
ರಾಜ್ಯದ ದಾಹವಿಂಗಿಸದ ನೀರು
Team Udayavani, Jul 22, 2019, 5:46 AM IST

ಆಲಮಟ್ಟಿ ಜಲಾಶಯ ಉತ್ತರ ಕರ್ನಾಟಕ ಭಾಗದ ಅತ್ಯಂತ ಮಹತ್ವದ ಬೃಹತ್ ಯೋಜನೆ. ಎರಡನೆಯ ಹಂತದ ಕಾಮಗಾರಿ 2005ರಲ್ಲಿ ಪೂರ್ಣಗೊಂಡಿದೆ. ಕೃಷ್ಣಾ ನ್ಯಾಯಾಧಿಕರಣದ ನ್ಯಾಯಮೂರ್ತಿ ಬಚಾವತ್ ಆಯೋಗ ಆಲಮಟ್ಟಿ ಜಲಾಶಯದಲ್ಲಿ 130 ಟಿ.ಎಂ.ಸಿ ಹೆಚ್ಚುವರಿ ನೀರು ಸಂಗ್ರಹಕ್ಕೆ 2010ರಲ್ಲಿ ತೀರ್ಪು ನೀಡಿದೆ. ಈ ನೀರು ಬಳಸಿಕೊಳ್ಳಲು ಜಲಾಶಯದ ಎತ್ತರವನ್ನು 519.60 ಮೀ.ರಿಂದ 524.25 ಮೀ.ಗೆ ಹೆಚ್ಚಿಸುವುದು ಅವಶ್ಯವಿದೆ. ಸರಕಾರ ಸ್ವಷ್ಟ ಇಚ್ಛಾಶಕ್ತಿ ಪ್ರಕಟಿಸಿ ಎತ್ತರವನ್ನು ಹೆಚ್ಚಿಸಿದರೆ ಹೊಸದಾಗಿ 1.25 ಲಕ್ಷ ಹೆಕ್ಟರ್ ಭೂಮಿಗೆ ನೀರಾವರಿ ಸೌಲಭ್ಯ ವಿಸ್ತರಿಸಲು ಅನುಕೂಲವಾಗುವುದು.
ಈ ಎತ್ತರ ಹೆಚ್ಚಿಸದೇ ಇರುವುದರಿಂದ ತೀರ್ಪಿನಲ್ಲಿ ಕರ್ನಾಟಕ ಪಡೆದ 130 ಟಿ.ಎಂ.ಸಿ ನೀರು ಹರಿದು ಆಂಧ್ರಕ್ಕೆ ಹೋಗುತ್ತಿದೆ. ಆಲಮಟ್ಟಿ ಜಲಾಶಯದ ಎತ್ತರ ಡ್ಯಾಮ್ ಕಟ್ಟಿ ಎತ್ತರಿಸಲು ಸುಮಾರು 5,400 ಕೋಟಿ ರೂಪಾಯಿ ಹಣ ಬೇಕು ಎಂದು ಅಂದಾಜು ಮಾಡಲಾಗಿದೆ. ಕಳೆದ 8 ವರ್ಷಗಳ ಅವಧಿಯಲ್ಲಿ ಯಾವ ಸರಕಾರವೂ ಎತ್ತರ ಹೆಚ್ಚಿಸಿ ಡ್ಯಾಮ್ ನಿರ್ಮಿಸುವ ನಿರ್ಣಯ ಪ್ರಕಟಿಸಿಲ್ಲ. ಉತ್ತರ ಕರ್ನಾಟಕದ ಜನ ತಮ್ಮ ಪಾಲಿನ ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ಅಸಹಾಯಕರಾಗಿ ನೋಡುತ್ತಾ ನಿಂತಿದ್ದಾರೆ.
