ಯಾರ ‘ವಿಧಿ’ ಬದಲಾಯಿತು?

Team Udayavani, Aug 10, 2019, 5:30 AM IST

ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರವನ್ನು ರದ್ದು ಮಾಡುವುದಕ್ಕೆ ಸಂಬಂಧಿಸಿ ಗೃಹಸಚಿವ ಅಮಿತ್‌ ಶಾ ನೀಡಿದ್ದ ಒಂದು ಹೇಳಿಕೆ ಹೆಚ್ಚು ಗಮನ ಸೆಳೆಯುತ್ತದೆ. ಕೇವಲ ಮೂರು ಕುಟುಂಬಗಳಿಗಾಗಿ ಅಲ್ಲಿ ವಿಶೇಷಾಧಿಕಾರ ಜಾರಿಯಲ್ಲಿದೆಯೇ ಹೊರತು ಅದು ಅಲ್ಲಿನ ಜನರಿಗಾಗಿ ಇರುವಂಥದ್ದಲ್ಲ ಎಂಬ ಶಾ ಹೇಳಿಕೆಯ ಆಳಕ್ಕಿಳಿದು ವಿಮರ್ಶಿಸುತ್ತಾ ಹೋದರೆ ಆ ಮಾತನ್ನು ನೇರವಾಗಿ ತಳ್ಳಿ ಹಾಕಲು ಸಾಧ್ಯವಿಲ್ಲದಂಥ ವಿಷಯಗಳು ಸಿಗುತ್ತಿವೆ.

ಮುಫ್ತಿ ಮತ್ತು ಅಬ್ದುಲ್ಲಾ ಕುಟುಂಬಗಳು ಅಲ್ಲಿನ ರಾಜಕೀಯದಲ್ಲಿ ಭದ್ರ ಶಕ್ತಿಗಳು. ಬೇರೆಯವರಿಗೆ ಅಧಿಕಾರ ಸಿಗದಂತೆ ಮಾಡುವಲ್ಲಿ ಇವೆರಡು ಶಕ್ತಿಗಳ ಪ್ರಭಾವ ಪರಿಣಾಮಕಾರಿಯಾಗಿಯೇ ಇದೆ. ವಿಶೇಷಾ ಧಿಕಾರ ರದ್ದಾಗಿದ್ದರಿಂದ ದೊಡ್ಡ ಹಿನ್ನಡೆ ಆಗಿದ್ದು ಈ ಎರಡು ಕುಟುಂಬಗಳ ರಾಜಕೀಯ ಪ್ರಭಾವಕ್ಕೆ. ಇದೇ ಕಾರಣಕ್ಕಾಗಿ ಅವು ಜನರನ್ನು ಭಾರತ ಸರಕಾರದ ವಿರುದ್ಧ ಎತ್ತಿ ಕಟ್ಟುತ್ತಾ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಲೇ ಬಂದವು.

ವಿರೋಧ ಹಿಂದೆಯೂ ಇತ್ತು
ಈಗ ವಿಶೇಷಾಧಿಕಾರವನ್ನು ರದ್ದು ಮಾಡಿದ್ದಕ್ಕೆ ಕೇಳಿ ಬರುತ್ತಿರುವ ವಿರೋಧದ ದನಿಗಿಂತಲೂ ಹೆಚ್ಚಿನ ಆಕ್ಷೇಪ ಏಳು ದಶಕಗಳ ಹಿಂದೆ ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವಾಗಲೇ ಇತ್ತು. ಆಗ ಭಾರತವು ಒಕ್ಕೊರಲಿನಿಂದ ವಿಶೇಷಾಧಿಕಾರವನ್ನು ಬೆಂಬಲಿಸಿರಲಿಲ್ಲ. ಆದರೆ ಈಗ ಬಿಜೆಪಿಯ ಕಡು ವಿರೋಧಿಗಳು ಮತ್ತು ಮೋದಿಯ ವೈರಿಗಳು ಕೂಡಾ ವಿಶೇಷಾಧಿಕಾರವನ್ನು ರದ್ದು ಮಾಡಿದ್ದನ್ನು ಬೆಂಬಲಿಸುವವರ ಸಾಲಲ್ಲಿ ಕಂಡು ಬರುತ್ತಿರುವುದು ವಿಶೇಷ.

