ಬಹುಪಕ್ಷೀಯ ವ್ಯವಸ್ಥೆ ಚರ್ಚೆಯಾಗಲಿ ಲೋಪದೋಷ

Team Udayavani, Sep 19, 2019, 5:15 AM IST

ಇನ್ನೂ ಬೆಳೆಯುತ್ತಿರುವ ಪ್ರಜಾತಂತ್ರ ವ್ಯವಸ್ಥೆಗೆ ದ್ವಿಪಕ್ಷೀಯ ಪದ್ಧತಿ ಸ್ವೀಕರಾರ್ಹ ಅಲ್ಲ. ಆದರೆ ಬಹುಪಕ್ಷೀಯ ಪದ್ಧತಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ಇದು ಸಕಾಲ.

ದೇಶದ ಬಹುಪಕ್ಷೀಯ ರಾಜಕೀಯ ವ್ಯವಸ್ಥೆಯಿಂದಾಗಿರುವ ಲಾಭಗಳ ಕುರಿತು ಪ್ರಶ್ನೆಯನ್ನೆತ್ತುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತೂಮ್ಮೆ ಜೇನುಗೂಡಿಗೆ ಕಲ್ಲೆಸೆದಿದ್ದಾರೆ. ದಿಲ್ಲಿಯಲ್ಲಿ ಜರುಗಿದ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ಸಂದರ್ಭದಲ್ಲಿ ಜನರಿಗೆ ಸಮಾನ ಹಕ್ಕುಗಳು ಸಿಗಬೇಕು ಮತ್ತು ಅಡಚಣೆ ರಹಿತ ಅಭಿವೃದ್ಧಿಯಾಗಬೇಕೆಂಬ ಆಶಯದಿಂದ ನಾವು ಬಹುಪಕ್ಷೀಯ ರಾಜಕೀಯ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದೇವೆ. ಸ್ವಾತಂತ್ರ್ಯ ಸಿಕ್ಕಿ 70 ವರ್ಷ ಕಳೆದ ಬಳಿಕ ಬಹುಪಕ್ಷೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಜನರ ಮನಸ್ಸಿನಲ್ಲಿ ಅನುಮಾನಗಳಿವೆ. ಇದರಿಂದ ಉದ್ದೇಶಿತ ಗುರಿಯನ್ನು ತಲುಪಲು ಸಾಧ್ಯವಾಗಿದೆಯೇ ಎಂದು ಅವರು ಕೇಳುತ್ತಿದ್ದಾರೆ. ಪ್ರಚಲಿತ ರಾಜಕೀಯ ವ್ಯವಸ್ಥೆಯಿಂದ ಜನರು ಭ್ರಮೆ ನಿರಸನಗೊಂಡಿದ್ದಾರೆ ಎಂಬರ್ಥದಲ್ಲಿ ಮಾತನಾಡಿದ್ದಾರೆ ಶಾ.

ಇದಕ್ಕೆ ವಿವಿಧ ರಾಜಕೀಯ ಪಕ್ಷಗಳಿಂದ ಅಂತೆಯೇ ಬಿಜೆಪಿಯನ್ನು ಖಂಡಾ ತುಂಡವಾಗಿ ವಿರೋಧಿಸುವವರಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಬಿಜೆಪಿ ಒಂದು ದೇಶ, ಒಂದೇ ಪಕ್ಷ, ಒಂದು ಚುನಾವಣೆ , ಒಂದೇ ಭಾಷೆ… ಹೀಗೆ “ಏಕಚಕ್ರಾಧಿಪತ್ಯ’ದ ತನ್ನ ರಹಸ್ಯ ಕಾರ್ಯಸೂಚಿಯನ್ನು ಅನುಷ್ಠಾನಿಸುತ್ತಿದೆ ಎಂಬ ರಾಜಕೀಯ ಕಾರಣವುಳ್ಳ ಟೀಕೆಯನ್ನು ಪಕ್ಕಕ್ಕಿಟ್ಟರೂ ಈ ಬಗ್ಗೆ ಒಂದು ಮುಕ್ತವಾದ ಚರ್ಚೆ ಯಾಗಬೇಕು ಎನ್ನುವ ವಿಚಾರವನ್ನು ಒಪ್ಪಿಕೊಳ್ಳಬಹುದು.

