Thursday, May 17, 2012
Last Updated: 1:59:49 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • ಆ ಹಾಡನ್ನು ಬರೆದಾಗ ಇದ್ದ ನೋವು ಈಗಲು ಹಾಗೆಯೆ ಇದೆ
  • ಆ ಹಾಡನ್ನು ಬರೆದಾಗ ಇದ್ದ ನೋವು ಈಗಲು ಹಾಗೆಯೆ ಇದೆ

    • ಡಾ. ಸಿದ್ಧಲಿಂಗಯ್ಯ | Aug 14, 2011

      ನಾನು ಯಾರಿಗೆ ಬಂತು ಎಲ್ಲಿಗೆ ಬಂತು ನಲ್ವತ್ತೇಳರ ಸ್ವಾತಂತ್ರ್ಯ ಹಾಡನ್ನು ಬರೆದು ಇಂದಿಗೆ ಮೂವತ್ತೂಂದು ವರ್ಷಗಳು ಸಂದವು. ಇಂದಿಗೂ ಜನಸಮುದಾಯದ ನಡುವೆ ಈ ಹಾಡು ಜೀವಂತವಾಗಿದೆ. ತಮ್ಮ ಮನದೊಳಗಿನ ಮೌನಕ್ಕೆ ದನಿಯನ್ನು ಕೊಡುವ ರೀತಿಯಲ್ಲಿ ಈ ಹಾಡನ್ನು ಈಗಲೂ ಹಾಡುತ್ತಿದ್ದಾರೆ. ಇವರು, ನೊಂದ ಜನ. ಬೆಂದ ಜನ.

      ಜನ ಹಾಡುತ್ತಿರುವುದನ್ನು ಕೇಳಿ ಇದನ್ನು ಬರೆದ ನನಗೆ ಸಂತೋಷವಾಗಬೇಕಿತ್ತು. ಆದರೆ, ತುಂಬಾ ನೋವಾಗುತ್ತಿದೆ. ಜನ ಇನ್ನೂ ಈ ಹಾಡನ್ನು ಹಾಡುವ ಪರಿಸ್ಥಿತಿಯಲ್ಲಿಯೇ ಸಮಾಜವಿದೆಯಲ್ಲ ಎಂದು ಎದೆಯೊಳಗೆ ಸಂಕಟವೆನಿಸುತ್ತಿದೆ.

      ಮೂವತ್ತು ವರ್ಷಗಳ ಹಿಂದೆ ಈ ದೇಶದ ಸಿœತಿ ಹೇಗೆ ಇತ್ತೂ, ಆ ಸ್ಥಿತಿಯಲ್ಲಿ ದೊಡ್ಡದಾದ ಬದಲಾವಣೆಯೇನೂ ಆಗಿಲ್ಲ. ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚುತ್ತಲೇ ಇದೆ. ಬಡವರು ಬಡವರಾಗುತ್ತಲೇ ಶ್ರೀಮಂತರು ಶ್ರೀಮಂತರಾಗುತ್ತಲೇ ಹೋಗುತ್ತಿದ್ದಾರೆ. ಈ ದೇಶದ ಶೋಷಿತರಿಗಿನ್ನೂ ಸ್ವಾತಂತ್ರ್ಯ ಬಂದಿಲ್ಲ ಅಂತ ನನಗೆ ಈಗಲೂ ಅನ್ನಿಸುತ್ತ ಇದೆ.

