ನಿಲ್ಲದ ಪಾಕ್‌ ಕುತಂತ್ರ: ಡ್ರೋನ್‌ ಬಗ್ಗೆ ಎಚ್ಚರ ಅಗತ್ಯ

Team Udayavani, Sep 27, 2019, 5:15 AM IST

ಪಾಕಿಸ್ತಾನದ ಉಗ್ರರು ಡ್ರೋನ್‌ ಬಳಸಿ ಪಂಜಾಬಿನ ಗಡಿಯಲ್ಲಿರುವ ತರಣ್‌ ತಾರಣ್‌ನಲ್ಲಿ ಎಕೆ 47 ರೈಫ‌ಲ್‌ಗ‌ಳು, ಸ್ಫೋಟಕ, ಮದ್ದು ಗುಂಡು, ನಕಲಿ ಕರೆನ್ಸಿ ನೋಟು ಇತ್ಯಾದಿಗಳನ್ನು ಇಳಿಸಿರುವುದು ಕಳವಳ ಉಂಟುಮಾಡುವ ಘಟನೆ. ಎಂಟು ದಿನಗಳಲ್ಲಿ ಹತ್ತು ಸಲ ಡ್ರೋನ್‌ಗಳು ಗಡಿದಾಟಿ ಬಂದು ಹೋಗಿರುವುದು ಪತ್ತೆಯಾಗಿದೆ. ಕಾಶ್ಮೀರದ ವಿಶೇಷ ವಿಧಿಯನ್ನು ರದ್ದುಪಡಿಸಿದ ಬಳಿಕ ತೀರಾ ಹತಾಶ ಸ್ಥಿತಿಯಲ್ಲಿರುವ ಪಾಕಿಸ್ಥಾನ ಸರಕಾರ ಮತ್ತು ಬೇಹುಪಡೆ ಐಎಸ್‌ಐಯೇ ಉಗ್ರರಿಗೆ ನೆರವು ನೀಡಿರುವುದರಲ್ಲಿ ಯಾವ ಅನುಮಾನವೂ ಇಲ್ಲ. ಹತ್ತು ಸಲ ಡ್ರೋನ್‌ಗಳು ಗಡಿದಾಟಿ ಬಂದು ಹೋಗಿದ್ದರೂ ರಾಡಾರ್‌ನಂಥ ಗಗನ ಕಾವಲು ವ್ಯವಸ್ಥೆಯ ದೃಷ್ಟಿಗೆ ಬಿದ್ದಿಲ್ಲ ಎನ್ನುವುದು ಹೆಚ್ಚು ಕಳವಳಕಾರಿಯಾದ ಸಂಗತಿ.

ಉಗ್ರರ ಮೂಲಕ ಜಮ್ಮು- ಕಾಶ್ಮೀರ ಸೇರಿದಂತೆ ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಪಾಕಿಸ್ಥಾನ ಹವಣಿ ಸುತ್ತಿರುವ ಕುರಿತು ಗುಪ್ತಚರ ಪಡೆ ಆಗಾಗ ಎಚ್ಚರಿಕೆಯನ್ನು ನೀಡುತ್ತಿದೆ. ಕಟ್ಟೆಚ್ಚರ ಇರುವುದರಿಂದ ಉಗ್ರರನ್ನು ಮತ್ತು ಶಸ್ತ್ರಾಸ್ತ್ರಗಳನ್ನು ಗಡಿ ದಾಟಿಸಲು ಸಾಧ್ಯವಾಗದಿ ರುವುದರಿಂದ ಉಗ್ರರಿಗೆ ಪಾಕ್‌ ಸೇನೆಯೇ ಡ್ರೋನ್‌ಗಳನ್ನು ಒದಗಿಸಿರುವ ಸಾಧ್ಯತೆಯೇ ಹೆಚ್ಚು. ಜತೆಗೆ ಪಾಕ್‌ ಉಗ್ರರು ಖಲಿಸ್ಥಾನ್‌ ಉಗ್ರರೊಂದಿಗೂ ಕೈಜೋಡಿಸಿದ್ದಾರೆ ಎನ್ನುವ ಮಾಹಿತಿ ಗಳಿರುವುದರಿಂದ ಈ ಬೆಳವಣಿಗೆ ದೇಶದ ಆಂತರಿಕ ಭದ್ರತೆಗೆ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಬೇಕು.

ಡ್ರೋನ್‌ನಂಥ ಆಧುನಿಕ ತಂತ್ರಜ್ಞಾನಗಳು ಉಗ್ರರ ಕೈಗೆ ಮತ್ತು ಪಾಕಿಸ್ಥಾನದಂಥ ಕುತಂತ್ರಿ ದೇಶಗಳ ಕೈಗೆ ಸಿಕ್ಕಿದರೆ ಯಾವ ರೀತಿ ಅಪಾಯಕಾರಿಯಾಗಬಹುದು ಎನ್ನುವುದಕ್ಕೆ ಕೆಲ ಸಮಯದ ಹಿಂದೆ ಸೌದಿ ಅರೇಬಿಯಾದ ತೈಲ ಸಂಸ್ಕರಣಾಗಾರಗಳಿಗೆ ಶಂಕಿತ ಹೌತಿ ಬಂಡುಕೋರರು ಡ್ರೋನ್‌ ಮೂಲಕ ನಡೆಸಿರುವ ದಾಳಿಯೇ ಸಾಕ್ಷಿ. ಈ ಡ್ರೋನ್‌ ದಾಳಿಯಿಂದ ಜಾಗತಿಕ ತೈಲ ಪೂರೈಕೆಯಲ್ಲಿ ಶೇ. 5 ವ್ಯತ್ಯಯವಾಗಿರುವುದರಿಂದ ಸೌದಿ ಅರೇಬಿಯಾದ ಜತೆಗೆ ಇಡೀ ಜಗತ್ತು ದಾಳಿಯ ದುಷ್ಪರಿಣಾಮವನ್ನು ಅನುಭವಿಸುತ್ತಿದೆ.

