ಐಎಂಎ ವಂಚನೆ ಜನರು ಎಚ್ಚೆತ್ತುಕೊಳ್ಳಲಿ

ಸಂಪಾದಕೀಯ, Jun 13, 2019, 5:00 AM IST

ಇನ್ನೊಂದು ಮೆಗಾ ವಂಚನೆ ಪ್ರಕರಣ ರಾಜ್ಯದಲ್ಲಿ ಸಂಭವಿಸಿದೆ. ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಐಎಂಎ ಜುವೆಲ್ಲರ್ ಎಂಬ ಕಂಪೆನಿ ಸಾವಿರಾರು ಜನರಿಗೆ ಪಂಗನಾಮ ಹಾಕಿ ಬಾಗಿಲು ಎಳೆದುಕೊಂಡಿದೆ. ಯಥಾ ಪ್ರಕಾರ ಕಂಪೆನಿ ಮುಚ್ಚಿದಾಗಲೇ ಜನರಿಗೆ ತಾವು ಮೋಸ ಹೋಗಿರು ವುದು ಅರಿವಾಗಿದೆ. ಕಂಪೆನಿಯ ಮಾಲಕ ಮನ್ಸೂರ್‌ ಹಾಗೂ ನಿರ್ದೇಶಕರು ನಾಪತ್ತೆಯಾಗಿದ್ದಾರೆ. ಮನ್ಸೂರ್‌ ಸೋಷಿಯಲ್‌ ಮೀಡಿಯಾದಲ್ಲಿ ಆಡಿಯೊ ಬಿಡುಗಡೆ ಮಾಡಿ ನಾನಿನ್ನೂ ಬೆಂಗಳೂರಿನಲ್ಲೇ ಇದ್ದೇನೆ ಎಂದು ಹೇಳುತ್ತಿದ್ದರೂ ಇದನ್ನು ನಂಬುವಂತಿಲ್ಲ. ಅವನು ಈಗಾಗಲೇ ದೇಶ ಬಿಟ್ಟು ಹೋಗಿರುವ ಗುಮಾನಿ ಇದೆ.

ಮನ್ಸೂರ್‌ ರಾಜ್ಯದ ಹಲವು ರಾಜಕಾರಣಿಗಳ ಒಡನಾಟ ಹೊಂದಿರುವುದು ಕೂಡಾ ಇದೇ ವೇಳೆ ಬಹಿರಂಗಗೊಂಡಿದೆ. ಈ ಕಾರಣಕ್ಕೆ ಈ ಪ್ರಕರಣ ರಾಜಕೀಯ ಆಯಾಮವನ್ನೂ ಒಳಗೊಂಡಿದೆ. ತನಿಖೆಯನ್ನು ಕ್ಷಿಪ್ರವಾಗಿ ಮುಗಿಸುವ ಸಲುವಾಗಿ ಸರಕಾರ ವಿಶೇಷ ತನಿಖಾ ತಂಡ ರಚಿಸುವ ತೀರ್ಮಾನ ಕೈಗೊಂಡಿದೆ.

ರಾಜ್ಯದಲ್ಲಿ ಈ ಮಾದರಿಯ ವಂಚನೆ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಈ ಮಾದರಿಯ ಚಿಟ್‌ಫ‌ಂಡ್‌ ಕಂಪೆನಿಗಳು, ಚೈನ್‌ಲಿಂಕ್‌ ಕಂಪೆನಿಗಳು ಜನರಿಗೆ ಪಂಗನಾಮ ಹಾಕಿ ಹೋಗಿವೆ. ವಿನಿವಿಂಕ್‌, ಗುರುಟೇಕ್‌, ಆ್ಯಂಬಿಡೆಂಟ್‌, ಐ ವಿವೇಕ , ಅಗ್ರಿಗೋಲ್ಡ್‌ ಇತ್ಯಾದಿ ಕಂಪೆನಿಗಳನ್ನು ಹೆಸರಿಸಬಹುದು. ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದ್ದ ಶಾರದಾ ಚಿಟ್‌ಫ‌ಂಡ್‌ ಕಂಪೆನಿ ಮತ್ತು ರೋಸ್‌ವ್ಯಾಲಿ ಕಂಪೆನಿಗಳದ್ದು ದಶಕಗಳ ವಂಚನೆಯ ಕತೆ. ಸಹಾರ ಎಂಬ ಇನ್ನೊಂದು ಕಂಪೆನಿಯೂ ಇದೇ ಸಾಲಿಗೆ ಸೇರುತ್ತದೆ. ಪದೇ ಪದೇ ಇಂಥ ವಂಚನೆಗಳು ನಡೆಯುತ್ತಿದ್ದರೂ ಜನರಿನ್ನೂ ಬುದ್ಧಿ ಕಲಿತುಕೊಂಡಿಲ್ಲ. ಎಲ್ಲಿ ತನಕ ಮೋಸ ಹೋಗುವವರು ಇರುತ್ತಾರೋ ಅಲ್ಲಿ ತನಕ ಮೋಸ ಮಾಡುವವರು ಇರುತ್ತಾರೆ ಎನ್ನುವುದೇ ಈ ವಂಚನೆ ಪ್ರಕರಣಗಳಿಗೆ ಅನ್ವಯವಾಗುವ ಸಿದ್ಧಾಂತ.

