ಹಿರಿ ಜೀವಗಳು ಇಳಿಗಾಲದಲ್ಲಿ ಒಂಟಿಯಾಗದಿರಲಿ

Team Udayavani, Nov 2, 2019, 5:18 AM IST

ಹೀಗೇ ಒಂದು ದಿನ ಆತ್ಮೀಯರಾದ ಹಿರಿಯರೊಬ್ಬರಲ್ಲಿ ಫೋನ್‌ನಲ್ಲಿ ಮಾತನಾಡುತ್ತಿದ್ದೆ. ಅವರಿಗೆ ಏನನಸಿತೋ, ತಮ್ಮ ದುಃಖವನ್ನು ನನ್ನಲ್ಲಿ ಹಂಚಿಕೊಂಡರು. ನನಗೆ ಸಂಬಂಧದ ರೀತಿಯಲ್ಲಿ ಹೇಳುವುದಾದರೆ, ಯಾರೂ ಅಲ್ಲದ ಆ ವ್ಯಕ್ತಿಯೊಂದಿಗೆ ಮಾತನಾಡಿ ಫೋನು ಕೆಳಗಿಟ್ಟ ನಾನು, ಕೆಲವು ಕ್ಷಣ ಸ್ತಬ್ಧಳಾಗಿ ಕುಳಿತೆ. ಮನಸ್ಸು ಭಾರವಾಗಿತ್ತು. ನಾನು ಗೌರವಿಸುವ, ನನಗೆ ಆತ್ಮೀಯರಾದ ಅವರ ಸದ್ಯದ ಪರಿಸ್ಥಿತಿ, ನನ್ನಲ್ಲಿ ಮೂಡಿಸಿದ್ದು ದುಃಖವೋ, ಅನುಕಂಪವೋ, ಅವರ ನೋವಿಗೆ ಕಾರಣರಾದವರ ಕುರಿತ ಅಸಹನೆಯೋ ತಿಳಿಯ ದಾದೆ. ಅವರಿಗಿಂತ ಹಿರಿಯರಾದ ಹಲವರು ನೆನಪಾದರು. ಆ ಎಲ್ಲರನ್ನೂ ಪರಸ್ಪರ ತುಲನೆ ಮಾಡಿದಾಗ ಕೆಲವರು ಇಳಿ ವಯಸ್ಸಲ್ಲೂ ಖುಷಿಯಾಗಿರುವುದು ಹಾಗೂ ಉಳಿದವರು ನಿರಾಶೆ ಹಾಗೂ ದುಃಖ ದಿಂದ ಕಂಗಾಲಾಗಿರುವುದು ತಿಳಿ ಯಿತು. ಇತ್ತೀಚೆಗೆ ನನ್ನ ಅತ್ತೆಯನ್ನು ಭೇಟಿಯಾಗಲು ಒಬ್ಬರು ನಿವೃತ್ತ ಶಿಕ್ಷಕರು ಬಂದರು. ಅವರಿಗೆ ಎಂಬತ್ತೈದು ವರ್ಷ ಪ್ರಾಯವಾಗಿತ್ತು. ಈ ವಯಸ್ಸಿನಲ್ಲೂ ಅವರಲ್ಲಿ ಜೀವ ನೋತ್ಸಾಹ ತುಂಬಿ ತುಳುಕುತ್ತಿತ್ತು. ಇತರರ ಸಹಾಯವಿಲ್ಲದೇ ನಡೆಯಬಲ್ಲ ಅವರಿಗೆ ಕನ್ನಡಕವಿಲ್ಲದೆಯೇ ಸ್ಪಷ್ಟವಾಗಿ ಕಾಣುವಷ್ಟು ದೃಷ್ಟಿ ಇತ್ತು. ಕಿವಿಯೂ ಸೂಕ್ಷ್ಮವಾಗಿತ್ತು. ಅವರು ಖುಷಿಖುಷಿ ಯಾಗಿದ್ದು, ತಮ್ಮ ಜೊತೆ ಕಾರ್ಯನಿರ್ವಹಿಸಿದ ಸಹೋದ್ಯೋಗಿ ಗಳನ್ನು ಸಂದರ್ಶಿಸಿ ಬರಲು ಅಪರೂಪಕ್ಕೊಮ್ಮೆ ಹೋಗುತ್ತಲೂ ಇದ್ದರು. ಮಗ, ಸೊಸೆ, ಮೊಮ್ಮಕ್ಕಳು ಇರುವ ಕುಟುಂಬದಲ್ಲಿ ಅವರಿಗೆ ನೆಮ್ಮದಿ ಇತ್ತು ಎಂಬುದಕ್ಕೆ ಅವರ ಬತ್ತದ ಉತ್ಸಾಹವೇ ಸಾಕ್ಷಿಯಾಗಿತ್ತು.

