ಸಾಮಾನ್ಯ ಜನಸಮೂಹದ ಧರ್ಮ

Team Udayavani, Jun 29, 2019, 5:41 AM IST

ಧರ್ಮ ಎಂದರೇನು?
ಈ ಪ್ರಶ್ನೆಗೆ ಉತ್ತರ ಹುಡುಕಿ ಇನ್ನೂ ಕೊನೆ ಮುಟ್ಟಿದವರಿಲ್ಲ ಎಂದೆನಿಸುತ್ತದೆ. ಇಂದಿಗೂ ಉಳಿದಿರುವ ಧರ್ಮ ಸಂಘರ್ಷ. ವಿಸ್ತಾರವಾಗಿ ಚಾಚಿಕೊಳ್ಳುತ್ತಿರುವ ಧರ್ಮೋದ್ಯಮಿಗಳ ಕಬಂಧಬಾಹು ಈ ಗ್ರಹಿಕೆಗೆ ಆಧಾರ. ‘ಧರ್ಮ’ ಎಂಬ ಪದದ ಅರ್ಥ ಬಹಳ ವಿಸ್ತಾರವಾದುದು. ಸಾಮಾನ್ಯವಾಗಿ ಬಿಟ್ಟಿಯೂಟ ಮಾಡಿದವನು ಧರ್ಮಕ್ಕೆ ಒಂದು ಊಟ ಸಿಕ್ಕಿತು ಎಂದು ಉದ್ಗರಿಸುತ್ತಾನೆ. ಉಚಿತವಾಗಿ ಒಂದು ವಸ್ತುವನ್ನು ಪಡೆದವನು ಇದು ಧರ್ಮಕ್ಕೆ ಸಿಕ್ಕಿತು ಎಂದು ಹೇಳುತ್ತಾನೆ. ಆದರೆ ಪುಕ್ಕಟೆ ಎಂಬುದೇ ಧರ್ಮವಲ್ಲ. ಅದರ ವ್ಯಾಪ್ತಿ ವೇದವೇದಾಂತಗಳ ಆಚೆಗೂ ಹಿಗ್ಗಿದೆ. ಸೂಕ್ಷ್ಮವಾಗಿ ಯೋಚಿಸಿದರೆ ಸರಳವಾಗಿ ಫ‌ಲಾಪೇಕ್ಷೆ ಇಲ್ಲದ ಕರ್ಮವೇ ‘ಧರ್ಮ’ ಎಂದು ನಾವು ಗ್ರಹಿಸಬಹುದು. ಬಿತ್ತಿದ್ದೆಲ್ಲಾ ಬೆಳೆಯುತ್ತದೆಯೆಂದು ರೈತ ಹೊಲದಲ್ಲಿ ಬೆವರು ಚೆಲ್ಲುವುದಿಲ್ಲ. ಫ‌ಲಾಪೇಕ್ಷೆ ಇಲ್ಲದ ಕರ್ಮಕ್ಕೆ ಇದು ಅತ್ಯುತ್ತಮ ಉದಾಹರಣೆ.

ಧರ್ಮ ಏಕೆ ಬೇಕು?
