ವಿದ್ಯಾರ್ಥಿಗಳೇ ಎದೆಗುಂದದಿರಿ

ಸೋಲು-ಗೆಲುವು ಬದುಕಿನ ಭಾಗ

Team Udayavani, Apr 17, 2019, 6:00 AM IST

ಮಾರ್ಚ್‌ ತಿಂಗಳಲ್ಲಿ ನಡೆದಿದ್ದ 2018-19ನೇ ಸಾಲಿನ ದ್ವಿತೀಯ ಪಿಯುಸಿ ಫ‌ಲಿತಾಂಶ ಹೊರಬಿದ್ದಿದ್ದು, ಈ ಬಾರಿ ರಾಜ್ಯದ ವಿದ್ಯಾರ್ಥಿಗಳು ಹಿಂದೆಂದಿಗಿಂತಲೂ ಉತ್ತಮ ಸಾಧನೆ ಮಾಡಿದ್ದಾರೆ. ಅದರಲ್ಲೂ 90 ಪ್ರತಿಶತ ಅಂಕಗಳಂತೂ ಸಾಮಾನ್ಯ ಎನ್ನಿಸುವಷ್ಟರ ಮಟ್ಟಿಗೆ ಬಂದಿವೆ. ಊಹಿಸಿದಂತೆಯೇ ಪ್ರತಿವರ್ಷದಂತೆ ಈ ವರ್ಷವೂ ವಿದ್ಯಾರ್ಥಿನಿಯರ ಮೇಲುಗೈಯಾಗಿದೆ. ಸಾಧನೆ ಮಾಡಿದ ವಿದ್ಯಾರ್ಥಿಗಳ ಪರಿಶ್ರಮದ ಕಥೆಗಳು, ಸಾಧಕ ಜಿಲ್ಲೆಗಳ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳ ರೇಟಿಂಗ್‌ಗಳು ಸದ್ದು ಮಾಡಿವೆ…

ಇವೆಲ್ಲದರ ನಡುವೆಯೇ, ಸೋಮವಾರವಷ್ಟೇ ಉಡುಪಿ ಜಿಲ್ಲೆಯ ಕೊಕ್ಕರ್ಣೆ ಸಮೀಪದ ವಿದ್ಯಾರ್ಥಿನಿಯೊಬ್ಬಳು ಕನ್ನಡ ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ನಡೆದುಹೋಗಿದೆ.ಅದರಂತೆಯೇ ಪ್ರತಿವರ್ಷವೂ ಕಾಡುವ ಆತಂಕ-ಮಡುಗಟ್ಟುವ ನೋವೊಂದು ಮತ್ತೆ ರಾಜ್ಯವನ್ನು ಆವರಿಸಿದೆ. “ಪರೀಕ್ಷೆಯೇ ಎಲ್ಲವೂ ಅಲ್ಲ, ಫೇಲಾದವರೂ ಸಾಧಕರಾದ ಅನೇಕ ಕಥೆಗಳಿವೆ’ ಎಂಬರ್ಥದ ಪ್ರೋತ್ಸಾಹದ ನುಡಿಗಳನ್ನು ಎಷ್ಟೇ ಆಡಿದರೂ, ವಾಸ್ತವದಲ್ಲಿ ಪರಿಸ್ಥಿತಿ ನಿಜಕ್ಕೂ ಬದಲಾಗುತ್ತಿದೆಯೇ ಎನ್ನುವ ಪ್ರಶ್ನೆಯನ್ನು ಇಂಥ ಘಟನೆಗಳು ಹುಟ್ಟುಹಾಕುತ್ತಿವೆ. ಏಕೆಂದರೆ, ಸ್ಪರ್ಧಾತ್ಮಕತೆಯ ಓಟದಲ್ಲಿ ಮಕ್ಕಳು-ಪೋಷಕರು ಎಷ್ಟು ವೇಗವಾಗಿ ಓಡುತ್ತಿದ್ದಾರೆಂದರೆ , ಸಾವರಿಸಿಕೊಂಡು ವಾಸ್ತವವನ್ನು ಅರಿತುಕೊಳ್ಳುವುದಕ್ಕೆ, ಕಿವಿಮಾತುಗಳನ್ನು ಎದೆಗೆ ಇಳಿಸಿಕೊಳ್ಳುವುದಕ್ಕೆ ಅವರಿಗೆ ಸಾಧ್ಯವಾಗುತ್ತಲೇ ಇಲ್ಲ. ಯಾವ ಸಂಗತಿ ಜೀವನದ ಒಂದು ಚಿಕ್ಕ ಭಾಗವಾಗಬೇಕೋ, ಅದೇ ಸಂಗತಿ ಜೀವನವನ್ನು ಕೊನೆಗೊಳಿಸುವಷ್ಟು ಬಲಿಷ್ಠವಾಗಿ ಬದಲಾಗಿದ್ದೇಕೆ? ಪಿಯುಸಿ ಅಥವಾ ಎಸ್‌ಎಸ್‌ಎಲ್‌ಸಿ ಪರೀಕ್ಷೆಯೇ ಸರ್ವಸ್ವ, ಅದರಲ್ಲಿ ವಿಫ‌ಲರಾದರೆ ಜೀವನದಲ್ಲೇ ವಿಫ‌ಲವಾದಂತೆ ಎಂಬ ಭಾವನೆ ಎಷ್ಟು ಪ್ರಬಲವಾಗಿ ಬದಲಾಗಿದೆಯೆಂದರೆ, ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಜೀವನವನ್ನು ಕ್ಷಣಾರ್ಧದಲ್ಲಿ ಕೈಚೆಲ್ಲುತ್ತಿದ್ದಾರೆ.