ಬೇಸಿಗೆಯಲ್ಲಿ ಅವರ ನೀರಡಿಕೆ ನೀಗುವುದಕ್ಕೆ ನೀರಿಲ್ಲ. ನಾಲ್ಕು ವರ್ಷಗಳ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರಕಾರದ ಅವಧಿಯಲ್ಲಿ ಬಚಾವತ್ ತೀರ್ಪಿನಲ್ಲಿ ಕೊಡಲಾದ 130 ಟಿ.ಎಂ.ಸಿ ನೀರು ಸಂಗ್ರಹಿಸಲು ಜಲಾಶಯಕ್ಕೆ ನಾರ್ವೆ ದೇಶದ ತಂತ್ರಜ್ಞಾನದ ತಡೆಗೋಡೆ ನಿರ್ಮಿಸುವ ಸಲಹೆಯನ್ನು ಭಾರತೀಯ ವಿಜ್ಞಾನ-ತಂತ್ರಜ್ಞಾನ ಪರಿಷತ್ತಿನ ತಜ್ಞರು ರಾಜ್ಯ ಸರಕಾರಕ್ಕೆ ನೀಡಿದರು. ಸರಕಾರ ಇದನ್ನು ಪರಿಶೀಲಿಸಿ, ನಾರ್ವೆ ದೇಶದ ತಂತ್ರಜ್ಞರನ್ನು ಆಮಂತ್ರಿಸಿ ವರದಿ ಪಡೆದುಕೊಂಡಿತು.
ಆಲಮಟ್ಟಿ ಜಲಾಶಯದ ಎತ್ತರವನ್ನು 524.25 ಮೀಟರಿಗೆ ಎತ್ತರಿಸುವುದರಿಂದ ಹೊಸದಾಗಿ ಬಾಗಲಕೋಟೆ-ವಿಜಯಪುರದ 22 ಹಳ್ಳಿಗಳು ಮುಳುಗುತ್ತವೆ. ಬಾಗಲಕೋಟೆ ತಾಲೂಕಿನ ಕಲಾದಗಿ, ಗೋವಿನಕೊಪ್ಪ, ಉದಗಟ್ಟಿ, ಬೀಳಗಿ ತಾಲೂಕಿನ ಆಲಗುಂಡಿ, ಕಾತರಕಿ, ಕೊಪ್ಪ ಎಸ್.ಕೆ ಜಮಖಂಡಿ ತಾಲೂಕಿನ ಹಿರೇಪಡಸಲಗಿ, ಕುಂಬಾರಹಳ್ಳ, ವಿಜಯಪುರ ಜಿಲ್ಲೆಯ ಬಸವನ-ಬಾಗೇವಾಡಿ ತಾಲೂಕಿನ ವಂದಾಲ ಇವು ಮುಳುಗಡೆಯಾಗಲಿರುವ ಪ್ರಮುಖ ದೊಡ್ಡ ಊರುಗಳಾಗಿವೆ. ಈ ಊರುಗಳ ವ್ಯಾಪ್ತಿಯ 77 ಸಾವಿರ ಎಕರೆ ಭೂಮಿ ಮುಳುಗಡೆಯಾಗುತ್ತದೆ. ಸುಮಾರು 32 ಸಾವಿರ ಕುಟುಂಬಗಳನ್ನು ಬೇರೆಕಡೆ ಸ್ಥಳಾಂತರಿಸಿ ಪುನರ್‌ವಸತಿ ಕಲ್ಪಿಸಬೇಕಾಗುತ್ತದೆ. ಇದಕ್ಕೆ ಸುಮಾರು 5,000 ಕೋಟಿ ರೂಪಾಯಿ ಖರ್ಚಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಇದಕ್ಕೆ ಬದಲಾಗಿ ನಾರ್ವೆ ತಂತ್ರಜ್ಞಾನದ ಗೋಡೆ ಕಟ್ಟಿದರೆ ಕೇವಲ 247 ಕೋಟಿ ವೆಚ್ಚದಲ್ಲಿ ಯೋಜನೆ ಕಾರ್ಯರೂಪಕ್ಕೆ ತರಬಹುದು ಹಾಗೂ ಮುಳುಗಡೆ ಸಮಸ್ಯೆಯನ್ನು ಪೂರ್ಣ ತಪ್ಪಿಸಬಹುದಾಗಿದೆ. ಇದೊಂದು ವಿನೂತನ ಚಿಂತನೆಯಾಗಿದೆ.
