ಐರೋಪ್ಯ ಸಂಸದರ ಭೇಟಿ: ಸರಕಾರದ ಸಕಾರಾತ್ಮಕ ನಡೆ 

Team Udayavani, Oct 31, 2019, 5:35 AM IST

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾದ ಬಳಿಕ ಅಲ್ಲಿನ ವಾಸ್ತವ ಪರಿಸ್ಥಿತಿಯ ಅವಲೋಕನ ಮಾಡಲು ಐರೋಪ್ಯ ಒಕ್ಕೂಟದ ನಿಯೋಗಕ್ಕೆ ಅನುಮತಿ ಕೊಟ್ಟದ್ದು ಕೇಂದ್ರ ಸರಕಾರದ ಒಂದು ಸಕಾರಾತ್ಮಕವಾದ ನಡೆ. ವಿಶೇಷ ವಿಧಿ ರದ್ದಾದ ಬಳಿಕ ಕಾಶ್ಮೀರ ಭುಗಿಲೇಳುವ ಸ್ಥಿತಿಯಲ್ಲಿದೆ ಎಂದು ಅಂತಾರಾಷ್ಟ್ರೀಯ ಸಮುದಾಯದೆದುರು ಸಾಧಿಸಿ ತೋರಿಸಲು ಸಿಗುವ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳುತ್ತಿರುವ ಪಾಕಿಸ್ತಾನದ ಅಪಪ್ರಚಾರವನ್ನು ಎದುರಿಸಲು ಈ ಮಾದರಿಯ ನಡೆಯ ಅಗತ್ಯವಿತ್ತು.

ಗುರುವಾರದಿಂದ ಕಾಶ್ಮೀರ ಮತ್ತು ಲಡಾಖ್‌ ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳೆಂದು ಅಧಿಕೃತವಾಗಿ ಘೋಷಣೆಯಾಗಲಿದ್ದು, ಈ ಸಂದರ್ಭದಲ್ಲಿ ಐರೋಪ್ಯ ಒಕ್ಕೂಟದ ಸಂಸದರ ನಿಯೋಗ ಭೇಟಿ ನೀಡಿದೆ. ನಿಯೋಗದ ಅಭಿಪ್ರಾಯವೂ ಭಾರತದ ಪರವಾಗಿಯೇ ಇದೆ. 370ನೇ ವಿಧಿ ರದ್ದು ಪೂರ್ಣವಾಗಿ ಭಾರತದ ಆಂತರಿಕ ವಿಚಾರ ಎಂದು ಈ ನಿಯೋಗ ಅಭಿಪ್ರಾಯಪಟ್ಟಿರುವುದು ನಮ್ಮ ನಿಲುವಿಗೆ ಸಿಕ್ಕಿರುವ ಸಮರ್ಥನೆಯಾಗಿದೆ. ಇದು ಐರೋಪ್ಯ ಒಕ್ಕೂಟದ ಸಂಸತ್ತಿನ ಅಧಿಕೃತ ನಿಯೋಗವಲ್ಲ, ಮಹಿಳೆ ಯೊಬ್ಬರ ನೇತೃತ್ವದ ಸರಕಾರೇತರ ಸಂಘಟನೆಯೊಂದು ಯುರೋಪ್‌ ಸಂಸದರ ನಿಯೋಗದ ಭೇಟಿಯನ್ನು ಏರ್ಪಡಿಸಿದೆ ಎಂಬೆಲ್ಲ ವಿವಾದಗಳು ಇದ್ದರೂ ಜಗತ್ತಿನ ಕಣ್ಣಿಗೆ ಕಾಶ್ಮೀರದ ನೈಜ ಸ್ಥಿತಿಯನ್ನು ತೋರಿಸಲು ಈ ಮಾದರಿಯ ಭೇಟಿಯ ಅಗತ್ಯವಿದೆ ಎನ್ನುವುದನ್ನು ನಿರಾಕರಿಸುವಂತಿಲ್ಲ. ಬಂದವರು ಬಲಪಂಥೀಯ ವಿಚಾರಧಾರೆಯುಳ್ಳ ಸಂಸದರು ಎಂಬ ಅಂಶ ಇಲ್ಲಿ ಪ್ರಸ್ತುತವಲ್ಲ. ದೇಶದ ಸಮಗ್ರತೆಯ ನೆಲೆಯಲ್ಲಿ ಅವರ ಭೇಟಿಯ ಉದ್ದೇಶ ಇಲ್ಲಿ ಮುಖ್ಯವಾಗಬೇಕೆ ಹೊರತು ಅವರ ವಿಚಾರಧಾರೆ ಅಲ್ಲ. ಈ ಹಿನ್ನೆಲೆಯಲ್ಲಿ ವಿದೇಶಿ ಸಂಸದರ ಭೇಟಿಯನ್ನು ರಾಜಕೀಯ ಕಾರಣಕ್ಕೆ ವಿರೋಧಿಸುವುದು ಸಮಂಜಸವಲ್ಲ. ದಶಕಗಳಿಂದ ಮಗ್ಗುಲ ಮುಳ್ಳಾಗಿ ಕಾಡುತ್ತಿದ್ದ ಕಾಶ್ಮೀರದಂಥ ರಾಷ್ಟ್ರೀಯ ಸಮಸ್ಯೆಯನ್ನು ನಿಗ್ರಹಿಸುವ ವಿಚಾರ ಬಂದಾಗ ನಾವು ರಾಜಕೀಯವಾಗಿರುವ ಭೇದಭಾವಗಳನ್ನು ಬದಿಗಿಟ್ಟು ಒಗ್ಗಟ್ಟು ಪ್ರದರ್ಶಿಸಬೇಕಾಗಿರುವುದು ಈ ಹೊತ್ತಿನ ಅಗತ್ಯ.

