ಜನಸಂಖ್ಯಾ ಹೆಚ್ಚಳವೆಂಬ ಬೆಕ್ಕಿಗೆ ಗಂಟೆ ಕಟ್ಟಲು ಸಾಧ್ಯವೇ?

Team Udayavani, Aug 24, 2019, 5:22 AM IST

ಸ್ವಾತಂತ್ರ್ಯ ದಿನಾಚರಣೆಯಂದು ದೇಶವನ್ನುದ್ದೇಶಿಸಿ ಪ್ರಧಾನ ಮಂತ್ರಿಯವರು ಮಾಡುವ ಭಾಷಣಕ್ಕೆ ವಿಶೇಷ ಮಹತ್ವವಿರುತ್ತದೆ. ದೇಶದ ಒಳಿತಿಗಾಗಿ ಸರಕಾರ ಹಾಕಿಕೊಂಡಿರುವ ರೋಡ್‌ಮ್ಯಾಪ್‌ ಅಥವಾ ನೀಲನಕ್ಷೆಯನ್ನು ಜನರ ಮುಂದಿಡಲು ಕೆಂಪುಕೋಟೆಯಿಂದ ಮಾಡುವ ಭಾಷಣವನ್ನು ಎಲ್ಲಾ ಪ್ರಧಾನ ಮಂತ್ರಿಗಳು ಸಮರ್ಪಕವಾಗಿ ಬಳಸಿಕೊಳ್ಳುತ್ತಲೇ ಬಂದಿದ್ದಾರೆ. ನರೇಂದ್ರ ಮೋದಿನರೇಂದ್ರ ಮೋದಿಯವರಂತೂ ತಮ್ಮ ಭಾಷಣದಲ್ಲಿ ಏನೇನು ಅಂಶಗಳು ಇರಬೇಕೆಂದು ಜನರಿಂದಲೇ ಸಲಹೆ ಕೇಳುವ ಹೊಸ ಪರಿಪಾಠವನ್ನೇ ಪ್ರಾರಂಭಿಸಿದ್ದಾರೆ. ದೇಶವನ್ನು ಸ್ವಚ್ಚವಾಗಿಸಲು ‘ಸ್ವಚ್ಛ ಭಾರತ’ ಯೋಜನೆ ರೂಪಿಸಿ ಜನತೆಯನ್ನು ಈ ದಿಸೆಯಲ್ಲಿ ಶ್ರಮಿಸುವಂತೆ ಪ್ರೋತ್ಸಾಹಿಸಿದ್ದ ಅವರು ಈ ಬಾರಿ ಜನಸಂಖ್ಯಾ ಹೆಚ್ಚಳಕ್ಕೆ ಕಡಿವಾಣ ಹಾಕಲು ಸಣ್ಣ ಕುಟುಂಬಕ್ಕೆ ಒತ್ತು ನೀಡುವಂತೆ ಕರೆ ನೀಡಿದ್ದಾರೆ. 1951ರಲ್ಲಿ ಕುಟುಂಬ ಯೋಜನೆಯನ್ನು ರೂಪಿಸಿ ವಿಶ್ವದಲ್ಲೇ ಜನಸಂಖ್ಯಾ ನಿಯಂತ್ರಣದತ್ತ ಕಾರ್ಯಕ್ರಮ ರೂಪಿಸಿದ ಮೊದಲ ವಿಕಾಸಶೀಲ ರಾಷ್ಟ್ರ ಎಂಬ ಹೆಗ್ಗಳಿಕೆ ನಮ್ಮದಾದರೂ ಈ ದಿಸೆಯಲ್ಲಿ ನಿರೀಕ್ಷಿಸಿದಷ್ಟು ಪ್ರಗತಿ ಸಾಧ್ಯವಾಗಲಿಲ್ಲ ಎಂದೇ ಹೇಳಬೇಕಾಗುತ್ತದೆ.