ಧೂಳು ತಿನ್ನುತ್ತಿರುವ ವರದಿ: ನಾರ್ವೆ ತಜ್ಞರಿಂದ ತುಂಬಾ ಆಸಕ್ತಿಯಿಂದ ವರದಿಯನ್ನು ಪಡೆಯಲಾಗಿದೆ. ನಾಲ್ಕು ತಜ್ಞರು ಆಲಮಟ್ಟಿಯಲ್ಲಿ ದೀರ್ಘಕಾಲ ಮೊಕ್ಕಾಂ ಹೂಡಿ, ಹಳ್ಳಿ-ಹಳ್ಳಿಗೆ ಹೋಗಿ ಇಲ್ಲಿಯ ನೆಲ-ಹವಾಮಾನ-ನೀರಿನ ಗುಣಮಟ್ಟ ಎಲ್ಲ ಪರಿಶೀಲಿಸಿ, ವರದಿ ತಯಾರಿಸಿದ್ದಾರೆ. ಆದರೆ ಈ ವರದಿ ಧೂಳು ತಿನ್ನುತ್ತಾ ವಿಧಾನ ಸಭೆಯಲ್ಲಿ ಕುಳಿತಿದೆ. ಸಂಪುಟ ಸಭೆಯಲ್ಲಿ ಈ ಕುರಿತು ಸರಕಾರ ಚರ್ಚೆ ನಡೆಸದಿರುವುದು ಅಚ್ಚರಿಯ ಸಂಗತಿಯಾಗಿದೆ.
ರಷ್ಯಾ ಮಾದರಿ: ರಷ್ಯಾದಲ್ಲಿ ನಾರ್ವೆ ವಿಜ್ಞಾನಿಗಳು ಜಲಾಶಯಗಳಿಗೆ ತಡೆಗೋಡೆಗಳನ್ನು ಕಟ್ಟಿದ್ದಾರೆ. ಸುಮಾರು 2 ದಶಕಗಳಿಂದ ಈ ಗೋಡೆಗಳು ಅಸ್ತಿತ್ವದಲ್ಲಿವೆ. ದೇಶದ ಗಡಿಗಳ ರಕ್ಷಣೆಗೂ ಕೂಡ ರಷ್ಯಾದಲ್ಲಿ ನಾರ್ವೆ ತಡೆಗೋಡೆಗಳನ್ನು ನಿರ್ಮಿಸಿರುವುದು ವಿಶೇಷ ಸಂಗತಿಯಾಗಿದೆ. ವಿಶೇಷ ತಂತ್ರಜ್ಞಾನ ಬಳಸಿ ಸಿದ್ಧಪಡಿಸಿದ ಉಕ್ಕಿನ ರಾಡ್‌ಗಳನ್ನು ತಡೆಗೋಡೆಯಲ್ಲಿ ಬಳಸಲಾಗುತ್ತದೆ. ಈ ತಡೆಗೋಡೆ ರಿಪೇರಿ ಖರ್ಚುಗಳು ಇರುವುದಿಲ್ಲ. ಸುಮಾರು 80 ವರ್ಷ ಬಾಳಿಕೆ ಬರುತ್ತವೆ ಎನ್ನುವ ಅಭಿಪ್ರಾಯವನ್ನು ವಿಜ್ಞಾನಿಗಳು ಹೊಂದಿದ್ದಾರೆ.