ಜೀವ ವಿಕಾಸವಾದಿಗಳ ಪ್ರಕಾರ ಉಳಿದ ಪ್ರಾಣಿಗಳಂತೆ ಮನುಷ್ಯನೂ ಒಂದು ಪ್ರಾಣಿ. ‘ಸಾಮಾಜಿಕ ಪ್ರಾಣಿ’. ಆದರೆ ತತ್ವಾನ್ವೇಷಿಗಳು ಆತನ ಮೂಲನಿವಾಸ ಎಲ್ಲೋ ಮುಗಿಲಿನಾಚೆ ಇದೆಯೆಂದು ತಿಳಿಯಲು ಪ್ರಯತ್ನಿಸಿದ್ದಾರೆ. Di- oxy ribo Nucleic Acid (D.N.A.)ಜೀವಸೃಷ್ಟಿಗೆ ಕಾರಣವೆಂಬುದು ವೈಜ್ಞಾನಿಕ ಮತ. ದೈವಾಂಶ ಸಂಭೂತ ಆತನೆಂದು ತತ್ವಜ್ಞಾನಿಗಳ ಮತ. ಮನುಷ್ಯ ಆಕಾಶದಾಚೆಯಿಂದ ಬಂದಿರಲಿ, ನಿಸರ್ಗದ ಶಕ್ತಿಯಿಂದ ಹುಟ್ಟಿರಲಿ, ಬುದ್ಧಿ ದುರ್ಬುದ್ಧಿಯಾಗುವ, ವಿವೇಕ ಅವಿವೇಕವಾಗುವ ಗುಣವೂ ಆತನಲ್ಲಿರುವುದರಿಂದ ಆತನಿಗೆ ಕಡಿವಾಣ ಹಾಕಲು ಧರ್ಮ ಅನಿವಾರ್ಯ. ಮನುಷ್ಯ ತನ್ನಲ್ಲಿರುವ ಮೃಗತ್ವವನ್ನು ತೊರೆದು ಮನುಷ್ಯತ್ವದಿಂದ ಬಾಳುವಂತೆ ಮಾಡುವ ಸಂಸ್ಕಾರವೇ ಧರ್ಮ. ಇದನ್ನು ಅನೇಕ ದಾರ್ಶನಿಕರು ಹೇಳಿದರು. ಆದರೂ ಇಂದಿಗೂ ಕೆಲವು ಧಾರ್ಮಿಕರೆಂಬವರಲ್ಲಿ ಮನುಷ್ಯತ್ವ ಹುಡುಕಿದರೂ ಸಿಗುವುದಿಲ್ಲವೆಂಬುದು ಸ್ಪಷ್ಟ. ಅಧ್ಯಾತ್ಮ ಸಾಧಕರ ದರ್ಶನ, ಸಿದ್ಧಾಂತ, ತತ್ವ ಬುದ್ಧನಿಂದ ಧರ್ಮ ಎಂದು ಕರೆಯಲ್ಪಟ್ಟಿತು. ಇವೆಲ್ಲವೂ ನಮಗೆ ಧರ್ಮವನ್ನು ತೋರುವ ಕೈ ದೀವಿಗೆಗಳು. ‘ಧರ್ಮ’ ಎಂಬುದು ದರ್ಶನ, ಸಿದ್ಧಾಂತ, ಮತ, ಪಂಥಗಳ ವ್ಯಾಪ್ತಿಯನ್ನು ಮೀರಿ ನಿಂತಿದೆ. ಧರ್ಮ ಮನುಕುಲಕ್ಕೆ ಅನಿವಾರ್ಯ. ಏಕೆಂದರೆ ಮನುಷ್ಯನನ್ನು ಹೊರತುಪಡಿಸಿ ಮಿಕ್ಕ ಪ್ರಾಣಿಗಳಿಂದ ಜೀವಸಂಕುಲದ ತಾಯಿಯಾದ ಪ್ರಕೃತಿಗೆ ಯಾವುದೇ ತೊಂದರೆಗಳಿಲ್ಲ. ನಿಸರ್ಗಕ್ಕೆ ರಾಕ್ಷಸರೂಪಿಯಾದ ಪ್ರಾಣಿ ಮನುಷ್ಯ ಮಾತ್ರ. ತಾನು ಮಾತ್ರ ಈ ಜಗತ್ತಿನಲ್ಲಿ ಬದುಕಬೇಕೆಂಬ ಆತನ ಅವಿವೇಕತನದಿಂದ ಆತ ಸರ್ವನಾಶವಾಗುವುದನ್ನು ತಪ್ಪಿಸುವ ಶಕ್ತಿಯೇ ಧರ್ಮ. ಆದುದರಿಂದ ವೈಜ್ಞಾನಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಧರ್ಮಕ್ಕೆ ಮಹತ್ವವಿದೆ.

ಯಾವುದು ಧರ್ಮ?
