
ಕೋವಿಡ್ ರೋಗಿಯ ಮಾನಸಿಕ ಸ್ವಾಸ್ಥ್ಯ; ಶಿಫಾರಸುಗಳು ಜಾರಿಯಾಗಲಿ
Team Udayavani, Oct 2, 2020, 6:29 AM IST

ಸಾಂದರ್ಭಿಕ ಚಿತ್ರ
ಕೋವಿಡ್ ವಿರುದ್ಧದ ಹೋರಾಟದಲ್ಲಿ ಎದುರಾಗಿರುವ ಬಹುದೊಡ್ಡ ಸವಾಲೆಂದರೆ, ರೋಗ ಲಕ್ಷಣ ಇದ್ದರೂ ಜನರು ಪರೀಕ್ಷೆಗೆ ಮುಂದಾಗದೇ ಇರುವುದು. ಇದಕ್ಕೆ ಹಲವು ಕಾರಣಗಳಿವೆ. ರೋಗದ ಕುರಿತು ಅಸಡ್ಡೆಯ ಭಾವನೆ ಒಂದೆಡೆಯಾದರೆ, ಇನ್ನೊಂದೆಡೆ ಸಾಮಾಜಿಕ ತಿರಸ್ಕಾರಕ್ಕೆ ಗುರಿಯಾಗುವ, ಆಸ್ಪತ್ರೆ ಅಥವಾ ಕ್ವಾರಂಟೈನ್ ಕೇಂದ್ರಗಳಲ್ಲಿ ಒಂಟಿಯಾಗಿ ಇರಬೇಕಾಗುತ್ತದೇನೋ ಎಂಬ ಭಯವೂ ಇರುವುದು ಸ್ಪಷ್ಟ. ಎಲ್ಲಕ್ಕಿಂತ ಹೆಚ್ಚಾಗಿ, ಕೋವಿಡ್ ಸೋಂಕಿತರನ್ನು ಭೇಟಿಯಾಗಲು ಕುಟುಂಬಸ್ಥರಿಗೆ ಅನುಮತಿ ನೀಡದೇ ಇರುವುದು, ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ಮನೆಯವರ ಉಪಸ್ಥಿತಿಯಿಲ್ಲದೇ ನಡೆದುಹೋಗುತ್ತಿರುವಂಥ ದೃಶ್ಯಾವಳಿಗಳು ಜನರಲ್ಲಿ ಒಂದು ರೀತಿಯ ಹಿಂಜರಿಕೆ ಮೂಡಲು ಕಾರಣವಾಗಿದೆ.
ಕೋವಿಡ್ ಮರಣಾಂತಿಕವಲ್ಲ ಎನ್ನುವುದು ನಿಜವಾದರೂ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತ ವ್ಯಕ್ತಿಗಳಿಗೆ ದೈಹಿಕ ತೊಂದರೆಗಳಿಗಿಂತ ಹೆಚ್ಚಾಗಿ ಒಂಟಿತನ, ಆತಂಕ ಹಾಗೂ ಖನ್ನತೆಯಂಥ ಮಾನಸಿಕ ಸಮಸ್ಯೆಗಳು ಹೆಚ್ಚಾಗಿ ಬಾಧಿಸುತ್ತಿವೆ ಎನ್ನುತ್ತವೆ ಇತ್ತೀಚಿನ ಕೆಲವು ವರದಿಗಳು. ಇದನ್ನು ಮನಗಂಡ ತಜ್ಞರ ಸಮಿತಿ, ಆಸ್ಪತ್ರೆಯಲ್ಲಿರುವ ಸೋಂಕಿತರ ಭೇಟಿಗೆ ಕುಟುಂಬಸ್ಥರಿಗೆ ಅವಕಾಶ ನೀಡಬೇಕು (ಸುರûಾ ಸಾಧನಗಳನ್ನು ಧರಿಸಿ), ಆರೋಗ್ಯ ಸ್ಥಿರವಾಗಿರುವ ರೋಗಿಗಳಿಗೆ ಮನೆ ಊಟ ನೀಡಬೇಕು ಹಾಗೂ ಬಹುಮುಖ್ಯ ವಾಗಿ ಪಿಪಿಇ ಕಿಟ್ ಧರಿಸಿ ಸೋಂಕಿತರ ಸಂಬಂಧಿಗಳಿಗೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅನುಮತಿ ನೀಡಬೇಕು ಎಂದು ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದೆ. ಖನ್ನತೆ, ಆತಂಕ, ಒತ್ತಡದಂಥ ಸಮಸ್ಯೆಗಳು ರೋಗನಿರೋಧಕ ಶಕ್ತಿಯ ಮೇಲೆಯೂ ಋಣಾತ್ಮಕ ಪರಿಣಾಮ ಬೀರುವುದರಿಂದ ಈ ನಿಟ್ಟಿನಲ್ಲಿ ಇಂಥದ್ದೊಂದು ಶಿಫಾರಸು ಮಾಡಿರುವುದು ಸ್ವಾಗತಾರ್ಹ. ಕುಟುಂಬಸ್ಥರನ್ನು ಭೇಟಿಯಾಗುವುದರಿಂದ ರೋಗಿಗೆ ಮಾನಸಿಕ ಸ್ಥೈರ್ಯ ಹೆಚ್ಚುತ್ತದೆ, ಅವರು ಸುರಕ್ಷಿತವಾಗಿದ್ದಾರೆ ಎಂಬುದು ಖಾತ್ರಿಯಾದಂತೆ, ಬೇಗನೇ ಚೇತರಿಸಿ ಕೊಳ್ಳಬೇಕು ಎಂಬ ಲವಲವಿಕೆ ಆತನಲ್ಲಿ ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ಮನೋವೈದ್ಯರು.