ಕಾಶ್ಮೀರಿಗಳ ಅಭಿವೃದ್ಧಿಗೆ ಪೂರಕವಾಗಿತ್ತೇ ?
ಕಾಶ್ಮೀರವನ್ನು ಭಾರತದೊಂದಿಗೆ ವಿಲೀನ ಮಾಡುವ ಸಂದರ್ಭದಲ್ಲಿ ಕಾಶ್ಮೀರಿಗಳ ಹಿತಕ್ಕಾಗಿ ರಾಜಾ ಹರಿಸಿಂಗ್‌ ವಿಶೇಷಾಧಿಕಾರದ ಭದ್ರತೆಯನ್ನು ಪಡೆದುಕೊಂಡಿದ್ದರು ಎಂಬುದು ಸ್ಪಷ್ಟ. ಹರಿಸಿಂಗ್‌ ಜೊತೆಗೆ ಮಾಡಲಾಗಿರುವ ಒಪ್ಪಂದವನ್ನು ಭಾರತ ಸರಕಾರ ಮುರಿದಿದೆ ಎಂದು ಹೇಳುತ್ತಿರುವ ಕಾಶ್ಮೀರದ ಕೆಲವು ನಾಯಕರು, ತಾವು ಹರಿ ಸಿಂಗ್‌ನ ಇಚ್ಛೆಯಂತೆ ಕಾಶ್ಮೀರದ ಜನರ ಹಿತವನ್ನು ಕಾಪಾಡಿಕೊಂಡೆವೇ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಅಗತ್ಯವಾಗಿದೆ.

ವಿಶೇಷಾಧಿಕಾರದ ಹೆಸರಲ್ಲಿ ಕಾಶ್ಮೀರದಲ್ಲಿ ದಿನನಿತ್ಯ ರಕ್ತಪಾತವಾಗಿ ಭಯದ ವಾತಾವರಣ ಮೂಡಿದ್ದುದೇ ಕಾಶ್ಮೀರಿಗಳಿಗೆ ಸಿಕ್ಕಿದ್ದ ಉಡುಗೊರೆ. ಅಲ್ಲಿನ ಮಕ್ಕಳಿಗೆ ಸರಿಯಾಗಿ ಶಿಕ್ಷಣ, ಉದ್ಯೋಗ ನೀಡಲೂ ಕಾಶ್ಮೀರವನ್ನು ಈವರೆಗೆ ಆಳಿದವರಿಗೆ ಸಾಧ್ಯವಾಗಲಿಲ್ಲ. ಅಲ್ಲಿನ ರಾಜಕಾರಣಿಗಳು ಮುಗ್ಧ ಜನರನ್ನು ದಾರಿ ತಪ್ಪಿಸುತ್ತಾ ಅತಿಯಾದ ಸ್ವಾಭಿಮಾನ, ನಮ್ಮತನದ ಭ್ರಮೆಯನ್ನು ಮೂಡಿಸುತ್ತಾ ಅವರನ್ನು ಕೂಪ‌ ಮಂಡೂಕ ಮಾಡುವ ಕೆಲಸದಲ್ಲಿ ನಿರತರಾದುದೇ ಹೆಚ್ಚು.

