Sunday, September 21, 2014
Last Updated: 7:41:58 PM IST
  • ನಾನೆಲ್ಲಿರುವೆ:
  • ಮುಖಪುಟ ಅಭಿಪ್ರಾಯ ನಾಗರಿಕ ಪತ್ರಿಕೊದ್ಯಮ
  • ವಿಡಿಯೋ ಗ್ಯಾಲರಿ
  • ಉದಯವಾಣಿ
  • ವೆ ಬ್
  • ಹುಡುಕಿ
    • ಆತ್ಮಹತ್ಯೆಗಳು ಏಕೆ ಹೆಚ್ಚುತ್ತಿವೆ ?

      • ಜನಹಿತ ಚಿಂತಕ

        ಹಿಂದೆ ಓರ್ವ ಆತ್ಮಹತ್ಯೆ ಮಾಡಿಕೊಂಡರೆ ಸಮಾಜದಲ್ಲಿ ಅದು ಬಹಳ ಚರ್ಚೆಯ ವಿಷಯವಾಗುತ್ತಿತ್ತು. ಇಂದು ಆತ್ಮಹತ್ಯೆಗಳು ತೀರ ಸಾಮಾನ್ಯವಾಗಿ ಬಿಟ್ಟಿವೆ !

        2012 ನೇ ಸಾಲಿನಲ್ಲಿ  ಪುತ್ತೂರು ಮತ್ತು ಸುಳ್ಯ ತಾಲೂಕುಗಳಲ್ಲಿ  ಒಟ್ಟು  235 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. 20 ವರ್ಷಗಳ ಹಿಂದೆ ಓರ್ವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರೆ ಸಮಾಜದಲ್ಲಿ ಅದು ಬಹಳ ಚರ್ಚೆಯ ವಿಷಯವಾಗುತ್ತಿತ್ತು. ಈಗ ದಿನ ಬೆಳಗಾದರೆ ವರದಿಯಾಗುತ್ತಿರುವ ಆತ್ಮಹತ್ಯೆಯ ಪ್ರಕರಣಗಳು ಪತ್ರಿಕೆಗಳಿಗೆ ಕೂಡ ಪ್ರಮುಖ ಸುದ್ದಿಯಾಗುವುದಿಲ್ಲ.

        ಪುತ್ತೂರು ಮತ್ತು ಸುಳ್ಯ ತಾಲೂಕುಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಆತ್ಮಹತ್ಯೆ ಮಹಾ ಪಾಪ ಎಂಬ ಧಾರ್ಮಿಕ ನಂಬಿಕೆ ಪ್ರತಿಯೊಂದು ಧರ್ಮದಲ್ಲಿ ಇದ್ದರೂ ಈಗ ಆತ್ಮಹತ್ಯೆಗೆ ಶರಣಾಗುವವರ ಸಂಖ್ಯೆ ಹೆಚ್ಚುತ್ತಿದೆ. ಅನಾರೋಗ್ಯದ ಕಾರಣಕ್ಕಾಗಿ ಆತ್ಮಹತ್ಯೆ, ಪ್ರೀತಿ ಕೈಕೊಟ್ಟಾಗ ಆತ್ಮಹತ್ಯೆ, ವೃದ್ಧಾಪ್ಯದ ಕಾರಣಕ್ಕಾಗಿ ಆತ್ಮಹತ್ಯೆ, ಅನಾಥ ಪ್ರಜ್ಞೆಗಾಗಿ ಆತ್ಮಹತ್ಯೆ, ಸಾಲದ ಬಾಧೆಗಾಗಿ ಆತ್ಮಹತ್ಯೆ, ಕೌಟುಂಬಿಕ ಕಾರಣಕ್ಕಾಗಿ ಆತ್ಮಹತ್ಯೆ ಹೀಗೆ ಹತ್ತು ಹಲವು ಕಾರಣಗಳಿಗೆ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿವೆ. ಎಲ್ಲಾ ಆತ್ಮಹತ್ಯೆಗಳ ಪ್ರಕರಣ ದಾಖಲಾದಾಗ ಜೀವನದಲ್ಲಿ ಜುಗುಪ್ಸೆ ಆತ್ಮಹತ್ಯೆಗೆ ಕಾರಣ ಎಂಬ ಶಬ್ದವನ್ನು ಪೊಲೀಸರು ಪ್ರಥಮ ಮಾಹಿತಿ ವರದಿಯಲ್ಲಿ ದಾಖಲಿಸುತ್ತಾರೆ.