ಹೆಚ್ಚು ಬಡ್ಡಿ ಸಿಗುವ ಆಸೆಯಿಂದ ಜನರು ದಿಢೀರ್‌ ಎಂದು ಹುಟ್ಟಿಕೊಳ್ಳುವ ಇಂಥ ಕಂಪೆನಿಗಳಲ್ಲಿ ಹಣ ಠೇವಣಿ ಇಡುತ್ತಾರೆ. ಬ್ಯಾಂಕಿನಿಂದ 3-4 ಶೇಕಡಾ ಅಧಿಕ ಬಡ್ಡಿ ಕೊಡುವ ಆಮಿಷವೊಡ್ಡಿ ಈ ಕಂಪೆನಿಗಳು ಜನರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿವೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಕೈತುಂಬ ಬಡ್ಡಿ ಸಿಗುತ್ತದೆ. ಹೀಗೆ ಬಡ್ಡಿ ಪಡೆದುಕೊಂಡವರೇ ಇನ್ನೊಂದಿಷ್ಟು ಜನರನ್ನು ಈ ಕಂಪೆನಿಗಳ ಸದಸ್ಯರಾಗಲು ಪ್ರೇರೇಪಿಸುತ್ತಾರೆ. ಇದೊಂದು ರೀತಿಯಲ್ಲಿ ಸರಪಣಿ ಯಂತೆ ಸಾಗುವ ವ್ಯಾಪಾರ. ಯಾರೂ ಕಂಪೆನಿಗೆ ಈ ಪರಿಯಲ್ಲಿ ಬಡ್ಡಿ ಕೊಡಲು ಹಣ ಎಲ್ಲಿಂದ ಬರುತ್ತದೆ ಎಂದು ಕೇಳುವುದಿಲ್ಲ, ಯಾವ ವ್ಯಾಪಾರದಿಂದ ಕಂಪೆನಿ ಇಷ್ಟು ಲಾಭ ಗಳಿಸುತ್ತದೆ ಎಂದು ಶೋಧಿಸುವುದಿಲ್ಲ. ನಮಗೆ ಹೆಚ್ಚು ಬಡ್ಡಿ ಸಿಕ್ಕಿದರೆ ಸಾಕು ಎಂದು ಜನರು ಸುಮ್ಮನಿರುತ್ತಾರೆ. ಜನರ ಈ ಅಮಾಯಕತೆಯೇ ಅಥವಾ ಪೆದ್ದುತನವೇ ಪಾಂಝಿ ಕಂಪೆನಿಗಳ ಬಂಡವಾಳ.