ಕಾಶ್ಮೀರವು ಮೂಲನಿವಾಸಿಗಳಿಗೆ ಸೀಮಿತವಾದುದು ಎಂದು ಹೇಳುವವರು ಅಲ್ಲಿನ ಮೂಲ ನಿವಾಸಿಗಳಾಗಿದ್ದ ಕಾಶ್ಮೀರಿ ಪಂಡಿತರ ಬಗ್ಗೆ ಯಾಕೆ ತುಟಿಬಿಚ್ಚುತ್ತಿಲ್ಲ? ಕಾಶ್ಮೀರಿ ಹಿಂದೂಗಳನ್ನು ಕಣಿವೆಯಿಂದ ಓಡಿಸುವಾಗ, ಅವರ ಹೆಣ್ಮಕ್ಕಳ ಮೇಲೆ ಅತ್ಯಾಚಾರ ನಡೆಸುವಾಗ, ಮನೆಮಂದಿಯ ಮುಂದೆಯೆ ಮಾರಣಹೋಮ ನಡೆಸುವಾಗ ಯಾರಿಗೂ ಕಾಶ್ಮೀರವು ಅಲ್ಲಿನ ಎಲ್ಲರಿಗೂ ಸೇರಿದ್ದು ಎಂಬುದು ತಿಳಿದಿರಲಿಲ್ಲವೇ? ಕಾಶ್ಮೀರವು ಮುಸ್ಲಿಂ ಬಾಹುಳ್ಯವಿರುವ ಭೂಭಾಗವೇ ಹೊರತು ಅದು ಕೇವಲ ಮುಸ್ಲಿಮರಿಗಾಗಿ ಎಂದೇನಿಲ್ಲವಲ್ಲ. ಕಾಶ್ಮೀರಿ ಪಂಡಿತರು ಅಲೆಮಾರಿಗಳಾಗುವ ಹೊತ್ತಿನಲ್ಲಿ ಬಾಯಿ ಮುಚ್ಚಿಕೊಂಡಿದ್ದವರೆಲ್ಲ ಈಗ ಆಕಾಶವೇ ಕಳಚಿ ಬಿತ್ತು ಎಂಬಂತೆ ವರ್ತಿಸುತ್ತಿರುವುದನ್ನು ಗಮನಿಸುವಾಗ ಇವರಲ್ಲಿ ಏನೋ ಒಂದು ರಹಸ್ಯ ಅಜೆಂಡಾ ಇದೆ, ಅದನ್ನು ವಿಶೇಷಾಧಿಕಾರದ ಮೂಲಕ ಕಾರ್ಯರೂಪಕ್ಕೆ ತರಲು ಶ್ರಮಿಸುತ್ತಿದ್ದರು ಎಂಬುದು ಸ್ಪಷ್ಟವಾಗುತ್ತದೆ.

ಒಂದೊಮ್ಮೆ ವಿಶೇಷಾಧಿಕಾರವು ಕಾಶ್ಮೀರಿಗಳ ಅಭಿವೃದ್ಧಿಗೆ ಪೂರಕವಾಗಿದ್ದರೆ ಏಳು ದಶಕಗಳ ಸುದೀರ್ಘ‌ ಅವಧಿಯಲ್ಲಿ ಅದು ಇಡೀ ದೇಶದಲ್ಲಿ ಒಂದು ಮಾದರಿ ರಾಜ್ಯವಾಗಿ ಅಭಿವೃದ್ದಿ ಸಾಧಿಸಬೇಕಾಗಿತ್ತು. ಅದು ಸೌಂದರ್ಯದಲ್ಲಿ ಮಾತ್ರವಲ್ಲದೆ ಶಾಂತಿ ಮತ್ತು ನೆಮ್ಮದಿಯ ಜೀವನದಲ್ಲೂ ಉಳಿದ ರಾಜ್ಯಗಳಿಗೆ ಮಾದರಿಯಾಗಬೇಕಿತ್ತು.

