Monday, December 22, 2014
Last Updated: 8:34:29 PM IST
 • ನಾನೆಲ್ಲಿರುವೆ:
 • ಮುಖಪುಟ ಅಭಿಪ್ರಾಯ ನಾಗರಿಕ ಪತ್ರಿಕೊದ್ಯಮ
 • ವಿಡಿಯೋ ಗ್ಯಾಲರಿ
 • ಉದಯವಾಣಿ
 • ವೆ ಬ್
 • ಹುಡುಕಿ
  • ನಿಷ್ಕಾಮ ಪ್ರೇಮ ಸಾಧ್ಯವೇ ?

   • ಪ್ರಸನ್ನಾ ವಿ. ಚೆಕ್ಕೆಮನೆ, ಧರ್ಮತ್ತಡ್ಕ

    ಯುವ ಪ್ರೇಮಿಗಳು ಢಾಳಾಗಿ ಪ್ರದರ್ಶಿಸುವ ಪ್ರೇಮದ ಹಿಂದಿರುವ ಚಾಲಕ ಶಕ್ತಿ ನಿಜಕ್ಕೂ ಪ್ರೇಮವೇ, ಕಾಮವೇ ಎನ್ನುವುದು ಮಿಲಿಯನ್‌ ಡಾಲರ್‌ ಪ್ರಶ್ನೆ !

    ಫೆ. 14 "ವಿಶ್ವ ಪ್ರೇಮಿಗಳ ದಿನ'. ವಿಶ್ವದ ಪ್ರೇಮಿಗಳೆಲ್ಲ ಸಂಭ್ರಮ ಪಡುವ ಸುದಿನ. ಆದರೆ ಇತ್ತೀಚೆಗಿನ ದಿನಗಳಲ್ಲಿ ಪ್ರೇಮಿಗಳು ನೈತಿಕತೆಯ ಎಲ್ಲೆಯನ್ನು ಮೀರಿ, ಕ್ಷಣಿಕ ಸುಖವೆಂಬ ಮಾಯಾಮೃಗದ ಬೆನ್ನೇರಿ ಬದು ಕನ್ನೇ ನರಕವಾಗಿಸುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ.

    ಮುಗ್ಧ ಯುವತಿಯನ್ನು ಪ್ರೇಮ ಪಾಶದಲ್ಲಿ ಬಂಯಾಗಿಸುವ ತಂತ್ರಗಳೂ ಮೂಲಕ ನಡೆಯುತ್ತಿವೆ ಎಂಬುದೂ ನಂಬಲೇಬೇಕಾಗಿರುವ ಸತ್ಯ. "ವೆಲೆಂಟೈನ್ಸ್‌ ಡೇ' ಎನ್ನುತ್ತಾ ಪಾಶ್ಚಾತ್ಯರ ಅನುಕರಣೆ ನಮ್ಮ ಸಂಸ್ಕೃತಿಗೆ ತಕ್ಕುದಲ್ಲ ಎಂಬುದನ್ನು ನಮ್ಮ ಯುವಕ - ಯುವತಿಯರು ಅರಿಯುವಂತಾಗಬೇಕು.

    ಪ್ರತಿದಿನ ವಿಶ್ವ ಪ್ರೇಮ ದಿನ: ಭಾರತೀಯ ಸಂಸ್ಕೃತಿ, ಸಮಾಜ ಮಾತ್ರವಲ್ಲ, ಇಡೀ ಜಗವನ್ನೇ ಪ್ರೀತಿಸಲು, ಗೌರವಿಸಲು ಕಲಿಸುತ್ತದೆಯೇ ವಿನಾ ಕೇವಲ ಒಂದು ದಿನದ ತೋರಿಕೆಯ ಪ್ರೇಮವನ್ನಲ್ಲ ಎಂಬುದು ನೆನಪಿರಲಿ. ಸಮಸ್ತ ಭಾರತೀಯರ ತನುಮನಗಳಲ್ಲಿ ಪ್ರೇಮ ವರ್ಷಧಾರೆಯೇ ಹರಿದಿರುವಾಗ, ಅನುದಿನವೂ ಅನುಕ್ಷಣವೂ ಬದುಕನ್ನು ಪ್ರೀತಿಯಿಂದ ಸವಿಯುವಾಗ ಫೆಬ್ರವರಿ 14 ಮಾತ್ರವಲ್ಲ. ಪ್ರತಿದಿನವೂ ನಮಗೆ ವಿಶ್ವ ಪ್ರೇಮದ ದಿನವೇ ಎನ್ನುವುದನ್ನು ಮರೆಯಬಾರದು.

