ಬಡತನದಲ್ಲಿ ಸುಖವಿದೆ ಎನ್ನುವ ಮುನ್ನ…


Team Udayavani, Dec 16, 2018, 12:30 AM IST

Poor

“ದುಡ್ಡಿದ್ದವನು ರಾತ್ರಿಗಳಲ್ಲಿ ನೆಮ್ಮದಿಯಿಂದ ನಿದ್ರಿಸಲಾರ, ಆದರೆ ಭಿಕ್ಷುಕನನ್ನು ನೋಡಿ, ಸ್ವಲ್ಪವೂ ಚಿಂತೆಯಿಲ್ಲದೆ ನೆಮ್ಮದಿಯಿಂದ ನಿದ್ರಿಸಿಬಿಡ್ತಾನೆ’ಎಂದುಬಿಡುತ್ತಾರೆ ಒಂದಷ್ಟು ಜನ. ಹಾಗೆ ಮಾತನಾಡುವವರು ರಾತ್ರಿಗಳಲ್ಲಿನ ಭಿಕ್ಷುಕನ ಪರಿಸ್ಥಿತಿಯನ್ನು ಕಂಡಿರುವುದೇ ಅನುಮಾನ.

“ಸಿರಿವಂತ ಬಂಗಲೆಯಲ್ಲಿ ವಾಸಿಸುತ್ತಾನೆ, ಬಡವ ಗುಡಿಸಲಿನಲ್ಲಿ. ಸತ್ತಾಗ ಸಿರಿವಂತನೂ ಮಣ್ಣಿನ ಗೋರಿಯಲ್ಲಿ ಮಲಗುತ್ತಾನೆ, ಬಡವನೂ ಅದೇ ಗೋರಿಯಲ್ಲಿ’ ಎಂಬರ್ಥದ ಚಿತ್ರವೊಂದು ಪದೇ ಪದೇ ಫೇಸುºಕ್‌ನಲ್ಲಿ ಕಾಣಿಸುತ್ತದೆ.  ಕೆಲವೊಮ್ಮೆ ಅದೇ ಚಿತ್ರ ಬೆಳಗಿನ ಶುಭೋದಯದ ಚಿತ್ರವಾಗಿಯೋ, ಇರುಳಿನ ಶುಭರಾತ್ರಿಯ ಸಂದೇಶವಾಗಿಯೋ ವಾಟ್ಸ್‌ಆ್ಯಪ್‌ ಬರುವುದುಂಟು. ಫೇಸುಕ್ಕಿನಲ್ಲಿ ಚಿತ್ರ ಕಂಡಾಗಲೆಲ್ಲ ತುಂಬ ಜನ, “ಇಷ್ಟೇ ಕಣ್ರೀ ಜೀವನ’ ಎನ್ನುತ್ತ ಭಾವುಕರಾಗಿ ಅದನ್ನು ಹಂಚಿಕೊಳ್ಳುವುದನ್ನೂ ನೀವು ನೋಡಿರಬಹುದು. ತಪ್ಪೆನಿಲ್ಲ. ಬದುಕಿನ ನಿಜವಾದ ಸಿದ್ಧಾಂತವನ್ನು ಅರಿತರೆ ಒಳ್ಳೆಯದೇ. ಆದರೆ ಹಾಗೊಂದು ಚಿತ್ರ ಕಂಡಾಗ ಚಿತ್ರವನ್ನು ತಮ್ಮದೇ ಶೈಲಿಯಲ್ಲಿ ವಿಶ್ಲೇಷಿಸುತ್ತ “ಬಡತನವೇ ನಿಜವಾದ ಬದುಕು’, “ಬಡತನದಲ್ಲೇ ಸ್ವರ್ಗವಿದೆ’ ಎಂಬ ಧಾಟಿಯಲ್ಲಿ ಬರೆಯುವವರ ಭಾವದ ಬಗ್ಗೆ ನಾಲ್ಕು ಸಾಲು ಬರೆಯೋಣವೆನ್ನಿಸಿದೆ. ನಿಜವಾಗಿಯೂ ಬದುಕಿನ ಅಹಮಿಕೆಗಳ ಅರ್ಥಹೀನತೆಯ ಬಗ್ಗೆ ವಿವರಿಸುವ ಬಹಳ ಚಂದದ ಚಿತ್ರವದು. “ಬದುಕಿನ ಸಂತೆ ಮುಗಿದ ಮೇಲೆ, ತನ್ನ ಪಾಡಿಗೆ ತಾನೆಂಬಂತಿದ್ದ ಬಡವನೂ, ಅಹಂಕಾರದಿಂದ ಮೆರೆದ ಬಲ್ಲಿದನೂ  ಸೇರುವುದು ಒಂದೇ ಮಣ್ಣನ್ನು. ಹಾಗಾಗಿ ಅರ್ಥವಿಲ್ಲದ ಅಹಂಕಾರ, ದ್ವೇಷ, ಕೋಪದಂತಹ ಭಾವಗಳು ಬದುಕಿಗೆ ಬೇಡ’ ಎನ್ನುವ ಸಂದೇಶವನ್ನು ಸಾರುವ ಸುಂದರ ಚಿತ್ರ. ಆದರೂ ಅದರ ಮೂಲ ಸಾರವನ್ನು ಗ್ರಹಿಸದ ಅನೇಕರು ಸಿರಿವಂತಿಕೆಯೆಡೆಗಿನ ದ್ವೇಷವನ್ನು ಅಭಿವ್ಯಕ್ತಿಸುವ ಚಿತ್ರವದು ಎಂದುಕೊಂಡುಬಿಡುವುದು ಮಾತ್ರ ದುರಂತ. ಇಲ್ಲಿ ಹೇಳುತ್ತಿರುವುದು ಒಂದು ಚಿತ್ರದ ಉದಾಹರಣೆಯಷ್ಟೇ. ಬದುಕಿನ ಭ್ರಮೆಗಳನ್ನು ವರ್ಣಿಸುವ ಚಿತ್ರಗಳನ್ನು, ಬಾಳಿನ ಭಾÅಂತಿಯನ್ನು ವಿವರಿಸುವ ಲೇಖನಗಳನ್ನು ಕಂಡಾಗಲೆಲ್ಲ ಬಹಳಷ್ಟು ಮಂದಿ ಅದನ್ನು ಸಿರಿವಂತಿಕೆಯ ಅಪಹಾಸ್ಯಕ್ಕೆ ಬಳಸಿಕೊಳ್ಳುವುದು ನಿಜಕ್ಕೂ ದುರದೃಷ್ಟವೇ.

