ಆರ್‌ಸಿಇಪಿ ಒಪ್ಪಂದದಿಂದ ದೂರ, ಗೆಲುವು ರೈತರದ್ದೇ

Team Udayavani, Nov 6, 2019, 5:09 AM IST

ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ(ಆರ್‌ಸಿಇಪಿ)ಒಪ್ಪಂದಕ್ಕೆ ಸಹಿ ಹಾಕದೇ ಇರುವ ಭಾರತ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ದೇಶದ ರೈತರು, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡವರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ನಡೆಸುತ್ತಿರುವಂಥವರಿಗೆ ಮಾರಕವಾಗಬಹುದಾಗಿದ್ದ ಈ ಒಪ್ಪಂದದಿಂದ ದೂರ ಸರಿದು ಒಂದು ಲೆಕ್ಕಾಚಾರದಲ್ಲಿ ಕೇಂದ್ರ ಸರ್ಕಾರ ರೈತರ ಹಿತ ಕಾಯುವಲ್ಲಿ ಸಫ‌ಲವಾಗಿದೆ.

ಆರ್‌ಸಿಇಪಿ ಒಪ್ಪಂದ ಇಂದಿನದ್ದೇನೂ ಅಲ್ಲ. 2012ರಲ್ಲಿ ಆಗಿನ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಆಸಿಯಾನ್‌ ಮತ್ತು ಇತರೆ ಆರು ದೇಶಗಳ ಮುಕ್ತ ವ್ಯಾಪಾರ ಒಪ್ಪಂದ ಕೂಟಕ್ಕೆ ಸೇರಲು ಒಪ್ಪಿಗೆ ನೀಡಿದ್ದರು. ಈ ಏಳು ವರ್ಷಗಳೂ ಈ 16 ದೇಶಗಳ ಮಧ್ಯೆ ವ್ಯಾಪಾರ ವಹಿವಾಟು ಹೇಗಿರಬೇಕು ಎಂಬ ಕುರಿತಾಗಿ ಚರ್ಚೆಯಾಗುವಲ್ಲೇ ಕಳೆದುಹೋಯಿತು. ಅಂದಿನಿಂದಲೂ ಭಾರತ ತನ್ನ ದೇಶದ ರೈತರು, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡವರು ಮತ್ತು ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೋದ್ಯಮಿಗಳ ಹಿತ ಕಾಯುವ ಸಲುವಾಗಿ ಒಪ್ಪಂದದಲ್ಲಿ ಬದಲಾವಣೆ ತರಬೇಕು ಎಂದೇ ವಾದಿಸಿಕೊಂಡು ಬಂದಿತ್ತು. ಈ ಬಾರಿ ಬ್ಯಾಂಕಾಕ್‌ನಲ್ಲಿ ಒಪ್ಪಂದಕ್ಕೊಂದು ಅಂತಿಮ ರೂಪುರೇಷೆ ಒದಗಿಸಬೇಕು ಎಂಬ ಕಾರಣದಿಂದಲೇ 3 ದಿನಗಳ ಶೃಂಗಸಭೆ ಆಯೋಜಿಸಲಾಗಿತ್ತು. ಆದರೆ, ಭಾರತ ಮಾತ್ರ ತನ್ನ ಕಳವಳಗಳನ್ನು ನಿವಾರಿಸದ ಹೊರತು ಯಾವುದೇ ಕಾರಣಕ್ಕೂ ಒಪ್ಪಂದಕ್ಕೆ ಸಹಿ ಹಾಕಲ್ಲ ಎಂದೇ ಪಟ್ಟು ಹಿಡಿದಿತ್ತು.

ಆದಾಗ್ಯೂ ತಾವು ಪ್ರಸ್ತಾಪಿಸಿದ್ದ ಕಳವಳಗಳನ್ನು ನಿವಾರಿಸುವ ಗೋಜಿಗೆ ಹೋಗದೇ, ಚೀನಾದ ಪ್ರಬಲ ಒತ್ತಾಯದಿಂದಾಗಿ ತರಾತುರಿಯಲ್ಲೇ ಆರ್‌ಸಿಇಪಿ ದೇಶಗಳು ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸರಿಕಾಣಲಿಲ್ಲ. ಹೀಗಾಗಿಯೇ ಸೋಮವಾರ ಸಂಜೆ ಅದೇ ಶೃಂಗಸಭೆಯಲ್ಲಿ ಕಡ್ಡಿಮುರಿದ ರೀತಿಯಲ್ಲಿ ಸದರಿ ಒಪ್ಪಂದಕ್ಕೆ ಸಹಿ ಹಾಕಲು ಸಾಧ್ಯವೇ ಇಲ್ಲ ಎಂದು ಹೇಳಿಬಿಟ್ಟರು.

