್ಷ ಯಾವುದೇ ರೋಗರುಜಿನಗಳು ಶರೀರಕ್ಕೆ ತಟ್ಟುವುದಿಲ್ಲ ಎಂಬುವುದು ಗ್ರಾಮೀಣರ ನಂಬಿಕೆ.

        ತುಳುನಾಡಿನ ದೈವಸ್ಥಾನದಲ್ಲಿ ಈ ತಿಂಗಳ ಸಂಕ್ರಮಣಕ್ಕೆ ತಂಬಿಲ ಕೊಟ್ಟು ಬಾಗಿಲು ಹಾಕಿದರೆ ಮತ್ತೆ ತೆರೆಯುವುದು ಬರುವ ಸಿಂಹ ಸಂಕ್ರಮಣಕ್ಕೆ. ಈ ನಡುವೆ ಯಾವುದೇ ಕಾರ್ಯಕ್ಕೂ ದೈವಸ್ಥಾನದ ಬಾಗಿಲು ತೆರೆಯುವಂತಿಲ್ಲ. ಈ ಸಂದರ್ಭದಲ್ಲಿ ದೈವಗಳು ಘಟ್ಟವೇರುತ್ತದೆ ಎಂಬ ನಂಬಿಕೆ ಇಲ್ಲಿನವರದ್ದು. ದುರಿತಗಳನ್ನು ದೂರವಿರಿಸಲು ನಮ್ಮ ಪೂರ್ವಜರು ಆಚರಿಸುತ್ತಿದ್ದ ಸದ್ಗುಣೋಪಸನೆಗಳಲ್ಲಿ ರಾಮಾಯಣ ಪಾರಾಯಣವೂ ಒಂದಾಗಿದೆ. ದೇವಸ್ಥಾನ ಗಳಲ್ಲಿ, ತರವಾಡು ಮನೆಗಳಲ್ಲಿ ಹಿಗೇ ಪ್ರತಿಯೊಂದು ಮನೆಗಳಲ್ಲೂ ಇದು ಪ್ರಚಲಿತದಲ್ಲಿರುವುದು ಕಂಡುಬರುತ್ತದೆ.

        ಹೊರಾಂಗಣ ಆಟಗಳಿಗೆ ಮಳೆಯಿಂದಾಗಿ ಕಡಿವಾಣ ಉಂಟಾದ ಈ ಮಾಸದಲ್ಲಿ ಚೆನ್ನೆಮಣೆ, ಅಪ್ಪಂಗಾಯಿಯಂತಹ ಆಟಗಳು ಪ್ರಮುಖ ಮನೋರಂಜನೆಯ ಕ್ರೀಡೆಗಳಾಗಿವೆ.ಆದರೆ ಗಂಡ-ಹೆಂಡತಿ, ಅಣ್ಣ-ತಂಗಿಯೊಂದಿಗೆ ಈಮಾಸದಲ್ಲಿ ಚೆನ್ನೆಮಣೆ ಆಟವಾಡಬಾರದೆಂಬ ಕಟ್ಟಳೆಯೂ ಇದೆ. ಉಳಿದಂತೆ ಚೆನ್ನುಕುಣಿತ, ದುಡಿಕುಣಿತ, ರಾಧಾಕೃಷ್ಣ ತಿರುಗಾಟ ಈ ಮಾಸದ ಪ್ರಮುಖ ಮನರಂಜನೆಗಳಾಗಿಯೂ ಭಕ್ಷಬೋಜ್ಯಗಳಾಗಿ ಕಣಿಲೆ, ಕೆಸು, ತಗತ್ತೆ ಇವುಗಳ ಪತ್ರೋಡೆ ಗಸಿ, ಉಪ್ಪು ನೀರಿನಲ್ಲಿ ಹಾಕಿಟ್ಟ ಸೊಳೆ, ಮಾವಿನಕಾಯಿ, ಬೇಯಿಸಿ ಒಣಗಿಸಿಟ್ಟ ಹಲಸಿನ ಬೀಜ, ಗೆಣಸಿನ ಹಪ್ಪಳ, ಸಂಡಿಗೆ, ಗದ್ದೆ ಬದಿಗಳಲ್ಲಿ ಸಿಗುವ ಬ್ರಾಹ್ಮಿ ಎಲೆಯ ಖಾದ್ಯಗಳು ರುಚಿಯಾದ ಸವಿಯನ್ನುಂಟು ಮಾಡುತ್ತವೆ.

