ಟೆಸ್ಟ್‌ ಕ್ರಿಕೆಟ್‌ನ ಮೇಲೆ ನಡೆಯುತ್ತಿರುವ ಪ್ರಯೋಗ ಎಲ್ಲಿಗೆ ಮುಟ್ಟಬಹುದು?

Team Udayavani, Nov 23, 2019, 5:26 AM IST

ಟೆಸ್ಟ್‌ ಕ್ರಿಕೆಟ್‌ ಅವಸಾನದ ಅಂಚಿನಲ್ಲಿರುವುದು ಕಟುಸತ್ಯ. ಅದನ್ನು ಉಳಿಸಿಕೊಳ್ಳಬೇಕೆಂಬ ಅನಿವಾರ್ಯತೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಗಿದೆ (ಐಸಿಸಿ). ಹಳೆ ತಲೆಮಾರಿನ ಎಲ್ಲ ಕ್ರಿಕೆಟಿಗರೂ ಟೆಸ್ಟನ್ನು ಪ್ರೀತಿಸುತ್ತಾರೆ. ಹೊಸ ತಲೆಮಾರಿಗೆ ಟಿ20 ಮೇಲೆ ಪ್ರೀತಿ ಜಾಸ್ತಿ. ಇವೆರಡನ್ನೂ ಸಮತೋಲನ ಮಾಡಲು ಐಸಿಸಿ ಹೆಣಗುತ್ತಿದೆ. ಟೆಸ್ಟ್‌ ಕ್ರಿಕೆಟನ್ನು ಉಳಿಸಿಕೊಳ್ಳುವುದು ಐಸಿಸಿಗೆ ಒಂದು ಪ್ರತಿಷ್ಠೆಯ ಪ್ರಶ್ನೆ. ಆದರೆ ಜನ ಈ ಮಾದರಿಯ ಮೇಲೆ ಪೂರ್ಣ ಆಸಕ್ತಿ ಕಳೆದುಕೊಂಡಿದ್ದಾರೆ. ಇದಕ್ಕೆ ಕಾರಣ ಸರಿಯಾಗಿಯೇ ಇದೆ. ಐದು ದಿನಗಳ ಕಾಲ ನಡೆಯುವುದು, ಇಷ್ಟೂ ದಿನ ಆಟ ಬಹಳ ನಿಧಾನವಾಗಿ ನಡೆಯುವುದು…ಇವೆಲ್ಲ ಟೆಸ್ಟ್‌ ಜನರಿಗೆ ಅನಾಕರ್ಷಕವೆನಿಸಲು ಕಾರಣ. ಆದರೆ ಟೆಸ್ಟ್‌ ಕ್ರಿಕೆಟ್‌ ಎನ್ನುವುದು ನಿಜವಾಗಿಯೂ ಒಬ್ಬ ಆಟಗಾರನ ಶಕ್ತಿಯನ್ನು ಒರೆಗೆ ಹಚ್ಚುತ್ತದೆ. ಅವನ ತಾಂತ್ರಿಕತೆ, ನೈಪುಣ್ಯ ಇವೆಲ್ಲದರ ದರ್ಶನವಾಗುವುದು ಟೆಸ್ಟ್‌ನಲ್ಲೇ. ಈ ಮಾದರಿಯನ್ನು ಮೂಲೆಗುಂಪು ಮಾಡಿದರೆ ಭವಿಷ್ಯದಲ್ಲಿ ಕ್ರಿಕೆಟ್‌ ತನ್ನ ಸತ್ವ ಕಳೆದುಕೊಳ್ಳಲಿದೆ ಎಂದೂ ಕೆಲವರು ವಾದಿಸುತ್ತಾರೆ.

ಇವೆಲ್ಲ ಏನೇ ಇರಲಿ ಟೆಸ್ಟ್‌ ಕ್ರಿಕೆಟನ್ನು ಬಿಟ್ಟುಕೊಡಲು ಐಸಿಸಿ ಸಿದ್ಧವಿಲ್ಲ. ಅದಕ್ಕಾಗಿಯೇ ಟೆಸ್ಟ್‌ ವಿಶ್ವಚಾಂಪಿಯನ್‌ ಶಿಪ್‌ ಶುರು ಮಾಡಿದೆ. ಇದು ಎರಡು ವರ್ಷಗಳ ಕೂಟ. ತಂಡಗಳು ಟೆಸ್ಟನ್ನು ಗಂಭೀರವಾಗಿ ಪರಿಗಣಿಸಬೇಕು, ಸ್ಪರ್ಧಾತ್ಮಕವಾಗಿ ಆಡಬೇಕೆನ್ನುವುದು ಐಸಿಸಿ ಉದ್ದೇಶ. ತಂಡಗಳು, ಆಟಗಾರರು ಎಷ್ಟೇ ಸ್ಪರ್ಧಾತ್ಮಕವಾಗಿ ಆಡಿದರೂ, ಅದು ಜನರ ಕುತೂಹಲ ಕೆರಳಿಸಲು ಸಾಧ್ಯವಿಲ್ಲ. ಕಾರಣ ಐದು ದಿನಗಳ ಆಟ ಹೇಗೇ ನೋಡಿದರೂ ಅತಿದೀರ್ಘ‌. ವಿಶ್ವದಲ್ಲೇ ಇಷ್ಟು ದೀರ್ಘ‌ವಿರುವ ಬೇರೆ ಯಾವುದೇ ಕ್ರೀಡೆಯಿಲ್ಲ!