ಬಹುತೇಕ ಈ ಮಾದರಿಯ ಕಂಪೆನಿಗಳಲ್ಲಿ ಹಣ ಹಾಕುವವರು ಬಡವರು ಮತ್ತು ಮಧ್ಯಮ ವರ್ಗದವರು. ಇವರಲ್ಲಿ ವಿದ್ಯಾವಂತರೂ ಅವಿದ್ಯಾವಂತರೂ ಇದ್ದಾರೆ. ಆದರೆ ಒಟ್ಟಾರೆಯಾಗಿ ಇವರೆಲ್ಲ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ದಂತೆ ಅಶಿಕ್ಷಿತರೇ ಸರಿ. ಕಳೆದ 30 ವರ್ಷಗಳಲ್ಲಿ ದೇಶದಲ್ಲಿ ಸುಮಾರು 3 ಲಕ್ಷ ಕೋ. ರೂ.ಯ ಚಿಟ್‌ಫ‌ಂಡ್‌ ವಂಚನೆ ಸಂಭವಿಸಿದೆ. 15 ಕೋಟಿ ಜನರು ವಂಚನೆಗೊಳಗಾಗಿದ್ದಾರೆ ಹಾಗೂ ಈ ಪೈಕಿ ಸುಮಾರು 350 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುತ್ತದೆ ಒಂದು ವರದಿ.

ಪಾಂಝಿ ಕಂಪೆನಿಗಳ ವಂಚನೆಯನ್ನು ತಡೆಗಟ್ಟಲು ಕಳೆದ ವರ್ಷ ಕಟ್ಟುನಿಟ್ಟಿನ ಕಾನೂನು ರಚನೆಯಾಗಿದೆ. ಜೊತೆಗೆ ಸುಪ್ರೀಂ ಕೋರ್ಟ್‌ ಕೂಡಾ ಇಂಥ ವಂಚನೆ ಪ್ರಕರಣಗಳ ಸಂತ್ರಸ್ತರಿಗೆ ಅವರ ಹಣ ಮರಳಿ ಸಿಗುವಂತೆ ಮಾಡಬೇಕು ಎಂದು ಹೇಳಿದೆ. ಆದರೆ ವ್ಯವಸ್ಥೆಯಲ್ಲಿ ಗಮನಾರ್ಹ‌ ಬದಲಾವಣೆಯೇನೂ ಆಗಿಲ್ಲ. ಸಾಮಾನ್ಯವಾಗಿ ವಂಚನೆ ಎಸಗುವ ಕಂಪೆನಿಗಳ ಮಾಲಕರು ಹೊಂದಿರುವ ರಾಜಕೀಯ ಸಂಪರ್ಕಗಳು ಇದಕ್ಕೆ ಕಾರಣ. ಒಂದೋ ಅವರು ನೇರವಾಗಿ ರಾಜಕೀಯದಲ್ಲಿ ಶಾಮೀಲಾಗಿರುತ್ತಾರೆ ಇಲ್ಲವೇ ರಾಜಕೀಯ ವ್ಯಕ್ತಿಗಳ ಮತ್ತು ಪಕ್ಷಗಳ ಕೃಪಾಕಟಾಕ್ಷದಲ್ಲಿರುತ್ತಾರೆ. ಇಂಥ ವ್ಯವಸ್ಥೆಯಲ್ಲಿ ಸಂತ್ರಸ್ತರಿಗೆ ಕ್ಷಿಪ್ರವಾಗಿ ನ್ಯಾಯ ಸಿಗುವುದು ದುಸ್ತರವಾಗುತ್ತದೆ.

ಇಷ್ಟರ ತನಕ ನಡೆದಿರುವ ಯಾವ ವಂಚನೆ ಪ್ರಕರಣದಲ್ಲೂ ವಂಚನೆ ಗೊಳಗಾದವರಿಗೆ ಅವರು ಕಳೆದು ಕೊಂಡ ಹಣ ಪೂರ್ಣವಾಗಿ ವಾಪಸು ಸಿಕ್ಕಿದ ಉದಾಹರಣೆಯಿಲ್ಲ. ಇದೀಗ ಐಎಂಎ ಪ್ರಕರಣವೂ ಈ ಸಾಲಿಗೆ ಸೇರದಂತೆ ನೋಡಿಕೊಳ್ಳಬೇಕಾಗಿರುವುದು ಸರಕಾರದ ಹೊಣೆ. ಬಡವರ ಬದುಕಿನಲ್ಲಿ ಆಟವಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಯಾವ ರಾಜಕೀಯ ಹಿತಾಸಕ್ತಿಯೂ ಅಡ್ಡಿಯಾಗಬಾರದು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