ಪ್ರಣಾಳಿಕೆಯಲ್ಲಿ ಪ್ರಶಸ್ತಿ ವಾಗ್ಧಾನ ಇದು ಮೇಲ್ಪಂಕ್ತಿಯಲ್ಲ

Team Udayavani, Oct 18, 2019, 5:50 AM IST

ಭಾರತ ರತ್ನದಂಥ ಪರಮೋಚ್ಚ ಪ್ರಶಸ್ತಿಗೆ ಸಾವರ್ಕರ್‌ ಹಾಗೂ ಇನ್ನಿಬ್ಬರು ಅರ್ಹರೇ ಅಲ್ಲವೇ ಎನ್ನುವುದು ಬೇರೆಯೇ ವಿಷಯ. ಆದರೆ ಪಕ್ಷವೊಂದು ತನ್ನ ಚುನಾವಣಾ ಪ್ರಣಾಳಿಕೆಯಲ್ಲೇ ಭಾರತ ರತ್ನವನ್ನು ಕೊಡಿಸುತ್ತೇನೆ ಎಂದು ಭರವಸೆ ನೀಡಿರುವ ನಡೆ ಸರಿಯೇ ಎನ್ನುವುದು ಚರ್ಚೆಯಾಗಬೇಕಾದ ವಿಷಯ.

ರಾಜಕೀಯ ಲಾಭ ನಷ್ಟದ ಲೆಕ್ಕಾಚಾರದ ಆಧಾರದಲ್ಲಿ ಪ್ರಶಸ್ತಿಯನ್ನು ಹಂಚುವುದು ನಮ್ಮ ದೇಶದಲ್ಲಿ ಹೊಸ ಬೆಳವಣಿಗೆಯೇನೂ ಅಲ್ಲ. ಅಕಾಡೆಮಿಗಳಿಂದ ಹಿಡಿದು ಸರಕಾರ ಕೊಡುವ ರಾಜ್ಯೋತ್ಸವ, ಪದ್ಮ ಪ್ರಶಸ್ತಿಗಳೂ ಆಗಾಗ ರಾಜಕೀಯ ಹಿತಾಸಕ್ತಿಯ ಆರೋಪ ಲೇಪಿಸಿಕೊಂಡು ವಿವಾದಕ್ಕೊಳಗಾದದ್ದಿದೆ. ದೇಶದ ಪರಮೋಚ್ಚ ಪ್ರಶಸ್ತಿಯಾಗಿರುವ ಭಾರತ ರತ್ನವೂ ಈ ಆರೋಪದಿಂದ ಹೊರತಾಗಿಲ್ಲ. ಇದೀಗ ಮಹಾರಾಷ್ಟ್ರದ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ವೀರ ಸಾವರ್ಕರ್‌ ಎಂದೇ ಪರಿಚಿತರಾಗಿರುವ ಸ್ವಾತಂತ್ರ್ಯ ಯೋಧ ವಿನಾಯಕ ದಾಮೋದರ ಸಾವರ್ಕರ್‌ ಅವರಿಗೆ ಭಾರತ ರತ್ನ ನೀಡಲು ಶಿಫಾರಸು ಮಾಡುತ್ತೇವೆ ಎಂಬ ಅಂಶವನ್ನು ಸೇರಿಸಿಕೊಂಡಿರುವುದು ಪ್ರಶಸ್ತಿಗಳನ್ನು ರಾಜಕೀಯಕರಣಗೊಳಿಸುವ ವಿವಾದಕ್ಕೆ ಇನ್ನೊಂದು ಸೇರ್ಪಡೆಯಷ್ಟೆ.

ಸಾವರ್ಕರ್‌ ಜೊತೆಗೆ ಮಹಾರಾಷ್ಟ್ರದ ಇನ್ನಿಬ್ಬರು ಸಮಾಜ ಸುಧಾರಕರಾಗಿ ರುವ ಜ್ಯೋತಿಬಾ ಫ‌ುಲೆ ಮತ್ತು ಸಾವಿತ್ರಿಬಾಯಿ ಫ‌ುಲೆ ಅವರಿಗೂ ಭಾರತ ರತ್ನ ನೀಡಲು ಶಿಫಾರಸು ಮಾಡುವುದಾಗಿ ಬಿಜೆಪಿ ಭರವಸೆ ನೀಡಿದೆ. ಭಾರತ ರತ್ನದಂಥ ಪ್ರತಿಷ್ಠಿತ ಮತ್ತು ಪರಮೋಚ್ಚ ಪ್ರಶಸ್ತಿಗೆ ಸಾವರ್ಕರ್‌ ಹಾಗೂ ಇನ್ನಿಬ್ಬರು ಅರ್ಹರೇ ಅಲ್ಲವೇ ಎನ್ನುವುದು ಬೇರೆಯೇ ಚರ್ಚೆಯ ವಿಷಯ. ಆದರೆ ರಾಜಕೀಯ ಪಕ್ಷವೊಂದು ತನ್ನ ಚುನಾವಣಾ ಪ್ರಣಾಳಿಕೆಯಲ್ಲೇ ಭಾರತ ರತ್ನವನ್ನು ಕೊಡಿಸುತ್ತೇನೆ ಎಂದು ಭರವಸೆ ನೀಡಿರುವ ನಡೆ ಸರಿಯೇ ಎನ್ನುವುದು ಚರ್ಚೆಯಾಗಬೇಕಾದ ವಿಷಯ.