      ಹಾಗಾಗಿಯೇ ನಾಡಿನ ಉದ್ದಗಲದ ಬಡವರು, ದಲಿತರು, ಕಾರ್ಮಿಕರು, ರೈತರು ತಮ್ಮ ಹೋರಾಟದ ಸಂದರ್ಭಗಳಲ್ಲಿ ಈ ಹಾಡು ಮತ್ತೆ ಮತ್ತೆ ಕೇಳಿಬರುತ್ತಿದೆ.
      *
      ಈ ದೇಶ ಶ್ರೀಮಂತವಾಗಿದೆ, ಸಮೃದ್ಧಿಯಾಗಿದೆ ಎಂದು ಎಲ್ಲರೂ ಹೇಳುತ್ತಾರೆ. ಹಾಗಿದ್ದರೆ, ಒರಿಸ್ಸಾ ರಾಜ್ಯದ ಕಾಲಹಂಡಿಯಲ್ಲಿ ಗಿರಿಜನರು ಹಸಿವಿನಿಂದ ಏಕೆ ಸಾಯುತ್ತಾರೆ ಎಂದು ಯಾರೂ ಪ್ರಶ್ನಿಸಿಕೊಳ್ಳುವುದಿಲ್ಲ. ಈ ದೇಶ ಮುಂದುವರಿದಿದೆ ಎಂದು ಪ್ರತಿಪಾದಿಸುವ ಮಂದಿ, ದೇಶದ ವಿವಿಧೆಡೆಗಳಲ್ಲಿ ಸಂಭವಿಸುವ ರೈತರ ಆತ್ಮಹತ್ಯೆಗಳನ್ನು ಹೇಗೆ ಸಹಿಸಿಕೊಳ್ಳುತ್ತಾರೊ, ನನಗೆ ಅರ್ಥವಾಗುವುದಿಲ್ಲ. ಉತ್ತರಭಾರತದಲ್ಲಿ ದಿನನಿತ್ಯ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರಗಳ ಕುರಿತು ಪತ್ರಿಕೆಗಳಲ್ಲಿ ಓದುವ ನಾವು ಸ್ವಾತಂತ್ರ್ಯವನ್ನು ಸಂಭ್ರಮಿಸುವುದಾದರೂ ಹೇಗೆ? ಅದೂ, ದಲಿತ ಮಹಿಳೆ ಮುಖ್ಯಮಂತ್ರಿಯಾಗಿರುವ ರಾಜ್ಯದಲ್ಲಿಯೇ ಅತೀ ಹೆಚ್ಚಿನ ಮಹಿಳಾದೌರ್ಜನ್ಯಗಳು ನಡೆಯುತ್ತಿರುವುದನ್ನು ನೋಡಿ ನನಗೆ ಖೇದವೆನಿಸುತ್ತದೆ. ಆಂಧ್ರಪ್ರದೇಶದಲ್ಲಿ ನೇಕಾರರು ಕಂಗಾಲಾಗಿ ಹೋಗಿದ್ದಾರೆ. ಯಾರು ದೂರು ಕೊಡಲು ಪೊಲೀಸ್‌ಸ್ಟೇಶನ್‌ಗೆ ಹೋಗುತ್ತಾರೋ ಅವರ ಮೇಲೆಯೇ ದೌರ್ಜನ್ಯ ನಡೆಸುವ ವ್ಯವಸ್ಥೆ ನಮ್ಮದು. ನಮ್ಮ ಸುತ್ತಮುತ್ತಲೇ ಇಂಥ ನೊಂದ ಜನರಿರುವಾಗ ಈ ಹಾಡು ಮತ್ತೆ ನೆನಪಿಗೆ ಬಾರದೆ ಇರುತ್ತದೆಯೆ? ಈ ಹಾಡಿನ ಮೂಲಕವಾದರೂ ತಮ್ಮ ಆಕ್ರೋಶವನ್ನು ಜನ ಅಭಿವ್ಯಕ್ತಿ ಪಡಿಸುವಂತಾಯಿತಲ್ಲ ಎಂಬುದು ನನ್ನ ಸದ್ಯದ ಸಮಾಧಾನ.