ಕಾಶ್ಮೀರದಲ್ಲಿ ಸಹಜ ಸ್ಥಿತಿ ನೆಲೆಸುವಂತಾಗಲು ತಾನು ನಡೆಸುತ್ತಿರುವ ಪ್ರಯತ್ನಗಳು ಪ್ರಾಮಾಣಿಕವಾಗಿವೆ ಎನ್ನುವುದನ್ನು 27 ಸಂಸದರ ನಿಯೋಗಕ್ಕೆ ಕಾಶ್ಮೀರ ಪ್ರವಾಸ ಮಾಡಲು ಅವಕಾಶ ಮಾಡಿಕೊಡುವ ಮೂಲಕ ಕೇಂದ್ರ ಸರಕಾರ ನಿರೂಪಿಸಿದೆ. ಜನರ ಮೇಲೆ ಸರಕಾರಿ ಪಡೆಗಳ ದೌರ್ಜನ್ಯ, ಮಾನವ ಹಕ್ಕುಗಳ ಉಲ್ಲಂಘನೆ ಎಂಬಿತ್ಯಾದಿ ಪಾಕಿಸ್ತಾನದ ಹಸಿ ಸುಳ್ಳುಗಳು ಇದರಿಂದ ಜಗತ್ತಿಗೆ ತಿಳಿಯುವಂತಾಗಿದೆ. ಕಾಶ್ಮೀರಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ವಲಯದಲ್ಲಿ ಪಾಕಿಸ್ತಾನ ನಡೆಸುತ್ತಿರುವ ಅಪಪ್ರಚಾರಗಳಿಗೆ ಹೋಲಿಸಿದರೆ ಭಾರತ ತನ್ನ ನಿಲುವನ್ನು ಸಮರ್ಥಿಸಿಕೊಳ್ಳಲು ನಡೆಸುತ್ತಿರುವ ಪ್ರಯತ್ನ ಏನೇನೂ ಸಾಲದು ಎಂದೆನಿಸುತ್ತಿದೆ. ಈ ಪರಿಸ್ಥಿತಿ ಬದಲಾಗಬೇಕಿದ್ದರೆ ಅಂತಾರಾಷ್ಟ್ರೀಯ ವಾಗಿ ನಮ್ಮ ಪರವಾಗಿ ಬಲವಾದ ಅಭಿಪ್ರಾಯವನ್ನು ಮೂಡಿಸುವ ಅಗತ್ಯವಿದೆ.

ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ಕಾಶ್ಮೀರದ ಅಲ್ಲಲ್ಲಿ ಹಿಂಸಾಚಾರಗಳು ನಡೆಯುತ್ತಿವೆ. ವಲಸೆ ಕಾರ್ಮಿಕರನ್ನು ಸಾಯಿಸಲಾಗುತ್ತಿದೆ. ಭದ್ರತಾ ಪಡೆಗಳ ಮೇಲೆ ದಾಳಿಯಾಗುತ್ತಿವೆ. ಕಲ್ಲು ತೂರಾಟದಂಥ ಘಟನೆಗಳೂ ನಡೆದಿವೆ. ಈ ಎಲ್ಲ ಹಿಂಸಾಕೃತ್ಯಗಳಿಗೆ ಪಾಕಿಸ್ತಾನ, ಶೋಷಣೆ ಮತ್ತು ದೌರ್ಜನ್ಯದ ಬಣ್ಣ ಕೊಡುತ್ತಿರುವಾಗ ಅದನ್ನು ಅಷ್ಟೇ ಪ್ರಬಲವಾಗಿ ಎದುರಿಸುವ ತಂತ್ರಗಾರಿಕೆಯನ್ನು ನಾವು ಹಾಕಿಕೊಳ್ಳಬೇಕು.

ಇದೇ ವೇಳೆ ವಿದೇಶಿ ನಿಯೋಗಕ್ಕೆ ಅವಕಾಶ ಕೊಡುವ ಕೇಂದ್ರ ನಮ್ಮದೇ ವಿಪಕ್ಷದ ಸಂಸದರಿಗೆ ಕಾಶ್ಮೀರ ಭೇಟಿಗೆ ಅನುಮತಿ ಕೊಟ್ಟಿಲ್ಲ. ಅವರನ್ನು ವಿಮಾನ ನಿಲ್ದಾಣದಿಂದಲೇ ವಾಪಸು ಕಳುಹಿಸುತ್ತಿದೆ ಎಂಬ ಆರೋಪದಲ್ಲಿ ತಥ್ಯವಿದೆ. ಕಾಶ್ಮೀರದ ವಿಚಾರವಾಗಿ ಜಗತ್ತಿಗೆ ತಿಳಿಸುವ ಜೊತೆಗೆ ದೇಶಕ್ಕೆ ತಿಳಿಸುವ ಹೊಣೆಗಾರಿಕೆಯೂ ಸರಕಾರಕ್ಕಿದೆ. ವಿಪಕ್ಷಗಳ ಸಾಂವಿಧಾನಿಕ ಹಕ್ಕುಗಳನ್ನು ಹತ್ತಿಕ್ಕುವಂಥ ನಡೆಗಳನ್ನು ಇಡಬಾರದು. ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿರುವಂತೆಯೇ ನಿರ್ಬಂಧಗಳನ್ನು ಸಡಿಲಿಸಬೇಕು. ಬ್ಲಾಕ್‌ ಅಭಿವೃದ್ಧಿ ಪರಿಷತ್‌ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಮುಂದಿನ ನಡೆಯಾಗಿ ಕಾಶ್ಮೀರದ ರಾಜಕೀಯ ನಾಯಕರ ಮೇಲಿರುವ ನಿರ್ಬಂಧಗಳನ್ನು ಮೊದಲು ಸಡಿಲಿಸಬೇಕು. ಇಂಥ ನಡೆಗಳು ಕಾಶ್ಮೀರ ಮಾತ್ರವಲ್ಲದೆ ಇಡೀ ದೇಶದಲ್ಲಿ ಸರಕಾರದ ಪ್ರಯತ್ನಗಳ ಬಗ್ಗೆ ಧನಾತ್ಮಕವಾದ ಅಭಿಪ್ರಾಯವನ್ನು ಮೂಡಿಸಲು ಸಹಕಾರಿಯಾಗುತ್ತವೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