Thursday, May 17, 2012
Last Updated: 1:59:49 PM IST
  • ನಾನೆಲ್ಲಿರುವೆ:
  • ಮುಖಪುಟ ರಾಜ್ಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • ಸಮನ್ಸ್‌ ವಜಾಗೊಳಿಸುವಂತೆ ಹೈಕೋರ್ಟಿಗೆ ಮೇಲ್ಮನವಿ
  • ಕಾನೂನು ಹೋರಾಟದಿಂದ ಕುಮಾರಸ್ವಾಮಿ ಹಿಂದಕ್ಕೆ
  • ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳುವ‌ ಮೂಲಕ ಕಾನೂನು ಹೋರಾಟದಿಂದ

    • Udayavani | Aug 16, 2011

      ಬೆಂಗಳೂರು: ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರ ವರದಿಯ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಹೊರಡಿಸಿರುವ ಸಮನ್ಸ್‌ ವಜಾಗೊಳಿಸುವಂತೆ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳುವ‌ ಮೂಲಕ ಕಾನೂನು ಹೋರಾಟದಿಂದ ಹಿಂದುಳಿಯುವ ಮುನ್ಸೂಚನೆ ನೀಡಿದ್ದಾರೆ.

      ಜೆಡಿಎಸ್‌ ಕಚೇರಿಯಲ್ಲಿ ಮಂಗಳವಾರ ಗದಗ ಜಿಲ್ಲೆಯ ಕೆಲವು ಮುಖಂಡರನ್ನು ಪಕ್ಷಕ್ಕೆ ಬರ ಮಾಡಿಕೊಂಡ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಪರ ವಕೀಲರು ನ್ಯಾಯಾಲಯಕ್ಕೆ ತಮ್ಮ ವಿರುದ್ಧ ಜಂತಕಲ್‌ ಮೈನಿಂಗ್‌ ಕಂಪೆನಿಯ ವಿಚಾರದಲ್ಲಿ ತಪ್ಪು ಮಾಹಿತಿ ನೀಡಿರುವುದರಿಂದ ತಮಗೆ ಸಮನ್ಸ್‌ ಜಾರಿಯಾಗಿದೆ ಎಂದರು.

      ಶೀಘ್ರದಲ್ಲಿಯೇ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿ ತಮ್ಮ ವಿರುದ್ಧ ಜಾರಿಯಾಗಿರುವ ಸಮನ್ಸ್‌ ವಜಾ ಮಾಡುವಂತೆ ಮನವಿ ಮಾಡುತ್ತೇನೆ. ಈ ಪ್ರಕರಣದಲ್ಲಿ ಹೋರಾಟ ಮಾಡುವಂತಹದ್ದೇನು ಇಲ್ಲ ಎಂದು ಹೇಳಿದರು.

      ಜಂತಕಲ್‌ ಕಂಪೆನಿಗೆ ಗಣಿಗಾರಿಕೆ ಪರವಾನಗಿ ನವೀಕರಣ ಮತ್ತು ವಿಶ್ವಭಾರತಿ ಗೃಹ ಸಹಕಾರ ಸಂಘದ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ತಮ್ಮ ಮೇಲಿನ ಆರೋಪಗಳು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಅವರು ಪುನರುಚ್ಚರಿಸಿದರು.

      ಎರಡು ಪ್ರಕರಣಗಳಲ್ಲಿಯೂ ತಾವು ಕಾನೂನು ಮೀರಿ ನಡೆದುಕೊಂಡಿಲ್ಲ. ಈ ನೆಲದ ಕಾನೂನಿಗೆ ತಲೆಬಾಗಬೇಕಾದ್ದು ಎಲ್ಲರ ಕರ್ತವ್ಯವಾಗಿದೆ. ಅದರಂತೆ ಕಾನೂನಿಗೆ ತಲೆಬಾಗುವುದರ ಜತೆಗೆ ಎಲ್ಲಾ ಆರೋಪಗಳಿಂದ ಮುಕ್ತನಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

      'ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘ ನಾನು ಮುಖ್ಯಮಂತ್ರಿಯಾದ ನಂತರ ಸ್ಥಾಪನೆಯಾಗಿಲ್ಲ. 1984ರಲ್ಲಿಯೇ ಅಸ್ತಿತ್ವಕ್ಕೆ ಬಂದಿದೆ. 1999ರಲ್ಲಿ ಸಂಘಕ್ಕೆ ಸಾಮೂಹಿಕವಾಗಿ ನಿವೇಶನ ಹಂಚಿಕೆಗೆ ತೀರ್ಮಾನವಾಗಿತ್ತಾದರೂ ಆಗಿನ ಎಸ್‌.ಎಂ. ಕೃಷ್ಣ ಸರ್ಕಾರ ಆದೇಶ ತಿರಸ್ಕರಿಸಿತ್ತು.