ಅದೇಕೋ ಗೊತ್ತಿಲ್ಲ, ನಮ್ಮಲ್ಲಿ ಬಹಳ ಜನರಿಗೆ ಸಿರಿವಂತಿಕೆಯೆಡೆಗೆ ವಿನಾಕಾರಣ ಸಿಟ್ಟು. ಬಡತನದೆಡೆಗೆ ಅಕಾರಣ ಪ್ರೀತಿ. ಸಿರಿವಂತರೆಲ್ಲರೂ ದುಷ್ಟರು, ಬಡವರೆಲ್ಲರೂ ಒಳ್ಳೆಯವರು ಎನ್ನುವ ಭಾವ. ಅದೇ ಕಾರಣಕ್ಕೋ ಏನೋ ಎನ್ನುವಂತೆ ನಮ್ಮ ಬಹುತೇಕ ಸಿನಿಮಾಗಳಲ್ಲೂ ನಾಯಕ ಬಡವ, ಖಳನಾಯಕ ಕೋಟ್ಯಧೀಶ. ಯಾಕೆ ಹೀಗೆ ಎನ್ನುವುದನ್ನು ಬಹುಶಃ ಇಂದಿಗೂ ಯಾರೂ ಯೋಚಿಸಿದಂತಿಲ್ಲ. ಸುಮ್ಮನೇ ಯೋಚಿಸಿ ನೋಡಿ, ಬಡತನವನ್ನು ಪ್ರೀತಿಸುವುದಕ್ಕೆ, ಮೆಚ್ಚುವುದಕ್ಕೆ ಸರಿಯಾದ ಒಂದು  ತರ್ಕ ಇದೆಯಾ? ಬಡವರನ್ನು ಪ್ರೀತಿಸಬಹುದಾಗಲಿ, ಬಡತನವನ್ನೇ ಪ್ರೀತಿಸುವುದಕ್ಕೆ ಕಾರಣವೇನಿದೆ? ಅದೇನು ಸುಖ ಕೊಡುತ್ತದೆ ಬಡತನ? ಯಾವ ಸಂತೋಷವಡಗಿದೆ ಅದರಲ್ಲಿ? ಎಂಬ ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಿ. ತಕ್ಷಣಕ್ಕೆ ತಡಬಡಾಯಿಸಬೇಕಾಗಬಹುದು ಉತ್ತರಕ್ಕೆ.