ತರ್ಕೋ ಪ್ರತಿಷ್ಠಾ ಶ್ರುತಯೋ ವಿಭಿನ್ನ ನೈಕೋ ಋಷಿರ್ಯಸ್ಯ ವಚಃ ಪ್ರಮಾಣಮ್‌

ಧರ್ಮಸ್ಯ ತತ್ವಂ ನಿಹಿತಂ ಗುಹಾಯಾಮ್‌ ಮಹಾಜನೋಯೇನ ಗತಸಃ ಪಂಥಾ

ಮಹಾಭಾರತದಲ್ಲಿ ಧರ್ಮದ ಬಗೆಗೆ ಯಕ್ಷನ ಪ್ರಶ್ನೆಗೆ ಧರ್ಮರಾಜ ಕೊಟ್ಟ ಈ ಉತ್ತರವೇ ಧರ್ಮಕ್ಕೆ ಸಾರ್ವಕಾಲಿಕ, ಸಾರ್ವದೇಶಿಕ, ಸಾರ್ವಜನಿಕ ಮೌಲ್ಯವುಳ್ಳ ಅರ್ಥಪೂರ್ಣ ಉತ್ತರವೆಂದು ನನ್ನ ಗ್ರಹಿಕೆ. ಆತನ ಅಭಿಪ್ರಾಯದಂತೆ ‘ಧರ್ಮ’ ತರ್ಕಕ್ಕೆ ನಿಲುಕುವಂಥದ್ದಲ್ಲ. ಈ ಮಾತನ್ನು ನಾವೂ ಮನನ ಮಾಡೋಣ. ತರ್ಕ ಪ್ರವೀಣ ಮಾತಿನ ಕುಶಲತೆಯಿಂದ ಮೇಲುಗೈ ಸಾಧಿಸಬಹುದು. ವಿಷವನ್ನು ಅಮೃತವೆಂದೂ ಮಾತಿನ ಜಾಣ್ಮೆಯಿಂದ ಸ್ಥಾಪಿಸಬಹುದು. ಆದರೆ ಅದೇ ವಿಷವನ್ನು ಆತ ಕುಡಿದರೆ ಸಾಯದಿರುವನೇ? ವೇದಾಂತದ ಮಾತುಗಳು ವಿಭಿನ್ನವಾಗಿವೆ. ಅನೇಕ ಋಷಿಗಳು ಧರ್ಮದ ಬಗೆಗೆ ವಿವರಣೆ ನೀಡಿದ್ದಾರೆ. ಋಷಿಗಳಲ್ಲೇ ಭಿನ್ನಾಭಿಪ್ರಾಯವಿರುವುದರಿಂದ ಅದನ್ನು ಪೂರ್ಣ ಪ್ರಮಾಣವೆಂದು ಸ್ವೀಕರಿಸಲಾಗುವುದಿಲ್ಲ. ಒಂದೇ ಸತ್ಯ ದಾರ್ಶನಿಕರಿಗೆ ಅದ್ವೈತವಾಗಿ, ವಿಶಿಷ್ಟಾದ್ವೈತವಾಗಿ ದ್ವೈತವಾಗಿ ಕಾಣಿಸಿದ್ದು ನಮ್ಮೆದುರೇ ಇದೆ. ಧರ್ಮದ ತತ್ವ ಗುಹೆಯೊಳಗಿರುವ ನಿಧಿಯಂತೆ ಎಂಬುದು ಧರ್ಮರಾಯನ ಮಾತು. ಈ ಮಾತಿನ ಗೂಢಾರ್ಥ ನಮ್ಮಂಥವರ ಗ್ರಹಿಕೆಗೆ ನಿಲುಕದ್ದು. ಆದುದರಿಂದ ಅದು ಪೂರ್ಣ ಅಗೋಚರ ಎಂದು ಗ್ರಹಿಸಬಹುದು. ಆದರೂ ಧರ್ಮದ ತತ್ವ ತಿಳಿಯಬಯಸುವವನಿಗೆ ಧೈರ್ಯ,ಸ್ಥೈರ್ಯಗಳು ಮುಖ್ಯವೆಂದು ಅಧ್ಯಾಹಾರ ಮಾಡಿಕೊಳ್ಳಬಹುದು. ಡಿ.ವಿ.ಜಿ ಅವರು ಆಡುವುದಕ್ಕೆ ಯಾವುದು ಸತ್ಯವೋ ಅದೇ ಆಚರಿಸುವುದಕ್ಕೆ ಧರ್ಮ. ಆರಾಧನೆಗೆ ದೇವರೂ ಅದೇ ಎಂದು ಹೇಳಿದ್ದಾರೆ. ಸತ್ಯ, ಧರ್ಮ, ದೇವರು ಅವಿನಾದ್ವೈತವಾದದ್ದು. ‘ಧರ್ಮ’ ಎಂಬ ಮಹಾಶಕ್ತಿಯ ಆರಾಧನಾ ರೂಪವಾದ ದೇವರನ್ನು ಆಸ್ತಿಕರೆಲ್ಲರೂ ಆರಾಧಿಸುತ್ತಾರೆ. ಆದರೆ ಪ್ರೇಮದಿಂದ ಆರಾಧಿಸುವವರು ವಿರಳ.

