ತೇಜೇಶ್ವರ್ ಕುಂದಲ್ಪಾಡಿ
ಜನರು ಆಧುನಿಕತೆಯ ಬಿರುಗಾಳಿಗೆ ಸಿಲುಕಿ ದ್ದರೂ, ಹಳ್ಳಿಯಲ್ಲಿ ರೈತರು ತಮ್ಮತನವನ್ನು ಇನ್ನೂ ಉಳಿಸಿ ಕೊಂಡಿದ್ದಾರೆ. ಪುತ್ತೂರು ಮತ್ತು ಸುಳ್ಯ ತಾಲೂಕು ಮಲೆನಾಡು ಪ್ರದೇಶವಾಗಿದ್ದು , ಪ್ರಕೃತಿ ಸೌಂದರ್ಯದಿಂದ ಕೂಡಿದೆ.
ಇಲ್ಲಿಯ ಅಡಿಕೆ, ತೆಂಗು, ಬಾಳೆ, ರಬ್ಬರ್, ಕೊಕ್ಕೋ, ಕಾಳುಮೆಣಸು ಕೃಷಿಗಳನ್ನು ನೋಡುವುದೇ ಹಬ್ಬ. ಸಾಹಸಮಯ ಬದುಕನ್ನು ವೃತ್ತಿಯ ಮೂಲಕ ತಮ್ಮದಾಗಿಸಿಕೊಂಡಿರುವ ಕೊರಗ ಜನಾಂಗದ ಕುಟುಂಬಗಳು ಪುತ್ತೂರು ಮತ್ತು ಸುಳ್ಯ ತಾಲೂಕಿನಲ್ಲಿ ಕಾಣಬಹುದು. ಅವರನ್ನು ರೈತರ ಮಿತ್ರರೆಂದೇ ಕರೆಯಬಹುದಾಗಿದೆ. ಕೃಷಿ ಚಟುವಟಿಕೆಗಳಿಗೆ ಬೇಕಾದ ಬುಟ್ಟಿಗಳನ್ನು ತಯಾರಿಸಿಕೊಡುವ ಕೆಲಸವನ್ನು ಇವರು ಮಾಡುತ್ತಿದ್ದಾರೆ.
ಕಾಡಿನಲ್ಲಿ ಸಿಗುವ ಬಳ್ಳಿ ಮರದ ಬೀಳಲುಗಳಿಂದ ವಿವಿಧ ಗಾತ್ರದ ಬುಟ್ಟಿ ತಯಾರಿಸುವ ವೃತ್ತಿಯಲ್ಲೂ ಹೂ ಅರಳಿಸುವ ಕಲೆಗಾರಿಕೆ ಇವರದ್ದು. ಈ ವೃತ್ತಿಯನ್ನು ಮಾಡುವ ಕೊರಗ ಜನಾಂಗದವರು ಶ್ರಮ ಜೀವಿಗಳು. ಬುಟ್ಟಿ ತಯಾರಿಕೆಗೆ ಬೇಕಾದ ಬೀಳಲನ್ನು ಗುಡ್ಡ ಬೆಟ್ಟದಿಂದ ತಲೆ ಹೊರೆಯಲ್ಲಿಯೇ ಹೊತ್ತು ತರುತ್ತಾರೆ. ಎಂಜಿರ್, ಮಾದಿರ್, ನೆರಿಲ್ ಬಿಳಲುಗಳಿಂದ ಬುಟ್ಟಿ ತಯಾರಿಸುತ್ತಾರೆ.

ರೈತಮಿತ್ರ ದಂಪತಿ: ಸುಳ್ಯ ತಾಲೂಕಿನ ಪಂಜ ಸಮೀಪದ ಪಲ್ಲೋಡಿ ನಿವಾಸಿಗಳಾದ ಮಾಂಕು ಮತ್ತು ಆತನ ಹೆಂಡತಿ ಸವಿತಾ 27 ವರ್ಷಗಳಿಂದ ಈ ವೃತ್ತಿಯನ್ನು ನಿಷ್ಠೆಯಿಂದ ಮಾಡಿಕೊಂಡು ಬರುತ್ತಿದ್ದಾರೆ. ಇವರದು ಅಲೆಮಾರಿ ಜೀವನದ ಪದ್ಧತಿ. ಬೆಳ್ಳಾರೆ, ಪಂಜ, ಕಡಬ, ಐವರ್ನಾಡು, ಕಲ್ಮಡ್ಕ, ಪುಳಿಕುಕ್ಕು, ಸುಬ್ರಹ್ಮಣ್ಯ, ಎಡಮಂಗಲ ಹೀಗೆ ವಿವಿಧ ಕಡೆ ತಿರುಗಿ ಅಲ್ಲಲ್ಲಿ ಒಂದಷ್ಟು ದಿವಸ ಇದ್ದು ಅಲ್ಲಿ ಬುಟ್ಟಿ ತಯಾರಿಸಿ ಅಲ್ಲಿ ಅಂಗಡಿಯವರಿಗೆ ಮತ್ತು ರೈತರಿಗೆ ಮಾರಾಟ ಮಾಡುತ್ತಾರೆ.
ಬೇಡಿಕೆ ಕಡಿಮೆಯಾಗಿಲ್ಲ : ನಾವು ದಿನವೊಂದಕ್ಕೆ ಸುಮಾರು 800 ರೂ. ಆದಾಯ ಗಳಿಸುತ್ತಿದ್ದೇವೆ. ಅನ್ನ ನೀಡುತ್ತಿರುವ ಈ ವೃತ್ತಿಯನ್ನು ನಾವು ಬಿಡಲು ಅಸಾಧ್ಯ. ಬುಟ್ಟಿ ತಯಾರಿಕೆಗೆ ಶ್ರಮ ಪಡಬೇಕಾಗುತ್ತದೆ.ಕಾಡುಗಳಿಗೆ ಬೀಳಲುಗಳಿಗೆ ಹೋದಾಗ ಪ್ರಾಣಿ ವಿಷ ಜಂತುಗಳ ಬಗ್ಗೆ ನಾವು ಜಾಗೃತೆ ವಹಿಸಬೇಕಾಗುತ್ತದೆ. ಪೇಟೆಗಳಿಗೆ ಬಣ್ಣ ಬಣ್ಣದ ಫೈಬರ್ ಬುಟ್ಟಿಗಳು ಲಗ್ಗೆಯಿಟ್ಟರೂ ನಾವು ತಯಾರಿಸುವ ಬುಟ್ಟಿಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ ಎಂದು ಸಂತಸದಿಂಲೇ ಮಾಂಕು ನುಡಿಯುತ್ತಾರೆ.