ಕೆಲವು ಅನುಮಾನಗಳು: ನಾರ್ವೆ ಮಾದರಿಯ ತಡೆಗೋಡೆಯ ಸುರಕ್ಷತೆಯ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಭಾರತದ ಹವಾಮಾನ ಮಣ್ಣು, ಪರಿಸರ, ಹಿನ್ನೆಲೆಯಲ್ಲಿ ತಡೆಗೋಡೆ ಬಹಳ ದಿನ ಬಾಳಿಕೆ ಬರುವುದಿಲ್ಲ. ಅದು ಒಡೆದು ಹೋದರೆ, ಲಕ್ಷಾವಧಿ ಜನರು ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಇಲ್ಲಿ ರಿಸ್ಕ್ಫ್ಯಾಕ್ಟರ್ ಬಹಳ ಇವೆ ಎಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಣ ಉಳಿಸುವ ಗಡಿಬಿಡಿಯಲ್ಲಿ ಜನರ ಪ್ರಾಣ ಕಳೆಯುವ ಕೆಲಸ ಮಾಡಬೇಡಿರಿ ಎಂದು ಕೆಲವರು ಖಾರವಾಗಿ ಹೇಳುತ್ತಿದ್ದಾರೆ. ತಡೆಗೋಡೆ ನಿರ್ಮಿಸುವ ಬಗ್ಗೆ ಸರಕಾರ ವಿಸ್ತೃತ ಚರ್ಚೆಗೆ ಮತ್ತು ವೈಜ್ಞಾನಿಕ ಮಾಹಿತಿ ಸಂಗ್ರಹಕ್ಕೆ ಮುಂದಾಗಬೇಕು. ಏನೇ ಆಗಲಿ ನಮಗೆ ದಕ್ಕಿದ 130 ಟಿ.ಎಂ.ಸಿ ನೀರಿನ ಸದ್ಬಳಕೆಗೆ ಸರಕಾರ ಅವಕಾಶ ಕಲ್ಪಿಸಬೇಕು.
ಬೇಸಿಗೆಯ ಬವಣೆ: ಕೃಷ್ಣ ನದಿಯ ಬದಿಗುಂಟ ಬೆಳಗಾವಿ-ಬಾಗಲಕೋಟೆ ಜಿಲ್ಲೆಯ ಜನತೆ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಅನುಭವಿಸುವ ಕಷ್ಟ ಅಷ್ಟಿಷ್ಟಲ್ಲ. ಕೇವಲ 2 ಟಿ.ಎಂ.ಸಿ ನೀರು ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಬಿಡಲು ಕರ್ನಾಟಕ ಸರಕಾರ ಹಲವು ಬಾರಿ ಮನವಿ ಮಾಡಿತು. ಈ ವರ್ಷ ಬೇಸಿಗೆಯಲ್ಲಿ ಮಹಾರಾಷ್ಟ್ರ ಸರಕಾರ ನೀರು ಬಿಡಲಿಲ್ಲ. ಇದರಿಂದ ಜನ ಬಹಳ ಕಷ್ಟ ಅನುಭವಿಸಿದರು. ಸುಮಾರು 500 ಕೋಟಿ ರೂ. ಬೆಳೆಹಾನಿಯಾಯಿತು. ನಮ್ಮದೇ ನೀರು 130 ಟಿ.ಎಂ.ಸಿ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಆಡಳಿತವು ಈ ಗಂಭೀರ ವಿಷಯ ಅರ್ಥಮಾಡಿಕೊಳ್ಳಬೇಕು. ತಾತ್ಕಾಲಿಕವಾಗಿ ನಾರ್ವೆ ಗೋಡೆ ಕಟ್ಟಿ ಈ ನೀರು ಬಳಸಿಕೊಳ್ಳಲು ವ್ಯವಸ್ಥೆ ಮಾಡಬೇಕು. ಇದರಿಂದ ಈ ಭಾಗದ ರೈತರಿಗೆ ಬಹಳ ಅನುಕೂಲವಾಗುತ್ತದೆ.