ಮುಳುವಾದ ಅಂಶಗಳಿವು

ಒಂದೊಮ್ಮೆ ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಅಲ್ಲಿನ ಒಂದು ವರ್ಗದ ರಾಜಕಾರಣಿಗಳು ಮತ್ತು ಒಂದು ವರ್ಗದ ಜನರು ಬೆಂಬಲ ನೀಡಿ ಬೆಳೆಸದೆ ಇರುತ್ತಿದ್ದರೆ, ಅಲ್ಲಿ ಭಾರತ ವಿರೋಧಿ ಶಕ್ತಿಗಳಿಗೆ ಆಶ್ರಯ ನೀಡಿ ಪೋಷಿಸದೆ ಇರುತ್ತಿದ್ದರೆ, ಹಿಂಸೆಯನ್ನು ಬೆಳೆಸದೆ ನೆಮ್ಮದಿಯ ಜೀವನಕ್ಕೆ ಅವಕಾಶ ಇರುತ್ತಿದ್ದರೆ ಇಂದು ವಿಶೇಷಾಧಿಕಾರವನ್ನು ಹಿಂದಕ್ಕೆ ಪಡೆಯುವಂಥ ಅನಿವಾರ್ಯತೆ ಕೇಂದ್ರ ಸರಕಾರಕ್ಕೆ ಸೃಷ್ಟಿಯಾಗುತ್ತಿರಲಿಲ್ಲ. ವಿಶೇಷಾಧಿಕಾರವನ್ನು ಅಲ್ಲಿನ ಜನರ ಹಿತಕ್ಕಾಗಿ ಬಳಸಿದ್ದರೆ ಮತ್ತು ವಿಶೇಷಾಧಿಕಾರ ಜನರಿಗೆ ನೆಮ್ಮದಿಯ ಜೀವನ ನೀಡುತ್ತಿದ್ದರೆ ಯಾರೂ ಇದರ ರದ್ದತಿಗೆ ಮುಂದಾಗು ತ್ತಿರಲಿಲ್ಲ. ಆದರೆ ಅಲ್ಲಿ ನಡೆದದ್ದೆಲ್ಲವೂ ಜನರಿಗೆ ಮಾರಕವಾದವುಗಳೇ. ಅಲ್ಲಿನ ಜನರಿಗೆ ನೆಮ್ಮದಿಯ ಬದುಕು ನೀಡಲು ಕೇಂದ್ರ ಸರಕಾರಕ್ಕೆ ದೊಡ್ಡ ತಡೆಬೇಲಿ ಆಗಿದ್ದುದೇ ಈ ವಿಶೇಷಾಧಿಕಾರ.

ಭಾವನೆಗೆ ಮಾತ್ರ ಸೀಮಿತ
ವಿಶೇಷಾಧಿಕಾರವನ್ನು ರದ್ದುಮಾಡಿದ್ದಕ್ಕೆ ಪ್ರತಿಕ್ರಿಯಿಸಿದ್ದ ಕಾಶ್ಮೀರಿಗಳು ಹೇಳಿದ್ದ ಒಂದು ಮಾತೆಂದರೆ 370ನೇ ವಿಧಿಯೊಂದಿಗೆ ನಮಗೆ ಭಾವನಾತ್ಮಕ ಸಂಬಂಧವಿತ್ತು. ಕಾಶ್ಮೀರ ಮುಸ್ಲಿಂ ಬಾಹುಳ್ಯದ ರಾಜ್ಯ ಎಂಬ ಹೆಮ್ಮೆ ಇತ್ತು, ಮುಂದಕ್ಕೆ ಅವೆಲ್ಲವೂ ಕಳೆದು ಹೋಗುವ ಭೀತಿಯಿದೆ ಎಂಬುದು. ಆದರೆ ಯಾರೊಬ್ಬರೂ ಈ ವಿಧಿಯಿಂದ ನಮ್ಮ ಪ್ರಗತಿಗೆ ಅನುಕೂಲವಾಗಿತ್ತು ಎಂದು ಹೇಳಿಲ್ಲ. ಅಲ್ಲಿನ ರಾಜ್ಯ ಸರಕಾರವನ್ನು ಆಳಿದವರೆಲ್ಲರೂ ಜನರನ್ನು ಭಾವನೆಯಲ್ಲೇ ಹಿಡಿದಿಟ್ಟುಕೊಂಡಿದ್ದರು. ಅವರನ್ನು ಧರ್ಮದ ಚೌಕಟ್ಟಿನಲ್ಲಿ ಬಂಧಿಸಿಟ್ಟಿದ್ದರು. ನಮ್ಮದು ನಮ್ಮದು ಎಂದು ಹೇಳುತ್ತಾ ಬೇರೆ ವಿಷಯದ ಕಡೆಗೆ ಆಲೋಚಿಸದಂತೆ ತಡೆದಿದ್ದರು. ಕಾಶ್ಮೀರದ ಜನರ ಮುಗ್ಧತೆಯನ್ನು ತಮಗೆ ಬೇಕಾದಂತೆ ಬಳಸಿಕೊಳ್ಳತ್ತಾ ರಾಜರಂತೆ ಬದುಕುತ್ತಿದ್ದ ರಾಜಕಾರಣಿಗಳಿಗೆ ಮಾತ್ರ ಮುಂದಿನ ದಿನಗಳು ಅವರು ಈ ಹಿಂದೆ ನಿರೀಕ್ಷಿಸಿದಂತೆ ಸುಖಮಯವಾಗಿರಲಿಕ್ಕಿಲ್ಲ. ಆದರೆ ಜನರು ಮಾತ್ರ ಮುಂದಿನ ದಿನಗಳಲ್ಲಿ ನೆಮ್ಮದಿಯಿಂದ ಬದುಕುವ ಎಲ್ಲ ಸಾಧ್ಯತೆಗಳೂ ಇವೆ.