ನಾನು ಫೋನ್‌ ಸಂಭಾಷಣೆ ಮೂಲಕ ಮಾತನಾಡಿದ ಹಿರಿಯರು ವೃತ್ತಿಯಿಂದ ನಿವೃತ್ತರಾದರೂ ಇನ್ನೂ 60+ ಪ್ರಾಯದಲ್ಲಿದ್ದಾರಷ್ಟೇ. ಆಗಲೇ ತೀವ್ರ ನಿರಾಶೆಯಲ್ಲಿ ಎಲ್ಲವನ್ನೂ ಕಳೆದುಕೊಂಡಂತೆ ಮಾತನಾಡುತ್ತಿದ್ದರು. ನನ್ನಿಂದ ಇನ್ನು ಏನೂ ಮಾಡಲಾಗದು. ನನ್ನ ಶಕ್ತಿ ಕುಂದಿದೆ. ನನಗೆ ಯಾರೂ ಇಲ್ಲ ಎಂಬ ಅನಾಥ ಪ್ರಜ್ಞೆ, ನಕಾರಾತ್ಮಕ ಮನೋಭಾವ ಅವರಲ್ಲಿ ತೀವ್ರವಾಗಿ ಬೇರೂರಿತ್ತು. ಪಾದರಸದಂತೆ ಚುರುಕಾಗಿದ್ದ ವ್ಯಕ್ತಿಯೊಬ್ಬ ಹೀಗೆ ಮಂಕಾದುದನ್ನು ಊಹಿಸಲೂ ಕಷ್ಟವೆನಿಸಿತ್ತು. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ, ಮದುವೆ ಮಾಡಿಸಿ ಎಲ್ಲಾ ಜವಾಬ್ದಾರಿಗಳಿಂದ ಮುಕ್ತರಾಗಿದ್ದರು. ತಮ್ಮ ಗಂಡ, ಹೆಂಡತಿ, ಮಕ್ಕಳು ಎಂದು ಅವರೆಲ್ಲಾ ತಮ್ಮದೇ ಲೋಕದಲ್ಲಿದ್ದಾರೆ. ಉದ್ಯೋಗ ನಿಮಿತ್ತ ಕುಟುಂಬ ಸಮೇತ ವಿದೇಶದಲ್ಲಿ ನೆಲೆಸಿರುವ ಮಕ್ಕಳನ್ನು ಮನೆಯಲ್ಲಿ ಬಂದು ಇರಿ ಎನ್ನಲೂ ಆಗದೇ, ಒಂಟಿಯಾಗಿ ಇರಲೂ ಆಗದೇ ಅವರು ಚಡಪಡಿಸುತ್ತಿದ್ದರು. ಊರಲ್ಲಿರುವ ಆಸ್ತಿ, ತೋಟ ಬಿಟ್ಟು ಮಕ್ಕಳೊಂದಿಗೆ ಪಟ್ಟಣದಲ್ಲಿ ವಾಸಿಸಲು ಅವರಿಗೆ ಇಷ್ಟವೂ ಇಲ್ಲ. ಯೌವನವನ್ನು ಸವಿಯುವ ಸಂತಸದಲ್ಲಿರುವ ಮಕ್ಕಳಿಗೆ ಈ ಹಿರಿಯ ಜೀವದ ಒಂಟಿತನ, ಮೂಕವೇದನೆ ಅರ್ಥವಾಗುವುದೂ ಇಲ್ಲ. ನನ್ನ ಮೇಲಿನ ವಿಶೇಷ ಅಭಿಮಾನದಿಂದ ಅವರು ತಮ್ಮ ನೋವನ್ನು ಹಂಚಿಕೊಂಡರು.

