ಜಲಪ್ರಳಯದ ಕಂಟಕ, ನೆರವು ಪಡೆಯಲು ಸಾಂಘಿಕ ಪ್ರಯತ್ನ ಅಗತ್ಯ

Team Udayavani, Aug 9, 2019, 6:41 AM IST

ರಾಜ್ಯದಲ್ಲಿ ಮುಂಗಾರು ವಕ್ರದೃಷ್ಟಿಗೆ ಅನೇಕ ಭಾಗ ಗಳು, ಅದ ರಲ್ಲೂ ಉತ್ತರ ಕರ್ನಾಟಕ ನಲುಗಿ ಹೋಗಿದೆ. ಅತಿವೃಷ್ಟಿ, ಅನಾವೃಷ್ಟಿಗೆ ಮತ್ತೂಮ್ಮೆ ಮೂಕಸಾಕ್ಷಿಯಾಗಿದೆ. ಕಳೆದ ನಾಲ್ಕೈದು ವರ್ಷ ಬರಕ್ಕೆ ತತ್ತರಿಸಿದವರು ಈಗ ನೆರೆಗೆ ನಲುಗಿದ್ದಾರೆ. ಅವರ ಬದುಕು ಮೂರಾಬಟ್ಟೆಯಾಗಿದೆ. ಜಲಪ್ರಳಯಕ್ಕೆ ಜಾನುವಾರುಗಳು ಕಣ್ಮುಂದೆಯೇ ತೇಲಿ ಹೋಗಿವೆ. ನದಿ ಸೆಳೆವಿನಲ್ಲಿ ಸಿಕ್ಕವರು ನೆರವಿಗಾಗಿ ಅಂಗಲಾಚುತ್ತಿದ್ದಾರೆ. 2005ರ ಬಳಿಕ ಮತ್ತೂಮ್ಮೆ ಭೀಕರ ಪ್ರವಾಹ ಬಂದಿರುವುದು ಬದುಕನ್ನೇ ಕೊಚ್ಚಿಕೊಂಡು ಹೋಗಿದೆ.

ಇದುವರೆಗೂ ಮಳೆ ಅನಾಹುತಕ್ಕೆ 28 ಜನ ಪ್ರಾಣ ಕಳೆದುಕೊಂಡಿದ್ದಾರೆ. ಹಲವಾರು ಜಾನುವಾರುಗಳು ಮೃತಪಟ್ಟಿವೆ. ಸಾವಿರಾರು ಮನೆಗಳು ಕುಸಿದಿವೆ. ಹಲವು ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ಹತ್ತಾರು ಗ್ರಾಮಗಳು ನಡುಗಡ್ಡೆಯಾಗಿವೆ. ಕೃಷ್ಣಾ, ದೂಧಗಂಗಾ, ವೇದಗಂಗಾ, ಘಟಪ್ರಭಾ, ಮಲಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ, ಅಘನಾಶಿನಿ, ಗಂಗಾವಳಿ ಸೇರಿದಂತೆ ಹಲವು ನದಿಗಳು ಉಕ್ಕಿ ಹರಿಯುತ್ತಿದ್ದು, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಉತ್ತರಕನ್ನಡ, ರಾಯಚೂರು, ಯಾದಗಿರಿ ಜಿಲ್ಲೆಯ ಜನರನ್ನು ಕಂಗಾಲಾಗಿಸಿದೆ. ಕೊಯ್ನಾ, ರಾಜಾಪೂರ ಬ್ಯಾರೇಜ್‌ ಸೇರಿದಂತೆ ವಿವಿಧೆಡೆಯಿಂದ ಕೃಷ್ಣಾ ನದಿಗೆ 6.78 ಲಕ್ಷ ಕ್ಯೂಸೆಕ್‌ ನೀರು ಹರಿದುಬರುತ್ತಿದೆ.

ಆಲಮಟ್ಟಿ, ನಾರಾಯಣಪುರದ ಬಸವಸಾಗರ, ಕದ್ರಾ, ಮಲಪ್ರಭಾ, ಹಿಡಕಲ್‌ ಹೀಗೆ ವಿವಿಧ ಜಲಾಶಯಗಳು ಭರ್ತಿಯಾಗಿ ಅಪಾರ ಪ್ರಮಾಣದ ನೀರನ್ನು ಹೊರಹರಿಸಲಾಗುತ್ತಿದೆ. ನದಿ ತೀರ ಪ್ರದೇಶದಲ್ಲಿ ಅಕ್ಷರಶಃ ಜಲಪ್ರಳಯವೇ ಉಂಟಾಗಿದೆ.

