ರಾಜಕೀಯ ಬಾನಂಗಳದ ಪ್ರಖರ ಅರುಣ

Team Udayavani, Aug 26, 2019, 5:37 AM IST

ಸುಷ್ಮಾ ಸ್ವರಾಜ್‌ ನಿಧನದ ಸೂತಕದ ಛಾಯೆಯಿಂದ ದೇಶವಿನ್ನೂ ಹೊರಬರುವ ಮೊದಲೇ ಇನ್ನೋರ್ವ ಶ್ರೇಷ್ಠ ನಾಯಕ ಅರುಣ್‌ ಜೇಟ್ಲಿ ನಿಧನರಾಗಿದ್ದಾರೆ. ಈ ಮೂಲಕ ದೇಶ ಒಂದೇ ವರ್ಷದಲ್ಲಿ ನಾಲ್ವರು ಪ್ರಮುಖ ನಾಯಕರನ್ನು ಕಳೆದುಕೊಂಡಂತಾಗಿದೆ. ಅನಂತ ಕುಮಾರ್‌ ಮತ್ತು ಮನೋಹರ ಪಾರಿಕ್ಕರ್‌ ಇನ್ನಿಬ್ಬರು. ದೀರ್ಘ‌ಕಾಲದ ಅನಾರೋಗ್ಯದಿಂದ ಶನಿವಾರ ವಿಧಿವಶರಾದ ಜೇಟ್ಲಿ ತನ್ನದೇ ರೀತಿಯಲ್ಲಿ ದೇಶದ ರಾಜಕೀಯ ಕ್ಷಿತಿಜದಲ್ಲಿ ಛಾಪು ಮೂಡಿಸಿದವರು. ನರೇಂದ್ರ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಅತ್ಯಂತ ಪ್ರಮುಖವಾದ ಹಣಕಾಸು ಸಚಿವಾಲಯ ಹಾಗೂ ಕೊಂಚ ಸಮಯ ರಕ್ಷಣಾ ಸಚಿವಾಲಯವನ್ನೂ ನಿಭಾಯಿಸಿದ ಅವರು ಹಲವು ಕ್ರಾಂತಿಕಾರಿ ಬದಲಾವಣೆಗೆ ಕಾರಣಕರ್ತರಾಗಿದ್ದರು.

ಅರುಣ್‌ ಜೇಟ್ಲಿ ನಿಧನ ಬಿಜೆಪಿಗೆ ನಿಜವಾದ ಅರ್ಥದಲ್ಲಿ ತುಂಬಲಾರದ ನಷ್ಟ. ಅವರ ಅಗಲಿಕೆಯಿಂದ ಉಂಟಾಗಿರುವ ಶೂನ್ಯವನ್ನು ತುಂಬಿಸಿಕೊಳ್ಳುವುದು ಎಣಿಸಿದಷ್ಟು ಸುಲಭವಲ್ಲ. ಇದಕ್ಕೆ ಕಾರಣ ಪಕ್ಷದಲ್ಲಿ ಜೇಟ್ಲಿಯವರಿಗೆ ಇದ್ದ ಸ್ಥಾನ. ಪಕ್ಷ ಸಂಕಟದಲ್ಲಿದ್ದಾಗಲೆಲ್ಲ ನೆರವಿಗೆ ಧಾವಿಸುತ್ತಿದ್ದವರು ಜೇಟ್ಲಿ. ಹೀಗಾಗಿಯೇ ಅವರನ್ನು ಟ್ರಬಲ್ ಶೂಟರ್‌ ಅರ್ಥಾತ್‌ ಸಂಕಟ ನಿವಾರಕ ಎಂಬುದಾಗಿ ಬಣ್ಣಿಸಲಾಗುತ್ತಿತ್ತು.

