Sunday, May 19, 2013
Last Updated: 5:31:18 AM IST
  • ನಾನೆಲ್ಲಿರುವೆ:
  • ಮುಖಪುಟ ಅಭಿಪ್ರಾಯ ನಾಗರಿಕ ಪತ್ರಿಕೊದ್ಯಮ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಸರಣಿ ಜೀವ ಬಲಿಗೆ ಕೊನೆ ಎಂದು ?

      • ಚಂದ್ರ ಕೆ. ಹೆಮ್ಮಾಡಿ

        ದುರಂತಗಳು ಸಂಭವಿಸಿದ ಬಳಿಕವೇ ಅಪಾಯವನ್ನು ಅರಿತುಕೊಳ್ಳುವ ಪ್ರವೃತ್ತಿ ದಿನೇ ದಿನೇ ಹೆಚ್ಚಿದೆ. ಇದರಿಂದಾಗಿ ತೆರೆದ ಮಾದರಿಯ ನೀರಿನ ಹೊಂಡ, ಮಳೆನೀರು ತುಂಬಿಕೊಂಡು ಅಪಾಯಕಾರಿಯಾಗಿ ಗೋಚ ರಿಸುವ ಕಲ್ಲಾಣಿಹೊಂಡಗಳು, ಆವೆಮಣ್ಣಿನ ಹೊಂಡಗಳು ಹಾಗೂ ನೀರಿಂಗಿಸಲು ನಿರ್ಮಿಸಿದ ಮದಗಗಳಿಗೆ ಅಮಾಯಕ ಜೀವಗಳು ಬಲಿಯಾಗುತ್ತಿರುವ ಪ್ರಕರಣಗಳು ಸರಣಿಯೆಂಬಂತೆ ನಡೆಯುತ್ತಿರುವ ಬೆಳವಣಿಗೆ ತೀರಾ ಆತಂಕಕಾರಿಯಾಗಿದೆ.

        ಜುಲೈ 1ರಂದು ಸಂಜೆ ಹಟ್ಟಿಯಂಗಡಿ ಗ್ರಾಮದ ಚಿತ್ತೇರಿ ಎಂಬಲ್ಲಿ ಆಟವಾಡುತ್ತಿದ್ದಾಗ ಅಲ್ಲಿನ ಬಾಚಿನಕೊಡ್ಲು ಮದಗಕ್ಕೆ ಆಕಸ್ಮಿಕವಾಗಿ ಬಿದ್ದು ನಾಲ್ವರು ಮಕ್ಕಳು ಪ್ರಾಣವನ್ನು ಕಳೆದುಕೊಂಡಿದ್ದರು. ಸ್ಥಳೀಯ ಪರಿಸರದ ಜನರನ್ನು ತಲ್ಲಣಗೊಳಿಸಿದ ಈ ದುರಂತಮಯ ಘಟನೆ ಹಸಿಹಸಿಯಾಗಿರುತ್ತ ಮೂರೇ ದಿನಗಳಲ್ಲಿ (ಜುಲೈ 4ರಂದು) ಸಮೀಪದ ಕನ್ಯಾನ ಗ್ರಾಮದ ಎಣ್ಣೆಬಾಳು ಎಂಬಲ್ಲಿ ಬಾಲಕನೊಬ್ಬ ಕೃಷಿಹೊಂಡಕ್ಕೆ ಜಾರಿಬಿದ್ದು ಇಹಲೋಕ ತ್ಯಜಿಸಿದ್ದ. ಇದೀಗ ಜುಲೈ 29ರಂದು ವಂಡ್ಸೆಯ ಕೈಕಾಣ ಮದಗಕ್ಕೆ ಕಾಲು ತೊಳೆಯಲೆಂದು ಹೋದ ಇಬ್ಬರು ಮಕ್ಕಳು ಕೆಸರಿನಲ್ಲಿ ಜಾರಿ ಕೆರೆಪಾಲಾಗಿ ಅಮೂಲ್ಯವಾದ ಜೀವವನ್ನು ಕಳೆದುಕೊಳ್ಳುವುದರೊಂದಿಗೆ ಜುಲೈ ತಿಂಗಳಲ್ಲಿಯೇ ಸರಣಿಯೆಂಬಂತೆ ಮೂರು ದುರಂತಮಯ ಘಟನೆಗಳು ದಾಖಲಾದಂತಾಗಿದೆ. 

