ಗುರು ಮುಂಡಾಜೆ
ಅಡಿಕೆಯಲ್ಲಿನ ಆಲ್ಕಲೈನ್ ಎಂಬ ಅಮಲು ಪದಾರ್ಥದಲ್ಲಿ ಈ ಸೊಳ್ಳೆ ನಿರೋಧಕ ಬತ್ತಿಯನ್ನು ತಯಾರಿಸಲಾಗು ತ್ತಿದ್ದು, ಇದರಿಂದ ಸೊಳ್ಳೆ ಸಾಯುವುದಿಲ್ಲ ಬದಲಾಗಿ ಇದರ ಹೊಗೆಯಿಂದ ನಶೆ ಏರಿಸಿಕೊಳ್ಳುತ್ತವೆ.
5 ಇಂಚು ಉದ್ದದ 10 ಎಂ. ಎಂ. ಸುತ್ತಳತೆಯ ಒಂದು ಸೊಳ್ಳೆ ಬತ್ತಿ 100 ನಿಮಿಷಗಳ ಕಾಲ ಉರಿಯುತ್ತದೆ. ಒಂದು ಕೊಠಡಿಯೊಳಗೆ ಬೆಳಗ್ಗಿನ ವರೆಗೂ ಅದರ ಪರಿಣಾಮವಿರುತ್ತದೆ. ಹೀಗಾಗಿ ಸೊಳ್ಳೆಯ ಉಪಟಳವೂ ಇರುವುದಿಲ್ಲ ಎನ್ನುತ್ತಾರೆ ದಯಾನಂದ ಪಟವರ್ಧನ್.
ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಕಾಪಿನಬಾಗಿಲು ಗುದ್ಲಿ ಮನೆ ನಿವಾಸಿ, ಕೃಷಿಕ ದಯಾನಂದ ಪಟವರ್ಧನ್ ಮುಂಡಾಜೆ ಅವರು ಅಡಿಕೆಯಿಂದ ಸೊಳ್ಳೆ ನಿರೋಧಕ ಬತ್ತಿಯನ್ನು ತಯಾರಿಸಿ ಸದ್ದಿಲ್ಲದೆ ಮಹತ್ವದ ಸಾಧನೆಯೊಂದನ್ನು ಮಾಡಿದ್ದಾರೆ.
ಆರೋಗ್ಯಕ್ಕೆ ಹಾನಿಕಾರಕವಲ್ಲದ ಸೊಳ್ಳೆ ನಿರೋಧಕ ಬತ್ತಿಯ ಜತೆಗೆ ಅಡಿಕೆಯ ಮೌಲ್ಯ ಹೆಚ್ಚಿಸುವ ಇತರ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಮೋಸ್- ಕ್ವಿಟ್ ಎಂಬ ನಾಮಾಂಕಿತ ಈ ಸೊಳ್ಳೆ ನಿರೋಧಕ ಬತ್ತಿಯನ್ನು ಮಾರುಕಟ್ಟೆಗೂ ಬಿಟ್ಟಿದ್ದಾರೆ ಪಟವರ್ಧನ್.
ಕೃಷಿಕನ ಸಂಕಷ್ಟವನ್ನು ಸ್ವತಃ ಅನುಭವಿಸಿದ ಪಟವರ್ಧನ್ ಅವರು ಅಡಿಕೆ ಮಾರಾಟದ ಪರ್ಯಾಯ ವ್ಯವಸ್ಥೆ ಬಗ್ಗೆ ಆಳವಾದ ಚಿಂತನೆ ನಡೆಸಿದರು. ತಮ್ಮಲ್ಲಿನ ಉತ್ಪತ್ತಿಗಳನ್ನು ಮೌಲ್ಯವರ್ಧಿಸಿ ಮಾರುವಂತಹ ವಿಚಾರದಲ್ಲಿ ಅವರಲ್ಲಿ ಹೊಸ ಹುರುಪು ಬಂತು. 1988 ರಿಂದ ಅಡಿಕೆಯನ್ನು ಸಂಸ್ಕರಿಸಿ, ಅದಕ್ಕೆ ಬೇಕಾದ ಸಂಸ್ಕರಣಾ ಯಂತ್ರಗಳನ್ನು ಜೋಡಿಸಿಕೊಂಡು ಒಂದು ಸಣ್ಣ ಉದ್ಯಮ ನಡೆಸಿಕೊಂಡು ಬರುತ್ತಿದ್ದಾರೆ.
ದೋಸ್ತಿ ಸುಪಾರಿ ಬ್ರಾಂಡ್‌ನ ಹೆಸರಿನಲ್ಲಿ ಅವರ ಉತ್ಪನ್ನಗಳು ಮಾರುಕಟ್ಟೆಗೆ ಪೂರೈಕೆಯಾಗುತ್ತಿವೆೆ. ಇದೀಗ ಡೈಮಂಡ್ ಕಟ್ಟಿಂಗ್, ಸ್ವೀಟ್ ಸುಪಾರಿ ಮತ್ತು ಮೋಸ್- ಕ್ವಿಟ್ ಸೊಳ್ಳೆ ನಿರೋಧಕ ಬತ್ತಿಯನ್ನು ಮಾರುಕಟ್ಟೆಗೆ ಪೂರೈಸುತ್ತಿದ್ದಾರೆ. ಮುಂಡಾಜೆ ಎಂಬ ಪುಟ್ಟ ಗ್ರಾಮೀಣ ಪ್ರದೇಶದಲ್ಲಿದ್ದುಕೊಂಡೇ ಇವರ ಉತ್ಪನ್ನಗಳು ರಾಜಧಾನಿಗೆ ಪ್ರವೇಶಿಸಿವೆ.
ಗ್ರಾಮೀಣ ಪ್ರದೇಶದ ಯುವ ಪೀಳಿಗೆ ಕೃಷಿಗೆ ಗುಡ್‌ಬೈ ಹೇಳಿ ಉದ್ಯಾನ ನಗರಿ ಸೇರಿಕೊಂಡು ಕಂಪ್ಯೂಟರ್ ಯುಗದ ಕೆಲಸಕ್ಕೆ ಮಾರು ಹೋಗುತ್ತಿರುವುದು ಒಂದೆಡೆ ಯಾದರೆ, ಪಟವರ್ಧನ್ ಅವರಂತಹ ಕೃಷಿ ಪ್ರೇಮಿಗಳು ಗ್ರಾಮೀಣ ಪ್ರದೇಶ ದಲ್ಲಿದ್ದುಕೊಂಡೇ ಅಡಿಕೆಯನ್ನು ಖರೀದಿಸಿಕೊಂಡು ಅದರಿಂದ ಏನೆಲ್ಲಾ ತಯಾರಿಸ ಬಹುದು ಎಂಬುದನ್ನು ಸಾಧಿಸಿ ತೋರಿಸುತ್ತಿ ದ್ದಾರೆ. ಮಾಹಿತಿಗೆ ದೂ.: 9964352524.