      ನಾನು ಮುಖ್ಯಮಂತ್ರಿಯಾದ ನಂತರ 2006ರ ಏಪ್ರಿಲ್‌ನಲ್ಲಿ ಮತ್ತೆ ಬಿಡಿಎ ನಿವೇಶನ ಹಂಚಿಕೆ ತಿರಸ್ಕರಿಸಿತ್ತು. ಅದೇ ತಿಂಗಳಿನಲ್ಲಿ ನನ್ನ ಅರಿವಿಗೆ ಬಾರದ ರೀತಿಯಲ್ಲಿ ಪತ್ನಿ ಅನಿತಾ ಹೆಸರಿಗೆ ನಿವೇಶ ನೋಂದಣಿ ಮಾಡಿಸಿದ್ದಾರೆ. ನನ್ನ ಪತ್ನಿ 45 ದಿನಗಳಲ್ಲಿ ನಿವೇಶನ ವಾಪಸುನೀಡಿದ್ದಾರೆ.

      ಆ ನಂತರ ನಾನು 2006ರ ನವೆಂಬರ್‌ನಲ್ಲಿ ಹೈಕೋರ್ಟಿನಿಂದ ಬಂದ ತೀರ್ಪಿನಂತೆ ನಿವೇಶನದಾರರಿಗೆ ಆಗಿರುವ ತೊಂದರೆ ತಪ್ಪಿಸಲು ಪರಿಗಣಿಸಬಹುದೆಂದು ಬಿಡಿಎಗೆ ಸೂಚಿಸಿದ್ದೇನು. ರಾಷ್ಟ್ರಪತಿ ಆಳ್ವಿಕೆಯ ಅವಧಿಯಲ್ಲಿ ರಾಜ್ಯಪಾಲರು ಆದೇಶ ನೀಡಿದ್ದಾರೆ.

      ನಾನು ವೈಯಕ್ತಿಕ ಲಾಭವನ್ನು ಪಡೆದಿಲ್ಲ. ಆದರೂ ಸಾರ್ವಜನಿಕ ಅನುಕೂಲಕ್ಕೆ ಮಾಡಿದ ಕೆಲಸವನ್ನು ಅಪರಾಧವೆಂಬಂತೆ ಬಿಜೆಪಿ ನಾಯಕರು ಬಿಂಬಿಸಿದ್ದಾರೆ' ಎಂದರು.

      'ಸರ್ಕಾರಿ ಭೂಮಿ ಉಳಿಸಲು ಪ್ರಯತ್ನ ನಡೆಸಿದ ನನ್ನನ್ನು ಕಟ್ಟಾ ಸುಬ್ರಮಣ್ಯನಾಯ್ಡು, ಯಡಿಯೂರಪ್ಪರಿಗೆ ಹೋಲಿಕೆ ಮಾಡುತ್ತಿರುವುದು ಅತೀವ ನೋವು ತಂದಿದೆ' ಎಂದ ಅವರು 'ಜಂತಕಲ್‌ ಮೈನಿಂಗ್‌ ಕಂಪೆನಿಗೆ ಪರವಾನಗಿಯ ವಿಚಾರದಲ್ಲಿಯೂ ಅಧಿಕಾರಿ ತನ್ನ ತಪ್ಪು ಮುಚ್ಚಿಕೊಳ್ಳಲು ನನ್ನ ಮೇಲೆ ಆರೋಪ ಹೊರಿಸಿದ್ದಾರೆ. ಆ ಅಧಿಕಾರಿಯ ಬಣ್ಣ ಶೀಘ್ರ ಬಯಲು ಮಾಡುತ್ತೇನೆ' ಎಂದು ತಿಳಿಸಿದರು.

      ಸಂಸದರ ನಿಧಿಯಿಂದ ತಾವು 3 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆದರೂ ಬಿಜೆಪಿ ಸರ್ಕಾರದ ಅಧಿಕಾರಿಗಳು ವೈಯಕ್ತಿಕ ಲಾಭಕ್ಕಾಗಿ ಯೋಜನೆ ಜಾರಿಗೆ ಅಡ್ಡಗಾಲು ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
    • Copyright @ 2009-2010 Udayavani.All rights reserved.
    • Designed & Hosted By 4cplus