      *

      1979ರ ಕೊನೆಯ ಅಥವಾ 1980ರ‌ ಮೊದಲ ದಿನಗಳವು. ಸಾಹಿತ್ಯ ವಲಯದಲ್ಲಿ "ನವ್ಯ' ಪಂಥ ಮುಂಚೂಣಿಯಲ್ಲಿತ್ತು. ಅವರೆಲ್ಲ ತಮ್ಮ ಅಸ್ತಿತ್ವದ ಹುಡುಕಾಟದಲ್ಲಿ , "ತಾನು ಯಾರು' ಎಂಬ ವಿಶ್ಲೇಷಣೆಯಲ್ಲಿ , ಆತ್ಮಕೇಂದ್ರಿತವಾದ ಯೋಚನೆಗಳಲ್ಲಿ ಮುಳುಗಿದ್ದರು. ಇಂಥ ಅಂತರ್ಮುಖತ್ವದಿಂದ ಹೊರಬಂದು ಸಮಾಜಮುಖೀಯಾಗಬೇಕೆಂದು ಅನ್ನಿಸಿದ್ದೇ ನಾನು "ನವ್ಯ'ಕ್ಕೆ ದೊಡ್ಡ ನಮಸ್ಕಾರ ಹೊಡೆದು ಹೊರಬಂದಿದ್ದೆ. ಸಾಮಾಜಿಕರಿಗೆ ಹತ್ತಿರವಾಗುವ, ಅವರ ಭಾವನೆಗಳಿಗೆ ತಟ್ಟುವ ಪದ್ಯಗಳನ್ನು ಬರೆಯತೊಡಗಿದ್ದೆ.

      ಆಗಸ್ಟ್‌ 15. ಹೊಟೇಲು ಕಾರ್ಮಿಕರು ಬೆಂಗಳೂರಿನಾದ್ಯಂತ ಚಳುವಳಿ ಮಾಡುತ್ತಿದ್ದರು. ನಾಟಕಕಾರ, ಈಗ ನೆನಪಿನಲ್ಲಿ ಬದುಕಿರುವ ಸಿ. ಜಿ. ಕೃಷ್ಣಸ್ವಾಮಿಯವರು ಈ ಚಳುವಳಿಗಾಗಿ ಒಂದು ಪದ್ಯ ಬರೆದುಕೊಡುವಂತೆ ನನ್ನಲ್ಲಿ ಹೇಳಿದರು. ಸ್ವಾತಂತ್ರ್ಯ ದಿನದಂದೇ ನ್ಯಾಯಕ್ಕಾಗಿ ಚಳುವಳಿ ಮಾಡುವ ಸ್ಥಿತಿ ನನಗೆ ದೊಡ್ಡ ವ್ಯಂಗ್ಯದಂತೆ ಭಾಸವಾಯಿತು. ಇದೇ ನನ್ನ ಪದ್ಯದ ಮೊದಲ ಸಾಲುಗಳಿಗೆ ಪ್ರೇರಣೆಯಾಯಿತು. "ಯಾರಿಗೆ ಬಂತು, ಎಲ್ಲಿಗೆ ಬಂತು ನಲ್ವತ್ತೇಳರ ಸ್ವಾತಂತ್ರ್ಯ' ಎಂದು ಬರೆಯುತ್ತ ಹೋದೆ...
      *
      ಬರೆಯುವ ಕ್ಷಣದಲ್ಲಿ ನಾನು ಸರ್ವಥಾ ಭಾವಿಸಿರಲಿಲ್ಲ , ಇದು ಮುಂದೊಂದು ದಿನ ಕರ್ನಾಟಕದ ದೀನದಲಿತರ ಹಾಡಾಗಿ ಹೊರಹೊಮ್ಮುತ್ತದೆಂದು. ಆವತ್ತು ಸಿಜಿಕೆಯವರು ಹೊಟೇಲು ಕಾರ್ಮಿಕರಿಗಾಗಿ ಸಮುದಾಯದ ಮೂಲಕ ಒಂದು ನಾಟಕ ಆಡಿಸಿದರು.  ಆ ನಾಟಕದಲ್ಲಿ "ಯಾರಿಗೆ ಬಂತು ಎಲ್ಲಿಗೆ ಬಂತು ನಲ್ವತ್ತೇಳರ ಸ್ವಾತಂತ್ರ್ಯ' ಹಾಡನ್ನು ಹಾಡಲಾಯಿತು. ಮುಂದೆ, ನಾಡಿನೆಲ್ಲೆಡೆಯ ಕೂಲಿಕಾರ್ಮಿಕರ, ದೀನದಲಿತರ, ರೈತರ ಹೋರಾಟಗಳಲ್ಲಿ ಈ ಹಾಡಿಗೆ ಮಹತ್ವ ಬಂತು.