ಪ್ರಧಾನಮಂತ್ರಿಗಳ ಈ ನಿರ್ಧಾರ ದೇಶವಾಸಿಗಳಲ್ಲಿ ತೀವ್ರ ಸಂತಸಕ್ಕೂ ಕಾರಣವಾಗಿದೆ. ಎಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿ ದೇಶದ ಬೆನ್ನೆಲುಬಾಗಿರುವ ರೈತಾಪಿ ಮತ್ತು ಇದರ ಪೂರಕ ಉದ್ಯಮಗಳಿಗೆ ಕಂಟಕವಾಗುತ್ತದೆಯೋ ಎಂದು ಹೆದರಿದ್ದವರೆಲ್ಲರೂ ನಿರಾಳರಾಗಿದ್ದಾರೆ. ಇದಕ್ಕೆ ಕಾರಣವೂ ಇದೆ. ದೇಶ ತಂತ್ರಜ್ಞಾನದಲ್ಲಿ ಎಷ್ಟೇ ಮುಂದಿದ್ದರೂ ಇನ್ನೂ ಮೂಲಕಸುಬಾದ ಕೃಷಿಯಲ್ಲಿ ಉತ್ಕೃಷ್ಟ ತಂತ್ರಗಾರಿಕೆ ಅಳವಡಿಕೆ ಮಾಡುವಲ್ಲಿ ನಮ್ಮ ರೈತರು ತುಸು ಹಿಂದೆಯೇ ಇದ್ದಾರೆ. ಆದರೆ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ‌ಂಥ ದೇಶದಲ್ಲಿ ಕೃಷಿ ಮತ್ತು ಹೈನುಗಾರಿಕೆಯಲ್ಲಿ ಅತ್ಯಾಧುನಿಕವಾದ ತಂತ್ರಜ್ಞಾನ ಬಳಸಿಕೊಂಡು ಉತ್ತಮವಾಗಿಯೇ ಫ‌ಲ ಮತ್ತು ಫ‌ಸಲು ಪಡೆಯುತ್ತಿದ್ದಾರೆ.

ಒಂದೊಮ್ಮೆ ಈ ದೇಶಗಳಿಂದ ಮುಕ್ತವಾಗಿ ಕೃಷಿ ಉತ್ಪನ್ನಗಳು ಮತ್ತು ಹಾಲು ಪದಾರ್ಥಗಳು ಭಾರತಕ್ಕೆ ಬಂದಿದ್ದೇ ಆದಲ್ಲಿ ನಮ್ಮ ರೈತರ ಪಾಡೇನು ಎಂಬ ಆತಂಕಗಳಿದ್ದವು.

ಹಾಗೆಯೇ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಈಗಾಗಲೇ ಚೀನಾದ ಭರಾಟೆಯಲ್ಲಿ ನಲುಗಿವೆ. ಜತೆಗೆ ನೋಟು ಅಮಾನ್ಯ ಮತ್ತು ತರಾತುರಿತ ಜಿಎಸ್‌ಟಿ ಅಳವಡಿಕೆ ಈ ಉದ್ಯಮಗಳನ್ನು ಇನ್ನಷ್ಟು ಕುಗ್ಗಿಸಿದೆ.

ಇದರ ಜತೆಯಲ್ಲೇ ಜಾಗತಿಕ ಮಟ್ಟದಲ್ಲಿ ಕಾಡುತ್ತಿರುವ ಆರ್ಥಿಕ ಹಿಂಜರಿತ ಭಾರತದಲ್ಲೂ ಪ್ರವೇಶ ಮಾಡಿ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಇಂಥ ವೇಳೆಯಲ್ಲಿ ಆರ್‌ಸಿಇಪಿಗೆ ಸಹಿ ಮಾಡಿ ಚೀನಾದ ಉತ್ಪನ್ನಗಳನ್ನು ಇನ್ನಷ್ಟು ಸಲೀಸಾಗಿ ಭಾರತದೊಳಗೆ ಬಿಟ್ಟುಕೊಂಡರೆ, ಈಗ ಹೇಗೋ ನಡೆದುಕೊಂಡು ಹೋಗುತ್ತಿರುವ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ಉದ್ಯಮಿಗಳು ಬೀದಿಗೇ ಬರುತ್ತಾರೆ. ಹೀಗಾಗಿ ದೇಶದ ರೈತಾಪಿ ವರ್ಗ, ಪ್ರತಿಪಕ್ಷಗಳು, ಜತೆಗೆ ಆರ್‌ಎಸ್‌ಎಸ್‌ನ ವಿರೋಧದ ಹಿನ್ನೆಲೆಯಲ್ಲಿ ಮೋದಿ ಸರ್ಕಾರ ಸಹಿ ಮಾಡಲಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್‌ ತನ್ನದೇ ಜಯ ಎಂದು ಸಾಧಿಸಲು ಹೊರಟಿದ್ದರೆ, ಬಿಜೆಪಿ ಸದೃಢ ನಾಯಕರಾದ ಮೋದಿಯವರ ಕಾರಣದಿಂದಲೇ ಒಪ್ಪಂದದಿಂದ ಹೊರಬರಲು ಸಾಧ್ಯವಾಯಿತು ಎಂದಿದೆ.

ರಾಜಕೀಯವೇನೇ ಇರಲಿ, ಈ ಒಪ್ಪಂದದೊಳಗೆ ಪ್ರವೇಶ ಮಾಡಿದ್ದು ಕಾಂಗ್ರೆಸ್‌, ಇಲ್ಲಿವರೆಗೆ ಹಾಗೋ ಹೀಗೋ ತಳ್ಳಿಕೊಂಡು ಬಂದು, ಕಡೆಗೆ ಹೊರಗೆ ಬಂದಿದ್ದು ಬಿಜೆಪಿ. ಇದರ ನಡುವೆ ಒಪ್ಪಂದದಿಂದ ಹಿಂದೆ ಬಂದ ಕಾರಣದಿಂದಾಗಿ ನಿಜವಾಗಿಯೂ ಗೆದ್ದವರು ರೈತರೇ. ಅಷ್ಟು ಮಾತ್ರ ಸತ್ಯ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