ಪ್ರಶಸ್ತಿಗಳು ವ್ಯಕ್ತಿಗಳ ಯೋಗ್ಯತೆಗನುಗುಣವಾಗಿ ಸಿಗಬೇಕು. ವ್ಯಕ್ತಿಯಿಂದಾಗಿ ಪ್ರಶಸ್ತಿಯ ಮಾನವೂ ಹೆಚ್ಚಾಗಬೇಕೆನ್ನುವುದು ಒಂದು ಆಶಯ. ಆದರೆ ರಾಜಕೀಯದ ಸಂದರ್ಭದಲ್ಲಿ ಇಂಥ ಆಶಯಗಳೆಲ್ಲ ಲೆಕ್ಕಕ್ಕೆ ಬರುವುದಿಲ್ಲ. ಕಳೆದ ಕೆಲವು ವರ್ಷಗಳಿಂದೀಚೆಗೆ ಭಾರತ ರತ್ನವೇ ವಿವಾದ ಗೂಡಾಗುತ್ತಿದೆ. ಆಡಳಿತದಲ್ಲಿರುವ ಪಕ್ಷ ಚುನಾವಣೆ ಸಂದರ್ಭದಲ್ಲಿ ಮತಗಳನ್ನು ಗಳಿಸಿಕೊಳ್ಳಲು ಪ್ರಶಸ್ತಿಗಳನ್ನು ನೀಡುವ ಪರಿಪಾಠವನ್ನು ಪ್ರಾರಂಭಿಸಿದ್ದೇ ಕಾಂಗ್ರೆಸ್‌. 2014ರಲ್ಲಿ ಸಚಿನ್‌ ತೆಂಡುಲ್ಕರ್‌ ಅವರಿಗೆ ಭಾರತ ರತ್ನ ನೀಡಿದಾಗ ಯುವಕರ ಮತ ಗಳಿಸಿಕೊಳ್ಳಲು ಮಾಡಿದ ಪ್ರಯತ್ನವೆಂದೇ ವ್ಯಾಖ್ಯಾನಿಸಲಾಗಿತ್ತು. ಅಲ್ಲದೆ ಗಾಂಧಿ-ನೆಹರು ಪರಿವಾರದ ಮೂವರಿಗೆ ಭಾರತ ರತ್ನ ಪ್ರಶಸ್ತಿ ಸಿಕ್ಕಿದ್ದು, ಇದು ಸ್ವಯಂ ಕೊಟ್ಟುಕೊಂಡ ಪ್ರಶಸ್ತಿ ಎಂಬ ಲೇವಡಿ ಇನ್ನೂ ನಿಂತಿಲ್ಲ. ಹೀಗಿರುವಾಗ ಸಾವರ್ಕರ್‌ಗೆ ಭಾರತ ರತ್ನ ನೀಡುವ ವಾಗ್ಧಾನವನ್ನು ವಿರೋಧಿಸುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ.