ಇದುವರೆಗೂ ಎನ್‌ಡಿಆರ್‌ಎಫ್ ಸೇರಿದಂತೆ ಸ್ಥಳೀಯ ಅಧಿಕಾರಿಗಳು 25 ಸಾವಿರಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದಾರೆ. ಇತ್ತ ಕಲಬುರಗಿ ಜಿಲ್ಲೆಯಲ್ಲೂ ಮಹಾಪ್ರವಾಹ ಮಿತಿ ಮೀರಿದೆ. ಉಜಿನಿ ಹಾಗೂ ವೀರ ಜಲಾಶಯದಿಂದ ಭೀಮಾ ನದಿಗೆ ಹರಿವು ಹೆಚ್ಚಳವಾಗಿದೆ. ಇದು ಇಷ್ಟಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಲ್ಲಿ ಇನ್ನೂ ಮೂರ್‍ನಾಲ್ಕು ದಿನ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಹೆಚ್ಚುವರಿ ನೀರು ಹರಿದು ಬಂದರೆ ಜಲಗಂಡಾಂತರ ತಪ್ಪಿದ್ದಲ್ಲ. ಎಷ್ಟೇ ಮುನ್ನೆಚ್ಚರಿಕೆ ವಹಿಸಿದ್ದರೂ ಸಾಕಾಗುತ್ತಿಲ್ಲ. ಇಷ್ಟೆಲ್ಲಾ ಅನಾಹುತ ಸಂಭವಿಸಿದ್ದರೂ ಆಡಳಿತ ಯಂತ್ರ ಚುರುಕುಗೊಂಡಿಲ್ಲ. ಬದುಕು ಕಳೆದುಕೊಂಡು ಬೀದಿಗೆ ನಿಂತವರಿಗೆ ಆಸರೆಯಾಗುವವರಿಲ್ಲ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬುವ ಕೆಲಸ ಆಗುತ್ತಿಲ್ಲ. ಅತಿ ಹೆಚ್ಚು ಪ್ರವಾಹ ಪೀಡಿತ ಚಿಕ್ಕೋಡಿ ತಾಲೂಕು ಬಾಹ್ಯ ಪ್ರಪಂಚದ ಸಂಪರ್ಕ ಭಾಗಶಃ ಕಡಿದುಕೊಂಡಿದೆ. ಸಂಕಷ್ಟಕ್ಕೆ ಸಿಲುಕಿದವರನ್ನು ಆದ್ಯತೆಯ ಮೇರೆಗೆ ಸ್ಥಳಾಂತರಿಸಬೇಕಿದೆ. ಇದಕ್ಕೆ ಸರ್ಕಾರ ತಕ್ಷಣವೇ ತುರ್ತು ಕ್ರಮ ಕೈಗೊಳ್ಳಬೇಕು. ನಾಲ್ಕು ತಂಡಗಳಲ್ಲಿ ಪರಿಸ್ಥಿತಿ ಅಧ್ಯಯನ ನಡೆಸಲು ಸಜ್ಜಾಗಿರುವುದು ಒಳ್ಳೆಯ ಬೆಳವಣಿಗೆ. ಇದರೊಂದಿಗೆ ಪರಿಹಾರ ಕ್ರಮವೂ ತುರ್ತಾಗಿದೆ. ಆರೋಪ-ಪ್ರತ್ಯಾರೋಪ ಪಕ್ಕಕ್ಕಿಟ್ಟು ಸಂತ್ರಸ್ತರ ನೆರವಿಗೆ ಕೈ ಜೋಡಿಸಬೇಕಿದೆ. ರಾಜ್ಯ ಸರ್ಕಾರದ ಜತೆಗೆ ಕೇಂದ್ರದ ನೆರವು ತರಲು ಸಾಂ ಕ ಪ್ರಯತ್ನ ನಡೆಸಬೇಕಿದೆ. ಇದರ ಜತೆಗೆ ಶಾಶ್ವತ ಪರಿಹಾರ ಕ್ರಮದತ್ತಲೂ ಗಮನ ಹರಿಸಬೇಕಿದೆ.