    ನಮ್ಮ ಹಿರಿಯರು ತಮ್ಮ ಬಂದು ಮಿತ್ರರ ಜತೆಗೆ ಪ್ರಕೃತಿಯ ಮರಗಿಡಗಳನ್ನೂ ಗುಡ್ಡ ಬೆಟ್ಟಗಳನ್ನೂ ನದಿ -ತೊರೆಗಳನ್ನೂ ಮಾತ್ರವಲ್ಲ ಜಗತ್ತಿನ ಸಕಲ ಚರಾಚರ ಪ್ರಾಣಿ, ಪಕ್ಷಿಗಳನ್ನೂ ಅನನ್ಯವಾಗಿ ಪ್ರೀತಿಸಿದರು. ಅವರ ಹೃದಯದಲ್ಲಿ ಅತ್ಯಂತ ಅಮೂಲ್ಯವಾದ ಪ್ರೇಮದ ಸೆಲೆ ಹರಿಯುತ್ತಿದ್ದುದರಿಂದಲೇ ಪ್ರೀತಿಯಲ್ಲಿ ಮುಗ್ಧತೆಯಿತ್ತು. ನಿಷ್ಕಲ್ಮಶತೆಯಿತ್ತು. ಕಪಟ, ಮೋಸ, ವಂಚನೆಗಳಿಲ್ಲದ ಸ್ವಾರ್ಥ ರಹಿತ ಪ್ರೀತಿಯಿಂದಲೇ ಭಾರತೀಯ ಸಂಸ್ಕೃತಿ ಇತರರಿಗೆ ಮಾದರಿಯಾಗಲು ಸಾಧ್ಯವಾಯಿತು.

    ಪ್ರೀತಿಸುವವರಿಗಿಂತಲೂ ಅದನ್ನು ಕಳಕೊಂಡವರಿಗೇ ಅದರ ನೈಜ ಮೌಲ್ಯ ಅರಿಯಲು ಸಾಧ್ಯ. ಪ್ರೇಮವೆಂಬ ಅನಿರ್ವಚನೀಯ ಆನಂದದ ಸವಿಯನ್ನು ಜೀವನದಲ್ಲಿ ಒಮ್ಮೆಯಾದರೂ ಅನುಭವಿಸದವರ ಬದುಕೇ ಶೂನ್ಯ ಎನ್ನಬಹುದು. ಪರಸ್ಪರ ಹೊಂದಾಣಿಕೆ ಮತ್ತು ಸಮಾನ ಮನೋಸ್ಥಿತಿಯವರ ಮಧ್ಯೆ ಇರುವ ಪ್ರೀತಿಯೇ ಅತ್ಯಂತ ಮಧುರವಾಗಿರುತ್ತದೆ.

    ಸ್ವಾರ್ಥ ರಹಿತವಾಗಿ ಪ್ರೀತಿಸಿ: ಆತ್ಮಾನಂದಕ್ಕಾಗಿ ಸ್ವಾರ್ಥ ರಹಿತವಾಗಿ ಪ್ರೀತಿಸಿದಾಗ ಮಾತ್ರ ಪ್ರೀತಿ ಹರ್ಷದಾಯಕವಾಗಿರಲು ಸಾಧ್ಯ. ಸ್ವಾರ್ಥ ಪೂರಿತ ಪ್ರೀತಿಯಲ್ಲಿ ಆಶಾಭಂಗವಾದಾಗ ದ್ವೇಷ ಮೂಡುತ್ತದೆ. ಆಗ ವಿವೇಕ ಮಾಯವಾಗಿ ಅಮಾನವೀಯತೆ ಮೆರೆಯುತ್ತದೆ ಎಂಬುದಕ್ಕೆ ಹಲವಾರು ಉದಾಹರಣೆಗಳೂ ಇವೆ.