ಹಾಗೆಂದು ಇದು ಬಿಜೆಪಿ ಇಟ್ಟಿರುವ ನಡೆಗೆ ಸಮರ್ಥನೆಯಾಗುವುದಿಲ್ಲ. ಸಾವರ್ಕರ್‌ ಹೆಸರನ್ನು ಭಾರತ ರತ್ನ ಪ್ರಶಸ್ತಿಗೆ ಶಿಫಾರಸು ಮಾಡುತ್ತೇವೆ ಎಂಬ ದೊಡ್ಡ ಆಶ್ವಾಸನೆಯನ್ನು ಪ್ರಣಾಳಿಕೆಯಲ್ಲಿ ಸೇರಿಸುವಾಗ ಹೈಕಮಾಂಡ್‌ ಗಮನಕ್ಕೆ ತರಲಾಗಿತ್ತು ಎನ್ನುವುದರಲ್ಲಿ ಅನುಮಾನವಿಲ್ಲ . ಅಲ್ಲದೆ ಸ್ವತಃ ಮೋದಿಯವರೇ ಈಗ ಚುನಾವಣಾ ಪ್ರಚಾರದಲ್ಲಿ ಸಾವರ್ಕರ್‌ ಗುಣಗಾನ ಮಾಡುತ್ತಿರುವುದರಿಂದ ಮಹಾರಾಷ್ಟ್ರದ ಬಿಜೆಪಿಯ ಈ ನಿರ್ಧಾರಕ್ಕೆ ಪಕ್ಷದ ಹೈಕಮಾಂಡ್‌ನ‌ ಸಂಪೂರ್ಣ ಒಪ್ಪಿಗೆ ಇದೆ ಎಂದೇ ಭಾವಿಸಬೇಕಾಗುತ್ತದೆ.
ಭಾರತ ರತ್ನ ಪ್ರಶಸ್ತಿಗೆ ಸಾವರ್ಕರ್‌ ಅರ್ಹರೇ ಆಗಿರಬಹುದು. ಆದರೆ ಚುನಾವಣೆ ಪ್ರಣಾಳಿಕೆಯಲ್ಲಿ ಇದನ್ನು ಸೇರಿಸಿಕೊಳ್ಳುವುದು ಪರಮೋಚ್ಚ ಪ್ರಶಸ್ತಿಯ ಬಹಿರಂಗ ರಾಜಕೀಕರಣ ಎಂಬ ಕಾರಣಕ್ಕೆ ಈ ನಡೆ ಆಕ್ಷೇಪಾರ್ಹ.

ಪದ್ಮ ಪ್ರಶಸ್ತಿಗೆ ಸಾರ್ವಜನಿಕರಿಂದಲೇ ಶಿಫಾರಸುಗಳನ್ನು ಆಹ್ವಾನಿಸಿ, ಪ್ರಶಸ್ತಿ ಹಂಚಿಕೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಂಡು ಅರ್ಹರಿಗೆ ಪ್ರಶಸ್ತಿ ಸಂದಾ ಯವಾಗುವಂತೆ ನೋಡಿಕೊಂಡ ಮೋದಿ ಸರಕಾರದ ನಡೆ ಸರ್ವತ್ರ ಪ್ರಶಂಸೆಗೆ ಪಾತ್ರವಾಗಿತ್ತು. ಕಳೆದು ಹೋಗಿದ್ದ ಪದ್ಮ ಪ್ರಶಸ್ತಿಗಳ ಮೇಲಿನ ಗೌರವ ಎನ್‌ಡಿಎ ಅವಧಿಯಲ್ಲಿ ಮರಳಿ ಸಿಕ್ಕಿತ್ತು. ಈಗ ಸಾಧನೆ ಮಾಡಿದ ಯೋಗ್ಯ ವ್ಯಕ್ತಿಗಳಿಗೆ ಪದ್ಮ ಪ್ರಶಸ್ತಿಗಳು ಸಿಗುತ್ತಿವೆ ಎಂಬ ಭಾವನೆ ಜನರಲ್ಲಿ ಮೂಡಿದೆ.

ಹೀಗಿರುವಾಗ ಭಾರತ ರತ್ನದ ವಿಚಾರದಲ್ಲಿ ಸರಕಾರ ಈ ನಡೆ ಇಟ್ಟಿರುವುದು ಏಕೆ ಎನ್ನುವುದು ಪ್ರಶ್ನಾರ್ಹ. ಎಲ್ಲ ರಾಜ್ಯಗಳಲ್ಲೂ ಭಾರತ ರತ್ನಕ್ಕೆ ಅರ್ಹರಾಗಿರುವ ಅನೇಕ ಮಂದಿಯಿದ್ದಾರೆ. ನಾಳೆ ಎಲ್ಲ ಪಕ್ಷಗಳೂ ತಮ್ಮ ಪ್ರಣಾಳಿಕೆಯಲ್ಲಿ ಇಂಥವರಿಗೆ ಭಾರತ ರತ್ನ ಕೊಡಿಸುತ್ತೇವೆ ಎಂಬ ವಾಗ್ಧಾನ ನೀಡಲು ಮಹಾರಾಷ್ಟ್ರ ಬಿಜೆಪಿ ಮೇಲ್ಪಂ ಕ್ತಿಯಾಗಬಾರದು. ಇದರಿಂದ ಚ್ಯುತಿಯಾಗುವುದು ಪ್ರಶಸ್ತಿಯ ಗೌರವಕ್ಕೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