ಹೇಳಿಕೆಗಳಿಗೆ ಲಗಾಮು ಇರಲಿ

Team Udayavani, Apr 16, 2019, 6:00 AM IST

ಭಾರತೀಯ ರಾಜಕಾರಣಿಗಳ ನಾಲಗೆ ಅತಿ ಕೊಳಕು ಎನ್ನುವುದು ಸಾರ್ವತ್ರಿಕವಾಗಿ ಇರುವ ಒಂದು ಅಭಿಪ್ರಾಯ. ಇದನ್ನು ನಿಜ ಮಾಡುವ ಎಲ್ಲ ಪ್ರಯತ್ನಗಳನ್ನು ನಮ್ಮ ನಾಯಕರು ಈ ಬಾರಿಯ ಚುನಾವಣೆಯಲ್ಲಿ ಮಾಡುತ್ತಿದ್ದಾರೆ. ಈಗಾಗಲೇ ರಾಜಕೀಯ ನಾಯಕರ ಲಂಗುಲಗಾಮಿಲ್ಲದ ಮಾತುಗಳು ತೀವ್ರ ವಿವಾದಕ್ಕೆಡೆಯಾಗಿವೆ. ಅದರಲ್ಲೂ ಸಮಾಜವಾದಿ ಪಾರ್ಟಿಯ ನಾಯಕ ಅಜಂ ಖಾನ್‌, ಬಿಜೆಪಿ ಅಭ್ಯರ್ಥಿ ಜಯಪ್ರದಾ ಕುರಿತು ನೀಡಿರುವ ಹೇಳಿಕೆ ಸಭ್ಯತೆಯ ಎಲ್ಲ ಎಲ್ಲೆಯನ್ನು ಮೀರಿದೆ. ಅಜಂ ಖಾನ್‌ ಈ ಮಾದರಿಯ ವಿವಾದಾತ್ಮಕ ಹೇಳಿಕೆ ನೀಡಿದ ಇತಿಹಾಸವನ್ನೇ ಹೊಂದಿದ್ದಾರೆ. ಪ್ರತಿ ಚುನಾವಣೆಯಲ್ಲಿ ಅವರ ಒಂದಾದರೂ ವಿವಾದಾತ್ಮಕ ಹೇಳಿಕೆ ಇದ್ದೇ ಇರುತ್ತದೆ.ಮಹಿಳೆ, ಸೇನೆ , ದೇವರು , ಧರ್ಮ ಸೇರಿದಂತೆ ಹೀಗಳೆಯುವುದರಲ್ಲಿ ಯಾರನ್ನೂ ಬಿಟ್ಟಿಲ್ಲ ಅವರು. ಅದೇ ರೀತಿ ನಮ್ಮದೇ ರಾಜ್ಯದಲ್ಲಿ ಕುಮಾರಸ್ವಾಮಿ, ಈಶ್ವರಪ್ಪ, ಸಿದ್ದರಾಮಯ್ಯ, ಯಡಿಯೂರಪ್ಪ ಮುಂತಾದ ಘಟಾನುಘಟಿ ನಾಯಕರೇ ಕೆಲವೊಮ್ಮೆ ಹದ್ದುಮೀರಿ ಮಾತನಾಡಿ ಎಡ‌ವಟ್ಟು ಮಾಡಿಕೊಳ್ಳುವುದು ಇದೆ.