    ಇಂದಿನ ಯಾಂತ್ರಿಕ ಯುಗದಲ್ಲಿ ನಾವೆಲ್ಲೋ "ಪ್ರೀತಿ' ಎಂಬ ಅಮೂಲ್ಯ ವಸ್ತುವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದೆನಿಸುತ್ತದೆ. ನಿಷ್ಕಲ್ಮಶ, ಮುಗ್ಧ ಪ್ರೀತಿಯ ಜಾಗದಲ್ಲಿ ಸ್ವಾರ್ಥವೇ ತಲೆಯೆತ್ತಿ ನಿಂತಂತೆ ಕಾಣಿಸುತ್ತದೆ. ಈಗಿನ ಯುವ ಜನತೆಯೂ ಪ್ರೀತಿ, ಪ್ರೇಮಗಳ ನೈಜ ಮೌಲ್ಯಗಳ ಅರಿವಿಲ್ಲದೆ, ಕ್ಷಣಿಕ ಸುಖದ ಬಯಕೆಯನ್ನೇ ಪ್ರೀತಿಯೆಂಬ ಮಾಯೆ ಎನ್ನುವ ಭ್ರಮೆಯಿಂದ ಬಲೆಗೆ ಸಿಲುಕಿ ನರಳುತ್ತಾರೆ. ಅದೆಷ್ಟೋ ಮಂದಿ ಪ್ರಾಣವನ್ನೇ ಕಳಕೊಂಡಿದ್ದಾರೆ.

    ಪ್ರೀತಿ, ಪ್ರೇಮ ಕೆಲ ಕ್ಷಣಿಕ ಆಸೆಗಳಲ್ಲ: ಜಗತ್ತಿನ ಜಡ ಚೇತನಗಳೆಲ್ಲವನ್ನೂ ತನ್ನದೆಂದು ಭಾವಿಸಿ, ಪ್ರೀತಿಸುವ ಕಲೆ ಎಲ್ಲರಿಗೂ ಸಿದ್ಸುವುದಿಲ್ಲ. ಪ್ರೀತಿಸುವ ಹೃದಯವಿದ್ದರೆ ಮನಸ್ಸು ತುಂಬಾ ಒಲವು ತುಂಬಿದ್ದರೆ ಜಗವೆಲ್ಲವೂ ಪ್ರೇಮಮಯವಾಗುತ್ತದೆ. "ಮಾನವ ಪ್ರೇಮವೇ ದೈವೀ ಪ್ರೇಮದ ಸೋಪಾನ' ಎಂಬುದು ಬಲ್ಲವರ ಮಾತು. ಪ್ರೀತಿ, ಪ್ರೇಮ ಹುಟ್ಟಿಕೊಳ್ಳಬೇಕಾಗಿರುವುದು ಕೆಲ ಕ್ಷಣಿಕ ಆಸೆಗಳ ಈಡೇರಿಕೆಗಾಗಿ ಅಲ್ಲ. ಪರಸ್ಪರ ಭಾವನಾತ್ಮಕವಾಗಿ ಒಂದಾಗಿ ಕಷ್ಟ, ಸುಖಗಳಲ್ಲಿ ಪಾಲು ಹಂಚಿ, ಸಾರ್ಥಕ ಬಾಳ್ವೆ ನಡೆಸುವುದಕ್ಕೆ ಎಂಬುದೇ ಸತ್ಯ.

    ಇಂದಿನ ಯುವ ಜನಾಂಗವು ಹರೆಯದ ಹುಚ್ಚು ಕಲ್ಪನೆಯಿಂದಲೋ ಮುಗ್ಧತೆಯಿಂದಲೋ ಪ್ರೀತಿ, ಪ್ರೇಮದ ಸೆಳೆತದಲ್ಲಿ ಕೊಚ್ಚಿಹೋಗುತ್ತಿದೆ. ಗಂಡು ಹೆಣ್ಣು ವಯೋ ಸಹಜವಾದ ಆಕರ್ಷಣೆಗೊಳಗಾಗುವುದು ಪ್ರಕೃತಿ ಸಹಜ. ಇಂದಿನ ಕಂಪ್ಯೂಟರ್‌, ಮೊಬೈಲ್‌ಗ‌ಳ ಮೂಲಕ ಇಂತಹ "ಸಂಬಂಧ'ಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ.

     "ಪ್ರೇಮ'ವೆಂದರೆ ಹೃದಯದೊಳಗಿನ ಸಹಜ ಬೆಳಕು. ಆಹ್ಲಾದಮಯವಾದ ಬೆಳಕನ್ನು ಸುತ್ತೆಲ್ಲ ಜಗಕ್ಕೆ ಪಸರಿಸುವ ಮೂಲಕ ಆನಂದಮಯ ಸಮಾಜದ ಕನಸುಗಳನ್ನು ನನಸುಗೊಳಿಸಲು ಯತ್ನಿಸೋಣ.


   Share your views-post your Comment below
   blog comments powered by Disqus
   ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟTop 20
   • Copyright @ 2009 Udayavani.All rights reserved.
   • Designed & Hosted By 4cplus