ದೇಶ ಸ್ವತಂತ್ರವಾದಾಗ 30 ಕೋಟಿಯಿದ್ದ ಜನಸಂಖ್ಯೆ ಈಗ 130 ಕೋಟಿ ದಾಟಿದೆ. ಆಹಾರ ಧಾನ್ಯಗಳ ಪೂರೈಕೆಗಾಗಿ ವಿದೇಶಗಳನ್ನು ಅವಲಂಬಿಸಿದ್ದ ನಾವು ಹಸಿರು ಕ್ರಾಂತಿಯ ಮೂಲಕ 50 ಮಿಲಿಯನ್‌ ಟನ್‌ ಇದ್ದ ಆಹಾರೋತ್ಪನ್ನಗಳ ಉತ್ಪಾದನೆಯನ್ನು 250 ಮಿಲಿಯನ್‌ ಟನ್ನಿಗೆ ಹೆಚ್ಚಿಸಿಕೊಂಡಿದ್ದೇವಾದರೂ ನಾಗಾಲೋಟದಿಂದ ಹೆಚ್ಚಿದ ಜನಸಂಖ್ಯೆ ನಾವು ಸಾಧಿಸಿದ ಸಾಧನೆಯನ್ನು ನುಂಗಿ ಹಾಕಿದೆೆ. ಸಮುದ್ರ ಕಿನಾರೆಯ ಮರಳಿನ ದಂಡೆಯ ಮೇಲೆ ವ್ಯಕ್ತಿಯೋರ್ವ ಬರೆಯುತ್ತಿದ್ದರೆ ದಡಕ್ಕೆ ಅಪ್ಪಳಿಸುವ ತೆರೆಗಳು ಆತನ ಬರವಣಿಗೆಯನ್ನು ಅಳಿಸಿ ಹಾಕುತ್ತವೆ. ಮತ್ತೆ ಮತ್ತೆ ಆತ ತನ್ನ ಯತ್ನವನ್ನು ಮುಂದುವರೆಸಿದರೂ ನಿರಂತರ ಬರುವ ತೆರೆಗಳು ಪ್ರತೀ ಪ್ರಯತ್ನವನ್ನೂ ನಿರರ್ಥಕ ವಾಗಿಸುವಂತೆ ಅನಿಯಂತ್ರಿತವಾಗಿ ಹೆಚ್ಚುತ್ತಿರುವ ಜನಸಂಖ್ಯೆ ದೇಶ ಸಾಧಿಸುತ್ತಿರುವ ಪ್ರಗತಿಯನ್ನು ತಿಂದು ಹಾಕಿ ಬಿಡುತ್ತಿದೆ ಎನ್ನುವುದು ವಾಸ್ತವ. ವಿಶ್ವದ ಜನವಸತಿಯೋಗ್ಯ ಭೂ ಪ್ರದೇಶದಲ್ಲಿ ಕೇವಲ ಶೇ.2.4 ಪ್ರದೇಶ ಮಾತ್ರ ಹೊಂದಿದ ಭಾರತ ಪ್ರಪಂಚದ ಒಟ್ಟು ಜನಸಂಖ್ಯೆಯ ಶೇ. 17ನ್ನು ಹೊಂದಿದೆ. ಭೂ ಪ್ರದೇಶಕ್ಕೆ ಹೋಲಿಸಿದರೆ ಸರಿ ಸುಮಾರು ಆರು ಪಟ್ಟು ಜನಸಂಖ್ಯೆಯನ್ನು ಭಾರತ ಹೊಂದಿದಂತಾಯಿತು.

