ಮಳೆಗಾಲದ ಆರಂಭವಾಗಿದೆ. ಇಳೆ ತಂಪಾಗಿಸುವ ಮಳೆ ಸಹಜವಾಗಿಯೇ ಮನುಷ್ಯರ ನಾಲಗೆಯ ತುದಿಯಲ್ಲಿ ವಿವಿಧ ಖಾದ್ಯಗಳನ್ನು ಸವಿದು ನೋಡುವ ಆಸೆ ಹುಟ್ಟಿಸಿದೆ. ಸಂಗ್ರಹಿಸಿಟ್ಟ ಗೇರುಬೀಜಗಳನ್ನು ಸುಟ್ಟು ತಿನ್ನುವುದು, ಹಲಸಿನ ಬೀಜಗಳನ್ನು ಹುರಿದು ತಿನ್ನವುದು ಮಳೆಗಾಲದಲ್ಲಿ ಮನಸ್ಸಿಗೂ, ನಾಲಗೆಗೂ ಖುಷಿ ಕೊಡುತ್ತದೆ.ಹಳ್ಳಿಗಾಡಿನಲ್ಲಿ ಈ ಮಳೆಗಾಲದ ಹೊತ್ತಿನಲ್ಲಿ ಕಣಿಲೆಯದೇ ಕಾರುಬಾರು. ತರಕಾರಿ, ಮೀನು ಮಾಂಸದ ಬೆಲೆ ತುಟ್ಟಿಯಾಗುವುದರಿಂದ ಹಳ್ಳಿಯ ಜನ ಸಹಜವಾಗಿಯೇ ಪ್ರಕೃತಿದತ್ತ ಕಣಿಲೆಯತ್ತ ಆಕರ್ಷಿತರಾಗುತ್ತಾರೆ. ತಿನ್ನಲೂ ಇದು ಬಹಳ ರುಚಿಯಾಗಿರುವುದರಿಂದ ಎಲ್ಲಾ ವರ್ಗದವರಿಗೂ ಅಚ್ಚುಮೆಚ್ಚಿನ ಪದಾರ್ಥವಾಗಿ ಖ್ಯಾತಿ ಪಡೆದಿದೆ.ಆಹಾರ ಪದಾರ್ಥವಾಗಿ ಕಣಿಲೆಕಾಡಿನಿಂದ ತಂದ ಕಣಿಲೆಯ ತುಂಡುಗಳನ್ನು ಸಣ್ಣದಾಗಿ ಕತ್ತರಿಸಬೇಕು. ಹೀಗೆ ಕತ್ತರಿಸಿದ ಕಣಿಲೆಯ ಸಣ್ಣ ಸಣ್ಣ ತುಂಡುಗಳನ್ನು ಸುಮಾರು 12 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. 12 ಗಂಟೆಗೂ ಅಧಿಕ ಕಾಲ ನೀರಿನಲ್ಲಿ ನೆನೆಸಿಡುವುದರಿಂದ ಕಣಿಲೆಯಲ್ಲಿರುವ ವಿಷ ಮರೆಯಾಗುತ್ತದೆ. ಬಳಿಕ ಪದಾರ್ಥವಾಗಿ ಸೇವಿಸಬಹುದು. ಕಡಲೆ ಅಥವಾ ಹಲಸಿನ ಬೀಜದೊಂದಿಗೆ ಮಾಡಿದ ಕಣಿಲೆ ಪದಾರ್ಥ ಅತ್ಯಂತ ರುಚಿಕರ ಎಂಬುದು ಸವಿದವರ ಮಾತು. ದಿನಗಳೆದಂತೆ ಇದರ ರುಚಿ ಹೆಚ್ಚಾಗುತ್ತದೆ. ಒಮ್ಮೆ ಪದಾರ್ಥ ಮಾಡಿದ ಬಳಿಕ ಮತ್ತೆ ಮತ್ತೆ ಕುದಿಸಿದಾಗ ಅದರಲ್ಲಿರುವ ನೀರಿನಂಶ ಆರಿ ಗಸಿ ಮಾತ್ರ ಉಳಿಯುತ್ತದೆ. ಇದು ಸವಿಯಲು ಬಲುರುಚಿ.ಕಣಿಲೆ ಕೇವಲ ಮಳೆಗಾಲದ ಸ್ವಾದಿಷ್ಟವಾಗಿ ಮಾತ್ರ ಉಪಯೋಗ ವಾಗುತ್ತಿಲ್ಲ. ಸಣ್ಣಕ್ಕೆ ಕತ್ತರಿಸಿದ ಕಣಿಲೆಯ ತುಂಡುಗಳನ್ನು ಉಪ್ಪು ನೀರಿನಲ್ಲಿ ಮುಳುಗಿಸಿಟ್ಟರೆ ಆರು ತಿಂಗಳಿಗೂ ಹೆಚ್ಚು ಕಾಲ ಆಹಾರದಲ್ಲಿ ಬಳಸಿಕೊಳ್ಳಬಹುದು. ಕಣಿಲೆಯಿಂದ ಉಪ್ಪಿನಕಾಯಿ ತಯಾರಿಸುವುದೂ ಸಾಧ್ಯ. ಉಪ್ಪು ನೀರಿನಲ್ಲಿ ಮುಳುಗಿಸಿಟ್ಟ ಕಣಿಲೆಯ ತುಂಡುಗಳನ್ನು ಬೇಕಾದಷ್ಟು ತೆಗೆದುಕೊಂಡು ಮಸಾಲೆ ಹುಡಿಗಳನ್ನು ಸೇರಿಸಿದರೆ ಉಪ್ಪಿನಕಾಯಿಯಾಗಿಯೂ ಸವಿಯ ಬಹುದು. ಗಂಜಿ ಊಟಕ್ಕೆ ಇದು ಬಹಳ ರುಚಿಕರ.