ಫ‌ಲಿತಾಂಶವನ್ನು ಸಹಜವಾಗಿ ಸ್ವೀಕರಿಸಿ

Team Udayavani, May 23, 2019, 6:00 AM IST

ಅತ್ಯಂತ ತುರುಸಿನಿಂದ ನಡೆದ ಲೋಕಸಭಾ ಚುನಾವಣೆಯ ಫ‌ಲಿತಾಂಶ ಇಂದು ಸಂಜೆಯ ಹೊತ್ತಿಗಾಗುವಾಗ ಲಭ್ಯವಾಗಲಿದೆ. ಮತ ಎಣಿಕೆಗಾಗಿ ವ್ಯಾಪಕ ತಯಾರಿ ನಡೆದಿದ್ದು ಪ್ರಪಂಚವೇ ಈ ಫ‌ಲಿತಾಂಶವನ್ನು ಭಾರೀ ಕಾತರದಿಂದ ಎದುರು ನೋಡುತ್ತಿದೆ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ಅತಿ ದೊಡ್ಡ ಚುನಾವಣೆಯ ಫ‌ಲಿತಾಂಶ ಈ ಪರಿಯ ಕಾತರ ಮತ್ತು ಕುತೂಹಲ ಹುಟ್ಟುಹಾಕಲು ಕಾರಣ ದೇಶದ ಪ್ರಜಾತಂತ್ರದ ಅಂತಃಸತ್ವ. ರಾಜಕೀಯ ನಾಯಕರು ಎಷ್ಟೇ ಹಾರಾಡಿದರೂ ಅಂತಿಮವಾಗಿ ಅವರ ಹಣೆಬರಹ ನಿರ್ಧರಿಸುವುದು ಜನಸಾಮಾನ್ಯರು. ಸುದೀರ್ಘ‌ ಮತ್ತು ಅಷ್ಟೇ ಬೃಹತ್‌ ಆಗಿದ್ದ ಚುನಾವಣಾ ಪ್ರಕ್ರಿಯೆಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಚುನಾವಣಾ ಆಯೋಗ ಯಶಸ್ವಿಯಾಗಿದೆ. ಇದಕ್ಕಾಗಿ ಆಯೋಗವನ್ನು ಅಭಿನಂದಿಸಬೇಕು.

ಮತದಾನೋತ್ತರ ಸಮೀಕ್ಷೆಗಳು ಈ ಬಾರಿಯ ಫ‌ಲಿತಾಂಶ ಹೇಗಿರಬಹುದು ಎಂಬುದರ ಸುಳಿವನ್ನು ನೀಡಿವೆ. ಆದರೆ ಅದು ಪಕ್ಕಾ ಆಗಲು ಮತ ಎಣಿಕೆಯಾಗಬೇಕು. ಅದಾಗ್ಯೂ ಸಮೀಕ್ಷೆಗಳ ಫ‌ಲಿತಾಂಶವನ್ನು ನಂಬಿಕೊಂಡು ವಿಪಕ್ಷಗಳೆಲ್ಲ ಮತಯಂತ್ರ ಮತ್ತು ಚುನಾವಣಾ ಆಯೋಗವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ದೂಷಿಸುತ್ತಿರುವುದು ಸಮರ್ಪಕ ನಡೆಯಲ್ಲ. ಫ‌ಲಿತಾಂಶ ಏನೇ ಇರಲಿ ಅದು ಜನರು ನೀಡಿದ ತೀರ್ಪು ಎನ್ನುವುದನ್ನು ಒಪ್ಪಿಕೊಳ್ಳುವ ವಿಶಾಲ ಮನಸು ಜನನಾಯಕರಲ್ಲಿ ಇರಬೇಕು. ಯಾರು ಸೋತರೂ ಯಾರು ಗೆದ್ದರೂ ಅಂತಿಮವಾಗಿ ಅದು ಪ್ರಜಾತಂತ್ರದ ಸೋಲು ಅಥವಾ ಗೆಲುವು ಎಂದೇ ನಿಷ್ಕರ್ಷಿಸಲ್ಪಡುತ್ತದೆ. ತಮ್ಮ ವರ್ತನೆಯಿಂದ ಪ್ರಜಾತಂತ್ರದ ಪಾವಿತ್ರ್ಯಕ್ಕೆ ಧಕ್ಕೆಯಾಗಬಾರದು ಎಂಬ ಎಚ್ಚರಿಕೆ ರಾಜಕೀಯ ನಾಯಕರಲ್ಲಿರಬೇಕು. ಫ‌ಲಿತಾಂಶಕ್ಕೂ ಮೊದಲೇ ನ್ಯಾಯಬದ್ಧವಾಗಿ ಚುನಾವಣೆ ನಡೆದಿಲ್ಲ ಎಂದು ಸಾಮೂಹಿಕವಾಗಿ ಎನ್ನುವವರು ಒಂದು ವೇಳೆ ತಾವು ಗೆದ್ದರೆ ಈ ಮಾತನ್ನು ಒಪ್ಪಿಕೊಳ್ಳಲು ತಯಾರಿದ್ದಾರೆಯೇ?