ಮಹಾರಾಷ್ಟ್ರದಿಂದ ಏಕಾಏಕಿ ಹರಿದು ಬರುವ ನೀರಲ್ಲಿ ಇಲ್ಲಿನ ಜನರ ಬದುಕನ್ನೇ ಕೊಚ್ಚಿಕೊಂಡು ಹೋಗುತ್ತಿದೆ. “ಕೊಯ್ನಾ ಕಣ್ಣೀರಿಗೆ’ ಉತ್ತರ ಕರ್ನಾಟಕದ ಜನಜೀವನವೇ ಹಾಳಾಗುತ್ತಿದೆ. ಇದಕ್ಕೆ ದೂರದೃಷ್ಟಿಯೊಂದಿಗೆ ಸಮಯೋಚಿತ ನಿರ್ಧಾರ ಕೈಕೊಳ್ಳಲೇಬೇಕಿದೆ. ನೆರೆ ನಿಂತ ಮೇಲೆ ಸಾಂಕ್ರಾಮಿಕ ರೋಗ ಭೀತಿಯೂ ಸವಾಲೇ ಸರಿ. ಅದನ್ನು ಎದುರಿಸಲು ಈಗಿನಿಂದಲೇ ಸಜ್ಜಾಗಬೇಕು. ಇದು ಉತ್ತರ ಕರ್ನಾಟಕಕ್ಕೆ ತುರ್ತು ಪರಿಸ್ಥಿತಿ ಎಂದರೂ ಅತಿಶಯೋಕ್ತಿ ಅಲ್ಲ. ಇದೆಲ್ಲವನ್ನೂ ಸಮರ್ಥವಾಗಿ ಎದುರಿಸಲು ಸರ್ಕಾರ ಮೈಕೊಡವಿ ಮೇಲೆದ್ದು ಸಜ್ಜಾಗಬೇಕಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಹಿಂದೆ ರಾಮಕೃಷ್ಣ ಹೆಗಡೆ ಮತ್ತು ಎಚ್ ಡಿ ದೇವೇಗೌಡರ ನಡುವಿನ ರಾಜಕೀಯ ಗುದ್ದಾಟಕ್ಕೆ ಫೋನ್‌ ಕದ್ದಾಲಿಕೆ ಕಾರಣವಾಗಿತ್ತು. ಈಗ ದೇವೇಗೌಡರ ಪುತ್ರ ಕುಮಾರಸ್ವಾಮಿ...

  • ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡ ಬಳಿಕ ದಿಕ್ಕು ತೋಚದಂತಾಗಿರುವ ಪಾಕಿಸ್ಥಾನ ಅಂತರಾಷ್ಟ್ರೀಯ ಸಮುದಾಯದೆದುರು ಬೆತ್ತಲಾಗುತ್ತಿದೆ....

  • ಇಡೀ ಜಗತ್ತೇ ಗಾಢನಿದ್ರೆಯಲ್ಲಿರುವ ಈ ಅಪರಾತ್ರಿಯಲ್ಲಿ ಭಾರತವು ಹೊಸ ಸ್ವಾತಂತ್ರ್ಯ ಮತ್ತು ಬದುಕಿನತ್ತ ತೆರೆದುಕೊಳ್ಳಲಿದೆ...'' ಅದು 1947 ಆಗಸ್ಟ್‌ 14ರ ಅಪರಾತ್ರಿ....

  • ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಿಂದ ಮಾಡಿದ 73ನೇ ಸ್ವಾತಂತ್ರ್ಯೋತ್ಸವ ಭಾಷಣ ನವಭಾರತ ನಿರ್ಮಾಣ ಕುರಿತು ಅವರು ಹೊಂದಿರುವ ಚಿಂತನೆಗಳ ಹೊಳಹನ್ನು ನೀಡಿದೆ....

  • ದೇಶದ ವಾಹನ ಉದ್ಯಮ ತೀವ್ರ ಬಿಕ್ಕಟ್ಟಿನಲ್ಲಿದೆ. ಭಾರತೀಯ ವಾಹನ ಉತ್ಪಾದಕರ ಒಕ್ಕೂಟ ಬಿಡುಗಡೆಗೊಳಿಸಿರುವ ಅಂಕಿ-ಅಂಶಗಳು ಈ ಉದ್ಯಮದ ನಿರಾಶಾದಾಯಕ ಚಿತ್ರಣವನ್ನು...

ಹೊಸ ಸೇರ್ಪಡೆ