ಬಂಡೀಪುರ ರಾತ್ರಿ ಸಂಚಾರ ವಿಚಾರ ರಾಜಕೀಯ ಬೇಡ

Team Udayavani, Oct 4, 2019, 5:45 AM IST

ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಮೂಲಕ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯ ವರೆಗೆ ಸದ್ಯ ಜಾರಿಯಲ್ಲಿರುವ ಇರುವ ಸಂಚಾರ ನಿಷೇಧ ತೆಗೆದು ಹಾಕಬೇಕು ಎಂಬ ಒತ್ತಾಯಕ್ಕೆ ಮತ್ತೆ ಜೀವ ಬಂದಿದೆ. ಅದಕ್ಕೆ ಮುಖ್ಯ ಕಾರಣಕರ್ತರು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿಯವರು. ಸದ್ಯ ಅವರು ವಯನಾಡ್‌ ಲೋಕಸಭಾ ಕ್ಷೇತ್ರದ ಸಂಸದರು. ಹೀಗಾಗಿ ಕ್ಷೇತ್ರದ ಜನರ ಹಿತ ಕಾಯುವ ಕೆಲಸ ಮಾಡಬೇಕು ಎಂಬ ವಿಚಾರ ಹಗಲಿನಷ್ಟೇ ಸತ್ಯ. ಆದರೆ, ಅದೊಂದೇ ವಿಚಾರವೇ? ಸಂಚಾರ ನಿಷೇಧ ಏಕೆ ಮಾಡಲಾಯಿತು ಎನ್ನುವುದಕ್ಕೆ 2009ರಲ್ಲಿ ಬಂಡೀಪುರ ವ್ಯಾಪ್ತಿಯ ಅರಣ್ಯಾಧಿಕಾರಿಗಳು, ಪರಿಸರವಾದಿಗಳು ಚಾಮರಾಜನಗರ ಜಿಲ್ಲಾಡಳಿತಕ್ಕೆ ವರದಿ ನೀಡಿ, ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ಅದರಿಂದ ಬಹು ಅಮೂಲ್ಯವಾಗಿರುವ ಜೀವ ಸಂಕುಲಕ್ಕೆ ಅಪಾಯವಿದೆ. ಹೀಗಾಗಿ, ನಿಷೇಧ ಹೇರುವ ಬಗ್ಗೆ ಶಿಫಾರಸು ಮಾಡಿದ್ದರಿಂದ ಅಂದಿನ ಜಿಲ್ಲಾಧಿಕಾರಿ ನಿಷೇಧ ಹೇರಿದ್ದರು. ಆ ದಿನದಿಂದ ಇದುವರೆಗೆ ಕೇರಳ ಸರ್ಕಾರ ರಾಜ್ಯ ಸರ್ಕಾರದ ಮೇಲೆ ಇನ್ನಿಲ್ಲದ ರೀತಿಯಲ್ಲಿ ನಿಷೇಧ ತೆರವಿಗೆ ಒತ್ತಡ ಹೇರುತ್ತಾ ಬಂದಿದೆ. ಅದರ ಹಿಂದೆ ಜನಹಿತದ ಕಾರಣಗಳಿಗೆ ಬದಲಾಗಿ ವಾಣಿಜ್ಯಿಕ ಸ್ವಹಿತಾಸಕ್ತಿಗಳು ಇವೆ ಎನ್ನುವುದು ಬಹಿರಂಗ ಸತ್ಯವೇ.

ರಾಜಕೀಯವಾಗಿ, ಜನ ಸಾಮಾನ್ಯರಿಗೆ ಅನಾನುಕೂಲವಾಗುತ್ತದೆ ಎಂಬ ಮುಖವಾಡವನ್ನು ದೇವರೊಲಿದ ರಾಜ್ಯದ ಆಡಳಿತಗಾರರು ಮಂಡಿಸಿದ ವಾದಕ್ಕೆ ಕರ್ನಾಟಕ ಸರ್ಕಾರ ಮಣಿದೇ ಇಲ್ಲ ಎನ್ನುವುದೊಂದೇ ಇದುವರೆಗಿನ ಬಲುದೊಡ್ಡ ಸಮಾಧಾನದ ವಿಚಾರ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರವನ್ನು ಮುನ್ನಡೆಸಿದ್ದ ವಿವಿಧ ಪಕ್ಷಗಳ ನಾಯಕರು ಅಭಿನಂದನಾರ್ಹರೇ ಹೌದು.