        ನಮ್ಮ ಜೀವನ ಪದ್ಧತಿ, ಕೌಟುಂಬಿಕ ವ್ಯವಸ್ಥೆ, ಶಿಕ್ಷಣದಲ್ಲಿನ ಸ್ಪರ್ಧೆ, ವ್ಯಾವಹಾರಿಕ ಪೈಪೋಟಿ, ಕೃಷಿಯಲ್ಲಿ ಸೋಲು, ವ್ಯವಹಾರದಲ್ಲಿ ಹಿನ್ನಡೆ ಈ ಕಾರಣಗಳು ಈಗ ದುರ್ಬಲ ಮನಸ್ಸಿನವರನ್ನೂ ಸುಲಭದಲ್ಲಿ ಆತ್ಮಹತ್ಯೆಯ ದಾರಿಯತ್ತ ಕೊಂಡೊಯ್ಯುತ್ತವೆ. 2012 ದಶಂಬರ ತಿಂಗಳಲ್ಲಿ ಪುತ್ತೂರಿನ ಯುವ ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ 2012ರ ಸಾಲಿನಲ್ಲಿ ನಡೆದ ಉಲ್ಲೇಖನೀಯ ಆತ್ಮಹತ್ಯೆ ಪ್ರಕರಣವಾಗಿದೆ.

        ಇಬ್ಬರೂ ಒಂದೇ ಸಮುದಾಯದವರಾದರೂ ಒಬ್ಬರ ಮನೆಯಲ್ಲಿ ಆರ್ಥಿಕ ಅಂತಸ್ತು ಮದುವೆಗೆ ಮುಖ್ಯ ಎಂದಾದಾಗ ಪ್ರೇಮಿಗಳಿಬ್ಬರು ಮನೆ ಬಿಟ್ಟು ಆತ್ಮಹತ್ಯೆಗೆ ಶರಣಾದರು. ಇವರು ಕಾಣೆಯಾದಾಗ ವಿವಾಹವಾಗಿ ಠಾಣೆಗೆ ಹಾಜರಾಗಬಹುದು ಎಂಬ ನಂಬಿಕೆ ಇತ್ತು. ಆದರೆ ತಮ್ಮ ಮದುವೆ ಎರಡು ಕುಟುಂಬಗಳ ನಡುವೆ ವಿರಸಕ್ಕೆ ಕಾರಣವಾಗಲಿದೆ ಎಂಬ ನಂಬಿಕೆ ಈ ಯುವ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗುವಂತೆ ಮಾಡಿತು.

        ಮಕ್ಕಳು ತಮ್ಮನ್ನು ನೋಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕಾಗಿ ವೃದ್ಧರ ಆತ್ಮಹತ್ಯೆ ನಡೆಯುತ್ತದೆ. ಸಮಾಜದಲ್ಲಿ ಇಂದು ತಂದೆ ತಾಯಿಗಳನ್ನು ನೋಡಿಕೊಳ್ಳಲಾರದ ಪರಿಸ್ಥಿತಿ ಎದ್ದು ತೋರುತ್ತಿದ್ದು, ಹಣವಂತರು ತಮ್ಮ ಮಾತಾಪಿತರನ್ನು ವೃದ್ಧಾಶ್ರಮಗಳಿಗೆ ಸೇರಿಸಿದರೆ ಸಾಮಾನ್ಯರು ತಮ್ಮ ಮಾತಾಪಿತರನ್ನು ಬೀದಿಗೆ ತಳ್ಳುವ ಹೃದಯಹೀನ ಅಮಾನವೀಯ ಕೆಲಸಗಳನ್ನು ಮಾಡುತ್ತಿದ್ದಾರೆ. ಬೀದಿಗೆ ಬಿದ್ದ ಈ ವೃದ್ಧರು ಬೇಡಿ ಬದುಕಲು ಆತ್ಮಗೌರವ ಅಡ್ಡಿಯಾದಾಗ ಆತ್ಮಹತ್ಯೆಗೆ ಶರಣಾಗುತ್ತಾರೆ.