ಡ್ರೋನ್‌ಗಳು ಈಗ ಕೆಲವೇ ಲಕ್ಷ ರೂಪಾಯಿಗಳಿಗೆ ಯಾರಿಗೆ ಬೇಕಾದರೂ ಸಿಗುತ್ತವೆ. ಅವುಗಳಿಂದ ಅನೇಕ ಪ್ರಯೋಜನಗಳಿದ್ದರೂ ಇದೇ ವೇಳೆ ಅವುಗಳಿಂದಾಗಬಹುದಾದ ಅಪಾಯಗಳನ್ನು ಮನಗಾಣಬೇಕಾಗಿದೆ. ಅನೇಕ ಉಗ್ರ ಸಂಘಟನೆಗಳೀಗ ಈ ಕಡಿಮೆ ಬೆಲೆಯ ಡ್ರೋನ್‌ಗಳನ್ನು ಹೊಂದಿವೆ. ಪಾಕಿಸ್ಥಾನಕ್ಕೆ ಅದರ ಪರಮಾಪ್ತ ಮಿತ್ರ ಚೀನವೇ ಡ್ರೋನ್‌ಗಳನ್ನು ಒದಗಿಸುತ್ತಿದೆ. ಕೆಳ ಹಂತದಲ್ಲಿ ಹಾರಾಡುವ ಡ್ರೋನ್‌ಗಳು ರಾಡಾರ್‌ ಕಣ್ಣಿಗೆ ಬೀಳುವುದಿಲ್ಲ. ಹೀಗಾಗಿ ಇವುಗಳ ಇರುವಿಕೆಯನ್ನು ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಅಣಕು ಸಮರಗಳಿಗೆ ಡ್ರೋನ್‌ ಬಳಕೆಯಾಗುವ ದಿನಗಳು ದೂರವಿಲ್ಲ ಎನ್ನುವುದಕ್ಕೆ ಪಾಕಿಸ್ಥಾನ ಪಂಜಾಬಿನಲ್ಲಿ ಶಸ್ತ್ರಾಸ್ತ್ರಗಳನ್ನು ಇಳಿಸಿರುವುದೇ ಸಾಕ್ಷಿ. ಪಾಕಿಸ್ಥಾನ ಗಡಿ ಭಾಗಗಳ ಸೇನಾ ನೆಲೆಗಳನ್ನು ನವೀಕರಿಸಿರುವುದರ ಹಿಂದೆ ಈ ಒಂದು ಉದ್ದೇಶ ಇರುವ ಸಾಧ್ಯತೆಯೂ ಇರುವುದರಿಂದ ನಮ್ಮ ಸೇನೆಗೆ ಹೊಸದೊಂದು ಸವಾಲು ಎದುರಾಗಬಹುದು. ನಮ್ಮ ರಕ್ಷಣಾ ವ್ಯವಸ್ಥೆ ಈ ಸವಾಲನ್ನು ಎದುರಿಸಲು ಹೊಸ ರೀತಿಯ ರಣತಂತ್ರವನ್ನು ರೂಪಿಸಿಕೊಳ್ಳುವ ಅಗತ್ಯವಿದೆ. ನವೀನ ರೀತಿಯ ರಾಡಾರ್‌ ವ್ಯವಸ್ಥೆ, ಕೆಳಹಂತದಲ್ಲಿ ಹಾರುವ ಡ್ರೋನ್‌ ಪತ್ತೆ ಮಾಡುವ ಕ್ಯಾಮರ ಮತ್ತು ಜ್ಯಾಮರ್‌ಗಳನ್ನು ಸೂಕ್ಷ್ಮ ಸಂಸ್ಥಾಪನೆಗಳಲ್ಲಿ ನಿಯೋಜಿಸಿಕೊಳ್ಳಬೇಕು. ಜತೆಗೆ ಸೇನೆಯನ್ನು ಸಮಗ್ರವಾಗಿ ಆಧುನೀಕರಣಗೊಳಿಸಿಕೊಳ್ಳುವುದು ಪ್ರಸ್ತುತ ಸಂದರ್ಭದಲ್ಲಿ ಅನಿವಾರ್ಯ. ಭವಿಷ್ಯದಲ್ಲಿ ಯುದ್ಧವೇನಾದರೂ ನಡೆದರೆ ಅದು ಆಕಾಶದಲ್ಲೇ. ಹೀಗಾಗಿ ನಮ್ಮ ಗಗನ ಕಾವಲು ವ್ಯವಸ್ಥೆ ಇನ್ನಷ್ಟು ಸಮಗ್ರ ಮತ್ತು ಬಲಿಷ್ಠವಾಗಬೇಕು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