ಮತಯಂತ್ರಗಳನ್ನು ದೂಷಿಸುವುದರ ಹಿಂದೆ ಚುನಾವಣಾ ವ್ಯವಸ್ಥೆಯನ್ನು ಮರಳಿ ಮತಪತ್ರಗಳ ಕಾಲಕ್ಕೊಯ್ಯುವ ಹುನ್ನಾರವಿದ್ದಂತೆ ಕಾಣಿಸುತ್ತದೆ. ಮತಯಂತ್ರಗಳು ಬಂದ ಬಳಿಕ ಮತಗಟ್ಟೆ ವಶೀಕರಣ, ಅಕ್ರಮ ಮತದಾನ ಇತ್ಯಾದಿ ಕೃತ್ಯಗಳು ಇಲ್ಲವೇ ಇಲ್ಲ ಎಂಬಷ್ಟು ಕಡಿಮೆಯಾಗಿವೆ. ಇಡೀ ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಮತಯಂತ್ರಗಳು ಕಾರಣವಾಗಿವೆ. ಇಂಥ ವ್ಯವಸ್ಥೆಯ ಮೇಲೆ ಅನುಮಾನ ವ್ಯಕ್ತಪಡಿಸುವುದು ಎಂದರೆ ಪ್ರಜಾತಂತ್ರದ ಮೇಲೆ ಅನುಮಾನ ವ್ಯಕ್ತಪಡಿಸಿದಂತೆ.

ಪ್ರತಿ ಐದು ವರ್ಷಗಳಿಗೊಮ್ಮೆ ಬರುವ ಲೋಕಸಭಾ ಚುನಾವಣೆ ರಾಜಕೀಯವಾಗಿ ಮಾತ್ರ ಮಹತ್ವದ್ದಲ್ಲ. ಇಡೀ ದೇಶದ ಭವಿಷ್ಯ ನಿರ್ಧಾರವಾಗುವುದು ಈ ಚುನಾವಣೆಯ ಫ‌ಲಿತಾಂಶದ ಮೇಲೆ. ಈ ದೃಷ್ಟಿಯಿಂದ ಹೇಳುವುದಾರೆ 2014ರ ಚುನಾವಣೆ ದೇಶವನ್ನು ಇನ್ನೊಂದು ಆಯಾಮಕ್ಕೆ ತಿರುಗಿಸಿದ ಪ್ರಮುಖ ಘಟ್ಟವಾಗಿತ್ತು. ಇದೀಗ 2019ರ ಚುನಾವಣೆ ಅದಕ್ಕಿಂತಲೂ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಮುಂದಿನ ಐದು ವರ್ಷ ದೇಶದ ಪರಿಸ್ಥಿತಿಯನ್ನು ಮಾತ್ರವಲ್ಲದೆ ಮುಂದಿನ ಹಲವು ದಶಕಗಳ ಭವಿಷ್ಯವನ್ನು ನಿರ್ಧರಿಸುವ ಸಾಮರ್ಥ್ಯ ಈ ಚುನಾವಣೆಗಿದೆ.