      ಈ ಹಾಡಿನಲ್ಲಿ ನಾನು ಗೇಯತೆಗೆ ಮತ್ತು ಜನಪದ ಲಯಕ್ಕೆ ಒತ್ತು ಕೊಟ್ಟಿದ್ದೆ. ನನ್ನ ಪ್ರಕಾರ ಈ ಹಾಡಿನದ್ದು "ಮೆರವಣಿಗೆಯ ಲಯ'. ಜನ ಸಾಮೂಹಿಕವಾಗಿ ಆತ್ಮಾಭಿಮಾನದಿಂದ ಹೋರಾಟ ಮಾಡುವಾಗ ಆ ಇಡೀ ಸಮುದಾಯದ ಪ್ರಾತಿನಿಧಿಕ ದನಿಯಾಗಿ ಹೊರಹೊಮ್ಮುವ ಲಯ ಈ ಹಾಡಿನದ್ದು . ಈ ಹಾಡನ್ನು ಕೇಳುತ್ತಿದ್ದಂತೆ, ಶೋಷಿತ ಜನರು ಜಾಗೃತರಾಗಿ ದೊಡ್ಡ ಗುಂಪಿನಲ್ಲಿ ಸಾಗುತ್ತಿರುವಂತೆ ಭಾಸವಾಗುತ್ತದೆ. ಈ ಹಾಡು ಜಾತಿಗಳ ಗಡಿಗಳನ್ನು ಮೀರಿ ಜನಪ್ರಿಯತೆ ಪಡೆದಿದೆ.

      ನನ್ನ ಕವಿತೆಗಳ ಓದುಗರು ಸಾಹಿತ್ಯ ದಿಗ್ಗಜರಲ್ಲ , ವಿಮರ್ಶಕರೂ ಅಲ್ಲ. ನನ್ನ ಹಾಡುಗಳನ್ನು ಜನಸಾಮಾನ್ಯರೆಂದು ಭಾವಿಸಲ್ಪಟ್ಟಿರುವ ಪ್ರಜೆಗಳು, ಕೂಲಿಕಾರ್ಮಿಕರು, ರೈತರು ಹಾಡಬೇಕೆಂಬ ಆಸೆ. ಸಾಹಿತ್ಯಿಕ ಮನ್ನಣೆಗಿಂತ ಸಾಮಾಜಿಕ ಸಂವೇದನೆ ನನಗೆ ಮುಖ್ಯವಾಗುತ್ತದೆ. ಜನಪರ ಚಳುವಳಿಗಳಲ್ಲಿ ಜನ ನನ್ನ ಕವಿತೆ ವಾಚನವನ್ನು ಆಲಿಸಲು ಹಾತೊರೆಯುವಾಗ, ವಿದ್ಯಾರ್ಥಿ ಮಿತ್ರರು ನನ್ನ ಹಾಡುಗಳನ್ನು ಆಲಿಸಲು ತವಕಿಸುವಾಗ ನಾನು ಬರೆದದ್ದು ಸಾರ್ಥಕ ಅಂತನ್ನಿಸುತ್ತದೆ.

      ಸಾಹಿತ್ಯವೂ ಬೇಕು ಸಮಾಜವೂ ಬೇಕು. ಸಾಹಿತ್ಯ ಸಮಾಜವನ್ನು ಮುಟ್ಟಬೇಕು. ಸಾಹಿತಿಯೂ ಸಮಾಜದ ದುಃಖೀಗಳಲ್ಲಿ ಒಬ್ಬನಾಗಬೇಕು.

