
ಗಡಿ ವಿಚಾರದಲ್ಲಿ ಸಿಎಂ ದಿಟ್ಟ ನಡೆ ಶ್ಲಾಘನೀಯ
Team Udayavani, Nov 28, 2022, 6:00 AM IST

ಬೆಳಗಾವಿ ಗಡಿ ಹೋರಾಟ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆರೆಯ ಮಹಾರಾಷ್ಟ್ರಕ್ಕೆ ದಿಟ್ಟ ಉತ್ತರವನ್ನೇ ನೀಡುತ್ತಿದ್ದಾರೆ. ಸಾಮಾನ್ಯವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಒಂದೇ ಪಕ್ಷದ ಸರಕಾರಗಳಿದ್ದಾಗ, ಮಹಾರಾಷ್ಟ್ರದವರು ಎಷ್ಟೇ ಪುಂಡಾಟ ಮಾಡಿದರೂ ಕರ್ನಾಟಕದ ಕಡೆಯಿಂದ ಧ್ವನಿ ಏರುತ್ತಿದ್ದುದು ಕಡಿಮೆ. ಆದರೆ ಈ ಬಾರಿ ಮಾತ್ರ ಏಟಿಗೆ ಎದಿರೇಟು ಎಂಬಂತೆ ಸಿಎಂ ಮಾತನಾಡುತ್ತಿರುವುದರಿಂದ ಗಡಿನಾಡ ಕನ್ನಡಿಗರಲ್ಲಿಯೂ ಹೊಸ ಧ್ವನಿ ಬಂದಿರುವುದು ಅಚ್ಚರಿ ತಂದಿದೆ.
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಇಂದಿನದ್ದಲ್ಲ. ಬಹು ಹಿಂದಿನಿಂದಲೂ ಈ ವಿವಾದ ನಡೆದುಕೊಂಡು ಬಂದಿದ್ದು ಮಹಾರಾಷ್ಟ್ರದ ಒತ್ತಾಸೆ ಮೇರೆಗೆ ಮಹಾಜನ್ ಆಯೋಗ ರಚಿಸಿ ವರದಿಯನ್ನೂ ಪಡೆಯಲಾಗಿದೆ. ವಿಚಿತ್ರವೆಂದರೆ ಇದುವರೆಗೆ ಈ ಮಹಾಜನ್ ವರದಿಯನ್ನು ಮಹಾರಾಷ್ಟ್ರ ಒಪ್ಪಿಲ್ಲ. ಅದರಲ್ಲಿ ಕರ್ನಾಟಕದಿಂದ ಯಾವುದೇ ಭಾಗಗಳು ಮಹಾರಾಷ್ಟ್ರಕ್ಕೆ ಹೋಗಬೇಕಾಗಿಲ್ಲ ಎಂಬ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ. ಆದರೂ ತನ್ನ ಕಿಡಿಗೇಡಿತನವನ್ನು ಮಹಾರಾಷ್ಟ್ರ ಅಂದಿನಿಂದಲೂ ಪ್ರದರ್ಶಿಸಿಕೊಂಡೇ ಬರುತ್ತಿದೆ. ಅಷ್ಟೇ ಅಲ್ಲ ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕದ ತಟ್ಟಿರುವ ಮಹಾರಾಷ್ಟ್ರ, ಅಲ್ಲಿಂದಾದರೂ ಕರ್ನಾಟಕದಲ್ಲಿರುವ ಬೆಳಗಾವಿ ಜಿಲ್ಲೆಯೂ ಸಹಿತ 800ಕ್ಕೂ ಹೆಚ್ಚು ಗ್ರಾಮಗಳನ್ನು ಪಡೆಯುವ ಇರಾದೆ ವ್ಯಕ್ತಪಡಿಸುತ್ತಿದೆ. ಎಲ್ಲವೂ ಅಂದುಕೊಂಡಂತಾಗಿದ್ದರೆ ಕಳೆದ ವಾರವೇ ಈ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ಬರಬೇಕಿತ್ತು.
ಈ ಎಲ್ಲ ಸಂಗತಿಗಳ ಮಧ್ಯೆ ಮಹಾರಾಷ್ಟ್ರದಲ್ಲಿ ಬೆಳಗಾವಿ ಬಗ್ಗೆ ಇನ್ನಿಲ್ಲದ ಆಸಕ್ತಿ ತೋರಿಸಲಾಗುತ್ತಿದೆ. ಈಗ ಶಿವಸೇನೆಯ ಶಿಂಧೆ ಬಣ ಮತ್ತು ಬಿಜೆಪಿ ಸೇರಿ ಅಲ್ಲಿ ಸರಕಾರ ಮಾಡಿದೆ. ಅಲ್ಲಿನ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೇ ಬೆಳಗಾವಿ ಪಡೆಯುವ ಬಗ್ಗೆ ಮಾತನಾಡಿದ್ದಾರೆ. ಫಡ್ನವೀಸ್ ಅವರ ಮಾತಿಗೆ ಬೊಮ್ಮಾಯಿ ಕೂಡ ಖಡಕ್ ಆಗಿಯೇ ಉತ್ತರ ನೀಡಿದ್ದು, ನಮ್ಮಿಂದ ಒಂದೇ ಒಂದು ಹಳ್ಳಿಯನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ, ಮಹಾರಾಷ್ಟ್ರದಲ್ಲೇ ಇರುವ ಜತ್ತ, ಸೋಲಾಪುರ ಸಹಿತ ಕನ್ನಡಿಗರ ಪ್ರದೇಶಗಳನ್ನು ಕರ್ನಾಟಕಕ್ಕೆ ಪಡೆಯುತ್ತೇವೆ ಎಂಬ ಮಾತುಗಳನ್ನು ಸಿಎಂ ಬೊಮ್ಮಾಯಿ ಆಡಿದ್ದಾರೆ. ಇಂಥ ಮಾತುಗಳನ್ನು ಹಿಂದೆ ನಾವು ಕೇಳಿರಲಿಲ್ಲ. ಪ್ರತೀ ಬಾರಿಯೂ ಅವರು ಬೆಳಗಾವಿ ಮೇಲೆ ಕಣ್ಣು ಹಾಕಿದಾಗಲೆಲ್ಲ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದೇ ಹೇಳುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ಪ್ರದೇಶಗಳನ್ನೂ ಕರ್ನಾಟಕಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ರಾಜಕಾರಣಿಗಳಾಗಿ ಇಂಥ ಇಚ್ಛಾಶಕ್ತಿ ಪ್ರದರ್ಶನ ತುಂಬಾ ಮುಖ್ಯ. ಬೊಮ್ಮಾಯಿ ಅವರ ಈ ಮಾತಿನಿಂದಲೇ ಮಹಾರಾಷ್ಟ್ರದಲ್ಲಿರುವ ಕನ್ನಡಿಗರು ಈಗ ಅಭಿವೃದ್ಧಿ ನಿರ್ಲಕ್ಷ್ಯದ ಬಗ್ಗೆ ದನಿ ಎತ್ತಿದ್ದಾರೆ. ನಮ್ಮ ಪ್ರದೇಶಗಳನ್ನು ಅಭಿವೃದ್ಧಿ ಮಾಡಿ, ಇಲ್ಲದಿದ್ದರೆ ನಮ್ಮನ್ನು ಕರ್ನಾಟಕಕ್ಕೆ ಸೇರಲು ಬಿಡಿ ಎಂದು ಒತ್ತಡ ಹೇರುತ್ತಿದ್ದಾರೆ. ಒಂದು ರೀತಿಯಲ್ಲಿ ಇದು ಹೊಸ ರೀತಿಯ ಹೋರಾಟದಂತೆ ಕಾಣುತ್ತಿದೆ.
ಹೀಗಾಗಿ ಬೊಮ್ಮಾಯಿ ಅವರ ಈ ಗಟ್ಟಿ ಧ್ವನಿ ಮುಂದೆಯೂ ಇರಬೇಕು. ಕನ್ನಡ ನಾಡು, ನುಡಿ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಧ್ವನಿಯನ್ನು ಸಣ್ಣಗೆ ಮಾಡುವುದು ಬೇಡ. ನಮ್ಮ ಭಾಗದ ಯಾವುದೇ ನೆಲದ ಮೇಲೆ ಯಾರೇ ಕಣ್ಣು ಹಾಕಿದರೂ ಇಂಥ ಉತ್ತರವನ್ನೇ ನೀಡಬೇಕು. ಈ ವಿಚಾರದಲ್ಲಿ ಬೊಮ್ಮಾಯಿ ಅವರ ನಡೆ ಶ್ಲಾಘನೀಯವಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
ಹೊಸ ಸೇರ್ಪಡೆ

ಸಿ.ಡಿ ವಿಚಾರದಲ್ಲಿ ಡಿಕೆಶಿ ಕಾಂಗ್ರೆಸ್ ನಾಯಕರ ಬಾಯಿ ಮುಚ್ಚಿಸಿದ್ದಾರೆ: ಈಶ್ವರಪ್ಪ

ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ ನಲ್ಲಿ 5300 ಕೋಟಿ ಘೋಷಣೆ ಸ್ವಾಗತಾರ್ಹ: ಸಿಎಂ ಬೊಮ್ಮಾಯಿ

Union Budget 2023: ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಘೋಷಣೆ

Union Budget 2023: ಈ ಬಾರಿ ಬಜೆಟ್ ನಲ್ಲಿ ಯಾವುದು ದುಬಾರಿ, ಯಾವುದು ಅಗ್ಗ?

Union Budget 2023: ಆದಾಯ ತೆರಿಗೆಯಲ್ಲಿ ಭಾರಿ ಬದಲಾವಣೆ; 7 ಲಕ್ಷದವರೆಗೆ ಟ್ಯಾಕ್ಸ್ ಕಟ್ಟಬೇಕಿಲ್ಲ