ಹೆಚ್ಚುತ್ತಿರುವ ಜನಸಂಖ್ಯೆಯ ದುಷ್ಪರಿಣಾಮಗಳ ಕುರಿತು ಕ್ರಿ.ಶ. 1798ರಷ್ಟು ಹಿಂದೆಯೇ ಬ್ರಿಟಿಷ್‌ ಅರ್ಥಶಾಸ್ತ್ರಜ್ಞ ಥಾಮಸ್‌ ರಾಬರ್ಟ್‌ ಮಾಲ್ತಸ್‌ ಎಚ್ಚರಿಸಿದ್ದ. ಆಹಾರೋತ್ಪಾದನೆ ಮಂದಗತಿಯ ಅಂಕಗಣಿತೀಯ ಅನುಪಾತದಲ್ಲಿ (2,4,6,8,10,12) ಹೆಚ್ಚಿದರೆ ಜನಸಂಖ್ಯೆ ರೇಖಾಗಣಿತೀಯ ಅನುಪಾತದಲ್ಲಿ (2,4,8,16,32,64) ತೀವ್ರಗತಿಯಲ್ಲಿ ಹೆಚ್ಚುತ್ತದೆ ಎನ್ನುವ ಜನಸಂಖ್ಯಾ ಸಿದ್ಧಾಂತದ ಮೂಲಕ ಆತ ಜನಸಂಖ್ಯಾ ಹೆಚ್ಚಳದ ವಿರುದ್ಧ ಅರಿವು ಹುಟ್ಟಿಸುವ ಪ್ರಯತ್ನ ಮಾಡಿದ್ದ. ಜನಸಂಖ್ಯಾ ಹೆಚ್ಚಳವನ್ನು ತಡೆಯಲು ಮನುಷ್ಯ ನಿಯಂತ್ರಣೋಪಾಯಗಳನ್ನು ತೆಗೆದುಕೊಳ್ಳದಿದ್ದರೆ ಪೃಕೃತಿ ತಾನಾಗಿಯೇ ಭೂಕಂಪ, ಬರಗಾಲ, ಪ್ರವಾಹ ಮೊದಲಾದ ಪ್ರಾಕೃತಿಕ ವಿಕೋಪಗಳ ಮೂಲಕ ಆಹಾರೋತ್ಪಾದನೆ ಮತ್ತು ಜನಸಂಖ್ಯೆಯ ನಡುವೆ ಸಮತೋಲನ ಸಾಧಿಸುತ್ತದೆ ಎಂಬ ವಾದ ಮಂಡಿಸಿದ್ದ ಆತ. ಮಾಲ್ತಸ್‌ನ ಜನಸಂಖ್ಯಾ ಸಿದ್ಧಾಂತ ಇತರ ಅರ್ಥಶಾಸ್ತ್ರಜ್ಞರಿಂದ ಹಲವಾರು ದೃಷ್ಟಿಕೋನಗಳಿಂದ ಸಾಕಷ್ಟು ಟೀಕೆಯನ್ನು ಎದುರಿಸಬೇಕಾಯಿತೆನ್ನುವುದು ನಿಜವಾದರೂ ಪಾಶ್ಚಿಮಾತ್ಯ ದೇಶಗಳ ಕಡಿಮೆ ಜನಸಂಖ್ಯೆ ಇರುವಲ್ಲಿ ಜನರ ಜೀವನ ಮಟ್ಟ ಜನದಟ್ಟಣೆಯ ಏಷ್ಯಾ ಮತ್ತು ಆಫ್ರಿಕಾ ಖಂಡದ ದೇಶಗಳಿಗಿಂತ ಉತ್ತಮ ಸ್ಥಿತಿಯಲ್ಲಿದೆ ಎನ್ನುವುದು ವಾಸ್ತವ.

ಭಾರತದಲ್ಲಿ 1970ರ ದಶಕದಲ್ಲಿ ಕುಟುಂಬವನ್ನು ಮೂರು ಮಕ್ಕಳಿಗೆ ಸೀಮಿತಗೊಳಿಸಿ ಎಂದು ಕರೆಕೊಡುವ ‘ಚಿಕ್ಕ ಸಂಸಾರ ಸುಖಕ್ಕೆ ಆಧಾರ’ ಎಂದು ಮತ್ತು ಮುಂದಿನ ದಶಕದಲ್ಲಿ ಮಕ್ಕಳ ಸಂಖ್ಯೆಯನ್ನು ಎರಡಕ್ಕೆ ಸೀಮಿತಗೊಳಿಸಿ ಎಂದು ‘ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ’ ಹಾಗೂ ‘ನಾವಿಬ್ಬರು ನಮಗಿಬ್ಬರು’ ಎಂಬ ಘೋಷಣೆಗಳ ಮೂಲಕ ಮಿತ ಸಂತಾನ ಅನುಸರಿಸುವಂತೆ ಸರಕಾರ ಕರೆ ನೀಡಿತು.