ಇವೇ ಪ್ರಶ್ನೆಗಳನ್ನು ಉಳಿದವರಿಗೆ ಕೇಳಿ ನೋಡಿ. ನಮಗೆ ಎದುರಾಗುವುದು ಮತ್ತದೇ ಭಾವುಕ ಜವಾಬುಗಳು, “ದುಡ್ಡಿದ್ದವನು ರಾತ್ರಿಗಳಲ್ಲಿ ನೆಮ್ಮದಿಯಿಂದ ನಿದ್ರಿಸಲಾರ, ಆದರೆ ಭಿಕ್ಷುಕನನ್ನು ನೋಡಿ ಸ್ವಲ್ಪವೂ ಚಿಂತೆಯಿಲ್ಲದೆ ನೆಮ್ಮದಿಯಿಂದ ನಿದ್ರಿಸಿ ಬಿಡ್ತಾನೆ’ ಎಂದುಬಿಡುತ್ತಾರೆ ಒಂದಷ್ಟು ಜನ. ಹಾಗೆ ಮಾತನಾಡುವವರು ರಾತ್ರಿಗಳಲ್ಲಿನ ಭಿಕ್ಷುಕನ ಪರಿಸ್ಥಿತಿಯನ್ನು ಕಂಡಿರುವುದೇ ಅನುಮಾನ. ಅದೆಲ್ಲಿ ಸಂತೃಪ್ತಿಯಿಂದ ನಿದ್ರಿಸುತ್ತಾನೆ ಭಿಕ್ಷುಕ? ರಾತ್ರಿಯ ಮೈ ನಡುಗಿಸುವ ಚಳಿಯಲ್ಲಿ ಹೊದ್ದುಕೊಂಡು ಮಲಗಲು ಕನಿಷ್ಟ ಬೆಚ್ಚನೆ ಉಡುಪುಗಳು ಅವನಿಗಿಲ್ಲ. ಯಾರೋ ದಾನವಾಗಿ ಕೊಟ್ಟ, ಬಣ್ಣಗೆಟ್ಟ ಮಾಸಲು ರಜಾಯಿಯನ್ನೇ ಮೈಮೇಲೆ ಎಳೆದುಕೊಂಡು ಚಳಿಯಿಂದ ತಪ್ಪಿಸಿಕೊಳ್ಳುವ ವಿಫ‌ಲ ಪ್ರಯತ್ನದಲ್ಲಿ ಇರುತ್ತಾನೆ. ನೆತ್ತಿಯ ಮೇಲೊಂದು ಸೂರಿಲ್ಲದೆ ಎಲ್ಲೆಂದರಲ್ಲಿ ಮಲಗುವ ಅವನು ಎಷ್ಟೋ ಸಲ ರಾತ್ರಿ ಪಾಳಿಯ ಪೋಲಿಸರಿಂದ ಏಟು ತಿಂದು ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಓಡುತ್ತಿರುತ್ತಾನೆ. ಮಳೆ ಬಂದರಂತೂ ಅವನ ಗತಿ ಅಧೋಗತಿಯೇ. ಮತ್ತೆಲ್ಲಿಯ ನೆಮ್ಮದಿ?

