ಪ್ರೊ| ಮುಮ್ತಾಜ ಅಲಿ ಖಾನ್, ಬೆಂಗಳೂರು
ಸಾಹಿತಿಗಳಲ್ಲಿ ಎರಡು ಗುಂಪುಗಳು ಟಿಪ್ಪು ಸುಲ್ತಾನರ ಬಗ್ಗೆ ತಮ್ಮ ನಿಲುವನ್ನು ವ್ಯಕ್ತಪಡಿಸುತ್ತಿವೆ. ಸಾಹಿತಿ ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಡ್ ಅವರ ಒಂದು ಗುಂಪು ನೇರವಾಗಿ ಟಿಪ್ಪು ಪರವಾಗಿದೆ. ಚಿದಾನಂದ ಮೂರ್ತಿ, ಎಸ್.ಎಲ್.ಭೈರಪ್ಪಅವರ ಇನ್ನೊಂದು ಗುಂಪು ಟಿಪ್ಪುವಿನ ವಿರುದ್ಧ ನಿಂತಿದೆ.
ಚಿದಾನಂದ ಮೂರ್ತಿ ಹಾಗೂ ಸಂಗಡಿಗರು ಟಿಪ್ಪು ಕನ್ನಡ ಭಾಷೆಯ ವೈರಿ, ಮತಾಂತರವನ್ನು ಪ್ರೇರೇಪಿಸಿದ ವ್ಯಕ್ತಿ, ಅನೇಕ ದೇವಾಲಯಗಳನ್ನು ನಾಶ ಮಾಡಿದ ವ್ಯಕ್ತಿ, ಹಿಂದುಗಳ ಶತ್ರು ಮುಂತಾದ ಕಠೊರ ಶಬ್ದಗಳನ್ನು ಉಪಯೋಗಿಸಿ ಅವರ ನಿಂದನೆ ಮಾಡುತ್ತಿದ್ದಾರೆ. ಇವರೆಲ್ಲ ಬಹಳ ಹಿರಿಯ ಸಾಹಿತಿಗಳಾಗಿದ್ದರೂ ಟಿಪ್ಪು ಬಗ್ಗೆ ಸಂಕುಚಿತ ಭಾವನೆ ತಾಳಿರುವುದು ದುರಂತ.
ಇಡೀ ಕರ್ನಾಟಕದಲ್ಲಿ ಹಿಡಿಯಷ್ಟು ಜನರನ್ನು ಬಿಟ್ಟರೆ ಮಿಕ್ಕೆಲ್ಲ ಹಿಂದು ಮುಸಲ್ಮಾನರು ಟಿಪ್ಪುವಿನ ಗುಣಗಾನ ಮಾಡುತ್ತಿದ್ದಾರೆ. ಅವರು ಖಂಡಿತವಾಗಿ ಕನ್ನಡ ಭಾಷೆ ವಿರೋಧಿಗಳಲ್ಲ ಎಂಬುದು ಶೃಂಗೇರಿ ಶಂಕರಾಚಾರ್ಯರ ಮಠದಲ್ಲಿರುವ ಅವರ ಕನ್ನಡ ಪತ್ರಗಳ ಮುಖಾಂತರ ಗೊತ್ತಾಗುತ್ತದೆ. ಅವರು ದೊಡ್ಡ ದೊಡ್ಡ ಹುದ್ದೆಗಳನ್ನು ಹಿಂದುಗಳಿಗೆ ಕೊಟ್ಟಿರುವ ದಾಖಲೆಗಳಿವೆ.
156 ದೇವಾಲಯಗಳನ್ನು ದುರಸ್ತಿ ಮಾಡಿರುವ ದಾಖಲೆಗಳಿವೆ. ಮರಾಠ ಸೈನಿಕರು ಶೃಂಗೇರಿ ಮಠವನ್ನು ಕೆಡಿಸಿ, ಶಾರದಾಂಬಾ ದೇವಿಯ ವಿಗ್ರಹವನ್ನು ನಾಶ ಮಾಡಿದರು. ಇವುಗಳನ್ನು ಸರಿಪಡಿಸಿ ಆದ ಘಟನೆಗೆ ಕಣ್ಣೀರಿಟ್ಟರು ಸುಲ್ತಾನರು.
ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ಕರೆದ ಮೊಟ್ಟಮೊದಲ ಕನ್ನಡಿಗ ಟಿಪ್ಪು. ಇತ್ತೀಚೆಗೆ ಕೇಂದ್ರ ಸರ್ಕಾರ ಕೊಡುತ್ತಿರುವ 5 ಅಲ್ಪಸಂಖ್ಯಾತರ ವಿಶ್ವವಿದ್ಯಾಲಯಗಳಲ್ಲಿ ಒಂದು ಶ್ರೀರಂಗಪಟ್ಟಣದಲ್ಲಿ ಸ್ಥಾಪನೆಯಾಗುತ್ತಿದೆ.
ಇದಕ್ಕೆ ಟಿಪ್ಪು ಸುಲ್ತಾನ್ ವಿಶ್ವವಿದ್ಯಾಲಯವೆಂದು ನಾಮಕರಣ ಮಾಡಲು ಕೇಂದ್ರ ಸರ್ಕಾರ ಸಿದ್ಧವಾಗಿದೆ. ಆದರೆ ಟಿಪ್ಪು ಸುಲ್ತಾನ್ ವಿರೋಧಿಗಳು ಯಾವ ಕಾರಣಕ್ಕೂ ಅವರ ಹೆಸರಿಡಬಾರದು, ಇಟ್ಟರೆ ಅದು ಕಳಂಕಭರಿತವಾಗುತ್ತದೆ ಎಂದು ಇವರು ಹೇಳುವುದನ್ನು ಕೇಳಿದರೆ ನೋವಾಗುತ್ತದೆ. ಇವರು ತಮ್ಮ ಮನೋಭಾವ ಬದಲಿಸಿಕೊಳ್ಳಬೇಕೆಂದು ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತೇನೆ.
ಪ್ರೊ| ಮುಮ್ತಾಜ ಅಲಿ ಖಾನ್, ಬೆಂಗಳೂರು