ಅಕ್ರಮ ಹಣ ಪ್ರಜಾತಂತ್ರಕ್ಕೆ ಕಳಂಕ

ಸಂಪಾದಕೀಯ, Apr 1, 2019, 6:00 AM IST

ಚುನಾವಣೆಯಲ್ಲಿ ಅಕ್ರಮ ಹಣದ ಹರಿವು ಈಗಲೂ ಒಂದು ಬಗೆಹರಿಸಲಾದ ಸವಾಲಾಗಿಯೇ ಇದೆ. ಪಾರದರ್ಶಕ ಮತ್ತು ನಿಷ್ಪಕ್ಷಪಾತ ಚುನಾವಣೆಯೇ ಪ್ರಜಾತಂತ್ರದ ಜೀವಾಳ. ಆದರೆ ಅಕ್ರಮ ಹಣದಿಂದಾಗಿ ಈ ಮೂಲ ಆಶಯಕ್ಕೆ ಭಂಗವುಂಟಾಗುತ್ತದೆ. ಚುನಾವಣಾ ಪ್ರಕ್ರಿಯೆಯಿಂದ ಅಕ್ರಮ ಹಣವನ್ನು ದೂರವಿಡುವ ಸಲುವಾಗಿ ಹಲವಾರು ಶಾಸನಗಳನ್ನು ರಚಿಸಿದ್ದರೂ, ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರೂ ಅಕ್ರಮ ಹಣದ ಹಾವಳಿಯನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಾಗಿಲ್ಲ. ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆಯೂ ಅಕ್ರಮ ಹಣದ ಹರಿವಿನಿಂದ ಹೊರತಾಗಿಲ್ಲ. ಈಗಾಗಲೇ ಅಧಿಕಾರಿಗಳು ಸುಮಾರು 540 ಕೋ. ರೂ. ಅಕ್ರಮ ಹಣ, ಭಾರೀ ಪ್ರಮಾಣದ ಶರಾಬು ಮತ್ತು ಉಚಿತವಾಗಿ ಹಂಚಲು ತಂದಿಟ್ಟಿದ್ದ ಉಡುಗೊರೆಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನುತ್ತಿದೆ ಒಂದು ವರದಿ.
ಇದು ಚುನಾವಣೆ ದಿನಾಂಕ ಘೋಷಣೆಯಾದ ಬರೀ 15 ದಿನಗಳಲ್ಲಿ ವಶವಾದ ಅಕ್ರಮ ಹಣ.

ಲೋಕಸಭೆ ಚುನಾವಣೆ ಮೂರು ತಿಂಗಳ ಸುದೀರ್ಘ‌ ಪ್ರಕ್ರಿಯೆಯಾಗಿದ್ದು, 15 ದಿನದಲ್ಲಿ 540 ಕೋ. ರೂ. ಸಿಗುವುದಾದರೆ ಚುನಾವಣೆ ಪ್ರಕ್ರಿಯೆ ಮುಗಿಯುವಾಗ ಎಷ್ಟು ಕೋಟಿ ಕಪ್ಪುಹಣ ಚುನಾವಣ ವ್ಯವಸ್ಥೆಯೊಳಗೆ ಹರಿದು ಬರಬಹುದು ಎಂದು ಅಂದಾಜಿಸಲು ಸಾಧ್ಯವಿಲ್ಲ. ಅಕ್ರಮ ಹಣಕ್ಕೆ ಸಂಬಂಧಿಸಿದಂತೆ ಯಾವ ಪಕ್ಷವನ್ನೂ ಸಾಚಾ ಎನ್ನುವಂತಿಲ್ಲ. ರಾಷ್ಟ್ರೀಯ ಪಕ್ಷಗಳು, ಪ್ರಾದೇಶಿಕ ಪಕ್ಷಗಳು ಮತ್ತು ಸ್ಥಳೀಯ ಪಕ್ಷಗಳು ಚುನಾವಣೆ ಗೆಲ್ಲಲು ದಂಡಿಯಾಗಿ ಅಕ್ರಮ ಹಣ ಬಳಕೆ ಮಾಡುತ್ತಿವೆ. ಮತದಾರರಿಗೆ ಹಣ ಹಂಚುವುದು ಮಾತ್ರವಲ್ಲದೆ, ಎದುರಾಳಿಯ ಮತಗಳನ್ನು ಒಡೆಯುವ ಸಲುವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು, ನಾಮಪತ್ರ ಹಿಂದೆಗೆದುಕೊಳ್ಳುವಂತೆ ಮನವೊಲಿಸಲು, ಕಾರ್ಯಕರ್ತರ ರಾತ್ರಿಯ ಮೋಜುಮಸ್ತಿಗಳಿಗೆ ಹೀಗೆ ನಾನಾ ರೂಪದಲ್ಲಿ ಅಕ್ರಮ ಹಣ ಉಪಯೋಗವಾಗುತ್ತಿದೆ. ಚುನಾವಣ ವೆಚ್ಚದ ಮೇಲೆ ಕಣ್ಣಿಡುವ ಸಲುವಾಗಿ ಆಯೋಗ ನೂರಾರು ವೀಕ್ಷಕರನ್ನು ನೇಮಿಸಿದೆ. ಜೊತೆಗೆ ಮೊಬೈಲ್‌ ಆ್ಯಪ್‌, ಮೊಬೈಲ್‌ ಸರ್ವೇಲೆನ್ಸ್‌ ಟೀಂನಂಥ ತಂತ್ರಜ್ಞಾನ ಆಧಾರಿತ ಕಣ್ಗಾವಲು ವ್ಯವಸ್ಥೆಯನ್ನು ಮಾಡಿಕೊಂಡಿದೆ. ಇದರ ಹೊರತಾಗಿಯೂ ಅಕ್ರಮ ಹಣ ಬಳಕೆಯಾಗುತ್ತಿದೆ.