ಬಿಜೆಪಿಯ ಚಿಂತಕರ ಗುಂಪಿನಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದವರು ಜೇಟ್ಲಿ. ಸುದೀರ್ಘ‌ ಕಾಲ ರಾಜಕೀಯದಲ್ಲಿದ್ದರು. 2014ರಿಂದ 2019ರ ಅವಧಿ ಅತ್ಯಂತ ಮಹತ್ವದ್ದಾಗಿತ್ತು. ನರೇಂದ್ರ ಮೋದಿ ಪಾಲಿಗೆ ಜೇಟ್ಲಿ ‘ಕಣ್ಣು ‘ಮತ್ತು ‘ಕಿವಿ’ಯಾಗಿದ್ದರು. ಈ ಅವಧಿಯಲ್ಲಿ ಸರಕಾರ ಕೈಗೊಂಡ ಎಲ್ಲಾ ಪ್ರಮುಖ ನಿರ್ಧಾರಗಳಲ್ಲಿ ಜೇಟ್ಲಿಯವರ ಕೊಡುಗೆ ಇತ್ತು. ಯಾವುದೇ ಗಹನವಾದ ವಿಚಾರವನ್ನು ಮೋದಿ ಮೊದಲು ಚರ್ಚಿಸುತ್ತಿದ್ದದ್ದು ಜೇಟ್ಲಿಯವರ ಬಳಿ.

ಪ್ರಮೋದ್‌ ಮಹಾಜನ್‌, ಜೇಟ್ಲಿ, ಸುಷ್ಮಾ, ಪಾರಿಕ್ಕರ್‌, ಅನಂತ ಕುಮಾರ್‌ ಇವರೆಲ್ಲ ಬಿಜೆಪಿಯ ಎರಡನೇ ತಲೆಮಾರಿನ ಪ್ರಮುಖ ನಾಯಕರು ಎಂದು ಗುರುತಿಸಿಕೊಂಡಿದ್ದವರು. ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್. ಕೆ. ಆಡ್ವಾಣಿ ಗರಡಿಯಲ್ಲಿ ಪಳಗಿ ಬಂದವರು ಇವರು. ಆದರೆ ಎಲ್ಲರೂ ಅಕಾಲಿಕವಾಗಿ ವಿಧಿವಶವಾಗಿರುವುದು ದುರದೃಷ್ಟಕರ.

ವಿದ್ಯಾರ್ಥಿ ನಾಯಕನಾಗಿ ಸಾರ್ವಜನಿಕ ಬದುಕು ಪ್ರಾರಂಭಿಸಿದವರು ಜೇಟ್ಲಿ. ಅನಂತರ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಗಮನ ಸೆಳೆದಿದ್ದರು. ಹೋರಾಟದ ಹಿನ್ನೆಲೆಯುಳ್ಳ, ಉತ್ತಮ ವಾಗ್ಮಿಯಾಗಿದ್ದ ಜೇಟ್ಲಿಗೆ ಯಾವ ಪಕ್ಷದಲ್ಲಿ ಬೇಕಾದರೂ ಉತ್ತಮ ಸ್ಥಾನ ಸಿಗುತ್ತಿತ್ತು. ಆದರೆ ಅವರು ತನ್ನ ಸಿದ್ಧಾಂತ ಮತ್ತು ನಂಬಿಕೆಗಳಿಗೆ ಹೊಂದಿಕೊಳ್ಳುವ ಬಿಜೆಪಿಯನ್ನು ಆರಿಸಿಕೊಂಡರು. ಬಿಜೆಪಿಯ ಬೆಳವಣಿಗೆಯಲ್ಲಿ ಜೇಟ್ಲಿಯವರ ಪಾಲೂ ಬಹಳಷ್ಟಿದೆ ಎನ್ನುವುದು ನಿರಾಕರಿಸಲಾಗದ ಸತ್ಯ. ಪಕ್ಷಕ್ಕೆ ಒಂದು ಸೈದ್ಧಾಂತಿಕ ನೆಲೆಗಟ್ಟನ್ನು ಒದಗಿಸಿಕೊಡುವಲ್ಲಿ ಉಳಿದವರ ಜತೆಗೆ ಅವರೂ ಶ್ರಮಿಸಿದ್ದಾರೆ. ಯಾವುದೇ ಸಂಕಷ್ಟದ ಸಮಯದಲ್ಲೂ ತಾನು ನಂಬಿದ ಸಿದ್ಧಾಂತಗಳಿಗೆ ಅವರು ಬದ್ಧವಾಗಿರುತ್ತಿದ್ದರು.

