ಅಧಿಕಾರಿಗಳ ಮೇಲೆ ಹಲ್ಲೆ ಅಪಾಯಕಾರಿ ನಡೆ

Team Udayavani, Jul 5, 2019, 5:57 AM IST

ಮಹಾರಾಷ್ಟ್ರದ ಕಂಕಾವಳಿಯಲ್ಲಿ ಕಾಂಗ್ರೆಸ್‌ ಶಾಸಕ ನಿತೇಶ್‌ ರಾಣೆ ಹೆದ್ದಾರಿ ಇಲಾಖೆಯ ಎಂಜಿನಿಯರ್‌ ಒಬ್ಬರ ಮೇಲೆ ಬಾಲ್ದಿಯಲ್ಲಿ ಕೆಸರು ನೀರು ತುಂಬಿಸಿ ಎರಚಿದ ಘಟನೆ ನಡೆದಿದೆ. ಮುಂಬಯಿ-ಗೋವಾ ಹೆದ್ದಾರಿಯ ರಸ್ತೆ ಹೊಂಡಗಳನ್ನು ದುರಸ್ತಿ ಮಾಡುವ ವಿಚಾರವಾಗಿ ರೊಚ್ಚಿಗೆದ್ದ ಶಾಸಕ ಈ ಕೃತ್ಯ ಎಸಗಿದ್ದಾರೆ. ಅವರು ಕಾಂಗ್ರೆಸ್‌ನ ಮಾಜಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿಯೂ ಆಗಿರುವ ನಾರಾಯಣ ರಾಣೆಯವರ ಪುತ್ರ.

ಇದಕ್ಕೂ ಮೊದಲು ಇಂದೋರ್‌ನಲ್ಲಿ ಬಿಜೆಪಿ ಶಾಸಕ ಆಕಾಶ್‌ ವಿಜಯ್‌ವರ್ಗೀಯ ಅವರು ಶಿಥಿಲಾವಸ್ಥೆಯಲ್ಲಿದ್ದ ಮನೆಯ ಜನರನ್ನು ತೆರವು ಗೊಳಿಸಲು ಬಂದ ನಗರಪಾಲಿಕೆ ಅಧಿಕಾರಿಯೊಬ್ಬರ ಮೇಲೆ ಕ್ರಿಕೆಟ್ ಬ್ಯಾಟ್ನಿಂದ ಹಲ್ಲೆ ಮಾಡಿರುವ ಘಟನೆ ದೇಶಾದ್ಯಂತ ಆಕ್ರೋಶದ ಕಿಡಿಯೆಬ್ಬಿಸಿತ್ತು. ಇವರು ಬಿಜೆಪಿಯ ಪ್ರಭಾವಿ ನಾಯಕ ಕೈಲಾಸ್‌ ವಿಜಯ್‌ ವರ್ಗೀಯ ಅವರ ಪುತ್ರ. ಇದರ ಬೆನ್ನಿಗೆ ತೆಲಂಗಾಣದಲ್ಲಿ ಶಾಸಕನ ಸಹೋದರ ಸರಕಾರಿ ಜಾಗದಲ್ಲಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಹಿಳಾ ಅರಣ್ಯಾಧಿಕಾರಿಯೊಬ್ಬರನ್ನು ಥಳಿಸಿದ ಘಟನೆ ಸಂಭವಿಸಿದೆ. ರಾಜಕೀಯ ನಾಯಕರು ಅಥವಾ ಅವರ ಕುಮ್ಮಕ್ಕಿನಿಂದ ಸರಕಾರಿ ನೌಕರರ ಮೇಲೆ ನಡೆಯುವ ಈ ಮಾದರಿಯ ಹಲ್ಲೆಗಳು ಅಧಿಕಾರಿಗಳ ನೈತಿಕ ಸ್ಥೈರ್ಯವನ್ನು ಕುಸಿಯುವಂತೆ ಮಾಡುತ್ತದೆ. ಈ ಮೂಲಕ ಒಟ್ಟು ಕಾರ್ಯಾಂಗದ ಮೇಲೆಯೇ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ.