“ನಾನು ಬಡತನವನ್ನ ದ್ವೇಷಿಸುತ್ತೇನೆ. ಬಡತನ ನನ್ನ ಕಡುವೈರಿ. ಪ್ರಪಂಚದಿಂದ ಸಂಪೂರ್ಣವಾಗಿ ನಾಶವಾಗಬೇಕು ಬಡತನ ಎನ್ನುತ್ತೇನೆ ನಾನು. ಹೀಗೆಂದಾಕ್ಷಣ ನಾನು ಬಡವರ ದ್ವೇಷಿ ಎಂದು ಅನೇಕರು ಭಾವಿಸಿಬಿಡುತ್ತಾರೆ. ನಾನು ದ್ವೇಷಿಸುವುದು ಬಡತನವನ್ನು ಮಾತ್ರ. ಬಡತನವಿದ್ದಷ್ಟೂ ಕಾಲ ಮನುಷ್ಯನಲ್ಲೊಂದು ಆಧ್ಯಾತ್ಮಿಕ ಬೆಳವಣಿಗೆ ಅಸಾಧ್ಯ. ಹಸಿದ ಹೊಟ್ಟೆ ಸದಾಕಾಲ ಅನ್ನದ ಬಗ್ಗೆ ಯೋಚಿಸುತ್ತದೆಯೇ ಹೊರತು, ಅಧ್ಯಾತ್ಮದ ಬಗ್ಗೆ, ಜ್ಞಾನೋದಯದ ಬಗ್ಗೆ ಆಲೋಚಿಸುವುದು ಸಾಧ್ಯವೇ ಇಲ್ಲ. ಮನುಷ್ಯನ ಸರ್ವತೋಮುಖ ಅಭಿವೃದ್ಧಿಗೆ ಬಡತನದಷ್ಟು ಅಪಾಯಕಾರಿ ಶತ್ರು ಇನ್ನೊಂದಿಲ್ಲ’ ಎನ್ನುತ್ತಾರೆ ರಜನೀಶ್‌ ಓಶೋ.