ನೋಟು ಅಮಾನ್ಯೀಕರಣ, ಜಿಎಸ್‌ಟಿ ಜಾರಿ ಈ ಮುಂತಾದ ಮಹತ್ವದ ಆರ್ಥಿಕ ಸುಧಾರಣೆಗಳು ಆಗಿದ್ದು ಜೇಟ್ಲಿ ಹಣಕಾಸು ಸಚಿವರಾಗಿದ್ದ ಕಾಲದಲ್ಲಿ. ಯಾವುದೇ ಸರ್ಕಾರಕ್ಕಾದರೂ ಇವು ಅಗ್ನಿಪರೀಕ್ಷೆಯಾಗುವಂಥ ಸುಧಾರಣೆಗಳು. ಈ ಅಗ್ನಿಪರೀಕ್ಷೆಯ ಬಿಸಿ ಸರ್ಕಾರಕ್ಕೆ ಬಹುವಾಗಿ ತಟ್ಟದಂತೆ ನೋಡಿಕೊಳ್ಳುವಲ್ಲಿ ಜೇಟ್ಲಿ ಯಶಸ್ವಿಯಾಗಿದ್ದರು. ಸರ್ಕಾರದ ವಿರುದ್ಧ ಕೇಳಿ ಬರುತ್ತಿದ್ದ ಟೀಕೆಗಳಿಗೆಲ್ಲ ಸಮರ್ಥವಾಗಿ ಉತ್ತರ ನೀಡುತ್ತಿದ್ದವರು ಜೇಟ್ಲಿ. ಅನಾರೋಗ್ಯದ ಸ್ಥಿತಿಯಲ್ಲೂ ಅವರು ಸರಕಾರದ ರಕ್ಷಣೆಗೆ ನಿಲ್ಲುವ ಕರ್ತವ್ಯವನ್ನು ಮರೆತಿರಲಿಲ್ಲ.