ಪ್ರಸ್ತುತ ದೇಶದಲ್ಲಿ ಎರಡು ಸಾವಿರಕ್ಕೂ ಅಧಿಕ ರಾಜಕೀಯ ಪಕ್ಷಗಳಿವೆ. ಈ ಪೈಕಿ ಎಂಟು ರಾಷ್ಟ್ರೀಯ ಪಕ್ಷಗಳು ಮತ್ತು ಐವತ್ತೂ ಚಿಲ್ಲರೆ ರಾಜ್ಯ ಮಟ್ಟದ ಪಕ್ಷಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಪಕ್ಷಗಳ ವ್ಯಾಪ್ತಿ ಬಹಳ ಸೀಮಿತ. ನಮ್ಮ ದೇಶದಲ್ಲಿ ರಾಜಕೀಯ ಪಕ್ಷಗಳನ್ನು ಸ್ಥಾಪಿಸುವುದು ದೊಡ್ಡ ಸಂಗತಿಯೇ ಅಲ್ಲ.ನಾಯಕನಿಗೊಂದು ಪಕ್ಷ, ಕುಟುಂಬಕ್ಕೊಂದು ಪಕ್ಷ, ಜಿಲ್ಲೆಗೊಂದು ಪಕ್ಷ…ಹೀಗೆ ಜನರು ತಮ್ಮ ಅಗತ್ಯಗಳಿಗೆ ತಕ್ಕಂತೆ ಪಕ್ಷಗಳನ್ನು ಸ್ಥಾಪಿಸಿಕೊಳ್ಳಬಹುದು. ಈ ಮಾದರಿಯ ಪಕ್ಷಗಳಿಗೆ ಗಟ್ಟಿಯಾದ ತಾತ್ವಿಕ ನೆಲೆಗಟ್ಟಾಗಲಿ, ಸೈದ್ಧಾಂತಿಕ ನಿಲುವುಗಳಾಗಲಿ ಇರುವುದಿಲ್ಲ. ಯಾರು ಆ ಪಕ್ಷದ ನಾಯಕ ಎಂಬುದರ ಮೇಲೆ ಅವುಗಳ ನೀತಿ-ಸಿದ್ಧಾಂತಗಳು ನಿರ್ಧಾರವಾಗುತ್ತವೆ. ಎಲ್ಲ ಪಕ್ಷಗಳ ಮೂಲ ಉದ್ದೇಶ

ಒಂದೇ ಆಗಿದ್ದರೂ ಅವುಗಳು ಚುನಾವಣೆಯಲ್ಲಿ ಭಿನ್ನ ಘಟಕಗಳಾಗಿ ಸ್ಪರ್ಧಿಸುತ್ತವೆ. ಸ್ಥಳೀಯ ಅಥವಾ ವಿಧಾನಸಭೆ ಚುನಾವಣೆಯಲ್ಲಾದರೆ ಪರವಾಗಿಲ್ಲ, ಆದರೆ ಸಮಸ್ಯೆ ಎದುರಾಗುವುದು ಸಾರ್ವತ್ರಿಕ ಚುನಾವಣೆ ನಡೆಯುವಾಗ. ಹಾಗೆಂದು ಭಾರತದಂಥ ನೂರಾರು ಭಾಷೆ, ಸಂಸ್ಕೃತಿ, ರೀತಿ ರಿವಾಜುಗಳಿರುವ ಬಹುತ್ವವನ್ನು ಪ್ರತಿನಿಧಿಸುವ ದೇಶವನ್ನು ಬರೀ ಎರಡು ಪಕ್ಷಗಳು ಪ್ರತಿನಿಧಿಸಿದರೆ ಸಾಕೇ ಎಂಬ ಪ್ರಶ್ನೆಯೂ ಸಮುಚಿತವಾದದ್ದೇ. ಸಂಸದೀಯ ಪ್ರಜಾಪ್ರಭುತ್ವದ ಸೊಗಸು ಇರುವುದೇ ಭಿನ್ನತೆಯಲ್ಲಿ. ಇಲ್ಲಿ ಪ್ರತಿಯೊಬ್ಬರ ಧ್ವನಿಯೂ ಕೇಳಿಸಬೇಕು. ದ್ವಿಪಕ್ಷೀಯ ಪದ್ಧತಿಯಲ್ಲಿ ಇಲ್ಲದ ಆಯ್ಕೆಯ ಸ್ವಾತಂತ್ರ್ಯ ಬಹುಪಕ್ಷೀಯ ವ್ಯವಸ್ಥೆಯಲ್ಲಿ ಸಿಗುತ್ತದೆ. ಬಹುಪಕ್ಷೀಯ ರಾಜಕೀಯ ವ್ಯವಸ್ಥೆಯಲ್ಲಿ ಮತದಾರನಿಗೆ ತಾನು ನಂಬಿದ, ತನ್ನ ನಿಲುವನ್ನು ಪ್ರತಿಪಾದಿಸುವ ಪಕ್ಷಕ್ಕೆ ಮತ ಹಾಕುವ ಮುಕ್ತ ಆಯ್ಕೆ ಇದೆ. ಈ ಕಾರಣಕ್ಕಾಗಿ ನಮಗೆ ಬಹುಪಕ್ಷೀಯ ರಾಜಕೀಯ ವ್ಯವಸ್ಥೆಯೇ ಸೂಕ್ತ ಎನ್ನುವುದು ಈ ವಾದದ ಪರವಾಗಿರುವವರ ವಿಚಾರ.