ನಗರದಲ್ಲಿ ಅಪರೂಪ: ನಗರದಲ್ಲಿ ಕಣಿಲೆ ಕಾಣಸಿಗುವುದು ತೀರಾ ಅಪರೂಪ. ಬೆಳೆಯುತ್ತಿರುವ ಬಹುಮಹಡಿ ಕಟ್ಟಡಗಳ ನಡುವೆ ಪ್ರಾಕೃತಿಕ ಸಂಪತ್ತು ನಗರದ ಜನರಿಗೆ ಗಗನಕುಸುಮ. ಆದರೂ ಆಗೊಮ್ಮೆ ಈಗೊಮ್ಮೆ ಊರಿಗೆ ಹೋದಾಗಲೋ ಅಥವಾ ತಮ್ಮನ್ನು ಭೇಟಿಯಾಗಲು ಬಂದ ಊರಿನ ಮಂದಿಯ ಮೂಲಕ ತರಿಸಿಕೊಂಡೋ ಹಳ್ಳಿಗಳ ಹಿನ್ನೆಲೆಯುಳ್ಳ ನಗರವಾಸಿಗಳೂ ಕಣಿಲೆಯನ್ನು ಸವಿದು ನೋಡುತ್ತಾರೆ.ನಿಸರ್ಗದತ್ತವಾಗಿ ದೊರಕುವ ಆಹಾರ ಪದಾರ್ಥಗಳಲ್ಲಿ ಇದೂ ಒಂದು. ಬಿದಿರಿನ ಬೆಳವಣಿಗೆಯ ಪ್ರಾಥಮಿಕ ಹಂತವೇ ಕಣಿಲೆ. ಬಿದಿರು ಚಿಗುರಲು ಪ್ರಾರಂಭಿಸಿ ಸುಮಾರು ಒಂದು ಮೀಟರ್ ಉದ್ದ ಬೆಳೆಯುವ ತನಕ ಅದನ್ನು ಕಣಿಲೆಯೆಂದು ಪರಿಗಣಿಸಲಾಗುತ್ತದೆ. ಒಂದುಮೀಟರ್ ಬೆಳೆಯುವ ತನಕ ಬಿದಿರು ತೀರಾ ಹಸಿಯಾಗಿರುವು ದರಿಂದ ಆಹಾರವಾಗಿ ಸೇವಿಸಲು ಯೋಗ್ಯ. ಇದು ಪ್ರಾಕೃತಿಕ ಆಹಾರ ವಾಗಿರುವುದರಿಂದ ಯಾವುದೇ ರಾಸಾಯನಿಕ ಪದಾರ್ಥ ಗಳ ಮಿಶ್ರಣ ಕಂಡು ಬರುವುದಿಲ್ಲ. ಆದರೆ ಸೇವಿಸುವ ಮುನ್ನ ಮುನ್ನೆಚ್ಚರಿಕೆ ತೀರಾ ಅಗತ್ಯ ಎನ್ನುತ್ತಾರೆ ಹಳ್ಳಿ ಮಂದಿ.
ದನಗಳಿಗೆ ವಿಷಕಾರಿಕತ್ತಿ (ಕಬ್ಬಿಣ) ತಾಗಿಸಿದ ಕಣಿಲೆಯನ್ನು ಯಾವುದೇ ಕಾರಣಕ್ಕೂ ದನಕರುಗಳಿಗೆ ಹಾಕುವಂತಿಲ್ಲ. ಕಬ್ಬಿಣದ ಅಂಶ ಅದಕ್ಕೆ ತಾಕಿದ ತರುವಾಯ ದನಕರುಗಳ ದೇಹ ಸೇರಿದರೆ ಪ್ರಾಣಾಪಾಯ ಕಟ್ಟಿಟ್ಟ ಬುತ್ತಿ. ಒಂದು ವೇಳೆ ಕಬ್ಬಿಣಾಂಶ ಸೇರಿರುವ ಕಣಿಲೆಯ ತುಂಡುಗಳು ಜಾನುವಾರುಗಳ ದೇಹ ಸೇರಿದ್ದು ಗಮನಕ್ಕೆ ಬಂದಲ್ಲಿ ತತ್‌ಕ್ಷಣ ಅವುಗಳಿಗೆ ಕುಂಬಳಕಾಯಿ ನೀರನ್ನು ಕುಡಿಸಬೇಕು. ಪ್ರಾಥಮಿಕ ಹಂತದಲ್ಲೇ ಹೀಗೆ ಮಾಡುವುದರಿಂದ ಸಮಸ್ಯೆ ಉಲ್ಬಣಿಸು ವುದನ್ನು ತಡೆಯಬಹುದು. ಆದರೆ ಸ್ವಾಭಾವಿಕವಾಗಿ ದೊರಕುವ ಕಣಿಲೆಯನ್ನು ದನಗಳು ತಿಂದಲ್ಲಿ ಯಾವುದೇ ಅಪಾಯ ಸಂಭವಿಸದು.