ತೇಜೇಶ್ವರ್ ಕುಂದಲ್ಪಾಡಿ
ಸೇನೆಯಲ್ಲಿ 25 ವರ್ಷ ಸೇವೆ ಸಲ್ಲಿಸಿ ಇಂದು ಕೃಷಿ ಕಾಯಕದಲ್ಲಿ ತೊಡಗಿಕೊಂಡಿರುವ ಕುತ್ಯಾಳ ಭಾಸ್ಕರ ಗೌಡ ಪ್ರಗತಿಪರ ಕೃಷಿಕ ಎನಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಭಾರ ತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ವರು ಸೇವೆಯ ಬಳಿಕ ಇನ್ನೊಂದು ಸರಕಾರಿ ಹುದ್ದೆಗೆ ಸೇರಿಕೊಳ್ಳುತ್ತಾರೆ.ಆದರೆ ಅಂತಹ ಹುದ್ದೆಗೆ ಆಸೆಪಡದೆ ಕೃಷಿ ಕಾಯಕದಲ್ಲಿ ತೊಡಗಿಕೊಳ್ಳು ವವರು ಬಹಳ ವಿರಳ. ಆದರೆ ನಿವೃತ್ತ ಸೈನಿಕ ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಪಳ್ಳಿಮಜಲು ನಿವಾಸಿ ಕುತ್ಯಾಳ ಭಾಸ್ಕರ ಗೌಡ ಇದಕ್ಕೆ ಅಪವಾದ.
ಇವರು ಪಿ.ಯು.ಸಿ. ತನಕ ವಿದ್ಯಾಭ್ಯಾಸ ಪಡೆದು 1980ರಲ್ಲಿ ಭಾರತೀಯ ಸೇನೆಗೆ ಸೇರಿದರು. ಸೇನೆ ಯಲ್ಲಿ 25 ವರ್ಷ 6 ತಿಂಗಳು ಸೇವೆ ಸಲ್ಲಿಸಿ ಕೌಟಂಬಿಕ ಸಮಸ್ಯೆಯಿಂದ ಸ್ವಯಂ ನಿವೃತ್ತಿ ಪಡಕೊಂಡರು.ಕೈಯಲ್ಲಿ ಗನ್ ಹಿಡಿದು ಧೈರ್ಯದಿಂದ ದೇಶದ ರಕ್ಷಣೆ ಮಾಡಿದ ವ್ಯಕ್ತಿ ಇಂದು ಕೃಷಿ ಕಾಯಕದಲ್ಲಿ ತನ್ನನ್ನು ಅಷ್ಟೇ ಧೈರ್ಯದಿಂದ ತೊಡಗಿಸಿಕೊಂಡು ಪ್ರಗತಿಪರ ಕೃಷಿಕರಾಗಿದ್ದಾರೆ.
ಅಪ್ಪಟ ಕೃಷಿಪ್ರೇಮಿ: ಮೂಲತಃ ಸುಳ್ಯ ಸಮೀಪದ ಸೋಣಂಗೇರಿಯವರಾದ ಇವರು ಬೆಳ್ಳಾರೆಯಲ್ಲಿ ಕೇವಲ 5 ಎಕ್ರೆ ಒಣ ಭೂಮಿಯನ್ನು ಖರೀದಿಸಿದರು. ಅಪ್ಪಟ ಕೃಷಿಪ್ರೇಮಿಯಾದ ಅವರ ಭೂಮಿಯಲ್ಲಿ ಈಗ ಮಿಶ್ರ ಬೆಳೆಗಳದ್ದೇ ಕಾರುಬಾರು. 800 ಫಸಲು ನೀಡುವ ಅಡಿಕೆ ಮರಗಳು 700, 6 ವರ್ಷದ ರಬ್ಬರ್ ಗಿಡಗಳು, 500 ಬಾಳೆಗಳು, 50 ತೆಂಗಿನ ಮರಗಳು ಇವೆ. ಈಗ ತೆಂಗು, ಅಡಿಕೆ, ಬಾಳೆ, ಕಬ್ಬುವಿನಿಂದ ಮಾತ್ರ ಫಸಲು ಇದ್ದು ವರ್ಷಕ್ಕೆ ಎರಡರಿಂದ ಮೂರು ಲಕ್ಷ ರೂ. ಆದಾಯ ಪಡೆಯುತ್ತಿದ್ದಾರೆ.
ಸಾವಯವ ಕೃಷಿ: ಇದುವರೆಗೆ ರಾಸಾಯನಿಕ ಗೊಬ್ಬರ ಬಳಸುತ್ತಿದ್ದೆ. ಈಗ ಕೆಲವು ಸಮಯಗಳಿಂದ ರಾಸಾಯನಿಕ ಗೊಬ್ಬರ ಬಿಟ್ಟು ಸಾವಯವ ಕೃಷಿ ಮಾಡುತ್ತಿದ್ದೇನೆ, ಮುಂದೆಯೂ ಅದನ್ನು ಮುಂದುವರಿಸುತ್ತೇನೆ ಎಂದು ಭಾಸ್ಕರ ಗೌಡರು ಹೇಳುತ್ತಾರೆ.
ಸಾವಯವ ಕೃಷಿಯಿಂದ ರೋಗ ಬಾಧೆ ತುಂಬಾ ಕಡಿಮೆಯಿದ್ದು ನಿರೀಕ್ಷೆಗೂ ಮೀರಿದ ಘಸಲು ದೊರೆ ಯುತ್ತಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ . ಹಟ್ಟಿ ಗೊಬ್ಬರಕ್ಕಾಗಿ ಮತ್ತು ಮನೆ ಉಪಯೋಗದ ಹಾಲಿಗಾಗಿ ಎರಡು ದನಗಳನ್ನು ಸಾಕುತ್ತಿದ್ದಾರೆ. ಹಟ್ಟಿ ಗೊಬ್ಬರವನ್ನೇ ಕೃಷಿಗೆ ಹೆಚ್ಚಾಗಿ ಉಪಯೋಗ ಮಾಡುತ್ತಾರೆ.
ಅಂದು ದೇಶ ಕಾಯುವ ಕೆಲಸ ಮಾಡಿ ಕಾರ್ಗಿಲ್ ಕಾರ್ಯಾಚರಣೆಯಲ್ಲೂ ಹೋರಾಟ ಮಾಡಿದ ಭಾಸ್ಕರ ಗೌಡರು ಇಂದು ಮಾದರಿ ರೈತರಾಗಿ ಜೈ ಜವಾನ್ ಜೈ ಕಿಸಾನ್ ಎಂದು ಧೈರ್ಯದಿಂದಲೇ ಹೇಳುತ್ತಾರೆ.