ಬಜೆಟ್: ನಿರೀಕ್ಷೆ ಅಪಾರ

Team Udayavani, Jul 4, 2019, 5:00 AM IST

ದೇಶದ ಮೊದಲ ಪೂರ್ಣಾವಧಿ ಮಹಿಳಾ ವಿತ್ತಮಂತ್ರಿ ಎಂಬ ಹಿರಿಮೆಯನ್ನು ಹೊಂದಿರುವ ನಿರ್ಮಲಾ ಸೀತಾರಾಮನ್‌ ಶುಕ್ರವಾರ ತನ್ನ ಚೊಚ್ಚಲ ಬಜೆಟ್ ಮಂಡಿಸುವ ಮೂಲಕ ಇತಿಹಾಸ ಸೃಷ್ಟಿಸಲಿದ್ದಾರೆ. ಆದರೆ ಮಧ್ಯಂತರದಲ್ಲಿ ಮಂಡನೆಯಾಗುತ್ತಿರುವ ಈ ಬಜೆಟ್ ಈ ಕಾರಣಕ್ಕೆ ಮಾತ್ರ ಮುಖ್ಯವಲ್ಲ. ನಿರ್ಮಲಾ ಸೀತಾರಾಮನ್‌ ಎದುರು ದೇಶದ ಆರ್ಥಿಕತೆಗೆ ಹೊಸ ದಿಕ್ಕು ನೀಡುವ ದೊಡ್ಡ ಸವಾಲು ಇದೆ. ಈ ಸವಾಲನ್ನು ಅವರು ಯಾವ ರೀತಿ ನಿಭಾಯಿಸಲಿದ್ದಾರೆ ಎಂಬ ಒಂದು ಸ್ಥೂಲ ನೋಟ ಗುರುವಾರ ಸರಕಾರ ಬಿಡುಗಡೆಗೊಳಿಸುವ ಆರ್ಥಿಕ ಸಮೀಕ್ಷೆಯಲ್ಲೇ ಸಿಗಲಿದೆ.

ಉತ್ಪಾದನೆ, ಉದ್ಯೋಗ, ಬ್ಯಾಂಕಿಂಗ್‌, ಸಾರ್ವಜನಿಕ ಉದ್ದಿಮೆಗಳು, ರಿಯಲ್ ಎಸ್ಟೇಟ್ ಸೇರಿದಂತೆ ಎಲ್ಲ ರಂಗಗಳಲ್ಲಿ ಈಗ ಆರ್ಥಿಕ ಹಿಂಜರಿತ ಕಂಡು ಬರುತ್ತಿದೆ.ವಾಹನ ಉತ್ಪಾದನಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗೆ ಬಂದಿರುವ ವರದಿಯೇ ಉತ್ಪಾದನಾ ರಂಗ ಯಾವ ರೀತಿಯ ಕಾಯಕಲ್ಪವನ್ನು ನಿರೀಕ್ಷಿಸುತ್ತಿದೆ ಎಂಬುದನ್ನು ತಿಳಿಸುತ್ತಿದೆ. ಕಾರು ಮಾರಾಟ ಶೇ.17 ಮತ್ತು ದ್ವಿಚಕ್ರ ವಾಹನ ಮಾರಾಟ ಶೇ.11 ಕುಸಿದಿದೆ ಎಂದು ಹೇಳಿದೆ ಈ ವರದಿ.ಮಾರಾಟ ಕುಸಿದ ಪರಿಣಾಮವಾಗಿ ಮಾರುತಿಯೂ ಸೇರಿದಂತೆ ಕೆಲವು ಕಂಪೆನಿಗಳು ತಾತ್ಕಾಲಿಕವಾಗಿ ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ. ಇದು ಹಲವು ಆಯಾಮಗಳಲ್ಲಿ ಪರಿಣಾಮ ಬೀರುವ ಹಿಂಜರಿತ.ಈ ಸಮಸ್ಯೆಯನ್ನು ಪರಿಹರಿಸಲು ನಿರ್ಮಲಾ ಸೀತಾರಾಮನ್‌ ಯಾವ ಅಸ್ತ್ರ ಪ್ರಯೋಗಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