ತನಗಿದ್ದ ವಾಕ್ಚಾತುರ್ಯ ಮತ್ತು ಅಪಾರವಾದ ರಾಜಕೀಯ ಜ್ಞಾನದಿಂದ ಅವರೊಬ್ಬ ಜನಪ್ರಿಯ ಜಕಾರಣಿಯಾಗಬಹುದಿತ್ತು. ಆದರೆ ವೃತ್ತಿಪರ ರಾಜಕಾರಣದ ದಾರಿಯನ್ನು ಅವರು ಆರಿಸಿಕೊಳ್ಳಲಿಲ್ಲ. ರಾಜಕೀಯ ನೈತಿಕತೆ, ರಾಜಕೀಯ ಪಾವಿತ್ರ್ಯ ಈ ಮುಂತಾದ ಈಗ ವಿರಳವಾಗಿರುವ ಮೌಲ್ಯಗಳಿಗೆ ಅವರು ಮಹತ್ವ ಕೊಟ್ಟಿದ್ದರು. ಹೀಗಾಗಿ ಬಹುದೀರ್ಘ‌ಕಾಲ ರಾಜಕೀಯ ಕ್ಷೇತ್ರದಲ್ಲಿದ್ದರೂ ಭ್ರಷ್ಟಾಚಾರದ ಕಳಂಕ ಅವರಿಗೆ ತಟ್ಟಲಿಲ್ಲ. ರಾಜಕೀಯ ಕಾರಣಕ್ಕಾಗಿ ಭ್ರಷ್ಟಾಚಾರದ ಆರೋಪಕ್ಕೊಳಗಾದರೂ ಅದರಿಂದ ಅವರ ವ್ಯಕ್ತಿತ್ವ ಮುಕ್ಕಾಗಲಿಲ್ಲ. ಸಂಸತ್ತಿನಲ್ಲಿ ಅವರ ಅನೇಕ ಭಾಷಣಗಳು ಪ್ರಭಾವಶಾಲಿ ಯಾಗಿದ್ದವು. ವಿಷಯವನ್ನು ಕೂಲಂಕಷವಾಗಿ ಅಧ್ಯಯನ ಮಾಡದೆ ಅವರು ಮಾತನಾಡುತ್ತಿರಲಿಲ್ಲ. ಮಾತನಾಡಿದ ಬಳಿಕ ಕೇಳಲು ಪ್ರಶ್ನೆಗಳೇ ಉಳಿದಿರುತ್ತಿರಲಿಲ್ಲ. ಅಷ್ಟು ಪರಿಪಕ್ವವಾಗಿರುತ್ತಿತ್ತು ಅವರ ಮಾತು. ದೇಶದ ರಾಜಕೀಯ ಬಾನಿನಲ್ಲಿ ಬೆಳಗಿದ ಪ್ರಖರ ಅರುಣ ಜೇಟ್ಲಿ ಎನ್ನಲಡ್ಡಿಯಿಲ್ಲ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ದೇಶೀಯ ಕಾರ್ಪೊರೇಟ್‌ ಕಂಪನಿಗಳ ಮತ್ತು ಹೊಸ ಉತ್ಪಾದಕ ಕಂಪೆನಿಗಳ ಕಾರ್ಪೊರೇಟ್‌ ತೆರಿಗೆ ಕಡಿತ ಘೋಷಿಸುವ ಮೂಲಕ ಹಣಕಾಸು ಸಚಿವೆ...

  • ಸೈದ್ಧಾಂತಿಕ‌ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಪರಸ್ಪರರ ಮೇಲೆ ಗೌರವ ಮತ್ತು ಆತ್ಮೀಯ ಭಾವನೆ ಇರುವುದು ಆರೋಗ್ಯಕರ ರಾಜಕೀಯದ ಲಕ್ಷಣ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ...

  • ಇನ್ನೂ ಬೆಳೆಯುತ್ತಿರುವ ಪ್ರಜಾತಂತ್ರ ವ್ಯವಸ್ಥೆಗೆ ದ್ವಿಪಕ್ಷೀಯ ಪದ್ಧತಿ ಸ್ವೀಕರಾರ್ಹ ಅಲ್ಲ. ಆದರೆ ಬಹುಪಕ್ಷೀಯ ಪದ್ಧತಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು...

  • ಜಮ್ಮು-ಕಾಶ್ಮೀರದಲ್ಲಿ ಭಾರತ-ಪಾಕಿಸ್ತಾನಿ ಸೇನೆಯ ನಡುವೆ ಸೃಷ್ಟಿಯಾಗುತ್ತಿರುವ ಬಿಕ್ಕಟ್ಟು ಚಿಂತೆಯ ವಿಷಯವಾಗಿದೆ. ಅದರಲ್ಲೂ ಕಲಂ 370 ದಯಪಾಲಿಸಿದ್ದ ವಿಶೇಷಾಧಿಕಾರವನ್ನು...

  • ಹೂಸ್ಟನ್‌ ಕಾರ್ಯಕ್ರಮ ಪಾಕ್‌ ಹಾಗೂ ಚೀನಾಕ್ಕೊಂದು ಬಲವಾದ ಸಂದೇಶ ನೀಡುವುದು ಖಚಿತ. ಏನೇ ಮಾಡಿ ದರೂ ಜಾಗತಿಕ ವೇದಿಕೆಯಲ್ಲಿ ಭಾರತದ ಪಾರಮ್ಯವನ್ನು ತಡೆಯಲು ಸಾಧ್ಯವಿಲ್ಲ...

ಹೊಸ ಸೇರ್ಪಡೆ