ಅಮೆರಿಕ, ಬ್ರಿಟನ್‌, ಬೆಲ್ಜಿಯಂ ಮತ್ತಿತರ ದೇಶಗಳಲ್ಲಿರುವಂಥ ದ್ವಿಪಕ್ಷೀಯ ಪದ್ಧತಿ ಬಹುತ್ವವನ್ನು ಬದುಕಿನ ಜೀವಾಳವಾಗಿ ಮಾಡಿ ಕೊಂಡಿರುವ ಭಾರತದಂಥ ವೈವಿಧ್ಯತೆಯ ದೇಶಕ್ಕೆ ಸೂಕ್ತವಾದುದಲ್ಲ ಎನ್ನುವುದು ನಿಜ. ಹಾಗೆಂದು ಈಗಿರುವ ಸಾವಿರಾರು ಪಕ್ಷಗಳ ಪ್ರಜಾಪ್ರಭುತ್ವ ವ್ಯವಸ್ಥೆಯೂ ಸರಿಯಾಗಿಲ್ಲ ಎನ್ನುವುದೂ ಅಷ್ಟೇ ನಿಜ. ದೋಷ ನಮ್ಮ ಪ್ರಜಾತಂತ್ರ ವ್ಯವಸ್ಥೆಯನ್ನು ಯಾವ ರೀತಿ ಬಳಸಿಕೊಂಡಿದ್ದೇವೆ ಎಂಬುದರಲ್ಲಿದೆ. ಇನ್ನೂ ಬೆಳೆಯುತ್ತಲೇ ಇರುವ ಪ್ರಜಾತಂತ್ರ ವ್ಯವಸ್ಥೆಗೆ ದ್ವಿಪಕ್ಷೀಯ ಪದ್ಧತಿ ಸ್ವೀಕಾರಾರ್ಹ ಅಲ್ಲವೇ ಅಲ್ಲ. ಆದರೆ ಬಹುಪಕ್ಷೀಯ ಪದ್ಧತಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ಇದು ಸಕಾಲ. ಅಮಿತ್‌ ಶಾ ಹೇಳಿಕೆ ಏಕಚಕ್ರಾಧಿಪತ್ಯವನ್ನು ಸ್ಥಾಪಿಸುವ ಹುನ್ನಾರ ಎಂದು ಷರಾ ಬರೆಯುವ ಮೊದಲು ಬಹುಪಕ್ಷೀಯ ವ್ಯವಸ್ಥೆಯಲ್ಲಿ ಎಲ್ಲಿ, ಏನು ಸುಧಾರಣೆಯಾಗಬೇಕು ಎಂಬುದರ ಬಗ್ಗೆ ಮುಕ್ತವಾದ ಚರ್ಚೆ ನಡೆಯಬೇಕಿರುವುದು ಇಂದಿನ ಅಗತ್ಯ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