“ಗಾಂಧೀಜಿಯವರಲ್ಲಿ ಅನೇಕ ಅದ್ಭುತ ಗುಣಗಳಿದ್ದವು. ಆದರೆ ನಮಗೆ ಅವರ ಉಳಿದ ಗುಣಗಳು ನಗಣ್ಯ. ರೈಲುಗಳಲ್ಲಿ ಅವರು ಮೂರನೇ ದರ್ಜೆಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು ಎಂದಾಕ್ಷಣ ಏಕಾಏಕಿ ಅವರನ್ನು ಆಹಾ ಎಂಥ ಮಹಾತ್ಮರಲ್ಲವಾ ಎಂದು ಹೊಗಳಿಬಿಡುತ್ತೇವೆ. ಇದೊಂದು ಅರ್ಥವಿಲ್ಲದ ಭಾವ. ಪ್ರಥಮ ದರ್ಜೆಯಲ್ಲಿ ಹೋಗುವ ಅವಕಾಶವಿದ್ದೂ ತೃತೀಯ ದರ್ಜೆಯಲ್ಲಿ ಕಷ್ಟಪಟ್ಟು, ಸರಿಯಾಗಿ ನಿಲ್ಲುವುದಕ್ಕೂ ಆಗದ ಜನ ಜಂಗುಳಿಯಲ್ಲೇಕೆ ಹೋಗುತ್ತಿದ್ದರು ಗಾಂಧೀಜಿ ಎಂದು ಯಾರಾದರೂ ಪ್ರಶ್ನಿಸಿದ್ದೇವಾ? ನೆಮ್ಮದಿಯ ಅವಕಾಶವಿದ್ದೂ ಒದ್ದಾಟವನ್ನೇ ಬಯಸುತ್ತಿದ್ದ ಮೋಹನದಾಸರದ್ದು ಮೂರ್ಖತನದ ನಡೆ ಎಂದು ಖಡಾಖಂಡಿತವಾಗಿ ನುಡಿದಿದ್ದೇವಾ? ಖಂಡಿತ ಇಲ್ಲ. ಏಕೆಂದರೆ ನಮಗೆ ಭಯವಿದೆ. ರಾಷ್ಟ್ರಪಿತನ ಬಗ್ಗೆ ಮಾತನಾಡಿದರೆ ಏನೆಂದುಕೊಳ್ಳುತಾರೋ ಎನ್ನುವ ಭಯವಲ್ಲ. ಬದಲಿಗೆ  ನೆಮ್ಮದಿಯನ್ನು, ಸುಖವನ್ನು ಪ್ರಶಂಸಿಸಿಬಿಟ್ಟರೆ, ಜನ ನಮ್ಮನ್ನು ಬಡತನದ ವಿರೋಧಿಗಳು ಎಂದುಬಿಟ್ಟಾರು ಎನ್ನುವ ಆತಂಕ. ನರಳುವಿಕೆಯನ್ನೇ ಶ್ರೇಷ್ಠ ಎಂದು ಭಾವಿಸಿಕೊಂಡುಬಿಟ್ಟಿದ್ದೇವೆ ನಾವು. ಬಡವರಾಗಿ ಬದುಕುವುದೇ ಸರಳತೆ ಎನ್ನುವುದು ನಮ್ಮ ಭಾವನೆ. ಮೂಲದಲ್ಲೆಲ್ಲೋ ನಮ್ಮ ಆಲೋಚನಾಧಾಟಿಯಲ್ಲೆ ದೊಡ್ಡದ್ದೊಂದು
ದೋಷವಿದೆ’ ಎಂಬ ರಜನೀಶರ ಸಾಲುಗಳು ತುಂಬ ಆಲೋಚಿಸುವಂತೆ ಮಾಡಿಬಿಡುತ್ತವೆ ಕೆಲವೊಮ್ಮೆ.

ವಿಚಿತ್ರವೆಂದರೆ, ಬಡತನದ ಬಗ್ಗೆ ಪುಂಖಾನುಪುಂಖವಾಗಿ ಹೊಗಳುವವರೆಲ್ಲರೂ ಬಡವರು ಅಥವಾ ಕೆಳ ಮದ್ಯಮ ವರ್ಗದವರು ಎನ್ನುವುದು ಮಾತ್ರ ಗಮನಾರ್ಹ. ಒಬ್ಬೇ ಒಬ್ಬ ಸಿರಿವಂತನ ಬಾಯಲ್ಲಿ ಬಡತನದ ಸುಖದ ವರ್ಣನೆಯನ್ನು ನೀವು ಕೇಳಿರುವುದಕ್ಕೆ ಸಾಧ್ಯವೇ ಇಲ್ಲ. ಹೋಗಲಿ, ಬಡತನದ ಮಹಾನತೆಯನ್ನು ಸಾರುವ ಜನಕ್ಕೆ ನಿಜಕ್ಕೂ ಬಡತನದಲ್ಲೇ ತೃಪ್ತಿಯಿದೆಯೇ ಎಂದುಕೊಂಡರೆ ಅವರ ಮಾತಿಗೂ, ಕೃತಿಗೂ ಅಜಗಜಾಂತರ. ರಸ್ತೆಯಲ್ಲೊಂದು ಐಷಾರಾಮಿ ಕಾರು ಹಾದುಹೋದರೆ ಅದನ್ನೇ ದಿಟ್ಟಿಸುತ್ತ ನಿಂತುಬಿಡುತ್ತಾನೆ ಬಡತನ ಪ್ರೇಮಿ. ಸುಂದರವಾದ ಬಂಗಲೆಗಳೆದುರು ನಿಂತು ನಿಟ್ಟುಸಿ ರಾಗುತ್ತಾನೆ ಬಡತನದ ಸಮರ್ಥಕ. ಯಾರಧ್ದೋ ಕೈಯಲ್ಲಿ ಲೆಕ್ಕವಾಗುವ ಸಾವಿರಾರು ರೂಪಾಯಿಗಳು, ಇನ್ಯಾರಧ್ದೋ  ಮಣಿಕಟ್ಟಿನಲ್ಲಿ ಕಾಣುವ ಬೆಲೆಬಾಳುವ ವಾಚುಗಳು, ಕತ್ತಿನ ಚಿನ್ನದ ಚೈನುಗಳು, ದುಬಾರಿ ಮೊಬೈಲುಗಳು ಸಣ್ಣದ್ದೊಂದು ಕೀಳರಿಮೆ ಮೂಡಿಸಿಬಿಡುತ್ತವೆ ಅವನಲ್ಲಿ. ಹೀಗೆ ಮನಸಿನಲ್ಲಿ ನೂರು ಆಸೆಗಳಿದ್ದೂ ಬಡತನವೇ ಶೇಷ್ಠವೆನ್ನುವ ಅವನ ಹೊಗಳಿಕೆ ನಿರಾಶಾವಾದದ ಪ್ರತೀಕವೇ ಹೊರತು ಬೇರೇನೂ ಆಗಲಾರದು ಅಲ್ಲವೇ..?