      *
      ರವಿಚಂದ್ರನ್‌ ಅವರು ಅಸಂಭವ ಚಿತ್ರದಲ್ಲಿ ಆ ಹಾಡನ್ನು ಬಳಸಿಕೊಂಡಿದ್ದರು.
      ಒಮ್ಮೆ ಅಟೋರಿಕ್ಷಾದಲ್ಲಿ ಹೋಗುತ್ತಿದ್ದೆ. ಮುಂದೆ ಅಸಂಭವ ಚಲನಚಿತ್ರದ ದೊಡ್ಡ ಪೋಸ್ಟರ್‌ ಕಾಣಿಸುತ್ತಿತ್ತು. "ಅಸಂಭವ ಚಿತ್ರ ನೋಡಿದ್ದೀಯಾ'ಅಂತ ರಿಕ್ಷಾದವನನ್ನು ಕೇಳಿದೆ. "ಹೌದು ಸ್ಸಾರ್‌!' ಅಂದ. "ಅದರಲ್ಲಿ ಏನು ಇಷ್ಟವಾ ಯಿತು?' ಅಂತ ಕೇಳಿದೆ. "ಯಾರಿಗೆ ಬಂತು ಎಲ್ಲಿಗೆ ಬಂತು ನಲ್ವತ್ತೇಳರ ಸ್ವಾತಂತ್ರ್ಯ ಹಾಡನ್ನು ನಾನು ತುಂಬಾನೇ ಮೆಚ್ಚಿಕೊಂಡೆ' ಅಂದನವ. ನಾನು ಆ ಹಾಡು ಬರೆದ ಕವಿಯೆಂದು ಹೇಳಲಿಲ್ಲ. ಹೇಳುತ್ತಿದ್ದರೆ, ಒಪ್ಪುತ್ತಿದ್ದನೊ ಇಲ್ಲವೊ!

      ನನ್ನ ಹಾಡು ಒಬ್ಬ ರಿಕ್ಷಾ ಡ್ರೈವರ್‌ಗೂ ಇಷ್ಟವಾದ ಸಂದರ್ಭವನ್ನು ನಾನು ಎಂದಿಗೂ ಮರೆಯಲಾರೆ. ಈ ದೇಶದಲ್ಲಿ ಎಂಬತ್ತು ಶೇಕಡಾ ಜನ ಇಂಥವರೇ ಇದ್ದಾರೆ. ಗರಿಷ್ಠ ಸೌಲಭ್ಯಗಳನ್ನು ಪಡೆದು ಶ್ರೀಮಂತರಾಗಿರುವ ಮಂದಿ ಇಪ್ಪತ್ತು ಶೇಕಡಾ ಮಾತ್ರ. ನನ್ನ ಹಾಡು ಈ ಎಂಬತ್ತು ಶೇಕಡಾ ಮಂದಿಯ ಪರವಾಗಿದೆ.