ರಾಜಕಾರಣಿಗಳು ತಾವು ಜನರಿಗೆ ಸಹಾಯ ಮಾಡುತ್ತಿದ್ದೇವೆ, ಜನರ ಸಂಕಷ್ಟಗಳನ್ನು ಪರಿಹರಿಸದ ಅಧಿಕಾರಿಗಳಿಗೆ ಪಾಠ ಕಲಿಸಿದ್ದೇವೆ ಎಂದು ತಮ್ಮ ಗೂಂಡಾ ಕೃತ್ಯಗಳನ್ನು ಸಮರ್ಥಿಸಿಕೊಳ್ಳಬಹುದು. ಜನಪ್ರತಿನಿಧಿಗಳಿರುವುದು ಜನರ ಸಂಕಷ್ಟಗಳನ್ನು ನಿವಾರಿಸಲು ಎನ್ನುವುದು ಸರಿ. ಹಾಗೆಂದು ಕಾನೂನನ್ನು ಕೈಗೆ ತೆಗೆದುಕೊಳ್ಳುವ ಅಧಿಕಾರವನ್ನು ಅವರಿಗೆ ಯಾರೂ ಕೊಟ್ಟಿಲ್ಲ. ನಿಜವಾಗಿ ಅವರಿಗೆ ಜನರ ಬಗ್ಗೆ ಕಾಳಜಿಯಿದ್ದರೆ ಅದನ್ನು ಪರಿಹರಿಸಲು ಕಾನೂನಾ ತ್ಮಕವಾದ ಮತ್ತು ಸಂವಿಧಾನದ ಚೌಕಟ್ಟಿಗೊಳಪಟ್ಟಿರುವ ಅನೇಕ ದಾರಿಗಳಿವೆ. ಅದರಲ್ಲೂ ಅಧಿಕಾರ ಕೇಂದ್ರಕ್ಕೆ ನಿಕಟರಾಗಿರುವ ಶಾಸಕರು ಚಿಕ್ಕಪುಟ್ಟ ಸಮಸ್ಯೆಗಳನ್ನೆಲ್ಲ ಸುಲಭವಾಗಿ ಪರಿಹರಿಸಿಕೊಡಬಹುದು. ಆದರೆ ಕೆಲವು ಜನ ನಾಯಕರಿಗೆ ತಾವು ಅಧಿಕಾರಿಗಳ ಮೇಲೆ ರೋಷಾವೇಶ ಪ್ರದರ್ಶಿಸಿದರೆ ಜನರ ಮೆಚ್ಚುಗೆಗೆ ಪಾತ್ರವಾಗಬಹುದು ಎಂಬ ಭ್ರಮೆಯಿದೆ. ಕರ್ನಾಟಕವೂ ಈ ಮಾದರಿಯ ಕೆಲವು ನಾಯಕರನ್ನು ಕಂಡಿದೆ. ಈ ರೀತಿಯಾಗಿ ಸಿಗುವ ಜನಪ್ರಿಯತೆ ಅಥವಾ ಮೆಚ್ಚುಗೆ ಕ್ಷಣಿಕವಾದದ್ದು ಎನ್ನುವುದನ್ನು ಅವರು ತಿಳಿದಿಲ್ಲ. ನಿತ್ಯ ಅನೇಕ ಅಧಿಕಾರಿಗಳು ಸಚಿವರ, ಶಾಸಕರ ನಿಂದನೆ, ಹಲ್ಲೆಗಳಿಗೆ ಗುರಿಯಾಗುತ್ತಲೇ ಇರುತ್ತಾರೆ. ಈ ಪೈಕಿ ಕೆಲವು ಪ್ರಕರಣಗಳು ಮಾತ್ರ ಬೆಳಕಿಗೆ ಬರುತ್ತವೆ. ಹೆಚ್ಚಿನ ಸಂದರ್ಭದಲ್ಲಿ ಅಧಿಕಾರಿಗಳೇ ಭವಿಷ್ಯದಲ್ಲಿ ಆಡಳಿತದಲ್ಲಿರುವವರು ನೀಡಬಹುದಾದ ಕಾಟಕ್ಕೆ ಹೆದರಿ ಇಂಥ ಘಟನೆಗಳನ್ನು ಸುದ್ದಿ ಮಾಡುವ ಗೋಜಿಗೆ ಹೋಗುವುದಿಲ್ಲ.