ಮರಣದ ನಂತರ ಸೇರುವುದು ಮಣ್ಣನ್ನೇ ಎನ್ನುವುದು ಇಂಥವರ ಮತ್ತೂಂದು ಪೊಳ್ಳುವಾದ. ಸತ್ತ ಮೇಲೆ ಎಲ್ಲರೂ ಗೋರಿಯೊಳಕ್ಕೇ ಹೋಗಬೇಕು ಎನ್ನುವುದೇನೋ ನಿಜ. ಆದರೆ ಹುಟ್ಟು, ಸಾವಿನ ನಡುವೆ ಒಂದು ದೊಡ್ಡ ಅಂತರವಿದೆಯಲ್ಲ,ಆ ಸಮಯವನ್ನು ಏನು ಮಾಡ್ತಿರಿ? ಅಲ್ಲಿ ಬಾಲ್ಯವಿದೆ, ಬಾಲ್ಯ, ಹದಿಹರೆಯ ಮುಗಿದ ನಂತರದ ಯೌವನವಿದೆ. ಯೌವನಕ್ಕೊಂದಷ್ಟು ಕನಸುಗಳಿವೆ. ಹೆತ್ತವರು, ಕಟ್ಟಿಕೊಂಡವರ ಜವಾಬ್ದಾರಿಗಳಿವೆ, ಅಲ್ಲಿಷ್ಟು ಸುತ್ತಬೇಕು, ಭಯಂಕರ ದೊಡ್ಡದಲ್ಲದಿದ್ದರೂ ಸಣ್ಣದ್ದೇನೋ  ಕೊಳ್ಳಬೇಕು, ಅಲ್ಲೆಲ್ಲೋ ಗೂಡು ಕಟ್ಟಬೇಕು ಎನ್ನುವ ಆಸೆಗಳಿವೆ, ಕೋಪತಾಪಗಳಿವೆ, ಮುಖ್ಯವಾಗಿ ಬೆನ್ನುಬಿದ್ದು ಕಾಡುವ ಹಸಿವುಗಳಿವೆ. ಈ ಎಲ್ಲ ಅಂಶಗಳಿಗೆ ಬಡತನ ಹೇಗೆ ಪೂರಕವಾದೀತು? ಎಲ್ಲದಕ್ಕೂ “ಬಡತನದ ಗುಡಿಸಲಿನ ಸುಖ, ಸಿರಿವಂತಿಕೆಯ ಮಹಲುಗಳಲ್ಲಿಲ್ಲ’ ಎಂಬ ತತ್ವವೇ ಉತ್ತರವಾದೀತಾ?