ಕೇವಲ ಶಿಕ್ಷಕರು, ಪೋಷಕರಷ್ಟೇ ಅಲ್ಲ, ಮಾಧ್ಯಮ ರಂಗ, ಶೈಕ್ಷಣಿಕ ವಲಯ ಯಾವ ಮಟ್ಟಕ್ಕೆ ಪಿಯುಸಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಸುತ್ತ ಅಗಾಧ ನಿರೀಕ್ಷೆಗಳ ಬೆಟ್ಟಗಳನ್ನು ಸೃಷ್ಟಿಸಿಬಿಟ್ಟಿದೆಯೆಂದರೆ, ಮಕ್ಕಳ ಮೇಲೆ ಅವರ ವಯೋಮಾನಕ್ಕೆ ಅಸಹಜವಾದಂಥ ಒತ್ತಡ ಬೀಳುತ್ತಿದೆ. ಅನುತೀರ್ಣರಾಗಿಬಿಟ್ಟರೆ ಮುಂದೆ ಬೇರೆ ದಾರಿಯೇ ಇಲ್ಲ ಎನ್ನುವಂಥ ಮೌಡ್ಯವನ್ನು ನಾವೇಕೆ ಅವರ ಸುತ್ತ ಕಟ್ಟಿಬಿಟ್ಟಿದ್ದೇವೋ ತಿಳಿಯದು.