ರಾಜಕಾರಣಿಗಳು ಮಾಡಿದ ಇದೇ ಕೃತ್ಯವನ್ನು ಜನಸಾಮಾನ್ಯರ್ಯಾರಾದರೂ ಮಾಡಿದರೆ ಅವರ ವಿರುದ್ಧ ಸರಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ, ದೇಶದ್ರೋಹ ಸೇರಿದಂತೆ ನಾನಾ ರೀತಿಯ ಕಾನೂನುಗಳನ್ನು ಅನ್ವಯಿಸಿ ಕೇಸು ದಾಖಲಿಸಲಾಗುತ್ತದೆ. ಆದರೆ ರಾಜಕಾರಣಿಗಳಾದರೆ ಸುಲಭವಾಗಿ ಪಾರಾಗುತ್ತಾರೆ. ಆಕಾಶ್‌ ವಿಜಯ್‌ ವರ್ಗೀಯ ಪ್ರಕರಣವನ್ನೇ ತೆಗೆದು ಕೊಂಡರೆ ಅವರು ಕೆಲವೇ ದಿನಗಳಲ್ಲಿ ಜಾಮೀನು ಪಡೆದುಕೊಂಡು ಬಿಡು ಗಡೆಯಾಗಿದ್ದಾರೆ ಹಾಗೂ ಬಿಜೆಪಿ ಕಾರ್ಯಕರ್ತರು ಅವರಿಗೆ ಜೈಲಿನಿಂದ ಹೊರಬರುವಾಗ ಭರ್ಜರಿ ಸ್ವಾಗತ ನೀಡಿದ್ದಾರೆ. ಹಲ್ಲೆ ನಡೆಸಿರುವುದಕ್ಕೆ ಆಕಾಶ್‌ ವಿಜಯ್‌ ವರ್ಗೀಯ ಆಗಲಿ ಅವರ ಬೆಂಬಲಿಗರಾಗಲಿ ಒಂದಿನಿತೂ ಪಶ್ಚಾತ್ತಾಪ ಹೊಂದಿಲ್ಲ. ಇದು ನಿಜವಾಗಿ ಅಪಾಯಕಾರಿಯಾದ ಧೋರಣೆ. ಕಾನೂನು ಕೈಗೆತ್ತಿಕೊಂಡರೂ ನಮಗೇನೂ ಆಗುವುದಿಲ್ಲ ಎಂಬ ಭಂಡಧೈರ್ಯ ಯುವ ನಾಯಕರಲ್ಲಿರುವುದು ಆರೋಗ್ಯಕಾರಿಯಲ್ಲ.

ಚುನಾಯಿತ ಜನಪ್ರತಿನಿಧಿಗಳು ಸರಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವುದೆಂದರೆ ಅದು ಅವರು ತಾವೇ ಸಹಭಾಗಿಗಳಾಗಿರುವ ಆಡಳಿತ ವ್ಯವಸ್ಥೆಗೆ ಎಸಗುವ ಅಪಚಾರ. ಉನ್ನತ ಸರಕಾರಿ ಅಧಿಕಾರಿಗಳು ಆಡಳಿತದ ಬೆನ್ನೆಲುಬಾದದ್ದು, ಅವರ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಿದರೆ ಒಟ್ಟಾರೆಯಾಗಿ ಆಡಳಿತ ವ್ಯವಸ್ಥೆಯೇ ಅವ್ಯವಸ್ಥಿತವಾಗುವ ಅಪಾಯವಿದೆ.

ಆಕಾಶ್‌ ವಿಜಯ್‌ವರ್ಗೀಯ ಗೂಂಡಾಗಿರಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಈ ಮಾದರಿಯ ವರ್ತನೆಯನ್ನು ಮಾಡಿದವರು ಯಾರ ಪುತ್ರ ಎಂದು ಲೆಕ್ಕಿಸದೆ ಕಠಿಣವಾಗಿ ದಂಡಿಸಲಾಗುವುದು ಎಂಬ ಎಚ್ಚರಿಕೆಯ ದಾಟಿಯ ಸಂದೇಶವನ್ನು ನೀಡಿದ್ದಾರೆ. ಜನಪ್ರತಿನಿಧಿಗಳು, ರಾಜಕೀಯ ನಾಯಕರು ಹಿಂಸಾಚಾರದ ಮೂಲಕ ಕಾರ್ಯಾಂಗವನ್ನು ಮಣಿಸಿ ಕೆಲಸ ಮಾಡಿಸಿಕೊಳ್ಳಬಹುದು ಮತ್ತು ರಾಜಕೀಯ ಲಾಭವನ್ನೂ ಗಳಿಸಿಕೊಳ್ಳಬಹುದು ಎಂಬುದಕ್ಕೆ ಮಾದರಿಯಾದರೆ ಕಾರ್ಯಕರ್ತರಿಗೆ ಅಂತೆಯೇ ಜನಸಾಮಾನ್ಯರಿಗೆ ಅದು ನೀಡುವ ಸಂದೇಶ ಅಪಾಯಕಾರಿ ಯಾದದ್ದು. ಸಾರ್ವಜನಿಕ ನೈತಿಕತೆಯನ್ನು ಕಾಪಾಡಬೇಕಾದದ್ದು ಆಡಳಿತದಲ್ಲಿರುವವರ ಹೊಣೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