        ಫ‌ಲನೀಡದ ಜಿಲ್ಲಾಧಿಕಾರಿ ಆದೇಶ: ಹಟ್ಟಿಯಂಗಡಿ ದುರಂತದ ಬಳಿಕ ಎಚ್ಚೆತ್ತುಕೊಂಡ ಜಿಲ್ಲಾಡಳಿತವು ಜಿಲ್ಲೆಯ ಪ್ರತೀ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿನ ಯಾವುದೇ ತೆರೆದ ಮಾದರಿಯ ಅಪಾಯಕಾರಿ ನೀರಿನ ಹೊಂಡಗಳನ್ನು ತುರ್ತಾಗಿ ಮುಚ್ಚಲು ಅಥವಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆದೇಶ ಹೊರಡಿಸಿದೆ. ಆದರೆ ಇಂತಹ ಆದೇಶ ತಲುಪಿದ ಎರಡು ವಾರಗಳಲ್ಲಿಯೇ ವಂಡ್ಸೆಯಲ್ಲಿ ಮತ್ತೂಂದು ದುರ್ಘ‌ಟನೆ ಸಂಭವಿಸಿದೆ.

        ಜಿಲ್ಲಾಧಿಕಾರಿಯವರ ಆದೇಶಕ್ಕೆ ಪ್ರತಿಯಾಗಿ ಜಿಲ್ಲೆಯ ಹಲವು ಗ್ರಾಮ ಪಂಚಾಯತ್‌ಗಳು ಸೂಕ್ತ ಕ್ರಮಗಳನ್ನು ಕೈಗೊಂಡಿವೆ. ಆದರೆ ವಂಡ್ಸೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪ್ರಾಣಘಾತಕ ಕೈಕಾಣ ಮದಗವು ಮಾತ್ರ ಯಾರಿಗೂ ಅಪಾಯಕಾರಿಯಾಗಿ ಕಾಣದಿದ್ದುದು ದುರದೃಷ್ಟಕರವೇ ಸರಿ.

        ರಕ್ಷಣಾ ಕ್ರಮ ಇನ್ನೂ ಇಲ್ಲ: ಕೈಕಾಣ ಮದಗಕ್ಕೆ ಮಕ್ಕಳು ಬಲಿಯಾದಂದೇ ಸ್ಥಳಕ್ಕೆ ಭೇಟಿ ನೀಡಿದ್ದ ಕುಂದಾಪುರ ಸಹಾಯಕ ಉಪವಿಭಾಗಾಧಿಕಾರಿ ಸದಾಶಿವ ಪ್ರಭು ಅವರು ಇಲ್ಲಿನ ಅಪಾಯಕಾರಿ ಮದಗಕ್ಕೆ ಸೂಕ್ತ ಆವರಣಬೇಲಿ ನಿರ್ಮಿಸಲು ಹಾಗೂ ಮುನ್ನೆಚ್ಚರಿಕೆಯ ಫ‌ಲಕವನ್ನು ಸ್ಥಳದಲ್ಲಿ ಅಳವಡಿಸುವಂತೆ ಜಿಲ್ಲಾ ಪಂಚಾಯತ್‌ ಮತ್ತು ಸ್ಥಳೀಯ ಗ್ರಾಮ ಪಂಚಾಯತ್‌ಗೆ ಸೂಚಿಸಿದ್ದರು. ಆದರೆ ದುರಂತ ಸಂಭವಿಸಿ ಇದೀಗ ಮೂರು ದಿನಗಳು ಉರುಳಿದ್ದರೂ ಇಲ್ಲಿ ಸುರಕ್ಷತಾ ಯಾವುದೇ ಕ್ರಮಗಳು ಜರುಗಿದ್ದು ಕಂಡುಬಂದಿಲ್ಲ. ನಿತ್ಯವೂ ನಿರಂತರ ಜನಸಂಚಾರ ಹಾಗೂ