        ಆತ್ಮಹತ್ಯೆ ಎಂಬುದು ಸಾಮಾನ್ಯ ವಿಷಯವಲ್ಲ  ಅದು ನಮ್ಮ ಸಮಾಜದಲ್ಲಿನ ಸ್ಥಿತಿಗತಿಗಳ ಕುರಿತು, ಜೀವನ ಪದ್ಧ ತಿಯ ಕುರಿತು ಇರುವ ಲೋಪಗಳನ್ನು ತೋರಿಸುತ್ತದೆ. ಪ್ರತಿವರ್ಷ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಉದಾಹರಣೆಗಾಗಿ ಉಪ್ಪಿನಂಗಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 2011ರ ಸಾಲಿನಲ್ಲಿ ನಡೆದ ಒಟ್ಟು ಆತ್ಮಹತ್ಯೆಗಳ ಸಂಖ್ಯೆ 38,2012ರ ಸಾಲಿನಲ್ಲಿ ಇದೇ ಠಾಣಾ ವ್ಯಾಪ್ತಿಯಲ್ಲಿ ನಡೆದ ಆತ್ಮಹತ್ಯೆಗಳ ಸಂಖ್ಯೆ 49. ಅಂದರೆ 11 ಪ್ರಕರಣಗಳು ಹೆಚ್ಚಾಗಿವೆ.

        ಆತ್ಮಹತ್ಯೆಯ ಪ್ರಕರಣಗಳನ್ನು ತಡೆಯಲು ಸಾಧ್ಯ ಎಂದು ಮನಸಾಸ್ತ್ರ ಹೇಳುತ್ತದೆ. ಆದರೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಬಂದವರನ್ನು ಬದುಕಲು ಪ್ರೇರಣೆ ನೀಡುವ ಯಾವುದೇ ಅಂಶಗಳು ನಮ್ಮಲ್ಲಿ ಇಲ್ಲ. ಒಂದು ಕ್ಷಣದ ತೀರ್ಮಾನವೇ ಪ್ರತಿಯೊಬ್ಬನ ಆತ್ಮಹತ್ಯೆಗೆ ಕಾರಣವಾಗುತ್ತದೆ ಎಂದು ಮನಸಾಸ್ತ್ರ ಹೇಳುತ್ತಿದ್ದು, ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ತನ್ನ ಯತ್ನದ ಬಳಿಕ ಬದುಕಲು ಪ್ರಯತ್ನಿಸುತ್ತಾನೆ. ಪ್ರತಿಯೊಂದು ಆತ್ಮಹತ್ಯೆ ಪ್ರಕರಣದಲ್ಲೂ ಇದು ದೃಢಪಟ್ಟಿದೆ. ಕೆಲವರು ಬದುಕಿದ್ದಾರೆ. ಹಲವರು ಸತ್ತಿದ್ದಾರೆ.

        ಆತ್ಮಹತ್ಯೆಗಳು ಹೀಗೇ ಮುಂದುವರಿದರೆ ನಮ್ಮ ನಾಗರಿಕ ಸಮಾಜ ಕೊನೆಗೆ ಎಲ್ಲಿಗೆ ತಲುಪುತ್ತದೆ, ನಾವು ಯೋಚಿಸಬಲ್ಲೆವೇ ?


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟTop 20
      • Copyright @ 2009 Udayavani.All rights reserved.
      • Designed & Hosted By 4cplus