ಬಂಡೀಪುರದಲ್ಲಿ ಏಕೆ ರಾತ್ರಿ ಸಂಚಾರ ನಿಷೇಧ ಎನ್ನುವುದಕ್ಕೆ ಹಲವು ರೀತಿಯಲ್ಲಿ ಅರ್ಹ ತಜ್ಞರೇ ಅಭಿಪ್ರಾಯಗಳನ್ನು ಮುಂದಿಟ್ಟಿದ್ದಾರೆ. ರಾತ್ರಿ ನಿಷೇಧ ಹೊರತಾಗಿಯೂ 2009ರಲ್ಲಿ 2, 2010ರಲ್ಲಿ 3, 2011ರಲ್ಲಿ 7, 2012ರಲ್ಲಿ 10, 2013ರಲ್ಲಿ 6, 2014ರಲ್ಲಿ 01, 2015ರಲ್ಲಿ 2, 2016ರಲ್ಲಿ 1, 2017ರಲ್ಲಿ 2, 2018ರಲ್ಲಿ 2 ವನ್ಯಜೀವಿಗಳು ವಾಹನಾಘಾತಕ್ಕೆ ಜೀವ ಕಳೆದುಕೊಂಡಿವೆ. ವಾಹನ ವೇಗ ಕಡಿಮೆ ಮಾಡಬಹುದಲ್ಲವೇ ಎಂಬ ಸಲಹೆಯ ಮಾತುಗಳು ಬರಬಹುದು.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ಕೇರಳ ಸರ್ಕಾರ ಮೊರೆ ಹೋಗಿ, ನಿಷೇಧ ರದ್ದು ಮಾಡುವಂತೆ ಅನುಕೂಲ ಮಾಡಿಕೊಡಬೇಕು ಎಂದು ಕೇಳಿಕೊಂಡಿದೆ. ಅದರಂತೆ ಪರ್ಯಾಯ ಮಾರ್ಗಗಳ ಬಗ್ಗೆ ವಿವರಣೆ ಸಲ್ಲಿಸಲು ಸೂಚಿಸಿದೆ. ಅರಣ್ಯ ಪ್ರದೇಶದಲ್ಲಿ ಎತ್ತರಿಸಿದ ರಸ್ತೆ ನಿರ್ಮಿಸುವ ಬಗ್ಗೆಯೂ ಕೂಡ ಕೇರಳ ಸರ್ಕಾರ ಸಲಹೆ ಮಾಡಿದೆ. ಈ ವರ್ಷದ ಬೇಸಗೆಯಲ್ಲಿ ನಾಗರಹೊಳೆ ಅಭಯಾರಣ್ಯದ ಹೆಕ್ಟೇರುಗಟ್ಟಲೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಇದರ ಜತೆಗೆ ವರ್ಷದಿಂದ ವರ್ಷಕ್ಕೆ ಅರಣ್ಯ ಪ್ರದೇಶ ಒತ್ತುವರಿಯಾಗುವ ಬಗ್ಗೆ ಆತಂಕಕಾರಿ ವರದಿ ಸರ್ಕಾರದ ವತಿಯಿಂದಲೇ ಬಿಡುಗಡೆಯಾಗುತ್ತಿದೆ. ಇದರ ಜತೆಗೆ ವನ್ಯಜೀವಿಗಳಿಗೆ ತೊಂದರೆಯಾಗದಿರಲಿ ಎಂದು ಎತ್ತರಿಸಿದ ಮಾರ್ಗ ನಿರ್ಮಾಣಗೊಂಡರೆ ಅದು ಯಾವಾಗ ಮುಕ್ತಾಯವಾದೀತೋ ಎಂದು ಹೇಳಲು ಕಷ್ಟ ಸಾಧ್ಯ.

ಹೀಗಾಗಿ, ವಯನಾಡ್‌ ಸಂಸದರಾಗಿರುವ ರಾಹುಲ್‌ ಗಾಂಧಿಯವರು ಸ್ವತಃ ಬಂಡೀಪುರದಲ್ಲಿ ಯಾವ ಕಾರಣಕ್ಕಾಗಿ ರಾತ್ರಿ ವೇಳೆ ಸಂಚಾರ ನಿಷೇಧ ಮಾಡಲಾ ಯಿತು, ಅದಕ್ಕಿಂತ ಮೊದಲು ಎಷ್ಟೊಂದು ಅನಾಹುತಗಳಾಗಿವೆ, ಅರಣ್ಯ ನಾಶದಿಂದ ಅವರದ್ದೇ ಸ್ವಕ್ಷೇತ್ರದಲ್ಲಿ ಏನೇನು ತೊಂದರೆ ಸವಾಲುಗಳು ಉಂಟಾಗಿವೆ ಮತ್ತು ಉಂಟಾಗಬಹುದು ಎಂಬದರ ಬಗ್ಗೆ ಅಧ್ಯಯನ ಮಾಡಬೇಕು. ಈ ಬಗ್ಗೆ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯಲ್ಲಿ ಅವರಿಗೆ ವಿಶ್ವಾಸಾರ್ಹ ವ್ಯಕ್ತಿಯ ಮೂಲಕವೇ ಮಾಹಿತಿ ಪಡೆದುಕೊಳ್ಳಲಿ. ಎಲ್ಲದಕ್ಕಿಂತ ಹೆಚ್ಚಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸಿಗರು ತಮ್ಮ ಹಿರಿಯ ನಾಯಕನ ಧೋರಣೆ ಬಗ್ಗೆ ಆಕ್ಷೇಪ ಮಾಡಬೇಕಾಗಿತ್ತು. ಆದರೆ, ಅವರು ಆ ರೀತಿಯ ನಿರ್ಧಾರ ಕೈಗೊಳ್ಳದೇ ಇರುವುದು ಸರಿಯಲ್ಲ. ಅರಣ್ಯ ಕರ್ನಾಟಕ ಅಥವಾ ಕೇರಳದ ವ್ಯಾಪ್ತಿಯದ್ದೇ ಆಗಲಿ ನಾಶಗೊಂಡರೆ ಅದರಿಂದ ಎಲ್ಲರಿಗೂ ಹಾನಿಯೇ. ಈ ನಿಟ್ಟಿನಲ್ಲಿ ಬದಲಿ ವ್ಯವಸ್ಥೆಯ ಬಗ್ಗೆ ಆಲೋಚನೆ ಮಾಡುವುದರ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್‌ ಮತ್ತು ವಯನಾಡ್‌ ಸಂಸದರು ಕುಳಿತು ಯೋಚನೆ ಮಾಡುವುದು ಉತ್ತಮ. ಅಮೇಠಿಯಲ್ಲಿ ಸಿಕ್ಕದ ರಾಜಕೀಯ ಪುನರುಜ್ಜೀವನವನ್ನು ರಾಹುಲ್‌ ಅವರು ಕೇರಳದ ಮೂಲಕ ಮಾಡದೇ ಇರುವುದೊಳಿತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