ಮತ್ತೂಂದು ಹಿರಿಯರೇ ತುಂಬಿದ ಕುಟುಂಬ ನೆನಪಾಯಿತು.ಇಲ್ಲಿಯೂ ಹೆಣ್ಣುಮಕ್ಕಳು ಮದುವೆಯಾಗಿ ಗಂಡನ ಮನೆಗೆ ಹೋಗಿಯಾಗಿತ್ತು. ವಿದೇಶದಲ್ಲಿ ಉದ್ಯೋಗ ದಲ್ಲಿದ್ದ ಮಗ ಮದುವೆಯಾಗಿ ಪತ್ನಿಯೊಂದಿಗೆ ವಿದೇಶಕ್ಕೆ ಹಾರಿದ್ದ. ಮುದುಕರಾಗಿ ಆರೋಗ್ಯ ಸಮಸ್ಯೆಗಳಿರುವ ಅಪ್ಪ ಅಮ್ಮ ಹಳ್ಳಿ ಮನೆಯಲ್ಲಿ ಉಳಿದರು. ಸ್ವಾವಲಂಬಿಗಳಾದ ಕಾರಣ ಯಾರ ಹಂಗಿನಲ್ಲೂ ಉಳಿಯದೇ ತಮ್ಮ ಸ್ವಂತ ಮನೆ ,ಆಸ್ತಿ ನೋಡಿಕೊಂಡು, ತಮ್ಮಿಂದಾಗುವ ಕೆಲಸ ಮಾಡುತ್ತಾ ದಿನನೂಕುವ ಅವರ ಕಣ್ಣುಗಳಲ್ಲಿ ಮಡುಗಟ್ಟಿರುವುದು ನಿರಾಸೆಯೋ, ಸ್ವಯಂ ಮರುಕವೋ, ಭಾವ ರಾಹಿತ್ಯವೋ ತಿಳಿಯದು. ಮಕ್ಕಳು ಕಲಿತು ದೊಡ್ಡ ಉದ್ಯೋಗ ಗಳಿಸಬೇಕು, ವಿದೇಶಕ್ಕೆ ಹೋಗಿ ತುಂಬಾ ಸಂಪಾದಿಸಬೇಕು ಎಂದು ಬಯಸಿ, ಅದಕ್ಕಾಗಿ ಪರಿಶ್ರಮಿಸಿದ್ದ ಅವರಿಗೀಗ ಬಡತನವಾದರೂ ಪರವಾಗಿರಲಿಲ್ಲ, ಈ ಮುದಿ ವಯಸ್ಸಿನಲ್ಲಿ ಮಕ್ಕಳು ನಮ್ಮ ಬಳಿಯಿರಬೇಕಿತ್ತು, ಮೊಮ್ಮಕ್ಕಳು ನಮ್ಮ ಕಣ್ಣ ಮುಂದೆಯೇ ಬೆಳೆಯಬೇಕಿತ್ತು ಎಂದು ಆಶಿಸುತ್ತಿದ್ದಾರೆ.