ಚುನಾವಣೆಯಲ್ಲಿ ಸೋಲು -ಗೆಲುವು ಸಾಮಾನ್ಯ. ಸೋತಾಗ ಕುಗ್ಗದೆ ಗೆದ್ದಾಗ ಬೀಗದೆ ಸಮಚಿತ್ತ ಕಾಯ್ದುಕೊಳ್ಳುವವನೇ ನಿಜವಾದ ಜನನಾಯಕ ಎಂದೆನಿಸಿಕೊಳ್ಳುತ್ತಾನೆ. ಆದರೆ ಪ್ರಸ್ತುತ ರಾಜಕಾರಣದಲ್ಲಿ ಈ ಮಾದರಿಯ ನಾಯಕರು ವಿರಳರಾಗುತ್ತಿರುವುದು ದುರದೃಷ್ಟಕರ. ಇತ್ತೀಚೆಗಿನ ದಶಕಗಳಲ್ಲಿ ಚುನಾವಣಾ ಸಂದರ್ಭದ ಹಿಂಸಾಚಾರ ಬಹಳಷ್ಟು ಕಡಿಮೆಯಾಗಿದೆ. 2009 ಮತ್ತು 2014ರ ಚುನಾವಣೆ ಬಹುತೇಕ ಶಾಂತಿಯುತವಾಗಿತ್ತು. 2019ರಲ್ಲೂ ಪಶ್ಚಿಮ ಬಂಗಾಳ ಹೊರತುಪಡಿಸಿದರೆ ಉಳಿದೆಡೆ ಶಾಂತಿಯುತ ಮತದಾನ ನಡೆದಿದೆ. ಇದೇ ಸ್ಥಿತಿಯನ್ನು ಫ‌ಲಿತಾಂಶ ಪ್ರಕಟವಾದ ಬಳಿಕವೂ ಕಾಯ್ದುಕೊಳ್ಳುವುದು ಅಗತ್ಯ.

ರಾಜಕೀಯದಲ್ಲಿ ಶಾಶ್ವತ ಮಿತ್ರರೂ ಇಲ್ಲ ಶಾಶ್ವತ ಶತ್ರುಗಳೂ ಇಲ್ಲ ಎಂಬ ಮಾತಿದೆ. ಅದೇ ರೀತಿ ಸೋಲು ಅಥವಾ ಗೆಲುವು ಕೂಡಾ ಕಾಯಂ ಅಲ್ಲ ಎನ್ನಬಹುದು. ಇಂದು ಸೋತವನಿಗೆ ನಾಳೆ ಗೆಲ್ಲುವ ಅವಕಾಶ ಸಿಗಬಹುದು. ಅದೇ ರೀತಿ ಪಕ್ಷಗಳ, ಅಭ್ಯರ್ಥಿಗಳ ಬೆಂಬಲಿಗರು ಸೋಲು ಅಥವಾ ಗೆಲುವನ್ನು ಗಂಭೀರವಾಗಿ ಪರಿಗಣಿಸಿ ಉನ್ಮಾದಕರವಾಗಿ ವರ್ತಿಸಬಾರದು. ತಾವು ಬೆಂಬಲಿಸಿದ ಅಭ್ಯರ್ಥಿ ಸೋತ ನೋವಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದು ಅಥವಾ ಹಿಂಸಾಚಾರ ನಡೆಸುವುದೆಲ್ಲ ಸಲ್ಲ. ಚುನಾವಣೆಯಲ್ಲಿ ಭಾವನಾತ್ಮಕತೆಯಿಂದ ಹೆಚ್ಚಾಗಿ ಪ್ರಬುದ್ಧತೆಗೆ ಮಹತ್ವವಿದೆ. ಮತದಾನ ಮಾತ್ರವಲ್ಲದೆ ಅನಂತರದ ಪ್ರಕ್ರಿಯೆಗಳೂ ಶಾಂತಿಯುತವಾಗಿ ನಡೆದರೆ ಮಾತ್ರ ಪ್ರಜಾತಂತ್ರ ಪ್ರಬುದ್ಧ ಎಂದು ಕರೆಸಿಕೊಳ್ಳುತ್ತದೆ. ಇಂಥ ಪ್ರಬುದ್ಧತೆ ಬರಬೇಕಾದರೆ ಫ‌ಲಿತಾಂಶವನ್ನು ಸಹಜವಾಗಿ ಸ್ವೀಕರಿಸುವ ಮನೋದಾಢ‌ ಅಭ್ಯರ್ಥಿಗಳಿಗೆ ಮಾತ್ರವಲ್ಲ ಜನರಿಗೂ ಇರಬೇಕು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