ಹೆಚ್ಚಿನ ದೈವಭಕ್ತರು ದುರಾಸೆಯ ಸ್ವಾರ್ಥಿಗಳು. ಭಯಭೀತರು. ಈ ಜಗತ್ತಿನಲ್ಲಿ ನಮ್ಮ ಅದೃಷ್ಟ-ದುರದೃಷ್ಟಗಳಿಂದ ಸ್ಥಾನ, ಸಂಪತ್ತು, ಸಂಬಂಧ…ಹೀಗೆ ನಮಗೆ ಸಿಗಬೇಕಾದುದು ಸಿಗುತ್ತದೆ. ಕೆಲವೊಮ್ಮೆ ಸಿಕ್ಕಿದ್ದೂ ದಕ್ಕುವುದಿಲ್ಲ. ‘ಪ್ರಾಪ್ತಿ’ ಎಂಬುವುದನ್ನು ತಪ್ಪಿಸಲು ಅಸಾಧ್ಯ. ಅದಕ್ಕಾಗಿ ದೇವರನ್ನೇ ಬೇಡಬೇಕಾದ್ದಿಲ್ಲ. ಕುರುಕ್ಷೇತ್ರದಲ್ಲಿ ಭೀಷ್ಮಾಚಾರ್ಯರನ್ನು ಕೊಲ್ಲಲೆಂದು ಶ್ರೀಕೃಷ್ಣ ಚಕ್ರ ಎತ್ತಿ ಅವರೆಡೆಗೆ ಧಾವಿಸುತ್ತಾನೆ. ಆಗ ಆಚಾರ್ಯರು ಕ್ಯಾರೇ ಅನ್ನಲಿಲ್ಲ. ದೇವರ ಮುಂದೆ ನಮಗೆ ಇಂತಹ ಧೈರ್ಯ ಬೇಕು. ಆಗ ಮಾತ್ರ ನಮಗೆ ಧರ್ಮ ಸಾಕ್ಷಾತ್ಕಾರವಾಗಿದೆಯೆಂದು ತಿಳಿಯಬಹುದು. ಸ್ವಾಮಿ ವಿವೇಕಾನಂದರೂ ಧೈರ್ಯಕ್ಕೆ ಬಹಳ ಪ್ರಾಶಸ್ತ್ಯ ನೀಡಿದ್ದಾರೆ. ಇನ್ನು; ಮಹಾಜನರು ನಡೆದ ದಾರಿಯಲ್ಲಿ ನಡೆಯಬೇಕೆಂಬುದು ಧರ್ಮರಾಯನ ಅಭಿಪ್ರಾಯ. ‘ಮಹಾಜನ’ ಎಂದರೆ ಜನಸಾಮಾನ್ಯರ ಸಮೂಹ. ಆದುದರಿಂದ ಜನಸಾಮಾನ್ಯರು ನಡೆದ ದಾರಿಯಲ್ಲಿ ನಡೆಯುವುದೇ ವಿಹಿತವಾದ ಧರ್ಮ ಎಂದು ನಾವು ಗ್ರಹಿಸಬಹುದು. ಆದುದರಿಂದ ಜನಸಾಮಾನ್ಯರ ಧರ್ಮ ಸಮಾಜದ ಮುಖ್ಯವಾಹಿನಿಯಲ್ಲಿ ಪ್ರಕಾಶದ ಪ್ರವಾಹದಿಂದ ಪ್ರಜ್ವಲಿಸಬೇಕು.