ಕೃಷಿಯ ಬಳಿಕ ಅತ್ಯಧಿಕ ಉದ್ಯೋಗ ಒದಗಿಸುವ ಕ್ಷೇತ್ರಗಳು ಉತ್ಪಾದನೆ ಮತ್ತು ರಿಯಲ್ ಎಸ್ಟೇಟ್. ಸದ್ಯಕ್ಕೆ ಈ ಮೂರೂ ಕ್ಷೇತ್ರಗಳು ಹಿನ್ನಡೆಯಲ್ಲಿವೆ. ಪೂರೈಕೆ ಮತ್ತು ಬೇಡಿಕೆಯಲ್ಲಾಗಿರುವ ವ್ಯತ್ಯಯ ದೇಶದ ಆರ್ಥಿಕತೆಯನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಬೇಡಿಕೆ ಹೆಚ್ಚಾಗಲು ಜನರ ಕೈಗೆ ಹಣ ಸಿಗುವುದು ಅಗತ್ಯ. ಹಣ ಸಿಗಬೇಕೆಂದಿದ್ದರೆ ತೆರಿಗೆಯಲ್ಲಿ ಹಲವು ರೀತಿಯ ರಿಯಾಯಿತಿಗಳನ್ನು ನೀಡಬೇಕಾಗುತ್ತದೆ.

ಆದರೆ ತೆರಿಗೆ ರಿಯಾಯಿತಿ ನೀಡಿದರೆ ರಾಜಸ್ವ ಸಂಗ್ರಹದ ಕೊರತೆ ಉಂಟಾಗುವ ಭೀತಿಯಿದೆ. ಚುನಾವಣೆಗೆ ಮುಂಚಿತವಾಗಿ ಘೋಷಿಸಿರುವ ರೈತರಿಗೆ ವಾರ್ಷಿಕ 6000 ರೂ. ಕೊಡುವ ಸ್ಕೀಂ, ಆಯುಷ್ಮಾನ್‌ ಭಾರತದಂಥ ಯೋಜನೆಗಳು ವಿಪರೀತ ಸಂಪನ್ಮೂಲವನ್ನು ಬೇಡುತ್ತವೆ. ತೆರಿಗೆ ಹೊರೆಯೂ ಹೆಚ್ಚಾಗದಂತೆ ನೋಡಿಕೊಂಡು, ವಿವಿಧ ರಂಗಗಳಿಗೆ ಚೇತರಿಕೆಯ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದು ನಿಜಕ್ಕೂ ಹಗ್ಗದ ಮೇಲಿನ ನಡಿಗೆ.

ಜನಸಾಮಾನ್ಯರಿಂದ ಹಿಡಿದು ಕಾರ್ಪೋರೇಟ್ ಕುಳಗಳ ತನಕ ಎಲ್ಲ ವರ್ಗದವರು ಬಜೆಟ್ನಿಂದ ತಮಗಾಗುವ ಪ್ರಯೋಜನಗಳ ನಿರೀಕ್ಷೆಯಲ್ಲಿರುತ್ತಾರೆ. ನೌಕರ ವರ್ಗ ಆದಾಯ ತೆರಿಗೆ ಕಡಿತವಾಗುವ ನಿರೀಕ್ಷೆಯನ್ನು ಹೊಂದಿರುತ್ತದೆ. ಆದರೆ ಈ ಸಲ ತೆರಿಗೆ ಕಡಿತ ಮಾಡುವ ಬದಲು ತೆರಿಗೆ ವ್ಯಾಪ್ತಿಗೊಳಪಡುವ ಆದಾಯ ಸ್ಲ್ಯಾಬ್‌ನ್ನು ಬದಲಾಯಿಸುವ ಚಿಂತನೆ ಇರುವ ಸುಳಿವು ಸಿಕ್ಕಿದೆ. ಅದೇ ರೀತಿ ಕೃಷಿಗೆ ಉತ್ತೇಜನ ನೀಡುವಂಥ ಹಲವು ಉಪಕ್ರಮಗಳು ಘೋಷಣೆಯಾಗುವ ಸಾಧ್ಯತೆಯಿದೆ. 2022ಕ್ಕಾಗುವಾಗ ಕೃಷಿಕರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆಯನ್ನು ಚುನಾವಣಾ ಸಂದರ್ಭದಲ್ಲಿ ಪುನರುಚ್ಚರಿಸಲಾಗಿದೆ. ಇದು ಸದ್ಯದಲ್ಲೇ ಸಾಧಿಸಬೇಕಿರುವ ಗುರಿಯಾಗಿರುವುದರಿಂದ ವಿತ್ತ ಸಚಿವರು ಕೃಷಿ ಕ್ಷೇತ್ರವನ್ನು ಆದ್ಯತೆಯಾಗಿ ಪರಿಗಣಿಸುವ ಸಾಧ್ಯತೆಯಿದೆ. ಇದು ಈಗಿನ ಅಗತ್ಯವೂ ಹೌದು.

ದೇಶದಲ್ಲೀಗ ಹೂಡಿಕೆ ಸ್ನೇಹಿ ವಾತಾವರಣ ಇದ್ದರೂ ನಿರೀಕ್ಷಿಸಿದ ಪ್ರಮಾಣದಲ್ಲಿ ವಿದೇಶಿ ಹೂಡಿಕೆ ಹರಿದು ಬರುತ್ತಿಲ್ಲ. ಅಮೆರಿಕ-ಚೀನ ವ್ಯಾಪಾರ ಸಮರ ಜಾಗತಿಕ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತಿದೆ. ಆದರೆ ಇದರ ಪರಿಣಾಮವಾಗಿ ಚೀನದಿಂದ ವಿಮುಖವಾಗುವ ವಿದೇಶಿ ಹೂಡಿಕೆಯನ್ನು ಭಾರತದತ್ತ ತಿರುಗಿಸಿಕೊಳ್ಳುವ ಜಾಣ್ಮೆಯನ್ನು ಹಣಕಾಸು ಸಚಿವರು ಬಜೆಟ್‌ನಲ್ಲಿ ತೋರಿಸಿದರೆ ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಗಬಹುದು.ಉದ್ಯೋಗ ಸೃಷ್ಟಿಸುವ ಸಲುವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಉತ್ತೇಜನ ನೀಡುವ ಘೋಷಣೆಗಳ ನಿರೀಕ್ಷೆಯಿದೆ.

ಹಾಗೆಂದು ಎಲ್ಲ ಸುಧಾರಣೆಗಳನ್ನು ಒಂದೇ ಬಜೆಟ್‌ನಲ್ಲಿ ಮಾಡಿ ಮುಗಿಸಬೇಕೆಂದು ನಿರೀಕ್ಷಿಸುವುದು ಸರಿಯಲ್ಲ. ಆದರೆ ಮುಂದಿನ ಐದು ವರ್ಷದ ಆರ್ಥಿಕ ಪ್ರಗತಿಯ ಹಾದಿ ಯಾವ ಬಗೆಯದ್ದು ಎನ್ನುವ ಹೊಳಹು ಈ ಬಜೆಟ್‌ನಲ್ಲಿ ಸಿಗಬೇಕು. ಈ ಕಾರಣಕ್ಕೆ ನಿರ್ಮಲಾ ಸೀತಾರಾಮನ್‌ ಮಂಡಿಸುವ ಬಜೆಟ್ ಕುತೂಹಲ ಕೆರಳಿಸಿದೆ.

ನೌಕರ ವರ್ಗ ಆದಾಯ ತೆರಿಗೆ ಕಡಿತವಾಗುವ ನಿರೀಕ್ಷೆಯನ್ನು ಹೊಂದಿರುತ್ತದೆ. ಆದರೆ ಈ ಸಲ ತೆರಿಗೆ ಕಡಿತ ಮಾಡುವ ಬದಲು ತೆರಿಗೆ ವ್ಯಾಪ್ತಿಗೊಳಪಡುವ ಆದಾಯ ಸ್ಲ್ಯಾಬ್‌ನ್ನು ಬದಲಾಯಿಸುವ ಚಿಂತನೆ ಇರುವ ಸುಳಿವು ಸಿಕ್ಕಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