ಹೈದರಾಬಾದ್‌ ಪ್ರಕರಣ ಸುಧಾರಿಸಲಿ ವ್ಯವಸ್ಥೆ

Team Udayavani, Dec 7, 2019, 5:04 AM IST

ಈ ಎನ್‌ಕೌಂಟರ್‌ ಸ್ಪಷ್ಟ ಸಂದೇಶ ಕಳುಹಿಸಿದೆ ಎನ್ನಬಹುದು. ಹಾಗೆಂದು, ಪೊಲೀಸರು ಪ್ರಶ್ನಾತೀತರೇನೂ ಅಲ್ಲ. ಪ್ರಕರಣದ ಆರಂಭಿಕ ಸಮಯದಲ್ಲಿ ಎಫ್ಐಆರ್‌ ದಾಖಲಿಸಿಕೊಳ್ಳದೇ ಸಂತ್ರಸ್ತೆಯ ಕುಟುಂಬದವರನ್ನು ಅಲೆದಾಡಿಸಿದ್ದೆಲ್ಲ ಸರಿಯೇನು?

ದೇಶವನ್ನೇ ಬೆಚ್ಚಿಬೀಳಿಸಿದ್ದ ಹೈದರಾಬಾದ್‌ ಅತ್ಯಾಚಾರ- ಹತ್ಯೆ ಪ್ರಕರಣದ ಆರೋಪಿಗಳೆಲ್ಲ ಎನ್‌ಕೌಂಟರ್‌ನಲ್ಲಿ ಅಂತ್ಯಕಂಡಿದ್ದಾರೆ. ಯಾವ ಜಾಗದಲ್ಲಿ ಆ ಯುವತಿಯನ್ನು ಸುಟ್ಟುಹಾಕಿದ್ದರೋ ಅದೇ ಜಾಗದಲ್ಲೇ ಈ ದುಷ್ಕರ್ಮಿಗಳ ಬದುಕು ಅಂತ್ಯಕಂಡಿದೆ. ಈ ವಿಚಾರಕ್ಕೆ ಸಾರ್ವಜನಿಕ ವಲಯದಿಂದ ಬರುತ್ತಿರುವ ಪ್ರತಿಕ್ರಿಯೆಗಳನ್ನು ನೋಡಿದಾಗ, ಈ ಅತ್ಯಾಚಾರ ಪ್ರಕರಣ ದೇಶವಾಸಿಗಳ ಮನಸ್ಸನ್ನು ಎಷ್ಟೊಂದುಕದಡಿತ್ತು ಎನ್ನುವುದು ಅರ್ಥವಾಗುತ್ತದೆ.

