ನವ ಭಾರತ-ನವ ಕಾಶ್ಮೀರ ನಿರ್ಮಾಣದ ಸಂಭ್ರಮ

Team Udayavani, Aug 15, 2019, 5:35 AM IST

73ನೇ ಸ್ವಾತಂತ್ರ್ಯೋತ್ಸವ ದೇಶದ ಪಾಲಿಗೆ ಹಲವು ಕಾರಣಗಳಿಂದ ಮಹತ್ವದ್ದಾಗಿದೆ. ಸ್ವಾತಂತ್ರ್ಯದ ಹರಿಕಾರರಲ್ಲಿ ಒಬ್ಬರಾಗಿರುವ ಮಹಾತ್ಮ ಗಾಂಧೀಜಿಯವರ 150ನೇ ಜಯಂತಿ ಆಚರಣೆಯೂ ಇದೇ ವರ್ಷ ಸಂಭವಿಸುತ್ತಿರುವುದರಿಂದ ಸ್ವಾತಂತ್ರ್ಯದ ಸಂಭ್ರಮ ಇಮ್ಮಡಿಯಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯಿಂದ ಮಾಡುವ ಸತತ ಆರನೇ ಭಾಷಣ ಎನ್ನುವ ಇನ್ನೊಂದು ಕಾರಣವೂ ಇದೆ. ಈ ಮೂಲಕ ಅವರು ಅಟಲ್ ಬಿಹಾರಿ ವಾಜಪೇಯಿಯವರ ದಾಖಲೆಯನ್ನು ಸರಿಗಟ್ಟುತ್ತಿದ್ದಾರೆ. ಹೀಗೆ ಸತತ ಆರು ಭಾಷಣ ಮಾಡಿದ ಕಾಂಗ್ರೆಸ್ಸೇತರ ಪ್ರಧಾನಿಗಳು ಇವರಿಬ್ಬರೆ. ಇವೆಲ್ಲ ಒಂದು ತೂಕವಾದರೆ ಈ ಸಲ ಜಮ್ಮು-ಕಾಶ್ಮೀರ ಮೊದಲ ಸಲ ಸರ್ವತಂತ್ರ ಸ್ವತಂತ್ರ ಉತ್ಸವದ ಸವಿಯನ್ನು ಕಾಣಲಿದೆ ಎನ್ನುವುದು ಬಹಳ ಮುಖ್ಯವಾದ ಕಾರಣ.

ಕಣಿವೆ ರಾಜ್ಯಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ, ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿದ ಐತಿಹಾಸಿಕ ನಿರ್ಧಾರದ ಹಿನ್ನೆಲೆಯಲ್ಲಿ ಈ ಸ್ವಾತಂತ್ರ್ಯೋತ್ಸವಕ್ಕೆ ಇನ್ನಿಲ್ಲದ ಮಹತ್ವ ಬಂದಿದೆ. ಇಷ್ಟರ ತನಕ ಕಾಶ್ಮೀರದಲ್ಲಿ ಪೂರ್ಣ ಪ್ರಮಾಣದ ಸ್ವಾತಂತ್ರ್ಯೋತ್ಸವದ ಆಚರಣೆಯಾಗಿಲ್ಲ. ವಿಶೇಷ ಸ್ಥಾನಮಾನದ ಕಾರಣ ಅದು ದೇಶದಿಂದ ಪ್ರತ್ಯೇಕವಾಗಿಯೇ ಉಳಿದಿತ್ತು. ಸ್ವಾತಂತ್ರ್ಯ ದಿನದಂದು ತ್ರಿವರ್ಣ ಧ್ವಜದೊಂದಿಗೆ ಜಮ್ಮು-ಕಾಶ್ಮೀರದ ಧ್ವಜವನ್ನು ಹಾರಿಸುವುದು ವಾಡಿಕೆಯಾಗಿತ್ತು. ಕಾಶ್ಮೀರ ಸ್ವತಂತ್ರವಾಗಬೇಕೆಂದು ಪ್ರತಿಪಾದಿಸುತ್ತಿದ್ದವರು, ಪ್ರತ್ಯೇಕತಾವಾದಿಗಳು ಮತ್ತು ಉಗ್ರವಾದಿ ಸಂಘಟನೆಗಳ ಜತೆಗೆ ಗುರುತಿಸಿಕೊಂಡ ದೇಶದ್ರೋಹಿಗಳು ಪಾಕಿಸ್ಥಾನದ ಧ್ವಜ ಅರಳಿಸಿ ಸಂಭ್ರಮಪಡುತ್ತಿದ್ದ ದೃಶ್ಯಗಳೂ ಇದ್ದವು. ಆದರೆ ಈ ಸಲ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಆ.5ರಂದು ಸರಕಾರ ಕೈಗೊಂಡ ಐತಿಹಾಸಿಕ ನಿರ್ಧಾರದ ಬಳಿಕ ಕಣಿವೆ ರಾಜ್ಯದಲ್ಲಿ ಹೊಸ ಗಾಳಿ ಬೀಸುತ್ತಿದೆ. ಮೊದಲ ಸಲ ಸ್ವತಂತ್ರ ಭಾರತದ ಜೊತೆಗೆ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದೇವೆ ಎಂಬ ಪುಳಕ ಅಲ್ಲಿನ ಜನರಲ್ಲೂ ಇದೆ. ಒಂದರ್ಥದಲ್ಲಿ ಇದು ಅಖಂಡ ಭಾರತದ ಮೊದಲ ಸ್ವಾತಂತ್ರ್ಯೋತ್ಸವವೂ ಹೌದು. ಹೀಗಾಗಿ ಇತಿಹಾಸದಲ್ಲಿ ಈ ಸಲದ ಸ್ವಾತಂತ್ರ್ಯೋತ್ಸವಕ್ಕೆ ಬಹಳ ಪ್ರಾಮುಖ್ಯ ಇದೆ.

