ಜಯಶ್ರೀ ಎಚ್. ಪುಣಚ, ವಿ.ಸಿ.ಪುತ್ತೂರು
ಇಂದು ಜನ ಕೃಷಿಯಲ್ಲಿ ಆಸಕ್ತಿ ಕಳೆದುಕೊಂಡು, ಪೇಟೆಯತ್ತ ವಲಸೆ ಹೋಗುತ್ತಿದ್ದಾರೆ. ಫಲವತ್ತಾದ ಭೂಮಿಯನ್ನು ಮಾರಾಟ ಮಾಡಿ ಪೇಟೆಯಲ್ಲಿ ಸಣ್ಣ ಜಾಗದಲ್ಲಿ ಮನೆ ಮಾಡಿ ವಾಸಿಸುವವರ ಸಂಖ್ಯೆ ಅಧಿಕವಾಗುತ್ತಿದೆ.
ಹಾಗೆಂದು ಎಲ್ಲ ಕೃಷಿಕರನ್ನು ಈ ನಿಟ್ಟಿನಲ್ಲಿ ಅಳೆಯ ಲಾಗುವುದಿಲ್ಲ. ಯಾಕೆಂದರೆ ತಮಗಿರುವ ಅಲ್ಪ ಸ್ವಲ್ಪ ಜಮೀನಿನಲ್ಲಿ ಅಧಿಕ ಪ್ರಮಾಣದಲ್ಲಿ ಕೃಷಿ ಮಾಡಿ ಒಳ್ಳೆಯ ಆದಾಯ ಗಳಿಸುವವರಿದ್ದಾರೆ. ಇಂತಹ ಕೃಷಿಕರಲ್ಲಿ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಮನೋಜ್ ಕುಮಾರ್ ಕೂಡ ಒಬ್ಬರು. ಒಬ್ಬ ಶ್ರಮಜೀವಿಯಾಗಿ ಮಿಶ್ರ ಬೇಸಾಯ ಮಾಡಿ ಕೊಂಡು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ.
ಹಿಂದಿನಿಂದಲೇ ಭತ್ತ ಮತ್ತು ತರಕಾರಿ ಬೆಳೆಯುವ ಇವರು ಈ ಬಾರಿ ಬಾಳೆಯನ್ನೂ ನೆಟ್ಟಿದ್ದಾರೆ. ಇಷ್ಟೇ ಅಲ್ಲದೆ ಅಡಿಕೆ, ತೆಂಗನ್ನೂ ಕೂಡ ಬೆಳೆಯುತ್ತಿದ್ದಾರೆ. ಇವರ ತೋಟದಲ್ಲಿ ಕದಳಿ, ಕ್ಯಾವಂಡೀಸ್, ಗಾಳಿ ಹಾಗೂ ಮೈಸೂರು ಬಾಳೆಯ ತಳಿಗಳು ಸಮೃದ್ಧವಾಗಿ ಬೆಳೆಯುತ್ತಿವೆ. ಇಷ್ಟು ಅಲ್ಲದೆ ಇವೆಲ್ಲದರ ಜತೆಗೆ ಹಂದಿ ಸಾಕಣೆಯನ್ನೂ ಮಾಡುತ್ತಿದ್ದಾರೆ.
ತರಕಾರಿ ಬೆಳೆಯುವುದರಲ್ಲಿ ನಿಸ್ಸೀಮರಾದ ಇವರ ತೋಟದಲ್ಲಿ ಸೌತೆ, ಕುಂಬಳ ಕಾಯಿ, ಅಲಸಂಡೆ, ಬೆಂಡೆ, ಬದನೆ, ಹರಿವೆ, ಹಾಗಲಕಾಯಿ ಗಳು ಕಾಣ ಸಿಗುತ್ತವೆ. ಇವು ಗಳ ಜೊತೆಗೆ ಹೊಗೆಸೊಪ್ಪು ಕೂಡ ಕಾಣಸಿಗುತ್ತದೆ. ತಮ್ಮ ಕೃಷಿಗೆ ಕೊಟ್ಟಿಗೆ ಗೊಬ್ಬರ ಮತ್ತು ಕೋಳಿಗೊಬ್ಬರವನ್ನು ಬಳಸುವ ಇವರು ಇದರಿಂದ ಉತ್ತಮ ಇಳುವರಿ ತೆಗೆಯ ಬಹುದು ಎನ್ನುತ್ತಾರೆ.
ಇವರ ಹಂದಿ ಸಾಕಣೆ ಕಾಯಕವು ಕೃಷಿಗೆ ಪೂರಕವಾಗಿ ಉತ್ತಮ ಆದಾಯ ತರುತ್ತಿದೆ. ಇವರು ಹೇಳುವ ಪ್ರಕಾರ ಬೇರೆಯವರ ತೋಟದಲ್ಲಿ ಹೋಗಿ ದುಡಿಯುವುದಕ್ಕಿಂತ ತಮ್ಮದೇ ಅಲ್ಪ ಸ್ವಲ್ಪ ಜಮೀನಿನಲ್ಲಿ ಕೃಷಿ ಕಾಯಕ ಮಾಡಿದರೆ ಒಳ್ಳೆಯ ಆದಾಯಗಳಿಸಬಹುದು. ಇವರ ಕೃಷಿಕಾಯಕದಲ್ಲಿ ಪತ್ನಿ ಮಾಲತಿ ಕೂಡ ಸಾಥ್ ನೀಡುತ್ತಾರೆ.