ದೇಶದ ಹಿತದೃಷ್ಟಿ ಮುಖ್ಯ 

Team Udayavani, Aug 7, 2019, 3:01 AM IST

ದೇಶದ ಮುಕುಟದ ಮಣಿಯಂತಿರುವ ಜಮ್ಮು ಮತ್ತು ಕಾಶ್ಮೀರಕ್ಕೆ ಇದುವರೆಗೆ ಮುಳ್ಳಾಗಿ ಇದ್ದ ಸಂವಿಧಾನದ 370, 35ಎ ವಿಧಿಗಳು ನಿಷ್ಕ್ರಿಯವಾಗಿವೆ. ಆ ರಾಜ್ಯ ದೇಶದ ಒಕ್ಕೂಟ ವ್ಯವಸ್ಥೆಯ ಒಳಗೇ ಇದ್ದರೂ, ಪ್ರತ್ಯೇಕವಾಗಿಯೇ ಗುರುತಿಸಿಕೊಳ್ಳುವಂತೆ 72 ವರ್ಷಗಳಿಂದ ಇದ್ದದ್ದು ನಿಜಕ್ಕೂ ದುರದೃಷ್ಟಕರ. ಈ ಪ್ರಮಾ ದ ದ ಹೊಣೆಯನ್ನು ನಿಜವಾಗಿಯೂ ಹೊತ್ತುಕೊಳ್ಳಬೇಕಾಗಿರುವುದು ಕಾಂಗ್ರೆಸ್‌. ಆದರೆ, ಈಗಲೂ ಕೂಡ ಅದು ತನ್ನ ತಪ್ಪಿನಿಂದ ಪಾಠ ಕಲಿಯದಿರುವುದು ಸ್ಪಷ್ಟವಾಗುತ್ತದೆ.

ಈ ಐತಿಹಾಸಿಕ ಪ್ರಮಾದ ಸರಿಪಡಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ. ಈ ಮಹ ತ್ತರ ಹೆಜ್ಜೆಗೆ ಎಲ್ಲರಿಂದಲೂ ಬೆಂಬಲ ಅಗತ್ಯವಾಗಿದೆ. ಹಿಂದೆ ನ್ಯಾಷನಲ್‌ ಕಾನ್ಫರೆನ್ಸ್‌ ಸಂಸ್ಥಾಪಕ ಶೇಖ್‌ ಅಬ್ದುಲ್ಲಾರಿಗಾಗಿಯೇ ಸಂವಿಧಾನದಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿಕೊಟ್ಟದ್ದು, ಜವಾಹರ್‌ಲಾಲ್‌ ನೆಹರೂ. 370ನೇ ವಿಧಿ ತಾತ್ಕಾಲಿಕ ಎಂದು ಹೇಳಿಕೊಂಡೇ 72 ವರ್ಷಗಳು ಕಳೆದಿವೆ. ಅದರಿಂದ ಆ ರಾಜ್ಯದಲ್ಲಿ ಅಭಿವೃದ್ಧಿಯಾಗಿದ್ದರೆ ಬೇರೆ ಮಾತು. ಅಂಥದ್ದೇನೂ ಆಗಿಲ್ಲ. ಬದಲಾಗಿ ದೇಶ ವಿರೋಧಿ ಶಕ್ತಿಗಳು ಮತ್ತು ಕಾಶ್ಮೀರಿ ನಾಯಕರು ಬಲವಾಗಿದ್ದಾರಷ್ಟೆ.

ಇದರ ಅರಿವಿದ್ದರೂ ಕಾಂಗ್ರೆಸ್‌, ಈಗಲೂ ಆರ್ಟಿಕಲ್‌ 370, 35ಎ ಪರವಾಗಿಯೇ ಮಾತನಾಡುತ್ತಿರುವುದು ದುರಂತ. ರಾಜ್ಯಸಭೆಯಲ್ಲಿ ವಿಧೇಯಕ ಮಂಡಿಸಿದ ವೇಳೆ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ಮತ್ತು ಲೋಕಸಭೆಯಲ್ಲಿನ ಪಕ್ಷದ ನಾಯಕ ಅಧಿರ್‌ ರಂಜನ್‌ ಚೌಧರಿ, ತಿರುವನಂತಪುರ ಸಂಸದ ಶಶಿ ತರೂರ್‌ ಮತ್ತು ಇತರರು ಸರ್ಕಾರದ ಕ್ರಮವನ್ನು ಟೀಕಿಸಲೇಬೇಕೆಂಬ ಕಾರ ಣಕ್ಕೆ ಟೀಕಿಸಿದ್ದಾರೆ. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಈ ನಿರ್ಧಾರ ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರಲಿದೆ ಎಂಬ ಅಸಂಬದ್ಧ ಮಾತುಗಳನ್ನಾಡಿದ್ದಾರೆ.