ಬದುಕಿನ ನಿರರ್ಥಕತೆಯ ಸಿದ್ಧಾಂತವನ್ನು ಬಡತನದ ಸಮರ್ಥನೆಗೆ ಬಳಸಿಕೊಳ್ಳಬೇಡಿ. ಐಹಿಕ ಸುಖಭೋಗಗಳನ್ನು ತೊರೆದು ಕಾಡಿನಲ್ಲೆಲ್ಲೋ ವಾಸಿಸುವ ಸನ್ಯಾಸಿಯೋ, ಮುನಿಯೋ ನೀವಾಗಿರದೆ, ಪ್ರಾಪಂಚಿಕ ವ್ಯವಹಾರದ ನಡುವೆಯೇ ಬದುಕುವವರಾಗಿದ್ದರೇ ಬಡತನ ಒಂದು ಶಾಪವೇ. ಖಂಡಿತ ವಾಗಿಯೂ ಪ್ರೀತಿಸಲು ಯೋಗ್ಯವಲ್ಲದ್ದು ಅದು. ಬಡತನವಿದ್ದರೆ ಅದನ್ನು ಮನೆಯಿಂದಾಚೆ ತಳ್ಳಲು ಪ್ರಯತ್ನಿಸಬೇಕು. ಹೀಗೆಂದಾಕ್ಷಣ ದಟ್ಟ ದಾರಿದ್ರÂದಲ್ಲಿ ಬದುಕುವ ಜನರೆಲ್ಲರೂ ಒಂದೇ ಏಟಿಗೆ ಕೋಟ್ಯಾಧಿಪತಿಗಳಾಗಲು ಹೊರಟು ನಿಲ್ಲಬೇಕು ಎನ್ನುವುದು ಈ ಬರಹದ ತಾತ್ಪರ್ಯವಲ್ಲ. ಆದರೆ ಕಿತ್ತುತಿನ್ನುವ ಬಡತನದ ಮೇಲೆ ಜಗಳಕ್ಕೆ ನಿಲ್ಲಬೇಕು, ಹಂತಹಂತವಾಗಿ ಅದನ್ನು ಸೋಲಿಸುತ್ತ ಸಿರಿವಂತಿಕೆಯೆಡೆಗೆ ನಡೆಯಬೇಕು. ತೀರ ಕೋಟ್ಯಾಧಿಪತಿಯಾಗಲು ಎಲ್ಲರಿಗೂ ಸಾಧ್ಯವಿರದಿದ್ದರೂ ಒಂದು ತಕ್ಕಮಟ್ಟಿನ ಬದುಕು ಕಟ್ಟಿಕೊಳ್ಳುವುದು ಖಂಡಿತ ಸಾಧ್ಯವಿದೆ. ಅದನ್ನು ಬಿಟ್ಟು, ಪರಿಸ್ಥಿತಿಯ ಎದುರುನಿಂತು ಹೋರಾಡದೇ, ದುಸ್ಥಿತಿಯನ್ನೇ ಅಪ್ಪಿಕೊಂಡು “ಬಡತನವೇ ನಮ್ಮ ಆಸ್ತಿ’ ಎಂದು ಹಲುಬಬಾರದು.