ನೀರಿನ ಮಹತ್ವಕ್ಕೆ ಸಂಬಂಧಿಸಿದಂತೆ ಎರಡು ಅಪರೂಪದ ಸಂಗತಿಗಳು ತಟ್ಟನೆ ನೆನಪಿಗೆ ಬರುತ್ತಿವೆ: ವಿಜಯನಗರದ ಪ್ರೌಢದೇವರಾಯನ ಕಾಲದಲ್ಲಿ ತಾಯಂದಿರೆಲ್ಲ ತಮ್ಮ ಕಂದಮ್ಮಗಳಿಗೆ ಮೊಲೆಯುಣಿಸುವಾಗ ‘ಕೆರೆಯಂ ಕಟ್ಟಿಸು, ಬಾವಿಯಂಸವೆಸು, ದೇವಾಗಾರಂ ಮಾಡಿಸು’ ಎಂದು ಜೋಗುಳ ಹಾಡುತ್ತಿದ್ದರಂತೆ. ನೀರು, ನೀರಿನ ರಕ್ಷಣೆ ನಮ್ಮ ನಾಡಿನ ಸಂಸ್ಕೃತಿಯ ಭಾಗವೇ ಆಗಿತ್ತು ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.
ಮೈಸೂರು ರಾಜಮನೆತನದ ಎಲ್ಲ ದೊರೆಗಳು ಪ್ರತಿಯೊಂದು ಸಭೆ-ಸಮಾರಂಭದಲ್ಲಿ ಉಪನಿ ಷತ್ತಿನಲ್ಲಿ ಉಲ್ಲೇಖವಾಗಿರುವ ‘ಅನ್ನಮಾಪಃ ಅಮೃತಮಾಪಃ ಸ್ವರಡಾಪಃ ವಿರಾಡಾಪಃ’ ಅಂದರೆ ನೀರೆಂದರೆ ಅನ್ನ, ನೀರೆಂದರೆ ಅಮೃತ, ನೀರೆಂದರೆ ಅಂತಸ್ತೇಜ, ನೀರೆಂದರೆ ವಿರಾಟ್ ಚೇತನ, ನೀರೆಂದರೆ ಬೆಳಕು ಎಂಬ ಮಾತನ್ನು ಹೇಳುತ್ತಿದ್ದರು. ಇದೇ ಕಾರಣಕ್ಕೆ ಇರಬಹುದು, ನಾಲ್ವಡಿ ಕೃಷ್ಣ ರಾಜೇ ಂದ್ರ ಒಡೆಯರ್ ಹಾಗೂ ಅವರ ಪತ್ನಿ ರಾಜಮಾತೆ ತಮ್ಮ ಖಾಸಗಿ ಒಡತನಕ್ಕೆ ಸೇರಿದ ವಜ್ರ ವೈಢೂರ್ಯ ಬಂಗಾರ ನಾಲ್ಕು ಮೂಟೆಗಳಲ್ಲಿ ಮುಂಬೈಗೆ ತೆಗೆದುಕೊಂಡು ಹೋಗಿ ಮಾರಾಟಮಾಡಿ ಕನ್ನಂಬಾಡಿ ಆಣೆಕಟ್ಟು ಕೆಲಸ ಪೂರ್ಣಗೊಳಿಸಿದರು. ಇದರಿಂದಾಗಿ ಆ ಭಾಗ ಸಮೃದ್ಧಗೊಂಡಿದೆ.
ನಮ್ಮ ಜನಪ್ರತಿನಿಧಿಗಳು ಮೇಲಿನ ಎರಡು ಅಪರೂಪದ ಸಂಗತಿಗಳನ್ನು ನಿತ್ಯ ಪಠಿಸಿದರೆ ಒಳ್ಳೆಯದು.
– ಸಂಗಮೇಶ ನಿರಾಣಿ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