ನಿರ್ಭಯಾ ಪ್ರಕರಣದ ನಂತರ ಅನೇಕ ಕಠಿನ ಕಾನೂನುಗಳನ್ನು ಜಾರಿಗೆ ತಂದರೂ ಸಹ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಪ್ರತಿ ವರ್ಷ 30ಸಾವಿರಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಲೇ ಇವೆ. ರಾಜ್ಯದ ವಿಷಯಕ್ಕೆ ಬಂದರೂ, ಇದೇ ವರ್ಷದ ಜನವರಿಯಿಂದ ಅಕ್ಟೋಬರ್‌ವರೆಗೆ ದಾಖಲಾದ ಅತ್ಯಾಚಾರ ಪ್ರಕರಣಗಳ ಸಂಖ್ಯೆಯೇ 438! ಇವು ದಾಖಲಾದ ಪ್ರಕರಣಗಳಷ್ಟೇ. ಮರ್ಯಾದೆಗೆ ಹೆದರಿಯೋ, ಆರೋಪಿಗಳ ಬೆದರಿಕೆಯಿಂದಲೋ ದೂರು ನೀಡದೇ ಇರುವ ಪ್ರಕರಣಗಳು ಇನ್ನೆಷ್ಟೋ. ದೇಶಾದ್ಯಂತ ಅತ್ಯಾಚಾರ ಪ್ರಕರಣಗಳ ಅಂಕಿಸಂಖ್ಯೆಯನ್ನು ನೋಡಿದರೆ, ತೀರಾ ಆಘಾತಕಾರಿ ವಾಸ್ತವ ಎದುರಾಗುತ್ತದೆ. ಪ್ರತಿವರ್ಷ, ದೇಶದಲ್ಲಿ ಸಾವಿರಾರು ಹೆಣ್ಣುಮಕ್ಕಳು ಈ ಪಾಶವಿ ಕೃತ್ಯಕ್ಕೆ ಬಲಿಯಾಗುತ್ತಿದ್ದಾರೆ. ಇಂಥ ಪ್ರಕರಣಗಳು ಬೆಳಕಿಗೆ ಬಂದಾಗ ಅತ್ಯಾಚಾರಿಗಳನ್ನು ಗಲ್ಲಿಗೇರಿಸಬೇಕೆಂಬ ಕೂಗು ಜೋರಾಗುತ್ತದಾದರೂ, ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಕಳೆದ 16 ವರ್ಷಗಳಲ್ಲಿ ಕೇವಲ ಒಬ್ಬ ಅಪರಾಧಿ ಮಾತ್ರ(2004) ನೇಣುಗಂಬವೇರಿದ್ದಾನೆ. 2013ರಲ್ಲೇ ನಿರ್ಭಯಾ ಪ್ರಕರಣದ ಆರೋಪಿಗಳಿಗೆ ತ್ವರಿತಗತಿ ನ್ಯಾಯಾಲಯ ನೇಣುಶಿಕ್ಷೆಯ ತೀರ್ಪು ನೀಡಿದೆಯಾದರೂ, ಇಷ್ಟು ವರ್ಷವಾದರೂ ಅವರೆಲ್ಲ ಆರಾಮಾಗಿಯೇ ಇದ್ದಾರೆ. ನಿರ್ಭಯಾಳ ತಂದೆ- ತಾಯಿ ನ್ಯಾಯಕ್ಕಾಗಿ ನ್ಯಾಯಾಲಯಕ್ಕೆ ಅಲೆಯುವುದು ತಪ್ಪಿಲ್ಲ. ಇದೇ ವೇಳೆಯಲ್ಲೇ ಅತ್ತ ಉತ್ತರಪ್ರದೇಶದ ಉನ್ನಾವೋದಲ್ಲಿ ನಡೆದ ದಾರುಣ ಘಟನೆಯೂ ವ್ಯವಸ್ಥೆಯ ದುಃಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ಜಾಮೀನು ಪಡೆದು ಹೊರಬಂದ ಉನ್ನಾವೋ ಪ್ರಕರಣದ ಅಪರಾಧಿಗಳು ನ್ಯಾಯಾಲಯಕ್ಕೆ ಹೊರಟಿದ್ದ ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಹಚ್ಚಿದ್ದಾರೆ. ಆ ಯುವತಿಯ ಪರಿಸ್ಥಿತಿಯೂ ಗಂಭೀರವಾಗಿದೆ. ಈ ಎಲ್ಲಾ ಸಂಗತಿಗಳೂ ಈಗ ದೇಶವಾಸಿಗಳಲ್ಲಿ ಮಡುಗಟ್ಟಿರುವ ಆಕ್ರೋಶಕ್ಕೆ ಕಾರಣ.