ಪುತ್ತಿಗೆ ಪದ್ಮನಾಭ ರೈ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಪ್ರಿಸ್ಕೂಲ್‌ ನಡೆಸುವ ಗೆಳತಿ, ಎರಡು ದಿನ ರಜೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಆಗದೆ ಒದ್ದಾಡ್ತೀರ. ನಾವು ವಾರಪೂರ್ತಿ ಅವರನ್ನು ನೋಡಿಕೊಳ್ತೀವಲ್ಲ, ನಮ್ಮ...

  • ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಿರುವ ಭಾರೀ ದಂಡ ಪ್ರಮಾಣವನ್ನು ತಗ್ಗಿಸಲು ರಾಜ್ಯ ಸರಕಾರ ಮುಂದಾಗಿದ್ದರೂ ಕಾಯ್ದೆಯಲ್ಲಿ ನಾಲ್ಕೆ „ದು ಪ್ರಕರಣಗಳನ್ನು...

  • ಹೊಸದಿಲ್ಲಿ: ಕರ್ನಾಟಕದ 17 ಅನರ್ಹ ಶಾಸಕರ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆಯಾಗಿದೆ. ಸುಪ್ರೀಂ ಕೋರ್ಟ್‌ನ ನ್ಯಾಯಪೀಠದಲ್ಲಿದ್ದ, ಕರ್ನಾಟಕ ಮೂಲದ ನ್ಯಾ| ಮೋಹನ ಎಂ....

  • ಚಾಂಗ್‌ಝು (ಚೀನ): ಭಾರತದ ಮಿಕ್ಸೆಡ್‌ ಡಬಲ್ಸ್‌ ತಾರೆಯರಾದ ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಅಶ್ವಿ‌ನಿ ಪೊನ್ನಪ್ಪ ಅವರು ಚೀನ ಓಪನ್‌ ಬ್ಯಾಡ್ಮಿಂಟನ್‌...

  • ನವದೆಹಲಿ: ಏರ್‌ಸೆಲ್‌- ಮ್ಯಾಕ್ಸಿಸ್‌ ಡೀಲ್‌ಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳು ಹಾಗೂ 2ಜಿ ತರಂಗಾಂತರ ಹಂಚಿಕೆಗೆ ಸಂಬಂಧಿಸಿದ ಎಲ್ಲ ಕೇಸುಗಳನ್ನೂ ನ್ಯಾಯಾಧೀಶ...