ಸುಮ್ಮನೇ ಕೃಷ್ಣನನ್ನೊಮ್ಮೆ ನೆನಪಿಸಿಕೊಳ್ಳಿ. ಭಗವದ್ಗೀತೆಯನ್ನು ಬೋಧಿಸಿದ ಕೃಷ್ಣ ಬದುಕಿನ ನಶ್ವರತೆಯನ್ನು ಅರಿತುಕೊಂಡಿದ್ದವನು. ಸಾವು ಬದುಕಿನ ಚಕ್ರವನ್ನು ವಿವರಿಸಿದವನು. ಹಾಗೆಂದು ತನ್ನ ಬದುಕನ್ನು ನಿಸ್ಸಾರವಾಗಿ ಕಳೆಯಲಿಲ್ಲ ಆತ. “ಪುನರಪಿ ಮರಣಂ, ಪುನರಪಿ ಜನನಂ’ ಎಂದು ನುಡಿದ ಪಾರ್ಥಸಾರಥಿ ಜೊತೆಜೊತೆಗೆ ಕರ್ಮಯೋಗದ ಸಿದ್ಧಾಂತವನ್ನೂ ವಿವರಿಸಿದವನು. ತನಗೆ ಜೀವನದ ಅರ್ಥಹೀನತೆಯ ಅರಿವಿದೆ ಎನ್ನುವ ಮಾತ್ರಕ್ಕೆ ವೈರಾಗಿಯಾಗಲಿಲ್ಲ ಅವನು. “ಅಯ್ಯೋ ಇÇÉೇನಿದೆ ಮಣ್ಣು , ಎಲ್ಲವೂ ನಶ್ವರ’ ಎನ್ನುತ್ತ ನಿರಾಶಾವಾದಿಯಾಗಿ ಬದುಕಲಿಲ್ಲ. ಬಾಳಿನ ಪ್ರತಿ ಕ್ಷಣವನ್ನೂ ಮತ್ತೆ ಸಿಗದ ಕ್ಷಣವಿದು ಎನ್ನುವಂತೆ ಪ್ರೀತಿಸಿಬಿಟ್ಟ. ಗೆಳೆಯರೊಂದಿಗೆ ಸೇರಿಕೊಂಡು ಮುಗ್ಧ ಕಳ್ಳತನಗಳನ್ನು ಮಾಡಿದ, ಕೊಳಲೂದುತ್ತ ಹಾಡು ಹಾಡಿದ, ಸಾಧ್ಯವಾದಾಗ ಗೋಪಿಕೆಯ ರೊಂದಿಗೆ ನಾಟ್ಯವಾಡಿದ, ರಾಜಧರ್ಮ ಪರಿಪಾಲಿಸಿದ,ಅನ್ಯಾಯದ ವಿರುದ್ಧ ಹೋರಾಟಕ್ಕೆ ನಿಂತ, ಶಿಷ್ಟ ರಕ್ಷಣೆ, ದುಷ್ಟ ಶಿಕ್ಷಣೆಯ
ತತ್ವಕ್ಕೆ ಕಟಿಬದ್ಧನಾಗಿ ನಿಂತ.. ಬದುಕಿನ ನಶ್ವರತೆಯನ್ನು ತಿಳಿದುಕೊಂಡೇ ಯಾರಿಂದಲೂ ಸಾಧ್ಯವಾಗದಷ್ಟು ಉತ್ಕಟವಾಗಿ ಬದುಕಿಬಿಟ್ಟ.

ಹಾಗಿದ್ದ  ಮುರಳೀಧರ ನಂತಾಗಬೇಕು ಬದುಕು. ಬದುಕಿದ್ದಷ್ಟೂ ದಿನ ಉತ್ಕಟವಾಗಿ ಬದುಕಿಬಿಡಬೇಕು. ಇಲ್ಲಿ ಈಸಬೇಕು, ಜಯಿಸಬೇಕು, ಹಂಬಲಿಸುವ ಸಂತೋಷಗಳ ಪೂರೈಕೆಗೆ ಪಣ ತೊಡಬೇಕು, ಗೆದ್ದು ನಿಲ್ಲಬೇಕು. ಅದರ ಬದಲಾಗಿ  ನರಳಾಡುವಿಕೆಯನ್ನೇ ಬದುಕಾಗಿಸಿಕೊಳ್ಳಬಾರದು. ನರಳುವಿಕೆಯೇ ಸುಖವೆನ್ನುವ ಭ್ರಮೆಗೆ ಬೀಳಬಾರದು.

– ಗುರುರಾಜ ಕೊಡ್ಕಣಿ

ಟಾಪ್ ನ್ಯೂಸ್

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.