ಅಪರಾಧವೆಸಗಿದವರಿಗೆ ನಿಜಾರ್ಥದಲ್ಲಿ ಶಿಕ್ಷೆಯಾಗುವುದೇ ಇಲ್ಲವೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಹೈದರಾಬಾದ್‌ಪ್ರಕರಣದಲ್ಲಿ ಅಪರಾಧಿಗಳು ಬಹುಬೇಗನೇ ಸಿಕ್ಕಿಬಿದ್ದಿದ್ದರು. ಆದರೆ ಅವರೂ ನಿರ್ಭಯಾ ಅತ್ಯಾಚಾರಿಗಳಂತೆ, ವರ್ಷಗಟ್ಟಲೇ ನ್ಯಾಯಾಲಯಗಳಿಗೆ ಅರ್ಜಿ ಸಲ್ಲಿಸುತ್ತಾ ಇದ್ದುಬಿಡುತ್ತಾರೇನೋ, ನ್ಯಾಯಕ್ಕಾಗಿ ಸಂತ್ರಸ್ತೆಯ ಕುಟುಂಬವು ಕೋರ್ಟುಗಳಿಗೆ ಅಲೆಯುತ್ತಾ ಬದುಕು ಕಳೆಯಬೇಕಾಗುತ್ತದೇನೋ ಎಂಬ ಭಾವನೆ ಸಾರ್ವಜನಿಕರಿಗಿತ್ತು. ಹೀಗಾಗಿಯೇ, ಅವರು ಈ ಅತ್ಯಾಚಾರಿಗಳ ಅಂತ್ಯವನ್ನು ಸಂಭ್ರಮಿಸುತ್ತಿದ್ದಾರೆಯೇ ಹೊರತು, ಜನರು ಹಿಂಸಾಪ್ರಿಯರಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕಿದೆ. ಇದೇ ವೇಳೆಯಲ್ಲೇ, ಹೈದರಾಬಾದ್‌ಪೊಲೀಸರು ಮಾನವಹಕ್ಕು ಉಲ್ಲಂ ಸಿದ್ದಾರೆ, ಅವರಿಗೆ ಶಿಕ್ಷೆಯಾಗಬೇಕು ಎನ್ನುವ ಪ್ರತಿವಾದವೊಂದೂ ಕೇಳಿಸುತ್ತಿದೆ. ಆದರೆ, ಪೊಲೀಸರ ಮೇಲೆ ಏಕಾಏಕಿ ಗೂಬೆ ಕೂರಿಸುವುದೂ ತರವಲ್ಲ. ತಾವು ಆತ್ಮರಕ್ಷಣೆಗಾಗಿ ಅಪರಾಧಿಗಳ ಮೇಲೆ ಪ್ರತಿದಾಳಿ ಮಾಡಿದ್ದಾಗಿ ಪೊಲೀಸರು ಹೇಳುತ್ತಿದ್ದಾರೆ. ಹೀಗಾಗಿ, ಈ ವಿಚಾರದಲ್ಲಿ ಭಾವನಾತ್ಮಕವಾಗಿ ಪೊಲೀಸ್‌ ವ್ಯವಸ್ಥೆಯ ಮೇಲೆ ಸಮರ ಸಾರುವುದು ಕೂಡ ತಪ್ಪು. ಸಾಕ್ಷ್ಯ-ಪುರಾವೆಯಿಲ್ಲದೇ, ಈ ಎನ್‌ಕೌಂಟರ್‌ ಅನ್ನು ನಕಲಿ ಎನ್ನುವುದೂ ತಪ್ಪಾಗುತ್ತದೆ. ಹಾಗೆಂದು, ಈ ಒಟ್ಟಾರೆ ಪ್ರಕರಣದಲ್ಲಿ ಪೊಲೀಸರು ಪ್ರಶ್ನಾತೀತರು ಎಂದೇನೂ ಹೇಳಲಿಕ್ಕಾಗದು. ಮುಖ್ಯವಾಗಿ, ಪ್ರಕರಣದ ಆರಂಭಿಕ ಸಮಯದಲ್ಲಿ ಪೊಲೀಸರು ತೋರಿಸಿದ ನಿಷ್ಕಾಳಜಿ ಖಂಡನಾರ್ಹ. ಆ ಯುವತಿಯ ಕುಟುಂಬದವರು ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಲು ಹೋದಾಗ, ಎಫ್ಐಆರ್‌ ದಾಖಲಿಸಿಕೊಳ್ಳದೇ, ಇದು ನಮ್ಮ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಅಲೆದಾಡಿಸಿದ್ದೆಲ್ಲ ಸರಿಯೇನು? ಈ ವಿಚಾರದಲ್ಲಿ ಪೊಲೀಸ್‌ ವ್ಯವಸ್ಥೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಹೀಗಾಗಿ, ಅಪರಾಧಗಳ ತಡೆಗೆ ಕಠಿಣ ಕಾನೂನುಗಳನ್ನು ರೂಪಿಸುವುದಷ್ಟೇ ಅಲ್ಲದೇ, ಒಟ್ಟಾರೆ ಪೊಲೀಸ್‌, ನ್ಯಾಯಾಂಗ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸುವ ತುರ್ತು ಇದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