      ನಮ್ಮದು ಶ್ರೀಮಂತ ರಾಷ್ಟ್ರ , ನಮ್ಮಲ್ಲಿ ಎಲ್ಲರೂ ಸುಖೀಗಳಾಗಿದ್ದಾರೆ ಎಂಬ ಮಿಥ್ಯೆಯನ್ನು ಒಡೆಯುವ ಕೆಲಸವನ್ನು ನನ್ನ ಹಾಡು ಮಾಡುತ್ತಿದೆ ಎಂದು ನಾನು ಭಾವಿಸುತ್ತೇನೆ.
      *
      ಕರ್ನಾಟಕದಲ್ಲಷ್ಟೇ ಅಲ್ಲ, ಹೊರರಾಜ್ಯಗಳಲ್ಲಿಯೂ ಈ ಹಾಡು ಜನಪ್ರಿಯವಾಗಿರುವುದೊಂದು ವಿಶೇಷ. ತಮಿಳುನಾಡಿನಲ್ಲಿ , ಆಂಧ್ರಪ್ರದೇಶದಲ್ಲಿ ಈ ಹಾಡನ್ನು ಅಲ್ಲಿನ ಭಾಷೆಗಳಿಗೆ ಅನುವಾದಿಸಿ ಹಾಡುತ್ತಿದ್ದಾರೆ. ಬಂಗಾಲಿಗೂ ಇದು ಅನುವಾದಗೊಂಡಿದೆ. ಅಲ್ಲಿ "ದಲಿತರು ಬಂದರು ದಾರಿ ಬಿಡಿ' ಎಂಬ ಪದ್ಯಕ್ಕೆ ಪ್ರಶಸ್ತಿಯೂ ಬಂದದ್ದು ನೆನಪಾಗುತ್ತಿದೆ. ಎಲ್ಲೆಲ್ಲಿ ಸ್ವಾತಂತ್ರ್ಯವನ್ನು ಪಡೆಯುವ ಹಪಹಪಿಕೆ ಇದೆಯೊ ಅಲ್ಲಿ ಈ ಹಾಡನ್ನು ಜನ ಹಾಡುತ್ತಾರೆ. ಇವತ್ತು ನಮ್ಮ ಸ್ವಾತಂತ್ರ್ಯವನ್ನು ನಮ್ಮೊಳಗಿನವರೇ ಕಸಿದುಕೊಳ್ಳುತ್ತಿದ್ದಾರೆ. ಹಾಗಾಗಿಯೇ ನೊಂದ ಜನ, ಈ ದೇಶದ ಯಾವ ಮೂಲೆಯಲ್ಲಿಯೇ ಇರಲಿ, ಅವರಿಗೆ ಈ ಹಾಡು ಇಷ್ಟವಾಗುತ್ತಿದೆ.

      ಈ ಹಾಡನ್ನು ನಾನೇನೂ ಸಂತೋಷದಿಂದ ಬರೆಯಲಿಲ್ಲ. ಆದರೆ, ಮುಂದೊಂದು ದಿನ ಸಂತೋಷದ ದಿನಗಳು ಬಂದಾವು ಎಂಬ ನಿರೀಕ್ಷೆಯಲ್ಲಿ ಬರೆದಿದ್ದೆ. ಆದರೆ, ಇವತ್ತು ಈ ಹಾಡನ್ನು ಕೇಳುವಾಗಲೂ ನಾನು ಆನಂದಪಡುವ ಸ್ಥಿತಿಯಲ್ಲಿಲ್ಲ. ಅರ್ವತ್ತಮೂರು ವರ್ಷಗಳ ಬಳಿಕವೂ ಸ್ವಾತಂತ್ರ್ಯತಲುಪಬೇಕಾದಲ್ಲಿಗೆ ತಲುಪಿಲ್ಲ. ನೊಂದ ಜನರ ಕಣ್ಣೀರು ಹಾಗೆಯೇ ಇದೆ.

      ಈಗಲೂ ಈ ಹಾಡನ್ನು ಹಾಡಬೇಕಾದ ಸ್ಥಿತಿ ಉಳಿದುಕೊಂಡಿರುವುದಕ್ಕಾಗಿ ತೀವ್ರ ನೋವಾಗುತ್ತಿದೆ. ಈ ಹಾಡನ್ನು ಜನ ಮರೆತುಬಿಡುವಂಥ ಸಾಮಾಜಿಕ ಪರಿಸ್ಥಿತಿ ಉಂಟಾಗಬೇಕೆಂದು ನನ್ನ ಎದೆಯಾಳದ ಆಶಯ.

    ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
    picಜೂನ್‌ ತಿಂಗಳು ಹತ್ತಿರವಾದಂತೆ ನಗರಗಳ ಅಪ್ಪ, ಅಮ್ಮಂದಿರಿಗೆ ತಮ್ಮ ಚಿಣ್ಣರನ್ನು ಹತ್ತಿರದ ಯಾವ ಒಳ್ಳೆಯ ಶಾಲೆಗಳಿಗೆ ಸೇರಿಸುವುದು ಎಂಬ ಚಿಂತೆ...
    • ಈ ವಿಭಾಗದಲ್ಲಿಯೂ ಇದೆ
    • Copyright @ 2009-2010 Udayavani.All rights reserved.
    • Designed & Hosted By 4cplus