ಭ್ರಷ್ಟಾಚಾರದ ಮೂಲವಿರುವುದೇ ಚುನಾವಣ ವ್ಯವಸ್ಥೆಯಲ್ಲಿ. ಭಾರೀ ಪ್ರಮಾಣದ ಹಣ ಖರ್ಚು ಮಾಡಿ ಗೆದ್ದು ಬರುವವರು ಹೀಗೆ ಖರ್ಚು ಮಾಡಿದ ಹಣವನ್ನು ವಸೂಲು ಮಾಡಲು ದಾರಿಗಳನ್ನು ಹುಡುಕಿಕೊಳ್ಳುತ್ತಾರೆ. ಇಲ್ಲಿಂದಲೇ ಭ್ರಷ್ಟಾಚಾರ ಶುರುವಾಗುತ್ತದೆ. ಈ ವ್ಯವಸ್ಥೆಗೆ ನಾವು ಎಷ್ಟು ಒಗ್ಗಿ ಹೋಗಿದ್ದೇವೆ ಎಂದರೆ ಚುನಾವಣೆಯಲ್ಲಿ ಹಣ ಖರ್ಚು ಮಾಡದೆ ಗೆಲ್ಲುವುದು ಅಸಾಧ್ಯ ಎನ್ನುವುದನ್ನು ಒಂದು ಸಾಮಾನ್ಯ ವಿಷಯವೇನೋ ಎಂದು ಪರಿಗಣಿಸಿದ್ದೇವೆ. ಗೆಲ್ಲಲು ಅಕ್ರಮ ಹಣವನ್ನು ಉಪಯೋಗಿಸಿದ ಬಳಿಕ ರಾಜಕೀಯದಲ್ಲಿ ಪ್ರಾಮಾಣಿಕತೆಯನ್ನು ನಿರೀಕ್ಷಿಸುವುದು ಅಸಾಧ್ಯ. ಆರ್‌ಟಿಐ ಮೂಲಕ ರಾಜಕೀಯ ಪಕ್ಷಗಳ ಹಣದ ಮೂಲದ ಕುರಿತು ಮಾಹಿತಿ ಕೇಳಿದಾಗ ಸಿಪಿಎಂ ಹೊರತುಪಡಿಸಿ ಉಳಿದೆಲ್ಲ ಪಕ್ಷಗಳು ಈ ಮಾಹಿತಿ ಕೊಡುವ ಬಾಧ್ಯತೆ ನಮಗಿಲ್ಲ ಎಂದು ಹೇಳಿದ್ದೇ ಪಕ್ಷಗಳ ನಿಧಿ ಮೂಲಗಳು ಎಷ್ಟು ಸಂಶಯಾಸ್ಪದವಾಗಿವೆ ಎನ್ನುವುದಕ್ಕೊಂದು ಉದಾಹರಣೆ. ನಿಧಿ ಸಂಗ್ರಹವನ್ನು ಪಾರದರ್ಶಕಗೊಳಿಸುವ ಸಲುವಾಗಿ ಪ್ರಾರಂಭಿಸಲಾಗಿರುವ ಚುನಾವಣ ಬಾಂಡ್‌ ಪದ್ಧತಿಯಲ್ಲೂ ಲೋಪಗಳಿವೆ ಎನ್ನುವುದನ್ನು ಕೆಲ ದಿನಗಳ ಹಿಂದೆಯಷ್ಟೆ ಸ್ವತಃ ಚುನಾವಣ ಆಯೋಗ ನ್ಯಾಯಾಲಯಕ್ಕೆ ತಿಳಿಸಿರುವುದರಿಂದ ರಾಜಕೀಯವನ್ನು ಅಕ್ರಮ ಹಣದಿಂದ ಮುಕ್ತಿಗೊಳಿಸುವ ನಿರೀಕ್ಷಿತ ಮಾರ್ಗವೂ ಮುಚ್ಚಿ ಹೋದಂತಾಗಿದೆ.