ಲೋಕಸಭೆಯಲ್ಲಿನ ಕಾಂಗ್ರೆಸ್‌ ನಾಯಕ ಅಧಿರ್‌ ರಂಜನ್‌ ಚೌಧರಿಯಂತೂ ಕಾಶ್ಮೀರ ವಿಚಾರ ದ್ವಿಪಕ್ಷೀಯವೋ ಅಥವಾ ಆಂತರಿಕ ವಿಚಾರವೋ ಎಂದು ಪ್ರಶ್ನೆ ಮಾಡಿರುವುದರ ಔಚಿತ್ಯವನ್ನೇ ಪ್ರಶ್ನಿಸಬೇಕಾಗುತ್ತದೆ. ಅಗತ್ಯ-ಅನಗತ್ಯದ ಬಗ್ಗೆ ತಲೆಕೆಡಿಸಿಕೊಳ್ಳದೇ ಕಾಂಗ್ರೆಸ್‌ 370, 35ಎ ವಿಧಿಗಳಿಗೆ ಬೆಂಬಲ ನೀಡುತ್ತಲೇ ಬಂದಿದೆ. ಇದರಿಂದಾಗಿ ಕಣಿವೆ ರಾಜ್ಯದಲ್ಲಿ ಪ್ರತ್ಯೇಕತಾವಾದ ಮತ್ತು ಉಗ್ರವಾದವೆಂಬ ಎರಡು ಹೆಮ್ಮರಗಳು ಆಳವಾಗಿ ಬೇರೂರಿವೆ. ಕೇಂದ್ರದ ಕ್ರಮ ಗಳನ್ನು ವಿರೋಧಿಸುತ್ತಿರುವ ಕಾಂಗ್ರೆಸ್‌ಗೆ ಮತ್ತು ಇತರ ಪಕ್ಷಗಳಿಗೆ 370 ಮತ್ತು 35ಎ ಎನ್ನುವುದು ಓಟ್‌ಬ್ಯಾಂಕ್‌ ಅನ್ನು ಆಯ್ದು ತರುವ ಹಂಸವೇ ಆಗಿತ್ತು.

ಈಗಲಾದರೂ ಅನ ಗತ್ಯ ವಿರೋಧವನ್ನು ನಿಲ್ಲಿಸಿ ಇನ್ನು ಮುಂದೆ ಆಗಬೇಕಾಗಿರುವ ಕೆಲಸದ ಬಗ್ಗೆ ಆ ಪಕ್ಷದ ನಾಯಕರು ಸರ್ಕಾರದ ಜತೆಗೆ ಕೈಜೋಡಿಸಬೇಕಾಗಿದೆ. ಇನ್ನು ಗೃಹ ಸಚಿವ ಅಮಿತ್‌ ಶಾ ಪ್ರಸ್ತಾಪಿಸಿದ ಮತ್ತೂಂದು ಪ್ರಧಾನ ಅಂಶವೆಂದರೆ ಸರ್ಕಾರದ ಮುಂದೆ ಇರುವ ಗುರಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಮರಳಿ ಭಾರತದ ತೆಕ್ಕೆಗೆ ಸೇರಿಸುವುದು. ಇದು ಸ್ವಾಗತಾರ್ಹ ವಿಚಾರವಾದರೂ, ಈಗ ಕೈಗೊಂಡ ಸಿದ್ಧತೆ ಮತ್ತು ಮುನ್ನೆಚ್ಚರಿಕೆಗಳಿಗಿಂತ ಹೆಚ್ಚಿನ ಸಿದ್ಧತೆ, ಭದ್ರತೆಯನ್ನು ಕೈಗೊಳ್ಳಲೇಬೇಕಾಗುತ್ತದೆ.

ಭೂಪ್ರದೇಶ ನಮ್ಮ ದೇಶದ್ದೇ ಆದರೂ, ಹಿಂದಿನ ಐತಿಹಾಸಿಕ ಪ್ರಮಾದದಿಂದಾಗಿ ಅದು ಪಾಕಿಸ್ತಾನದ ವಶದಲ್ಲಿ ಇದೆ. ಅದನ್ನು ಹಿಂಪಡೆಯಲು ಅನ್ಯ ಮಾರ್ಗಗಳೂ ಇವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಜನಜೀವನ ಸಾಮಾನ್ಯ ಸ್ಥಿತಿಗೆ ಬಂದು, ಅವರೇ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ ಜತೆಯಾಗಲಿ ಎಂಬ ಬೇಡಿಕೆಯನ್ನು ನೇರವಾಗಿ ಕೇಂದ್ರ ಸರ್ಕಾರಕ್ಕೆ ಬರೆದು ತಿಳಿಸುವಂತಾಗಬೇಕು. ಹಾಗೆ ಆದಾಗ ಅಮಿತ್‌ ಶಾ ಪ್ರಸ್ತಾಪಿಸಿದ ಮಾತುಗಳ ಜಾರಿಗೆ ರಂಗ ಸಜ್ಜಾಗುತ್ತದೆ.

ಇದೆಲ್ಲ ಸಾಧ್ಯವಾಗಬೇಕೆಂದರೆ ಸರ್ಕಾರಕ್ಕೆ ಎಲ್ಲಾ ರೀತಿಯ ಬೆಂಬಲ ದೇಶದ ಒಳಗಿನಿಂದಲೇ ಸಿಗಬೇಕು. ಇನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಐದು ಸದಸ್ಯ ರಾಷ್ಟ್ರಗಳು ಮತ್ತು ಇತರ ರಾಷ್ಟ್ರಗಳು ಕೇಂದ್ರದ ಕ್ರಮ ಪ್ರಶ್ನಿಸಲಾರವು. ಏಕೆಂದರೆ ಅದು ದೇಶದ ಆಂತರಿಕ ವಿಚಾರ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿರಿಸಿಕೊಂಡು ಕಾಂಗ್ರೆಸ್‌ ಮತ್ತು ಇತರ ಕೆಲವು ಪಕ್ಷಗಳು ಈ ನಿಟ್ಟಿನಲ್ಲಿ ರಾಜಕೀಯ ಮಾಡದೆ, ಸರ್ಕಾರಕ್ಕೆ ಬೆಂಬಲ ನೀಡಲೇ ಬೇಕಿದೆ. ದೇಶದ ಹಿತಚಿಂತನೆಯೇ ಎಲ್ಲ ಪಕ್ಷಗಳಿಗೂ ಮುಖ್ಯವಾಗಲಿ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