ಈಗೀಗ ಹಳ್ಳಿಗಳ ಮನೆಗಳಲ್ಲಿ ಚಿಕ್ಕ ಮಕ್ಕಳ ಅಳುವಾಗಲೀ, ಕಿಲಕಿಲ ನಗುವಾಗಲೀ, ತುಂಟಾಟದ ಸದ್ದಾಗಲೀ ಕೇಳುವುದಿಲ್ಲ. ಮುದಿಜೀವಗಳ ಕೆಮ್ಮಿನ ಸದ್ದು, ನಿಟ್ಟುಸಿರಿನ ಸದ್ದಷ್ಟೇ ಅಲ್ಲಿ ಕೇಳಿಸುತ್ತಿದೆ. ಪಟ್ಟಣಗಳ ಬಣ್ಣದ ಬದುಕಲ್ಲಿ, ಮೋಜು ಮಸ್ತಿಗಳಲ್ಲಿ ಮಗ್ನರಾಗಿರುವ ಯುವ ಜನತೆಗೆ ತಮ್ಮ ಪುಟ್ಟ ಕುಟುಂಬವೆಂಬ ಸ್ವರ್ಗವೊಂದೇ ಕಾಣಿಸುತ್ತಿದೆ. ಮುದುಕರಾದ ಹೆತ್ತವರಿಗೆ ಅವರ ಸ್ವರ್ಗದಲ್ಲಿ ಸ್ಥಾನವಿಲ್ಲ. ಓವರ್‌ ಟೈಂ ಕೆಲಸ ಮಾಡಿಯಾದರೂ ಹೆಚ್ಚು ಹಣ ಗಳಿಸಿ ಕೂಡಿಡಲು ಹೊರಟ ಯುವಜನತೆಗೆ ವಾರಕ್ಕೊಮ್ಮೆ ಕೆಲಸದ ಒತ್ತಡ ಮರೆಯಲು ಎಲ್ಲಾದರೂ ಸುತ್ತಾಡಲು ಹೋಗ ಲೇಬೇಕು. ಔಟಿಂಗ್‌ಗಾಗಿ ಹೊರಟು ಪ್ರತಿಷ್ಠಿತ ಹೊಟೇಲುಗಳಲ್ಲಿ ತಿಂದು ಕುಡಿದು ಮಜಾ ಮಾಡುವಾಗ ಅವರಿಗೆ ತಮಗಾಗಿ ಜೀವತೇದ ಹೆತ್ತವರ ನೆನಪಾಗುವುದಿಲ್ಲ.ಕಾಟಾಚಾರಕ್ಕಾಗಿ ಫೋನ್‌ ಮಾಡಿ ಮಾತನಾಡಿ, ತಿಂಗಳಿಗೆ ಒಂದಷ್ಟು ಹಣ ಕಳಿಸಿ ತೀರಾ ವ್ಯಾವಹಾರಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ.ವರ್ಷಕ್ಕೊಮ್ಮೆ ಅಥವಾ ಎರಡು ವರ್ಷಕ್ಕೊಮ್ಮೆ ಊರಿಗೆ ಬರುವಾಗಲೂ ಅವರು ಬೇರೆ ಬೇರೆ ಕಡೆ ತಿರುಗಾಡುವುದರಲ್ಲೇ ಬ್ಯುಸಿಯಾಗಿರುತ್ತಾರೆ. ಹೊಟ್ಟೆಬಟ್ಟೆ ಕಟ್ಟಿ, ಮಕ್ಕಳ ಹೊಟ್ಟೆ ತಂಪಾಗಿಸಿ, ಅವರ ಬೇಕು ಬೇಡಗಳನ್ನೆಲ್ಲ ಈಡೇರಿಸಿ, ಅವರಿಗೆ ಇಷ್ಟವಾದದ್ದನ್ನು ಕಲಿಯಲು ಬಿಟ್ಟು, ಇಷ್ಟವಾದ ಉದ್ಯೋಗಕ್ಕೆ ಕಳುಹಿಸಿ, ಹಣ ಹೊಂದಿಸಿ ವಿದೇಶಕ್ಕೂ ಕಳಿಸಿದ ಹೆತ್ತವರಿಗೆ, ತಮ್ಮ ಕೈಕಾಲಿನ ಬಲ ಕುಂದಿದಾಗ ತಾವು ಮಾಡಿದ್ದು ಮೂರ್ಖತನ ಎಂದು ಅರಿವಾಗಿ ಹಲುಬುತ್ತಾರೆ.