ನವ ಭಾರತ ನಿರ್ಮಾಣ ಮೋದಿ ಸರಕಾರದ ಸಂಕಲ್ಪ. ಇದಕ್ಕೆ ಈಗ ನವ ಕಾಶ್ಮೀರ ನಿರ್ಮಾಣವೂ ಸೇರಿಕೊಂಡಿದೆ. ವಿಶೇಷ ಸ್ಥಾನಮಾನದಿಂದಾಗಿ ದೇಶದ ಮುಖ್ಯವಾಹಿನಿಯಲ್ಲಿ ಬೆರೆಯದೇ ದೂರವೇ ಉಳಿದಿದ್ದ ಕಾಶ್ಮೀರದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿತ್ತು. ಇದ್ದ ಒಂದು ಪ್ರವಾಸೋದ್ಯಮವೂ ಉಗ್ರರ ಉಪಟಳದಿಂದಾಗಿ ಕುಂಟುತಿತ್ತು. ಇದೀಗ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಗಿದ್ದು, ಈ ಮೂಲಕ ಅಲ್ಲಿ ಅಭಿವೃದ್ಧಿಯ ಹೊಸ ಶಕೆಯನ್ನು ಪ್ರಾರಂಭಿಸುವ ವಾಗ್ಧಾನವನ್ನು ಸರಕಾರ ನೀಡಿದೆ. ಈ ಸ್ವಾತಂತ್ರ್ಯೋತ್ಸವ ಈ ಶಕೆಗೆ ನಾಂದಿ ಹಾಡುವ ಸಮಾರಂಭವಾಗಲಿ.

ಪ್ರತ್ಯೇಕತಾವಾದಿಗಳು, ಗಡಿಯಾಚೆಗಿನ ದುರುಳರು, ಗಡಿಯೊಳಗೆಯೇ ಇರುವ ದ್ರೋಹಿಗಳಿಂದ ಸಮಾರಂಭಕ್ಕೆ ಅಡ್ಡಿಯಾಗುವ ಸಾಧ್ಯತೆ ಖಂಡಿತ ಇದೆ. ಸದ್ಯಕ್ಕೇನೂ ಕಾಶ್ಮೀರ ಸೇನೆಯ ಬಿಗು ಕಣ್ಗಾವಲಿನಲ್ಲಿ ಸುರಕ್ಷಿತವಾಗಿರುವಂತೆ ಕಾಣಿಸುತ್ತಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬರುವ ತನಕ ಅಲ್ಲಿಂದ ಸೇನೆಯನ್ನು ಕದಲಿಸುವಂತಿಲ್ಲ ಎನ್ನುವುದೆಲ್ಲ ನಿಜ. ಆದರೆ ಬಂದೂಕಿನ ಮೂಲಕ ಬಹಳ ಕಾಲ ರಾಜ್ಯಭಾರ ಮಾಡಲು ಸಾಧ್ಯವಾಗದು. ಈ ವಾಸ್ತವ ಸರಕಾರಕ್ಕೂ ಅರಿವಿದೆ. ಸಂಬಂಧಪಟ್ಟ ಎಲ್ಲರ ಮನವೊಲಿಸಿಕೊಂಡು ಆದಷ್ಟು ಶೀಘ್ರವಾಗಿ ಅಲ್ಲಿ ಸಹಜ ಸ್ಥಿತಿ ನಿರ್ಮಾಣವಾಗುವಂತೆ ನೋಡಿಕೊಳ್ಳಬೇಕು. ವಿಧಾನಸಭೆಗೆ ಚುನಾವಣೆ ನಡೆಸಿ ನಾಗರಿಕ ಸರಕಾರ ಅಸ್ತಿತ್ವಕ್ಕೆ ಬರುವ ಪೂರಕ ವಾತಾವರಣವನ್ನು ಅಲ್ಲಿ ನಿರ್ಮಿಸಬೇಕು. ಜನಾಧಿಪತ್ಯವೇ ಸ್ವಾತಂತ್ರ್ಯದ ಪರಮ ಧ್ಯೇಯ. ಈ ಧ್ಯೇಯವನ್ನು ಸಾಧಿಸಿದಾಗಲೇ ಕಾಶ್ಮೀರಕ್ಕೆ ನಿಜವಾದ ಸ್ವಾತಂತ್ರ್ಯದ ಸಂಭ್ರಮ.ಈ ಸಂಭ್ರಮದಲ್ಲಿ ಕಾಶ್ಮೀರ ಆದಷ್ಟು ಬೇಗ ತೇಲಾಡಲಿ.

ಮೊದಲ ಸಲ ಸ್ವತಂತ್ರ ಭಾರತದ ಜತೆಗೆ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದೇವೆ ಎಂಬ ಪುಳಕ ಅಲ್ಲಿನ ಜನರಲ್ಲೂ ಇದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