ಇತ್ತೀಚಿನ ವರ್ಷಗಳಲ್ಲಿ ‘ಗಂಡಿರಲಿ ಹೆಣ್ಣಿರಲಿ ಮಗು ಒಂದೇ ಇರಲಿ’ ಎನ್ನುವ ಘೋಷಣೆ ಚಲಾವಣೆಯಲ್ಲಿದೆ. ಆದರೆ ಇದೆಲ್ಲವೂ ಚೀನಾದಲ್ಲಿ ಚಾಲ್ತಿಯಲ್ಲಿದ್ದಂತೆ ದಂಡನಾತ್ಮಕ (punitive) ರೀತಿ ಯಲ್ಲಿ ಜನಭಾವನೆಯ ಮೇಲೆ ಒತ್ತಾಯಪೂರ್ವಕವಾಗಿ ಹೇರದೆ ಪ್ರಜಾಪ್ರಭುತ್ವ ಸರಕಾರದ ಮನವೊಲಿಕೆ ನೀತಿಯಾಗಿ ಒಂದಷ್ಟು ಸಫ‌ಲತೆ ಮತ್ತೂಂದಷ್ಟು ವಿಫ‌ಲತೆ ಕಾಣುತ್ತಾ ಸಾಗಿದೆ. 1975-77ರ ತುರ್ತು ಸ್ಥಿತಿಯಲ್ಲಿ ಬಲಾತ್ಕಾರಪೂರ್ವಕವಾಗಿ ಸಂತಾನಹರಣ ಪ್ರಯತ್ನಗಳು ನಡೆದು ಕಾಂಗ್ರೆಸ್‌ ಪಕ್ಷ ಚುನಾವಣೆಯಲ್ಲಿ ಜನಾಕ್ರೋಶ ಎದುರಿಸಬೇಕಾಗಿ ಬಂದ ಅನಂತರವಂತೂ ಮುಂದೆ ಬಂದ ಯಾವ ಸರ್ಕಾರವೂ ಈ ಕುರಿತು ಕಠಿಣ ನಿಲುವು ತಳೆಯುವ ಸಾಹಸ ಮಾಡಲಿಲ್ಲ. ಆ ದೃಷ್ಟಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹೇಳಿಕೆ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ.

ಸುದೀರ್ಘ‌ ಕಾಲ ಒಂದು ಮಗು ನೀತಿ ಅನುಸರಿಸುತ್ತಿದ್ದ ಕಮ್ಯುನಿಸ್ಟ್‌ ಚೀನ ಹೆಚ್ಚುತ್ತಿರುವ ವೃದ್ಧರ ಸಂಖ್ಯೆಯನ್ನು ದೃಷ್ಟಿಯಲ್ಲಿರಿಸಿಕೊಂಡು ತನ್ನ ಬಿಗಿ ನಿಲುವನ್ನು ಸಡಿಲಿಸಿದೆ. ಹೆಚ್ಚು ಕಡಿಮೆ ಜಪಾನಿನ ಸ್ಥಿತಿಯೂ ಚೀನದಂತೆಯೇ ಆಗಿದೆ. ಯುವಕರೇ ಅಧಿಕವಾಗಿರುವ ಭಾರತ ಈಗ ವೃದ್ಧ ಚೀನದ ಎದುರು ಯುವ ದೇಶವೆನಿಸಿಕೊಂಡಿದೆ. ದೊಡ್ಡ ಜನಸಂಖ್ಯೆಯೇ ನಮ್ಮ ಶಕ್ತಿಯಾಗಲಿದೆ ಎನ್ನುವ ಭ್ರಮೆಯಲ್ಲಿಡುವ ಯತ್ನವೂ ನಡೆಯುತ್ತಿದೆ. ಅತಿಯಾದರೆ ಹಾಲೂ ಸಹ ವಿಷ ಎನ್ನುವ ಮಾತಿನಂತೆ ಜನಸಂಖ್ಯಾ ಹೆಚ್ಚಳದಿಂದ ಭೂಮಿಯ ಮೇಲಿನ ಒತ್ತಡ ಅಧಿಕವಾಗಿ ಕಾಡುಗಳ ನಾಶ, ಕೊಳೆಗೇರಿಗಳ ನಿರ್ಮಾಣ, ನೆಲ-ಜಲ-ಶಬ್ದ ಮಾಲಿನ್ಯ ಉಂಟಾಗಿ ದೀರ್ಘಾವಧಿಯಲ್ಲಿ ಅದು ಹಾನಿಯನ್ನುಂಟು ಮಾಡುವುದರಲ್ಲಿ ಸಂದೇಹವಿಲ್ಲ.