ಶಾಲೆಗಳಲ್ಲಿ ಜೀವನಮೌಲ್ಯಗಳ ಕುರಿತ ಪಾಠಗಳ ಅಗತ್ಯ ಎಷ್ಟಿದೆ ಎನ್ನುವುದನ್ನು ಈ ಸಂಗತಿ ಸಾರುತ್ತಿದೆ. ವಿದ್ಯಾರ್ಥಿಯೊಬ್ಬ/ಬ್ಬಳು ನಪಾಸಾದರೆ ಆತ/ಆಕೆಯ ಅಪ್ಪ-ಅಮ್ಮನೇನೋ ಅದನ್ನು ಒಂದು ಚಿಕ್ಕ ವೈಫ‌ಲ್ಯ ಎಂದು ಪರಿಗಣಿಸಿ ಪ್ರೋತ್ಸಾಹಿಸಬಹುದು. ಆದರೆ ಆ ವಿದ್ಯಾರ್ಥಿಗೆ ಕೇವಲ ಮನೆಯಲ್ಲಷ್ಟೇ ಅಲ್ಲ, ಸುತ್ತಲಿನ ಜನ(ಮುಖ್ಯವಾಗಿ ಬಂಧು-ಬಳಗದ ಕೊಂಕು ಮಾತುಗಳ ಭಯ ಮಕ್ಕಳಿಗೆ ಬಹಳ ಇರುತ್ತದೆ), ಶಾಲೆಗಳ ಪರಿಸರವೂ ವಿದ್ಯಾರ್ಥಿ ಸ್ನೇಹಿಯಾಗಿರಬೇಕು. ನಪಾಸಾದ ವಿದ್ಯಾರ್ಥಿಗಳಿಗೆ ಪ್ರತಿ ಕಾಲೇಜುಗಳಲ್ಲೂ ಕೌನ್ಸೆಲಿಂಗ್‌ ಕೊಡಿಸಬೇಕಾದಂಥ ವ್ಯವಸ್ಥೆ ಅಸ್ತಿತ್ವಕ್ಕೆ ತರಬೇಕಿದೆ. ಈ ಕೆಲಸವನ್ನು ಸರ್ಕಾರವೇ ಕೈಗೆತ್ತಿಕೊಳ್ಳುವುದು ಒಳಿತು. ಪ್ರತಿ ಕಾಲೇಜು-ಶಾಲೆಯಲ್ಲೂ ಆಯಾ ಪ್ರಾಂತ್ಯದ ಮಾನಸಿಕ ತಜ್ಞರಿಂದ, ಸಾಧಕರಿಂದ ಮಕ್ಕಳಿಗೆ ಕೌನ್ಸೆಲಿಂಗ್‌ ಕೊಡಿಸಿ, ಪೂರಕ ಪರೀಕ್ಷೆಗೆ ಅವರನ್ನು ಸಜ್ಜುಗೊಳಿಸಬೇಕು. ಇಡೀ ವ್ಯವಸ್ಥೆಯೇ ಮಕ್ಕಳ ಪರ ನಿಂತಾಗ ಅವರಿಗೂ ಹೋರಾಡುವ ಛಲ ಬರುತ್ತದೆ.

ಉಪ್ಪಿಷ್ಟು ಹುಳಿಯಿಷ್ಟು ಕಾರ ಸಿಹಿಯಷ್ಟಿಷ್ಟು
ಒಪ್ಪಿರ್ದೊಡದು ಭೋಜ್ಯವಂತು ಜೀವಿತಂ
ತಪ್ಪು ಸರಿ ಬೆಪ್ಪು ಜಾಣಂದ ಕುಂದುಗಳ ಬಗೆ
ಯಿಪ್ಪತ್ತು ಸೇರೆರುಚಿ- ಮಂಕುತಿಮ್ಮ
ಅಂದರು ಡಿವಿಜಿಯವರು. ಬದುಕೆಂದರೆ ಬರೀ ಸಿಹಿಯಷ್ಟೇ ಅಲ್ಲ, ಊಟದಲ್ಲಿ ಉಪ್ಪು, ಹುಳಿ, ಖಾರ, ಸಿಹಿ, ಎಲ್ಲವೂ ಸಮ ಪ್ರಮಾಣದಲ್ಲಿ ಇದ್ದರೆ ಹೇಗೆ ಭೋಜನ ಉತ್ತಮವಾಗುತ್ತದೋ, ಹಾಗೆಯೇ ಬದುಕಿನಲ್ಲೂ ಸರಿ, ತಪ್ಪು, ಜಾಣ್ಮೆ, ಸೋಲು-ಗೆಲುವು ಸೇರಿದಂತೆ ಹತ್ತಾರು ಬಗೆಯ ಭಾವಗಳೂ ಇರಬೇಕು ಎನ್ನುವುದು ಇದರರ್ಥ. ಡಿ.ವಿ.ಜಿ.ಯವರ ಈ ದಾರ್ಶನಿಕ ಹಿತವಚನವನ್ನು ಇಂದು ಪೋಷಕರು, ಮಕ್ಕಳು, ಶಿಕ್ಷಕರು, ಒಟ್ಟಲ್ಲಿ ಎಲ್ಲರೂ ಮನನ ಮಾಡಿಕೊಳ್ಳುವ ಅಗತ್ಯವಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