ಜನಹಿತ ಚಿಂತಕ
ರಸ್ತೆ ಕಾಮಗಾರಿ ನಡೆಯುವಲ್ಲಿ ಸ್ಥಳೀಯ ಸಾರ್ವಜನಿಕರು ಗುತ್ತಿಗೆದಾರರನ್ನು ಎಚ್ಚರಿಸುವ ಬ್ಯಾನರ್ ಅಳವಡಿಸುವ ಮೂಲಕ ತಮ್ಮ ನಾಗರಿಕ ಪ್ರಜ್ಞೆ ಮೆರೆದಿದ್ದಾರೆ. ಕಾಮಗಾರಿ ಕಳಪೆಯಾದರೆ ಪ್ರತಿಭಟನೆ ನಡೆಸುವುದಾಗಿ ಮುಂದಾಗಿ ಎಚ್ಚರಿಸಿದ್ದಾರೆ. ಈ ಮೂಲಕ ಕಳಪೆ ಕಾಮಗಾರಿಗಳು ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ.
ಪುತ್ತೂರು ನಗರದಲ್ಲಿ ಈ ಹಿಂದೆ ಪುರಸಭಾ ವತಿಯಿಂದ ಕಾಂಕ್ರಿಟೀಕರಣ ಕಾಮಗಾರಿ ನಡೆಯುತ್ತಿದ್ದಾಗ ಕರ್ಮಳದಲ್ಲಿ ಬಳಕೆದಾರರ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ಕಣ್ಗಾವಲು ನಡೆಸಿದ್ದರು. ಈ ಮೂಲಕ ಇತರ ಕಡೆಗಳಲ್ಲೂ ಕಾಮಗಾರಿ ನಡೆಯುವಾಗ ಸ್ಥಳೀಯ ನಾಗರಿಕರು ತಮ್ಮ ಸಾರ್ವಜನಿಕ ಜವಾಬ್ದಾರಿಯನ್ನು ತೋರ್ಪಡಿಸುವಂತೆ ವೇದಿಕೆ ಮನವಿ ಮಾಡಿತ್ತು.
ರಸ್ತೆ ಕಾಮಗಾರಿಗಳು ನಡೆಯುವುದೇ ಅಪರೂಪ. ಅದರಲ್ಲೂ ನಡೆದ ಕಾಮಗಾರಿಗಳು ಗುಣಮಟ್ಟದಲ್ಲಿ ನಡೆಯದಿದ್ದರೆ ಕಾಮಗಾರಿ ನಡೆದ ಬೆನ್ನಲ್ಲೇ ಗುತ್ತಿಗೆದಾರರ ಮತ್ತು ಎಂಜಿನಿಯರ್ ಅವರ ಕಳಪೆತನ ಬೆಳಕಿಗೆ ಬರುತ್ತದೆ.
ಸರ್ವೆ ಗ್ರಾಮದ ನೆಕ್ಕಿಲು- ನೇರೋಳ್ತಡ್ಕ- ಸೊರಕೆ ರಸ್ತೆಯನ್ನು ದ.ಕ. ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ 5ಲಕ್ಷ ರೂ. ಅನುದಾನದಲ್ಲಿ ಡಾಮರೀಕರಣ ಮಾಡಲಾಗುತ್ತಿದೆ. ಈ ರಸ್ತೆಯಿಂದಾಗಿ 187 ಮನೆಗಳಿಗೆ ಅನುಕೂಲವಾಗುತ್ತದೆ.
ಈ ರಸ್ತೆಯನ್ನು ಡಾಮರೀಕರಣಗೊಳಿಸಲು ಹಲವು ವರ್ಷಗಳಿಂದ ಬೇಡಿಕೆ ಇತ್ತು. ಆದರೆ ಜನಪ್ರತಿನಿಧಿಗಳಿಂದ ಪೂರಕ ಸ್ಪಂದನ ವ್ಯಕ್ತವಾಗಿರಲಿಲ್ಲ. ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಜನರ ಬೇಡಿಕೆಯನ್ನು ಮನ್ನಿಸಿ, ಈ ಬಾರಿಯ ತಮ್ಮ ಅನು ದಾನದಲ್ಲಿ 5ಲಕ್ಷ ರೂ. ಗಳನ್ನು ಮಂಜೂರುಗೊಳಿಸಿದ್ದರು.
ಈಗ ರಸ್ತೆ ಕಾಮಗಾರಿ ಆರಂಭಗೊಂಡಿದೆ. ಡಾಮರೀ ಕರಣ ಕಾಮಗಾರಿಯನ್ನು ದ.ಕ. ಜಿ.ಪಂ. ಸದಸ್ಯ ಫಕೀರ ಎಂ. , ಎ.ಪಿ.ಎಂ.ಸಿ. ಉಪಾಧ್ಯಕ್ಷ ಕರುಣಾಕರ ಗೌಡ ಎಲಿಯ, ರವಿ ಮೇಸಿŒ ವೀಕ್ಷಣೆ ಮಾಡಿದರು. ಕಾಮಗಾರಿಯನ್ನು ಸೂಕ್ತ ರೀತಿಯಲ್ಲಿ ನಡೆಸುವಂತೆ ಗುತ್ತಿಗೆದಾರರಿಗೂ ಸೂಚನೆ ನೀಡಿದರು.