ಸಾಮಾನ್ಯ ಜನರ ಧರ್ಮ
‘ಧರ್ಮ’ ಸಾವಿರ ರೂಪಗಳಿರುವ ಸಾವಿರದ ಶಕ್ತಿ. ‘ಧರ್ಮ’ ಎಂಬ ಪದಕ್ಕೆ ಹಲವಾರು ಅರ್ಥಗಳು. ಅದರಲ್ಲಿ ‘ಸ್ವಭಾವ’ ಎಂಬ ಅರ್ಥವೊಂದೇ ಸಾಕು. ಸಾಮಾನ್ಯ ಜನಸಮೂಹದ ಧರ್ಮದ ದಾರಿಗೆ. ತುಸು ಚಿಂತನೆಗೆ ಒಳಪಡಿಸಿದರೆ ಅದರ ಅರಿವಾದೀತು. ಸ್ವಭಾವ ಎಂಬ ಅರ್ಥದಲ್ಲಿ ಹರಿಯುವುದು ನೀರಿನ ಧರ್ಮ. ಬೀಸುವುದು ಗಾಳಿಯ ಧರ್ಮ. ಉರಿಯುವುದು ಬೆಂಕಿಯ ಧರ್ಮ. ಹಾಗಾದರೆ ಮನುಷ್ಯನ ಧರ್ಮ ಯಾವುದು? ಮೃಗತ್ವವನ್ನು ಮೆಟ್ಟಿನಿಂತು ದೈವತ್ವಕ್ಕೆ ನಿಕಟವಾದ ಮನುಷ್ಯತ್ವದಿಂದ ಬಾಳುವುದು ಎಂದು ಅನಿಸುವುದಿಲ್ಲವೇ? ಅದಕ್ಕೆ ಬೇಕಾಗಿರುವುದು ಜೀವನ ಮೌಲ್ಯಗಳು. ಮತ, ತತ್ವ, ಸಿದ್ಧಾಂತ, ದರ್ಶನಗಳ ಸಾರವೂ ಇದೆ. ಧರ್ಮ ರಕ್ತ ಹರಿಸುವುದಿಲ್ಲ. ಪಕ್ಷಪಾತ ಮಾಡುವುದಿಲ್ಲ. ಮೋಸವನ್ನು ಬಳಿಗೆ ಸುಳಿಯಗೊಡುವುದಿಲ್ಲ. ಪರಸ್ಪರ ಪ್ರೀತಿ ನಂಬಿಕೆಗಳಿಂದ ಬಾಳಲು ಕಲಿಸುತ್ತದೆ. ಹೃದಯದಿಂದ ಹೃದಯಕ್ಕೆ ಪ್ರೀತಿ ಹಂಚುವ ತಂತ್ರಜ್ಞಾನ, ಯಂತ್ರವ್ಯವಸ್ಥೆ ಇದುತನಕ ಬಂದಿಲ್ಲ. ಜನಸಾಮಾನ್ಯರು ಪಾಲಿಸುವ ಈ ಸರಳ ಧರ್ಮ ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದು ಸಮಾಜದಲ್ಲಿ ಸಾಹೋದರ್ಯ ಸಂಬಂಧ ಗಟ್ಟಿಯಾದಾಗ ಧರ್ಮ ರಕ್ಷಿಸಿದವರನ್ನು ರಕ್ಷಿಸುತ್ತದೆ ಎಂಬ ಮಾತು ಅರ್ಥಪೂರ್ಣವಾಗುತ್ತದೆ.