ಗರ್ಭಪಾತ, ಸಂತಾನಹರಣ ಚಿಕಿತ್ಸೆ, ಕಾಂಡೋಮ್‌ ಬಳಕೆ, ಜನನ ನಿಯಂತ್ರಣದಂತಹ ವಿಷಯಗಳ ಕುರಿತಂತೆ ಇಂದಿಗೂ ನಮ್ಮ ಜನಮಾನಸದಲ್ಲಿ ಸಾಕಷ್ಟು ಮಡಿವಂತಿಕೆ ಹಾಗೂ ಭಿನ್ನಾಭಿಪ್ರಾಯಗಳು ಇವೆ. ಕೊಡುವ ದೇವರಿಗೆ ಬಡತನವಿಲ್ಲ ಎಂದು ಬೋಧಿಸುವ ಧಾರ್ಮಿಕ ತಿರೋಗಾಮಿ ಬೋಧಕರಿರುವ, ಹುಟ್ಟಿಸಿದಾತ ಹುಲ್ಲು ಮೇಯಿಸದೇ ಬಿಡುವನೇ ಎಂದು ವಾದಿಸುವರು ದೊಡ್ಡ ಸಂಖ್ಯೆಯಲ್ಲಿರುವ ಸಮಾಜದಲ್ಲಿ ಜನಸಂಖ್ಯಾ ನಿಯಂತ್ರಣ ಪ್ರಗತಿಯ ದಾರಿಯಲ್ಲಿ ಅಡ್ಡಿ ಎಂದು ಜನಾಭಿಪ್ರಾಯ ರೂಢಿಸುವ ಇರಾದೆ ಉತ್ತಮವಾದುದಾದರೂ ಕ್ರಮಿಸಬೇಕಾದ ದಾರಿ ಅಷ್ಟೇನೂ ಸುಲಭವಲ್ಲ.

ಮೋದಿಯನ್ನು ನಖಶಿಖಾಂತ ವಿರೋಧಿಸುವವರು, ಹೆಚ್ಚುತ್ತಿರುವ ಜನಸಂಖ್ಯೆಯಿಂದ ಶಿಕ್ಷಣ, ಉದ್ಯೋಗ, ಆರೋಗ್ಯ, ಮೂಲ ಸೌಕರ್ಯ ಕ್ಷೇತ್ರದಲ್ಲುಂಟಾಗುತ್ತಿರುವ ಅಪರಿಮಿತ ಸಮಸ್ಯೆಯ ಅರಿವಿದ್ದರೂ ಅವರ ನೀತಿಯ ವಿರುದ್ಧ ಮುಗಿಬೀಳುವುದಂತೂ ಖಚಿತ. ಧಾರ್ಮಿಕ ಸ್ವಾತಂತ್ರ್ಯದ ಹೆಸರಲ್ಲಿ ಜನನ ನಿಯಂತ್ರಣ ನೀತಿಯನ್ನು ಸಂವೇದನಾಶೀಲ ವಿಷಯವನ್ನಾಗಿಸಿ ವಿರೋಧಿಸುವ ಯತ್ನವೂ ನಡೆಯುವುದರಲ್ಲಿ ಸಂದೇಹವಿಲ್ಲ. ‘ಕರ್‌ ಭಲಾ ತೋ ಅಂತ್‌ ಭಲಾ’ ಅರ್ಥಾತ್‌ ಒಳ್ಳೆಯದನ್ನು ಯೋಚಿಸಿದರೆ ಒಳ್ಳೆಯ ಪರಿಣಾಮ ಸಿಗುತ್ತದೆ ಎನ್ನುವ ಮಾತಿನಂತೆ ದೇಶಹಿತ ಚಿಂತನೆಯ, ನವಭಾರತ ಕಟ್ಟುವ ಸಂಕಲ್ಪ ಹೊಂದಿರುವ ಪ್ರಧಾನಿಯವರ ಕರೆಯನ್ನು ಜನತೆ ತುಂಬು ಮನಸ್ಸಿನಿಂದ ಸ್ವೀಕರಿಸುವಂತಾಗಲಿ.

ಬೈಂದೂರು ಚಂದ್ರಶೇಖರ ನಾವಡ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