ಈ ಸಲ ಮಂಡ್ಯ ಕ್ಷೇತ್ರದಲ್ಲಿ ಈ ರೀತಿಯ ಅನಪೇಕ್ಷಿತ ಮಾತುಗಳು ತುಸು ಹೆಚ್ಚೇ ಕೇಳಿ ಬಂದಿದೆ. ಇವೆಲ್ಲ ನಮ್ಮ ರಾಜಕೀಯ ಸಂಸ್ಕೃತಿ ಅಧಃಪತನಗೊಂಡಿರುವ ಪರಿಣಾಮ. ಸಭ್ಯ ರಾಜಕಾರಣವೆಂಬುದು ಈಗ ಸಾರ್ವಜನಿಕ ಜೀವನದಿಂದ ಮರೆಯಾಗಿದ್ದು, ಪರಸ್ಪರರನ್ನು ಹಳಿಯುವುದು, ವೈಯಕ್ತಿಕ ವಿಚಾರಗಳನ್ನೆತ್ತಿ ಟೀಕಿಸುವುದು, ಧರ್ಮವನ್ನು ನಿಂದಿಸುವುದು, ಬೆದರಿಕೆಯೊಡ್ಡುವುದು ಇವೇ ಭಾಷಣಗಳ ಸರಕಾಗುತ್ತಿವೆ. ನಾಯಕರು ಬೌದ್ಧಿಕವಾಗಿ ದಿವಾಳಿಯಾದಾಗ ಅವರಿಂದ ಈ ರೀತಿಯ ಮಾತುಗಳು ಬರುತ್ತವೆ. ಆದರೆ ಮಾಧ್ಯಮಗಳಲ್ಲಿ ಈ ರೀತಿಯ ಹೇಳಿಕೆಗಳೇ ಹೆಚ್ಚು ಪ್ರಚಾರ ಪಡೆದುಕೊಳ್ಳುವುದರಿಂದ ನಾಯಕರು ಇದೇ ಸುಲಭವಾಗಿ ಸುದ್ದಿಯಾಗಲು ಇರುವ ಮಾರ್ಗ ಎಂದು ಭಾವಿಸಿರುವುದು ಅಪಾಯಕಾರಿ ಬೆಳವಣಿಗೆ.

ನಮ್ಮ ನಾಯಕರ ಇತ್ತೀಚೆಗಿನ ಕೆಲವು ಹೇಳಿಕೆಗಳನ್ನೇ ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಜಯಪ್ರದಾ ಆರ್‌ಎಸ್‌ಎಸ್‌ ಜತೆ ಸೇರಿದ್ದಾರೆ ಎಂದು ಹೇಳಲು ಅಜಾಂ ಖಾನ್‌ ಅವರ ಒಳ ಉಡುಪು ಖಾಕಿ ಬಣ್ಣದ್ದು ಎಂಬ ಹೇಳಿಕೆಯನ್ನು ಸಾರ್ವಜನಿಕ ವೇದಿಕೆಯಲ್ಲಿ ಹೇಳುತ್ತಾರೆ ಎಂದರೆ ರಾಜಕಾರಣ ಇದಕ್ಕಿಂತ ಕೀಳುಮಟ್ಟಕ್ಕಿಳಿಯಲು ಸಾಧ್ಯವೇ? ಅಂತೆಯೇ ಯೋಗಿ ಆದಿತ್ಯನಾಥ್‌ ಅಲಿ ಮತ್ತು ಬಜರಂಗ ಬಲಿಯ ವಿಚಾರವೆತ್ತಿ ಧರ್ಮವನ್ನು ರಾಜಕಾರಣಕ್ಕೆ ಎಳೆದು ತಂದಿದ್ದಾರೆ. ಅದೇ ರೀತಿ ಮಾಯಾವತಿ ಮುಸ್ಲಿಮರು ಬಿಜೆಪಿಗೆ ಮತ ನೀಡಬಾರದು ಎಂದಿರುವುದು ಕೂಡಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ. ಯೋಗಿ ಮತ್ತು ಮಾಯಾವತಿ ಈ ವಿವಾದಾತ್ಮಕ ಹೇಳಿಕೆಗಳಿಗಾಗಿ ಚುನಾವಣಾ ಆಯೋಗದಿಂದ ಬಹಿಷ್ಕಾರದ ಶಿಕ್ಷಗೆ ಗುರಿಯಾಗಿದ್ದಾರೆ. ಈ ಹಿಂದೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ , ಅಜಾಂ ಖಾನ್‌ ಸೇರಿದಂತೆ ಕೆಲವು ಪ್ರಮುಖ ನಾಯಕರಿಗೂ ಹೀಗೆ ಪ್ರಚಾರ ನಿಷೇಧ ಹೇರಲಾಗಿತ್ತು. ಆದರೆ ಇಂಥ ಕ್ರಮಗಳಿಂದ ಹೆಚ್ಚಿನ ಪರಿಣಾಮವಾಗುತ್ತಿಲ್ಲ ಎನ್ನುವುದು ಖೇದದ ವಿಚಾರ. ರಾಜಕೀಯ ರಂಗದಿಂದ ದ್ವೇಷ ಭಾಷಣ ಮತ್ತು ಕೀಳು ಹೇಳಿಕೆಗಳನ್ನು ನಿವಾರಿಸಲು ಚುನಾವಣ ಆಯೋಗ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ.

ದ್ವೇಷ ಭಾಷಣವನ್ನು ದಂಡನಾರ್ಹ ಅಪರಾಧವೆಂದು ಪರಿಗಣಿಸುವ ಸಲುವಾಗಿ ಕಾನೂನು ಆಯೋಗ ಭಾರತೀಯ ದಂಡ ಸಂಹಿತೆಗೆ ಎರಡು ಹೊಸ ಸೆಕ್ಷನ್‌ಗಳನ್ನು ಸೇರಿಸಲು ಶಿಫಾರಸು ಮಾಡಿತ್ತು. ದ್ವೇಷ ಭಾಷಣ ಮತ್ತು ಜನರಲ್ಲಿ ಭಯ, ಅಶಾಂತಿ ಅಥವಾ ಪ್ರಚೋದನೆ ಹುಟ್ಟಿಸುವ ಹೇಳಿಕೆಗಳನ್ನು ನೀಡಿದರೆ ಎರಡು ವರ್ಷ ಜೈಲು ಶಿಕ್ಷೆ ಮತ್ತು 5,000 ರೂ. ತನಕ ದಂಡ ವಿಧಿಸುವ ಪ್ರಸ್ತಾವ ಹೊಂದಿದ್ದ ಈ ಶಿಫಾರಸಿಗೆ ಇನ್ನೂ ಕಾನೂನು ಆಗುವ ಭಾಗ್ಯ ಬಂದಿಲ್ಲ.

ರಾಜಕಾರಣಿಗಳಿಗೆ ಸಮಾಜದೆಡೆಗೊಂದು ಗುರುತರವಾದ ಜವಾಬ್ದಾರಿ ಯಿದೆ. ಅವರು ಜನಸಮೂಹವನ್ನು ಉದ್ದೇಶಿಸಿ ಮಾತನಾಡುತ್ತಿರುತ್ತಾರೆ. ಅವರ ಮಾತುಗಳು ಜನರ ಮೇಲೆ ಪ್ರಭಾವ ಬೀರುತ್ತವೆ. ರಾಜಕೀಯ ಭಾಷಣದಲ್ಲಿ ನೀತಿ, ತತ್ವ , ಸಿದ್ಧಾಂತಗಳು ಪ್ರತಿಫ‌ಲಿಸಬೇಕೆ ಹೊರತು ವೈಯಕ್ತಿಕ ವಿಚಾರಗಳು ಅಲ್ಲ ಎನ್ನುವುದನ್ನು ನಮ್ಮ ರಾಜಕೀಯ ನಾಯಕರಿಗೆ ಈಗ ಯಾರಾದರೂ ಕಲಿಸಿಕೊಡಬೇಕು.ಅಂತೆಯೇ ಮಾಧ್ಯಮಗಳು ಅದರಲ್ಲೂ ಸಾಮಾಜಿಕ ಮಾಧ್ಯಮಗಳು ಈ ಮಾದರಿಯ ಹೇಳಿಕೆಗಳಿಗೆ ತುಪ್ಪ ಸುರಿ ಯುವ ಕೆಲಸವನ್ನು ಮಾಡಬಾರದು. ಚುನಾವಣೆ ಸಮಯದಲ್ಲಿ ಆರೋ ಗ್ಯಕರವಾದ ಮತ್ತು ಅರ್ಥವೂರ್ಣವಾದ ಸಂವಾದಕ್ಕೆ ಸೂಕ್ತವಾದ ವೇದಿಕೆ ಕಲ್ಪಿಸಿಕೊಡುವುದು ಮಾಧ್ಯಮದ ಜವಾಬ್ದಾರಿಯೂ ಹೌದು. ಈ ಮಾದರಿಯ ಪರಿಸ್ಥಿತಿಯಲ್ಲಿ ಚುನಾವಣ ಆಯೋಗ ಇನ್ನಷ್ಟು ಜವಾಬ್ದಾರಿಯಿಂದ ಕಾರ್ಯ ನಿಭಾಯಿಸುವ ಅಗತ್ಯವಿದೆ. ಈ ವಿಚಾರವನ್ನು ಸುಪ್ರೀಂ ಕೋರ್ಟ್‌ ಗಂಭೀರವಾಗಿ ಪರಿಗಣಿಸಿರುವುದು ಸಕರಾತ್ಮಕವಾದ ನಡೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