ವ್ಯಕ್ತಿಧರ್ಮ ಮತ್ತು ರಾಷ್ಟ್ರಧರ್ಮ

ಧರ್ಮ ಭಾರತದ ಜೀವಸೆಲೆ. ರಾಷ್ಟ್ರದೊಳಗೆ ನೂರಾರು ಧರ್ಮಗಳಿವೆ. ಇವುಗಳಲ್ಲಿ ನಾವು ಪ್ರಜಾಪ್ರಭುತ್ವದಲ್ಲಿ ನಿಷ್ಠೆಯಿಂದ ಆರಿಸಬೇಕಾದುದು ಎರಡೇ ಧರ್ಮ. ಒಂದು ವ್ಯಕ್ತಿಧರ್ಮ. ಇನ್ನೊಂದು ರಾಷ್ಟ್ರಧರ್ಮ. ಏಸುಕ್ರಿಸ್ತ ತನಗೆ ಅಹಿತ ಮಾಡಿದವರನ್ನು ಕ್ಷಮಿಸಲು ಹೇಳಿದ್ದು ವ್ಯಕ್ತಿಧರ್ಮಕ್ಕೊಂದು ಶ್ರೇಷ್ಠ ಉದಾಹರಣೆ. ‘ದಯೆಯೇ ಧರ್ಮದ ಮೂಲವಯ್ಯ’ಎಂಬ ಬಸವಣ್ಣನವರ ಮಾತು ಕೂಡಾ ಶ್ರೇಷ್ಠ ವ್ಯಕ್ತಿಧರ್ಮ. ಸತ್ಯ, ಅಹಿಂಸೆ, ತ್ಯಾಗ, ದಾನ, ಪರೋಪಕಾರ ಮುಂತಾದ ಮೌಲ್ಯಗಳ ಪಾಲನೆ ವ್ಯಕ್ತಿಧರ್ಮ. ಇದರ ಪಾಲನೆಗೆ ಮತ. ಪಂಥ, ದರ್ಶನಗಳ ಕಗ್ಗಾಡಿನಲ್ಲಿ ಅಲೆಯಬೇಕಾದ್ದಿಲ್ಲ. ಅಂತಸ್ಸಾಕ್ಷಿಯನ್ನು ಕೇಳಿಕೊಂಡರೆ ಸಾಕು. ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಯಾವುದು ಪೂರಕವೋ ಅದು ವ್ಯಕ್ತಿಧರ್ಮವಾದಂತೆ ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ಯಾವುದು ಪ್ರಧಾನವೋ ಅದೇ ರಾಷ್ಟ್ರಧರ್ಮ. ಆದುದರಿಂದ ನಾವು ಆಚರಿಸುವ ಧರ್ಮದಲ್ಲಿ ವಿಧಿ ಧರ್ಮ ಮತ್ತು ನಿಷೇಧ ಧರ್ಮಗಳ ಅವಲೋಕನ ಮಾಡಬೇಕು. ವಿಧಿ ಧರ್ಮ ವ್ಯಕ್ತಿಯ ಬಾಳನ್ನೂ ರಾಷ್ಟ್ರವನ್ನೂ ಬೆಳಗುತ್ತದೆ. ನಿಷೇಧಧರ್ಮ ರಾಷ್ಟ್ರವನ್ನು ಅವನತಿಯ ಅಂಧಕೂಪಕ್ಕೆ ತಳ್ಳುತ್ತದೆ. ಪ್ರತಿಯೊಂದು ರಾಷ್ಟ್ರಕ್ಕೂ ಅದರದ್ದೇ ಆದ ಸಾಂಸ್ಕೃತಿಕ ಪರಂಪರೆಗಳಿರುತ್ತವೆ. ರಾಷ್ಟ್ರೀಯತೆ ಇರುತ್ತದೆ. ಅದರ ರಕ್ಷಣೆ ರಾಷ್ಟ್ರದ ಪ್ರತೀ ಪ್ರಜೆಯ ಕರ್ತವ್ಯ. ರಾಷ್ಟ್ರದ ಸಮೃದ್ಧಿ, ಸಜ್ಜನರೆಲ್ಲರಿಗೂ ನಿರ್ಭಯದ ಬದುಕು, ದುಡಿಯುವ ಕೈಗಳಿಗೆ ಕೆಲಸ, ಶಿಕ್ಷಣ, ಬಡತನ ನಿರ್ಮೂಲನ, ಜನಸಂಖ್ಯಾಸ್ಫೋಟದ ನಿಯಂತ್ರಣ…ಹೀಗೆ ರಾಷ್ಟ್ರದ ಅಭಿವೃದ್ಧಿಗೆ ರಾಷ್ಟ್ರದ ರಕ್ಷಣೆಗೆ ನೆಮ್ಮದಿಗೆ, ಸಮೃದ್ಧಿಗೆ ಯಾವುದು ಬೇಕೋ ಅದಕ್ಕಾಗಿ ಯಥಾಸಾಧ್ಯ ಶ್ರಮಿಸುವುದು. ಆಗ ತನ್ನ ವೈಯಕ್ತಿಕ ಅನುಕೂಲಗಳೆಲ್ಲಾ ಗೌಣವಾಗಬೇಕು. ರಾಷ್ಟ್ರಪ್ರೇಮವೊಂದೇ ಪ್ರಧಾನವಾಗಬೇಕು. ಭಾರತೀಯ ಧರ್ಮವೆಂದರೆ ಅದೊಂದು ಜೀವನ ವಿಧಾನ. ನಾನು ಭಾರತೀಯನೆಂಬ ಭಾವ ಮೊದಲು ಅರಳಬೇಕು. ಈ ಜೀವನ ಯಶಸ್ವಿಯಾಗಬೇಕಾದರೆ ಆಧ್ಯಾತ್ಮಿಕ ಶಕ್ತಿ ಬೇಕು.

ಅಧ್ಯಾತ್ಮ ಶಕ್ತಿ
ಭಾರತದ ಆತ್ಮದ ಸ್ಥಾನದಲ್ಲಿರುವುದೇ ಅಧ್ಯಾತ್ಮ. ಆದರೆ ಅಧ್ಯಾತ್ಮ ಶಿಕ್ಷಣ ನಮಗೆ ಶ್ರದ್ಧಾಕೇಂದ್ರಗಳಲ್ಲಿ ಲಭಿಸುತ್ತಿಲ್ಲ. ಶಾಲಾಶಿಕ್ಷಣದ ಅವಿಭಾಜ್ಯ ಅಂಗವಾಗಿಯೂ ಅಧ್ಯಾತ್ಮವಿಲ್ಲ. ಧರ್ಮವನ್ನು ತಿಳಿಯಬೇಕಾದರೆ ಅಧ್ಯಾತ್ಮ ಸಾಧನೆ ಬಹಳ ಮುಖ್ಯ. ಅಧ್ಯಾತ್ಮ ಸಾಧಕರು ಎಂದೂ ಮತಾಂಧರಾಗಲಾರರು. ಮತಾಂಧರಿಗೆ ಧರ್ಮ ಅರ್ಥವಾಗದು. ಆದುದರಿಂದ ಮತಾಂಧತೆಗೆ ಅವಕಾಶವೀಯದಂತೆ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಧ್ಯಾನ ಮತ್ತು ಯೋಗದಿಂದ ಇದನ್ನು ಸಾಧಿಸಬಹುದು. ಇದಕ್ಕೆ ನಮ್ಮ ಕಣ್ಣ ಮುಂದಿರುವ ಉದಾಹರಣೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು. ಯೋಗವೆಂದಾಕ್ಷಣ ಕೇವಲ ಯೋಗಾಸನವೆಂದೇ ಭಾವಿಸಬೇಕಾಗಿಲ್ಲ. ಅದೂ ಒಂದು ಸಾಧನ. ರಾಜಯೋಗ, ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ ಗಳಿಂದಲೂ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಮುಖ್ಯವಾಗಿ ಮನಸ್ಸಿನ ಶಕ್ತಿಯನ್ನು ಹದಗೊಳಿಸಬೇಕು. ಮನಸ್ಸು ಅರಳಬೇಕು. ಹೃದಯ ತೆರೆಯಬೇಕು. ಎಲ್ಲಾ ದಾರ್ಶನಿಕರ ಅಭಿಪ್ರಾಯವೂ ಇದೇ. ಏಕೆಂದರೆ ಮನುಷ್ಯನ ಉತ್ಕರ್ಷಕ್ಕೂ ಅಪಕರ್ಷಕ್ಕೂ ಮನಸ್ಸೇ ಕಾರಣ. ಮನುಷ್ಯನನ್ನು ಆಕಾಶದೆತ್ತರಕ್ಕೆ ಏರಿಸುವ ಅಥವಾ ಪಾತಾಳದಾಳಕ್ಕೆ ಇಳಿಸುವ ಅದ್ಭುತ ಶಕ್ತಿ ಮನಸ್ಸಿಗಿದೆ. ಮನಸ್ಸಿನೊಳ ಗೇನಿದೆಯೆಂದು ತಿಳಿಯಲು ಮನೋ ವಿಜ್ಞಾನಿಗಳೂ ಪೂರ್ಣಶಕ್ತರಲ್ಲ. ಮನಸ್ಸನ್ನು ಹತೋಟಿಯಲ್ಲಿಡಲು ಆಧ್ಯಾತ್ಮಿಕತೆಯಿಂದ ಮಾತ್ರ ಸಾಧ್ಯ. ಇದಕ್ಕೆ ಬೇಕಾದ ಸಂಸ್ಕಾರವನ್ನು ಎಳೆಯ ಮನಸ್ಸುಗಳೊಳಗೆ ತುಂಬಬೇಕು. ಮರ, ಗಿಡ, ಮೃಗ, ಪಕ್ಷಿ, ಕಲ್ಲು, ಮಣ್ಣು ಹೀಗೆ ನಿಸರ್ಗದ ಎಲ್ಲವನ್ನೂ ಮನುಷ್ಯ ಪ್ರೀತಿಸಿ ಗೌರವಿಸಿದಾಗ ಧರ್ಮ ತನ್ನಿಂದ ತಾನೇ ಸಮಾಜದಲ್ಲಿ ನೆಲೆಯಾಗುತ್ತದೆ. ಆ ಧರ್ಮವೇ ಎಲ್ಲವನ್ನೂ, ಎಲ್ಲರನ್ನೂ ರಕ್ಷಿಸುತ್ತದೆ. ಇತರ ಪ್ರಾಣಿಗಳಿಗೆ ಬೇಡದ ಧರ್ಮ ಮನುಷ್ಯನಿಗೆ ಯಾಕೆ ಬೇಕೆಂದು ನಮ್ಮ ಪೂರ್ವಿಕರು ಹೇಳಿದ ಮಾತು ಅರ್ಥವಾಗುತ್ತದೆ. ಈ ಧರ್ಮ ಜನಸಮೂಹದ ಮಧ್ಯೆ ಯಾಕಿರಬೇಕೆಂಬುದೂ ಸ್ಪಷ್ಟವಾಗುತ್ತದೆ. ಪಾರಂಪರಿಕವಾಗಿ ಬಂದ ಅಕ್ಷರ, ಆಹಾರ, ಆರಾಧನಾ ಪದ್ಧತಿಗಳೊಂದಿಗೆ ಆಧ್ಯಾತ್ಮಿಕ ಶಕ್ತಿಯನ್ನೂ ಮೈಗೂಡಿಸಬೇಕು. ಎಳೆಯ ಮನಸ್ಸುಗಳಲ್ಲಿ ನೈಜಧರ್ಮ ಕುಡಿಯೊಡೆಯುವಂತೆ ಶಿಕ್ಷಣದಲ್ಲಿ ಆಧ್ಯಾತ್ಮವಿರಬೇಕು.

ತಾರಾನಾಥ ವರ್ಕಾಡಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