ಹಾಗಿರುವಾಗ ಕ್ರಿಕೆಟ್‌ ಸಂಸ್ಥೆಗಳು ಈ ಮಾದರಿಯನ್ನು ಉಳಿಸಿಕೊಳ್ಳಲು ಹೊಸಹೊಸ ಯೋಚನೆ ಮಾಡಿವೆ. ಅದರ ಪರಿಣಾಮ ಹಗಲುರಾತ್ರಿ ಪಂದ್ಯಗಳನ್ನು ಆಡಿಸಲು ಶುರು ಮಾಡಲಾಯಿತು. 2012ರಲ್ಲಿ ಐಸಿಸಿಯಿಂದ ಈ ಮಾದರಿಗೆ ಒಪ್ಪಿಗೆ ದೊರೆಯಿತು. 2015ರಲ್ಲಿ ಆಸ್ಟ್ರೇಲಿಯ-ನ್ಯೂಜಿಲೆಂಡ್‌ ನಡುವೆ ಮೊದಲ ಪಂದ್ಯ ನಡೆಯಿತು. ಅಲ್ಲಿಂದ ಇಲ್ಲಿಯವರೆಗೆ ಭಾರತ ಈ ಮಾದರಿಯಲ್ಲಿ ಆಡಲು ಮನಸ್ಸು ಮಾಡಿರಲಿಲ್ಲ. ವಿಶ್ವದ ಇತರೆಲ್ಲ ಪ್ರಮುಖ ತಂಡಗಳಿಗೆ ಈ ಮಾದರಿ ಹಳತೆನಿಸಿದ ಈ ಹೊತ್ತಿನಲ್ಲಿ, ಭಾರತೀಯರು ಪ್ರವೇಶ ಮಾಡಿದ್ದಾರೆ. ಭಾರತ ತನ್ನ ನೆಲದಲ್ಲಿ ಬಾಂಗ್ಲಾ ವಿರುದ್ಧ ಹಗಲುರಾತ್ರಿ ಪಂದ್ಯವಾಡುತ್ತಿದೆ. ಹಗಲುರಾತ್ರಿ ಪಂದ್ಯಗಳು ಕ್ರಿಕೆಟಿಗರಿಗೆ ಹೊಸತೇನಲ್ಲ. ಏಕದಿನ, ಟಿ20ಯೆಲ್ಲ ಹೀಗೆಯೇ ನಡೆಯುವುದು. ಟೆಸ್ಟ್‌ ಮಟ್ಟಿಗೆ ಇಲ್ಲಿ ಸ್ವಲ್ಪ ಪರಿಸ್ಥಿತಿ ಭಿನ್ನವಾಗುತ್ತದೆ. ಮೊದಲನೇ ವ್ಯತಾಸವಿರುವುದು ಗುಲಾಬಿ ಚೆಂಡಿನ ಬಳಕೆಯಲ್ಲಿ. ಮಾಮೂಲಿಯಾಗಿ ಕೆಂಪುಚೆಂಡಿನಲ್ಲಿ ಟೆಸ್ಟನ್ನು ಆಡಲಾಗುತ್ತದೆ.

ಹಗಲುರಾತ್ರಿ ಮಟ್ಟಿಗೆ ಬಂದರೆ ಗುಲಾಬಿ ಚೆಂಡನ್ನು ಬಳಸಲು ತೀರ್ಮಾನಿಸಲಾಗಿದೆ. ಹಳದಿಗೆ ಸಮೀಪವಾಗುವ ರಾತ್ರಿಯ ಹೊನಲು ಬೆಳಕಿಗೂ ಚೆಂಡಿನ ಕೆಂಪು ಬಣ್ಣಕ್ಕೂ ಹೊಂದಿಕೆಯಾಗುವುದಿಲ್ಲ. ಅದಕ್ಕೆ ಗುಲಾಬಿ ಚೆಂಡನ್ನು ಬಳಕೆ ಮಾಡಲಾಗುತ್ತಿದೆ. ಈ ಚೆಂಡು ಕೆಂಪು ಚೆಂಡಿಗಿಂತ ಬಹಳ ಗಟ್ಟಿ. ಹೆಚ್ಚುವರಿ ಮೆರುಗನ್ನು ಕೊಟ್ಟಿರುವುದು ಹೀಗಾಗಲು ಕಾರಣ. ಈ ಹೆಚ್ಚುವರಿ ಗಟ್ಟಿಗೆ ಕ್ರಿಕೆಟಿಗರು ಹೊಂದಿಕೊಳ್ಳಬೇಕು. ಹಾಗೆಯೇ ಹೊಸಬಣ್ಣಕ್ಕೆ ಆಟಗಾರರ ಕಣ್ಣುಗಳು ಹೊಂದಿಕೊಳ್ಳಬೇಕು. ಹಗಲುರಾತ್ರಿ ಪಂದ್ಯಗಳು ವರ್ಷಕ್ಕೆ ಒಮ್ಮೆ ಮಾತ್ರ ಇರುವುದರಿಂದ ಸದ್ಯ ಆಟಗಾರರು ಕಷ್ಟಪಡುತ್ತಿದ್ದಾರೆ.

ಅದು ಮಾಮೂಲಿಯಾದ ನಂತರ ಈ ಪ್ರಶ್ನೆ ಉದ್ಭವಿಸಲಾರದು. ಅದೇನೆ ಇರಲಿ, ಟೆಸ್ಟ್‌ ಕ್ರಿಕೆಟ್‌ಗೆ ಹೊಸ ಆಯಾಮವನ್ನು ಈ ಮಾದರಿ ನೀಡುತ್ತಿದೆ. ಟೆಸ್ಟ್‌ ನಲ್ಲಿ ನಡೆಯುತ್ತಿರುವ ಈ ಬದಲಾವಣೆ ಮುಂದೆ ಎಲ್ಲಿಗೆ ಮುಟ್ಟುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