ಈಗ ಎಂದಲ್ಲ, ಆರಂಭದಿಂದಲೂ ದೇಶದಲ್ಲಿ ದೈಹಿಕ ಆರೋಗ್ಯಕ್ಕೆ ಸಿಕ್ಕ ಗಮನ, ಮಾನಸಿಕ ಆರೋಗ್ಯಕ್ಕೆ ದೊರೆತೇ ಇಲ್ಲ. ಕೋವಿಡ್ ಸಂಕಷ್ಟವಂತೂ ದೇಶವಾಸಿಗಳ ಮಾನಸಿಕ ಆರೋಗ್ಯದ ಮೇಲೆ ಭಾರೀ ಪ್ರಹಾರ ಮಾಡುತ್ತಿದೆ. ಈ ಕಾರಣಕ್ಕಾಗಿಯೇ ಮಾನಸಿಕ ಆರೋಗ್ಯ ರಕ್ಷಣೆಯತ್ತಲೂ ಗಮನಹರಿಸುವುದು ಅಗತ್ಯವಾಗಿದೆ. ಸೋಂಕು ತಗಲಿದಾಗಲಷ್ಟೇ ಅಲ್ಲ, ಚೇತರಿಸಿಕೊಂಡ ಅನಂತರವೂ ತಮ್ಮ ನೆರೆಹೊರೆಯವರು, ಸಹೋದ್ಯೋಗಿಗಳು ತಮ್ಮನ್ನು ತಪ್ಪಿತಸ್ಥರಂತೆ ನೋಡುತ್ತಿದ್ದಾರೆ ಎಂದು ಅನೇಕರು ಬೇಸರ ವ್ಯಕ್ತಪಡಿಸುತ್ತಾರೆ. ಆರಂಭದಿಂದಲೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇದು ರೋಗದ ವಿರುದ್ಧದ ಹೋರಾಟವೇ ಹೊರತು ರೋಗಿಯ ವಿರುದ್ಧದ ಹೊರಾಟವಲ್ಲ ಎಂದು ಜಾಗೃತಿ ಮೂಡಿಸುತ್ತಲೇ ಬಂದರೂ ಇಂಥ ಮನಃಸ್ಥಿತಿಗಳು ಕಾಣಿಸುತ್ತಿರುವುದು ದುರಂತ.
ನೆನಪಿರಲಿ, ಇದು ಜಗತ್ತಿಗೇ ಆವರಿಸಿರುವ ಕಂಟಕ. ಸೋಂಕಿತರಿಗೆ ನಾವೆಲ್ಲ ಮಾನಸಿಕವಾಗಿ ಬಲ ತುಂಬಿದರೆ, ರೋಗದ ಸುತ್ತಲೂ ಹಬ್ಬಿಕೊಂಡಿ ರುವ ಮಾನಸಿಕ ತುಮುಲಗಳು ಪರಿಹಾರವಾಗುತ್ತಾ ಹೋದರೆ, ನಿಸ್ಸಂಶಯ ವಾಗಿಯೂ ರೋಗದ ವಿರುದ್ಧದ ಹೋರಾಟದಲ್ಲಿ ನಾವು ದಾಪುಗಾಲಿಡಲಿದ್ದೇವೆ. ಒಟ್ಟಲ್ಲಿ, ಈಗ ರಾಜ್ಯ ಸರಕಾರದ ಎದುರಿರುವ ಶಿಫಾರಸುಗಳಿಗೆ ಅಂಕಿತ ಬೀಳಲೇಬೇಕಿದೆ. ಈ ವಿಷಯದಲ್ಲಿ ಯಾವುದೇ ಕಾರಣಕ್ಕೂ ವಿಳಂಬ ಆಗುವುದು ಬೇಡ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ರಾಮನವಮಿ: ದೇವಾಲಯದ ಬಾವಿಯ ಸಿಮೆಂಟ್ ಹಾಸು ಕುಸಿದು 13 ಭಕ್ತರ ಮೃತ್ಯು

ಸ್ವಿಗ್ಗಿ ಸಮೀಕ್ಷೆಯಲ್ಲಿ ಏನಿದೆ…ಇಡ್ಲಿ ಇಂದಿಗೂ ಜನಪ್ರಿಯ ಎಂಬುದಕ್ಕೆ ಈ ವ್ಯಕ್ತಿಯೇ ಸಾಕ್ಷಿ!

ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಸಂಕಷ್ಟ; ಬಂಧಿಸುವಂತೆ ಕೋರ್ಟ್ ಆದೇಶ

ರಚನೆಯಾಗಿ ಎಂಟು ವರ್ಷಕ್ಕೇ ಸೋಂದಾ ಗ್ರಾಪಂಗೆ ಒಲಿದ ಗಾಂಧಿ ಗ್ರಾಮ ಪುರಸ್ಕಾರ

ಮರಳಿ ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಸಚಿವ ಗುಬ್ಬಿ ಶ್ರೀನಿವಾಸ್