        ವಾಹನಗಳ ಸಂಚಾರವಿರುವ ವಂಡ್ಸೆ-ನೂಜಾಡಿ ರಸ್ತೆಮಾರ್ಗದಲ್ಲಿಯೇ ಇರುವ ಕೈಕಾಣ ಮದಗವು ಯಾವತ್ತೂ ಅಪಾಯಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ದುರಂತದ ಬಳಿಕ ಇಲ್ಲಿ ಸಂಚರಿಸುವ ಜನಸಾಮಾನ್ಯರು ಹಾಗೂ ವಾಹನಸವಾರರಲ್ಲಿ ಪ್ರತಿನಿತ್ಯವೂ ಅದೆಂಥದೋ ಭೀತಿಯ ಛಾಯೆ ಸುಳಿದಾಡುವಂತಾಗಿದೆ.

        ಸ್ಥಳೀಯಾಡಳಿತದ ನಿರ್ಲಕ್ಷ್ಯ ಹೆಚ್ಚಿದಷ್ಟೂ ಜನಸಾಮಾನ್ಯರ ಜೀವರಕ್ಷಣೆಯ ಆತಂಕ ಹೆಚ್ಚುತ್ತಲೇ ಇದ್ದು, ಇಂತಹ ಅಪಾಯಕಾರಿ ನೀರಿನಹೊಂಡಗಳಿಗೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು ಎಂಬ ಪ್ರಶ್ನೆ ಕಾಡಿದೆ. ಆದ್ದರಿಂದ ಕೈಕಾಣ ಮದಗಕ್ಕೆ ಸುರಕ್ಷತಾ ಕ್ರಮಗಳನ್ನು ಅಳವಡಿಸುವ ಕಾರ್ಯ ತುರ್ತಾಗಿ ನಡೆಯಲೇಬೇಕು ಎನ್ನುವುದು ಸ್ಥಳೀಯರ ಆಗ್ರಹ.

        ವಂಡ್ಸೆ-ಕೈಕಾಣ ದುರಂತಕ್ಕೆ ಕಾರಣವಾದ ಇಲ್ಲಿನ ಅಪಾಯಕಾರಿ ಮದಗಕ್ಕೆ ಸುರಕ್ಷತಾ ಆವರಣಬೇಲಿ ನಿರ್ಮಾಣ, ಸೂಚನಾ ಫ‌ಲಕಗಳನ್ನು ಅಳವಡಿಸುವಿಕೆ ಮುಂತಾದ ಕಾರ್ಯಗಳನ್ನು ಕೈಗೊಳ್ಳಲು ಅಗತ್ಯವಿರುವ ಅನುದಾನವನ್ನು ಜಿಲ್ಲಾ ಪಂಚಾಯತ್‌ ಸದಸ್ಯರ ನಿಧಿಯಿಂದ ಭರಿಸಲು ಸಿದ್ಧ ಎಂದು ವಂಡ್ಸೆ ಕ್ಷೇತ್ರ ಜಿಲ್ಲಾ ಪಂಚಾಯತ್‌ ಸದಸ್ಯೆ ಇಂದಿರಾ ಶೆಟ್ಟಿ ಅವರು ಉದಯವಾಣಿಗೆ ತಿಳಿಸಿದ್ದಾರೆ.

        ತನ್ನ ಕ್ಷೇತ್ರ ವ್ಯಾಪ್ತಿಯ ಯಾವುದೇ ಅಪಾಯಕಾರಿ ಮಾದರಿಯ ನೀರಿನ ಹೊಂಡಗಳನ್ನು ಮುಚ್ಚುವ ಅಥವಾ ಸುರಕ್ಷತಾ ಕ್ರಮಗಳನ್ನು ಜರುಗಿಸಲು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್‌ಗಳಿಗೆ ನಿರ್ದೇಶನವನ್ನಿತ್ತಿದ್ದಾಗಿ ಅವರು ತಿಳಿಸಿದ್ದಾರೆ. 


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus