ಸ್ಪಷ್ಟ, ನಿರ್ಣಾಯಕ ತೀರ್ಪು

Team Udayavani, May 24, 2019, 3:00 AM IST

ಪ್ರಜೆಗಳ ತೀರ್ಪು ಸ್ಪಷ್ಟ ಮತ್ತು ನಿರ್ಣಾಯಕವಾಗಿದೆ.ಬಲಿಷ್ಠ ಮತ್ತು ಸಮರ್ಥ ನಾಯಕತ್ವದಿಂದ ಮಾತ್ರ ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸಲು ಸಾಧ್ಯ ಎಂಬುದನ್ನು ಮನಗಂಡಿರುವ ಅವರು, 2019ರ ಲೋಕಸಭಾ ಚುನಾವಣೆಯಲ್ಲಿ ಇದನ್ನು ತಿಳಿಸಿದ್ದಾರೆ. ಎಲ್ಲ ಅಡೆತಡೆಗಳನ್ನು ದಾಟಿ ಬಿಜೆಪಿ ನೇತೃತ್ವದ ಎನ್‌ಡಿಎ ಸ್ಪಷ್ಟ ಬಹುಮತದೊಂದಿಗೆ ಮರಳಿ ಅಧಿಕಾರಕ್ಕೇರಲು ತಯಾರಾಗಿದೆ.

ಈ ಮೂಲಕ ದೇಶದ ರಾಜಕೀಯದಲ್ಲಿ ಅದ್ಭುತವೊಂದನ್ನು ಸಾಧಿಸಿದ ಹಿರಿಮೆಗೆ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ನೇತೃತ್ವದ ಬಿಜೆಪಿ ಪಾತ್ರವಾಗಿದೆ. ಎನ್‌ಡಿಎಯ ಈ ಗೆಲುವು ಅಭೂತಪೂರ್ವವು ಐತಿಹಾಸಿಕವೂ ಆಗಿದೆ. ಕಾಂಗ್ರೆಸೇತರ ಪಕ್ಷ ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೇರಿರುವುದು ಮತ್ತು ಕಾಂಗ್ರೆಸ್ಸೇತರ ಪ್ರಧಾನಿ ಎರಡನೇ ಅವಧಿಗೆ ಅಧಿಕಾರಕ್ಕೇರಿರುವುದು ಇದೇ ಮೊದಲು.

1977ರಲ್ಲಿ ತುರ್ತು ಪರಿಸ್ಥಿತಿಯ ಬಳಿಕ ಹಾಗೂ 1980ರಲ್ಲಿ ಇಂದಿರಾ ಗಾಂಧಿ ಹತ್ಯೆಯ ಬಳಿಕ ನಡೆದ ಚುನಾವಣೆಯನ್ನು 2019ರ ಚುನಾವಣೆ ನೆನಪಿಸಿದೆ. ದೇಶದಲ್ಲಿ ಮೋದಿ ಅಲೆ ಇಲ್ಲ ಎನ್ನುವವರಿಗೆ ಈ ಫ‌ಲಿತಾಂಶ ಮುಟ್ಟಿ ನೋಡಿಕೊಳ್ಳುವಂಥ ಹೊಡೆತ ಕೊಟ್ಟಿದೆ. ಮೋದಿ ಅಲೆ ಸುನಾಮಿಯಾಗಿ ಬೀಸಿ ಪ್ರಚಂಡ ವೇಗದಲ್ಲಿ ಅಪ್ಪಳಿಸಿದ್ದು, ಇದರ ಎದುರು ವಿಪಕ್ಷಗಳು ಧೂಳೀಪಟವಾಗಿವೆ.

ಬಿಜೆಪಿ ಗೆಲುವಿಗೆ ಕಾರಣಗಳು ಹಲವು ಇರಬಹುದು. ಅಂತೆಯೇ ವಿಪಕ್ಷಗಳ ಸೋಲಿಗೆ ಹತ್ತಾರು ಕಾರಣಗಳನ್ನು ಹೇಳಬಹುದು. ಆದರೆ ಒಂದು ವಿಷಯ ಸ್ಪಷ್ಟ, ವಿಪಕ್ಷಗಳಿಗೆ, ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್‌ಗೆ ಜನರ ನಾಡಿಮಿಡಿತವನ್ನು ಅರಿಯಲು ಸಾಧ್ಯವಾಗಿಲ್ಲ. ಕಡೆಯ ತನಕ ಮೋದಿಯನ್ನು ದ್ವೇಷಿಸುವುದೇ ವಿರೋಧ ಪಕ್ಷಗಳ ಕೆಲಸ ಎಂದು ಭಾವಿಸಿದವರಿಗೆಲ್ಲ ಮತದಾರರು ಸರಿಯಾದ ಪಾಠ ಕಲಿಸಿದ್ದಾರೆ.

ರಚನಾತ್ಮಕ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲು ವಿಫ‌ಲವಾಗಿರುವುದರಿಂದಲೇ ಕಾಂಗ್ರೆಸ್‌ ಹಾಗೂ ಇನ್ನಿತರ ಪಕ್ಷಗಳು 2014ಕ್ಕಿಂತಲೂ ಹೀನಾಯ ಸ್ಥಿತಿಗೆ ತಲುಪಿವೆ. ಸೀಟುಗಳ ಲೆಕ್ಕದಲ್ಲಿ ಕಾಂಗ್ರೆಸ್‌ ಮತ್ತು ಅದರ ನೇತೃತ್ವದ ಯುಪಿಎ ಕೂಟ ತುಸು ಸುಧಾರಣೆ ಕಂಡಿರಬಹುದು. ಆದರೆ ಶೇಕಡಾವಾರು ಮತಗಳಿಕೆಯಲ್ಲಿ ವಿಪಕ್ಷಗಳು ವಿಫ‌ಲವಾಗಿವೆ.

ಅದರಲ್ಲೂ ತನ್ನದೇ ಸರ್ಕಾರವಿರುವ ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢಗಳಲ್ಲಿ ಆಗಿರುವ ಸೋಲಿನ ಕುರಿತು ಕಾಂಗ್ರೆಸ್‌ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ ಕರ್ನಾಟಕದಲ್ಲಿ ಕಾಂಗ್ರೆಸ್‌ ಸಾಧನೆ ತೀರಾ ನಿರಾಶಾದಾಯಕವಾಗಿದೆ. ಎರಡೂ ಪಕ್ಷಗಳಿಗೆ ತಲಾ ಒಂದೊಂದು ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿರುವುದು ವಿಪಕ್ಷಗಳು ತಲುಪಿರುವ ಹೀನಾಯ ಸ್ಥಿತಿಯನ್ನು ತಿಳಿಸುತ್ತದೆ.

ಬಿಜೆಪಿಯನ್ನು ಏಕಾಂಗಿಯಾಗಿ ಎದುರಿಸುವುದು ಅಸಾಧ್ಯ ಎನ್ನುವುದು ಚುನಾವಣೆಗೆ ಮೊದಲೇ ಎಲ್ಲ ವಿಪಕ್ಷಗಳಿಗೆ ತಿಳಿದಿತ್ತು. ಹಾಗೆಂದೇ, ಕುಮಾರಸ್ವಾಮಿ ಪದಗ್ರಹಣ ಸಮಾರಂಭ ನೆಪವಾಗಿರಿಸಿಕೊಂಡು ವಿಪಕ್ಷಗಳ ಮಹಾಮೈತ್ರಿಕೂಟವನ್ನು ರಚಿಸುವ ಪ್ರಯತ್ನವೊಂದಕ್ಕೆ ಚಾಲನೆ ನೀಡಲಾಗಿತ್ತು. ಆದರೆ ಕೊನೆಯ ಕ್ಷಣದ ತನಕ ವಿಪಕ್ಷಗಳ ಒಗ್ಗಟ್ಟು ಮರೀಚಿಕೆಯಾಗಿ ಉಳಿಯಿತು. ಉತ್ತರ ಪ್ರದೇಶದಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಭಿನ್ನ ಹಾದಿ ಅನುಸರಿಸಿದರೆ ದಿಲ್ಲಿಯಲ್ಲಿ ಕಾಂಗ್ರೆಸ್‌- ಆಪ್‌ ನಡುವೆ ಮೈತ್ರಿ ಏರ್ಪಡಲಿಲ್ಲ. ಈ ಲೋಪಗಳನ್ನೆಲ್ಲ ಸರಿಯಾಗಿ ಬಳಸಿಕೊಂಡ ಬಿಜೆಪಿ ಗೆದ್ದು ಬೀಗುತ್ತಿದೆ.

ಹಾಗೆಂದು, ಈ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ವಿಷಯಗಳು ಇರಲಿಲ್ಲ ಎಂದಲ್ಲ. ನಿರುದ್ಯೋಗ, ಆರ್ಥಿಕ ದುಃಸ್ಥಿತಿ, ನೋಟು ಅಮಾನ್ಯಿàಕರಣ, ಜಿಎಸ್‌ಟಿ, ರಫೇಲ್‌ ಇತ್ಯಾದಿ ವಿಚಾರಗಳನ್ನು ವಿಪಕ್ಷಗಳು ಎತ್ತಿದರೂ ಅವುಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫ‌ಲವಾದವು. ಬಿಜೆಪಿ ರಾಷ್ಟ್ರೀಯತೆ, ರಾಷ್ಟ್ರೀಯ ಭದ್ರತೆ, ಬಹುಸಂಖ್ಯಾತರ ಹಿತರಕ್ಷಣೆ, ಪಾಕಿಸ್ಥಾನದ ಮೇಲಿನ ದಾಳಿ ಇತ್ಯಾದಿ ವಿಚಾರಗಳನ್ನು ಸಮಯ ಸಂದರ್ಭ ನೋಡಿಕೊಂಡು ಎತ್ತಿ “ಈ ಮನುಷ್ಯನ ಕೈಯಲ್ಲಿ ದೇಶ ಸುಭದ್ರವಾಗಿರಬಹುದು’ ಎಂಬ ಭಾವನೆಯನ್ನು ಜನರ ಮನಸ್ಸಿನಲ್ಲಿ ಸೃಷ್ಟಿಸಲು ಯಶಸ್ವಿಯಾಯಿತು.

ಬಿಜೆಪಿ ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸಿರುವುದೇ ಅದರ ಪರವಾಗಿ ಜನರ ಮನಸ್ಸಿನಲ್ಲಿರುವ ಸಕಾರಾತ್ಮಕವಾದ ಭಾವನೆ. ಮೋದಿಯ ಆಡಳಿತದಲ್ಲಿ ಭ್ರಷ್ಟರಿಗೆ ಉಳಿಗಾಲವಿಲ್ಲ ಎಂಬ ನಂಬಿಕೆ ಜನರಲ್ಲಿ ಬೇರೂರಿದ್ದು ಇದನ್ನು ಮತಗಳಾಗಿ ಪರಿವರ್ತಿಸಿಕೊಳ್ಳುವಲ್ಲಿ ಪಕ್ಷ ಸಫ‌ಲವಾಗಿದೆ. ಬಿಜೆಪಿ ಗೆಲುವಿನಲ್ಲಿ ಹೊಸ ಮತದಾರರು ವಹಿಸಿರುವ ಪಾತ್ರವೂ ನಿರ್ಣಾಯಕವಾಗಿದೆ. ಅಂತೆಯೇ, ರಾಷ್ಟ್ರೀಯ ನೆಲೆಯಲ್ಲಿ ಜಾತಿ ರಾಜಕೀಯಕ್ಕೆ ಬೆಲೆ ಇಲ್ಲ ಎನ್ನುವುದು ಬಿಹಾರ ಮತ್ತು ಉತ್ತರ ಪ್ರದೇಶದಂಥ ರಾಜ್ಯಗಳ ಫ‌ಲಿತಾಂಶದಿಂದ ಸ್ಪಷ್ಟವಾಗುತ್ತದೆ.

ದೇಶದ ರಾಜಕೀಯ ಅಂಗಣದಿಂದ ವಾಮಪಕ್ಷಗಳು ನೇಪಥ್ಯಕ್ಕೆ ಸರಿದಿರುವುದು ಈ ಸಲದ ಚುನಾವಣೆಯ ಇನ್ನೊಂದು ಗಮನಾರ್ಹ ಅಂಶ. ಕೆಂಪುಕೋಟೆಯೆಂದೇ ಕರೆಯಲ್ಪಡುತ್ತಿದ್ದ ಪಶ್ಚಿಮ ಬಂಗಾಳ, ಕೇರಳ, ತ್ರಿಪುರ ರಾಜ್ಯಗಳಲ್ಲಿ ಪಕ್ಷ ನೆಲೆ ಕಳೆದುಕೊಂಡಿದೆ. ಚುನಾವಣೆಯಿಂದ ಚುನಾವಣೆಗೆ ದುರ್ಬಲವಾಗುತ್ತಿದ್ದರೂ ವಾಮಪಂಥೀಯ ನಾಯಕರು ಇನ್ನೂ ಹಳೇ ತಂತ್ರಗಳಿಗೆ ಮತ್ತು ಸಿದ್ಧಾಂತಗಳಿಗೆ ಜೋತು ಬಿದ್ದಿದ್ದಾರೆ. ಅವರ ಧೋರಣೆ ಬದಲಾಗದಿದ್ದರೆ ಎಡಪಕ್ಷ ಇತಿಹಾಸಕ್ಕೆ ಸೇರುವ ದಿನ ದೂರವಿಲ್ಲ.

ಈ ಚುನಾವಣೆ, ಮೋದಿ ವರ್ಸಸ್‌ ಉಳಿದವರು ಎಂಬ ಮಾದರಿಯಲ್ಲಿತ್ತು. ಬಹುತೇಕ ಅಧ್ಯಕ್ಷೀಯ ಮಾದರಿಯಲ್ಲಿ ನಡೆದ ಚುನಾವಣೆ ವ್ಯಕ್ತಿ ಕೇಂದ್ರಿತವಾಗಿತ್ತು. ಇಡೀ ಚುನಾವಣೆಯಲ್ಲಿ ಮೋದಿಯೇ ಕೇಂದ್ರ ಪಾತ್ರವಾಗಿದ್ದರು. ಆದರೆ, ಮೋದಿಗೆ ಪರ್ಯಾಯ ನಾಯಕ ಯಾರು ಎನ್ನುವುದನ್ನು ಬಿಂಬಿಸಲು ವಿಪಕ್ಷಗಳು ವಿಫ‌ಲಗೊಂಡವು. ಜನರು ಕೂಡಾ ಮೋದಿ ಮುಖ ನೋಡಿ ಮತಕೊಟ್ಟರೇ ಹೊರತು ಅಭ್ಯರ್ಥಿಗಳನ್ನು ನೋಡಿ ಅಲ್ಲ. ಶೇ. 90 ಅಭ್ಯರ್ಥಿಗಳು ಗೆದ್ದಿರುವುದು ಮೋದಿ ನಾಮಬಲದಿಂದ.

ಇದು ಬಿಜೆಪಿಯ ಹೆಗ್ಗಳಿಕೆಯೂ ಹೌದು, ದೌರ್ಬಲ್ಯವೂ ಹೌದು. ಎಲ್ಲ ಕಾಲಕ್ಕೂ ಮೋದಿಯ ಹೆಸರೇ ಗೆಲುವು ತಂದುಕೊಡಬಹುದು ಎನ್ನುವ ಖಾತರಿಯಿಲ್ಲ. ಹೀಗಾಗಿ ಇನ್ನಾದರೂ ಗೆದ್ದು ಬೀಗುತ್ತಿರುವ ಸಂಸದರು ಜನರಿಗಾಗಿ ಕೆಲ ಮಾಡಲೇ ಬೇಕು. ಅಂತೆಯೇ, ಚುನಾವಣೆ ಮುಗಿಯುವತನಕ ಮಾತ್ರ ಪಕ್ಷಬೇಧ. ಇನ್ನೇನಿದ್ದರೂ ಸರಕಾರವಾಗಿ ಕಾರ್ಯ ನಿರ್ವಹಿಸಬೇಕು. ದೇಶದ ಒಕ್ಕೂಟ ವ್ಯವಸ್ಥೆಗೆ ಯಾವುದೇ ಚ್ಯುತಿಯಾಗದಂತೆ ಎಲ್ಲ ರಾಜ್ಯಗಳನ್ನೂ ಸಮಾನವಾಗಿ ನೋಡಿಕೊಂಡು ರಾಜಧರ್ಮ ಮೆರೆಯುವ ಹೊಣೆಗಾರಿಕೆ ಗೆದ್ದವರ ಮೇಲಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ದೇಶೀಯ ಕಾರ್ಪೊರೇಟ್‌ ಕಂಪನಿಗಳ ಮತ್ತು ಹೊಸ ಉತ್ಪಾದಕ ಕಂಪೆನಿಗಳ ಕಾರ್ಪೊರೇಟ್‌ ತೆರಿಗೆ ಕಡಿತ ಘೋಷಿಸುವ ಮೂಲಕ ಹಣಕಾಸು ಸಚಿವೆ...

  • ಸೈದ್ಧಾಂತಿಕ‌ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಪರಸ್ಪರರ ಮೇಲೆ ಗೌರವ ಮತ್ತು ಆತ್ಮೀಯ ಭಾವನೆ ಇರುವುದು ಆರೋಗ್ಯಕರ ರಾಜಕೀಯದ ಲಕ್ಷಣ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ...

  • ಇನ್ನೂ ಬೆಳೆಯುತ್ತಿರುವ ಪ್ರಜಾತಂತ್ರ ವ್ಯವಸ್ಥೆಗೆ ದ್ವಿಪಕ್ಷೀಯ ಪದ್ಧತಿ ಸ್ವೀಕರಾರ್ಹ ಅಲ್ಲ. ಆದರೆ ಬಹುಪಕ್ಷೀಯ ಪದ್ಧತಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು...

  • ಜಮ್ಮು-ಕಾಶ್ಮೀರದಲ್ಲಿ ಭಾರತ-ಪಾಕಿಸ್ತಾನಿ ಸೇನೆಯ ನಡುವೆ ಸೃಷ್ಟಿಯಾಗುತ್ತಿರುವ ಬಿಕ್ಕಟ್ಟು ಚಿಂತೆಯ ವಿಷಯವಾಗಿದೆ. ಅದರಲ್ಲೂ ಕಲಂ 370 ದಯಪಾಲಿಸಿದ್ದ ವಿಶೇಷಾಧಿಕಾರವನ್ನು...

  • ಹೂಸ್ಟನ್‌ ಕಾರ್ಯಕ್ರಮ ಪಾಕ್‌ ಹಾಗೂ ಚೀನಾಕ್ಕೊಂದು ಬಲವಾದ ಸಂದೇಶ ನೀಡುವುದು ಖಚಿತ. ಏನೇ ಮಾಡಿ ದರೂ ಜಾಗತಿಕ ವೇದಿಕೆಯಲ್ಲಿ ಭಾರತದ ಪಾರಮ್ಯವನ್ನು ತಡೆಯಲು ಸಾಧ್ಯವಿಲ್ಲ...

ಹೊಸ ಸೇರ್ಪಡೆ