ಯಾವ ಮಕ್ಕಳು ಇಳಿವಯಸ್ಸಿನ ಹೆತ್ತವರನ್ನು ಗೌರವಿಸಿ, ಪ್ರೀತಿಯಿಂದ ಜೊತೆಗಿದ್ದು ನೋಡಿಕೊಳ್ಳುತ್ತಾರೋ, ಅವರಿಗೆ ಸಣ್ಣಪುಟ್ಟ ಕಾಯಿಲೆಗಳಿದ್ದರೂ ಅವರು ಸಂತೋಷವಾಗಿರುತ್ತಾರೆ. ಮಕ್ಕಳು ಜೊತೆಗಿಲ್ಲದೇ ಸಣ್ಣಪುಟ್ಟ ಕಾಯಿಲೆಯಿರುವ ಇಳಿ ವಯಸ್ಸಿನವರಿಗೆ ಆ ಸಣ್ಣ ಕಾಯಿಲೆಯೇ ಸರ್ವ ಶಕ್ತಿಯನ್ನೂ ಕುಂದಿಸಿ, ನಿರಾಶೆಗೆ ದೂಡಬಹುದು. ಲವಲವಿಕೆಯಿಂದ ಇರುವ ಹಿರಿಯರು ಖಂಡಿತಾ ಉತ್ತಮ ಕೌಟುಂಬಿಕ ವಾತಾವರಣದಲ್ಲಿದ್ದಾರೆ. ಪರಿಸ್ಥಿತಿ ಹಾಗಿಲ್ಲದಿದ್ದರೆ ಅವರು ದಾರ್ಶನಿಕರೇ ಇರಬೇಕು.

ಪ್ರಪಂಚದಲ್ಲಿ ಏನೇ ಗಳಿಸಿದರೂ ಅದು ಹೆತ್ತವರು ತೋರಿದ ಪ್ರೀತಿಗೆ, ಅವರು ತೋರಿದ ತ್ಯಾಗಕ್ಕೆ ಪರ್ಯಾಯವಾಗದು. ಹಣ ಕಳುಹಿಸಿಕೊಟ್ಟರೆ ಅಲ್ಲಿಗೆ ಮಕ್ಕಳ ಕರ್ತವ್ಯ ಮಗಿಯುವುದಿಲ್ಲ. ಆ ಮುದಿ ಜೀವಗಳಿಗೆ ಬೇಕಾ ದುದು ಹಣವಲ್ಲ, ಸಮೀಪದಲ್ಲಿರುವ, ಪ್ರೀತಿಯ ಮಾತುಗಳ ನ್ನಾಡುವ ಮಕ್ಕಳು. ಸಂಗಾತಿಯ ಮರಣದ ಬಳಿಕ ಒಬ್ಬಂಟಿ ಯಾದ ಹಿರಿಯರು ತೀವ್ರ ನೋವಲ್ಲಿರುತ್ತಾರೆ. ಕಣ್ಣಿಗೆ ಕಾಣುವ ದೇವರಾದ ಹೆತ್ತವರನ್ನು ಮರೆತು ಏನೇ ಮಾಡಿದರೂ ಅದರಿಂದಾ ಗುವ ಪ್ರಯೋಜನವೇನು? ಹೆತ್ತವರ ನಿಟ್ಟುಸಿರಿ ಗಿಂತ, ಅವರ ಕಣ್ಣೀರಿಗಿಂತ ದೊಡ್ಡ ಶಾಪ ಇನ್ನೇನಿದೆ? ಅವರ ಮುಖದಲ್ಲಿ ತೃಪ್ತಿ ತುಂಬಿದ ನಗುವಿದ್ದರೆ ಮಕ್ಕಳಿಗೆ ಅದೇ ಅತಿ ದೊಡ್ಡ ಅನುಗ್ರಹ. ಇಂದು ಅವರು ಆ ಸ್ಥಾನದಲ್ಲಿದ್ದರೆ ನಾಳೆ ನಾವೂ ಆ ಸ್ಥಾನಕ್ಕೆ ಬರಬೇಕಾದವರೇ. ಆಗ ನಮ್ಮ ಪಾಡು ನಾಯಿಪಾಡಾಗದಿರಲು ಈಗ ಮುದುಕರಾದ ಹೆತ್ತವ ರನ್ನು ಪ್ರೀತಿಸಿ, ಗೌರವಿಸೋಣ. ಅವರನ್ನು ಒಂಟಿಯಾಗಿಸದಿರೋಣ.

– ಜೆಸ್ಸಿ ಪಿ.ವಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