ರಾಜಕೀಯವನ್ನು ಕಪ್ಪು ಹಣದಿಂದ ಮುಕ್ತಗೊಳಿಸುವ ಉದ್ದೇಶದಿಂದ ಪ್ರಧಾನಿ ಮೋದಿ ಸರಕಾರವೇ ಎಲ್ಲ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ಭರಿಸುವ ಪ್ರಸ್ತಾವವನ್ನು ಕೆಲ ಸಮಯದ ಹಿಂದೆ ಇಟ್ಟಿದ್ದರು. ಆದರೆ ವಿಧಾನಸಭೆ ಮತ್ತು ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಸ್ತಾವದಂತೆ ಈ ಪ್ರಸ್ತಾವ ಕೂಡಾ ರಾಜಕೀಯ ಸಹಮತವಿಲ್ಲದೆ ಮೂಲೆಗುಂಪಾಗಿದೆ. ಹಣ ಬಲದ ಮುಖ ನೋಡದೆ ನಿಷ್ಕಳಂಕಿತ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸುವ ಮೂಲಕ ಪಕ್ಷಗಳು ರಾಜಕೀಯ ಕ್ಷೇತ್ರವನ್ನು ಸ್ವತ್ಛಗೊಳಿಸಬಹುದು. ಆದರೆ ಅದಕ್ಕೆ ಬೇಕಿರುವುದು ಪ್ರಬಲವಾದ ರಾಜಕೀಯ ಇಚ್ಛಾಶಕ್ತಿ. ಈಗ ಇರುವುದು ಇದರದ್ದೇ ಕೊರತೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಪಶ್ಚಿಮ ಬಂಗಾಳದ ಪರಿಸ್ಥಿತಿ ದಿನಕಳೆದಂತೆ ಹದಗೆಡುತ್ತಿರುವುದು ಕಳವಳಕಾರಿ ವಿಚಾರ. ಇದೀಗ ಅಲ್ಲಿನ ವೈದ್ಯರು ಕೂಡಾ ಸರಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ....

  • ಮೊದಲ ಸಂಪುಟ ಸಭೆಯಲ್ಲಿ ಪ್ರಧಾನಿ ಮೋದಿ ತನ್ನ ಸಂಪುಟದ ಸಚಿವರಿಗೆ ಅಕ್ಷರಶಃ ಹೆಡ್‌ಮೇಷ್ಟ್ರ ಶೈಲಿಯಲ್ಲಿ ಪಾಠ ಮಾಡಿದ್ದಾರೆ. ಕಚೇರಿಗೆ ಸರಿಯಾದ ಸಮಯಕ್ಕೆ ಬರಬೇಕು,...

  • ಇನ್ನೊಂದು ಮೆಗಾ ವಂಚನೆ ಪ್ರಕರಣ ರಾಜ್ಯದಲ್ಲಿ ಸಂಭವಿಸಿದೆ. ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಐಎಂಎ ಜುವೆಲ್ಲರ್ ಎಂಬ ಕಂಪೆನಿ ಸಾವಿರಾರು ಜನರಿಗೆ ಪಂಗನಾಮ...

  • ಕೆಲವು ವ್ಯಕ್ತಿಗಳಿರುತ್ತಾರೆ. ಅವರು ದಂತಕಥೆಗಳ ಸಾಲಿನಲ್ಲಿ ನಿಲ್ಲಬಲ್ಲ ಎಲ್ಲ ಅರ್ಹತೆಗಳನ್ನು ಹೊಂದಿರುತ್ತಾರೆ. ಆದರೆ ಬದುಕಿನ ಏರಿಳಿತಗಳಿಗೆ ಸಿಲುಕಿ ಅಂತಹ...

  • ಉತ್ತರ ಪ್ರದೇಶದ ಅಲಿಗಢದಲ್ಲಿ ಎರಡು ವರ್ಷದ ಬಾಲಕಿಯನ್ನು ಬರ್ಬರವಾಗಿ ಸಾಯಿಸಿದ ಘಟನೆ ಮಾನವೀಯತೆಯ ಮೇಲೆ ಎಸಗಿದ ಮಾರಕ ಆಕ್ರಮಣ. ಏನೂ ಅರಿಯದ ಮುಗ್ಧ ಬಾಲೆಯನ್ನು...

ಹೊಸ ಸೇರ್ಪಡೆ