        ತುಳುನಾಡಿನ ಈ ನಂಬಿಕೆಗಳು ಆಷಾಢದ ಬಗ್ಗೆ ಕೀಳರಿಮೆ ಮೂಡಿಸಿದರೂ ಹಲವು ವೈಶಿಷ್ಟದಿಂದ ತನ್ನದೆ ಆದ ರೀತಿಯಲ್ಲಿ ಬೆಳೆದು ಅತ್ತ ಅಳಿಯಲೂ ಬಾರದ, ಈತ್ತ ಉಳಿಯಲೂ ಬಾರದ ಡೋಲಾಯಮಾನದ ಪರಿಸ್ಥಿತಿಯನ್ನು ಹೊಂದಿದೆ. ಇಂದಿನ ತಂತ್ರಜ್ಞಾನದ ಯುಗದಲ್ಲೂ ಜಾನಪದದೊಂದಿಗೆ ತನ್ನ ಇರುವಿಕೆಯನ್ನು ಕಾಯ್ದುಕೊಂಡಿದೆ.

        ಆಷಾಢ ಕಾಲದಲ್ಲಿ ಸಮಾಧಾನ, ಧೈರ್ಯ ಹಾಗೂ ಮನೋರಂಜನೆ ನೀಡುವ ಒಬ್ಬ ಜಾನಪದ ಮಾಂತ್ರಿಕನ ಪರಿಕಲ್ಪನೆಯ ಪ್ರಮುಖ ಆಚರಣೆಯಾಗಿದೆ ಆಟಿಕಳಂಜ. ಜನಸಾಮಾನ್ಯನಿಗೆ, ದನ ಕರುಗಳಿಗೆ, ಬೆಳೆಗಳಿಗೆ, ಬರುವ ಮಾರಿಯನ್ನು ನೀಗಲು ದೇವರು ಕಳುಹಿಸುವ ಒಂದು ದೈವಿಕ ಶಕ್ತಿ ಆಟಿ ಕಳಂಜ ಎಂಬುದು ತುಳುನಾಡಿನ ಜನತೆಯ ನಂಬಿಕೆ. ಮನೆಮನೆಗೂ ಬರುವ ಆಟಿ ಕಳಂಜ ಅರಿಶಿಣ, ಉಪ್ಪು, ಮಸಿಗಳನ್ನು ಮಂತ್ರಿಸಿ ಅಂಗಳದ ನಾಲ್ಕು ಬದಿಗಳಿಗೂ ಬಿಸಾಡಿ ಮಾರಿ ಕಳೆದು ಜನರಿಗೆ ಸಾಂತ್ವನ ನೀಡುತ್ತಾನೆ.

        ಆಟಿ ತಿಂಗಳ ಕಷ್ಟ ಕೋಟಲೆಗಳನ್ನು ಹೇಳುವುದರ ಜತೆಗೆ ಜನರಲ್ಲಿ ಅವುಗಳನ್ನು ಎದುರಿಸುವ ಆತ್ಮ ವಿಶ್ವಾಸವನ್ನು ಹುಟ್ಟಿಸುವ ಪ್ರಯತ್ನದ ಈ ಆಟಿಕಳಂಜನ ಕುಣಿತವನ್ನು ನೋಡಿಕೊಂಡು ಜನ ತಮ್ಮ ದುಸ್ಥಿತಿಯನ್ನು ಮರೆಯುತ್ತಾರೆ. ಈ ಕುಣಿತದ ಹಾಡಿನಲ್ಲಿ ಕಳೆಂಜನ ಹುಟ್ಟು, ರೋಗ ರುಜಿನಗಳ ಪರಿಹಾರ, ಸಂಕಷ್ಟದ ಸಮಯದಲ್ಲಿ ಹೇಗೆ ಧೈರ್ಯದಿಂದಿರಬೇಕು, ಮಾರಿ ಓಡಿಸುವ ರೀತಿ ರೀವಾಜುಗಳನ್ನು ವರ್ಣಮಯವಾಗಿ ವಿವರಿಸಲಾಗುತ್ತದೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus