ಹಜ್‌ ಸಬ್ಸಿಡಿ ರದ್ದು

Team Udayavani, Jan 17, 2018, 1:07 PM IST

ಕೇಂದ್ರ ಸರಕಾರ ಈ ವರ್ಷದಿಂದಲೇ ಜಾರಿಗೆ ಬರುವಂತೆ ಹಜ್‌ ಸಬ್ಸಿಡಿಯನ್ನು ರದ್ದುಗೊಳಿಸುವ ದಿಟ್ಟ ನಿರ್ಧಾರವನ್ನು ಕೈಗೊಂಡಿದೆ. ಈ ಮೂಲಕ 2012ರ ಸುಪ್ರೀಂ ಕೋರ್ಟ್‌ ಆದೇಶವನ್ನು ನಾಲ್ಕು ವರ್ಷ ಮುಂಚಿತವಾಗಿಯೇ ಜಾರಿಗೊಳಿಸಿದೆ. 2012ರಲ್ಲಿ ಸರ್ವೋಚ್ಚ ನ್ಯಾಯಾಲಯ 10 ವರ್ಷಗಳ ಒಳಗಾಗಿ ಹಜ್‌ ಸಬ್ಸಿಡಿಯನ್ನು ಹಂತ ಹಂತವಾಗಿ ರದ್ದು ಪಡಿಸಲು ಸರಕಾರಕ್ಕೆ ಆದೇಶಿಸಿತ್ತು. ಈ ಆದೇಶದ ಪ್ರಕಾರ 2022ಕ್ಕಾಗುವಾಗ ಹಜ್‌ ಸಬ್ಸಿಡಿ ಸಂಪೂರ್ಣವಾಗಿ ರದ್ದಾಗಬೇಕಿತ್ತು. ಆದರೆ ಸರಕಾರ ಈಗಲೇ ರದ್ದುಪಡಿಸಿದೆ. ಮುಸ್ಲಿಮರಿಗೆ ವರ್ಷಕ್ಕೊಮ್ಮೆ ಹಜ್‌ ಯಾತ್ರೆಗೈಯ್ಯಲು ನೀಡುತ್ತಿದ್ದ ಈ ಸೌಲಭ್ಯ ವ್ಯಾಪಕವಾಗಿ ದುರುಪಯೋಗ ಆಗುತ್ತಿರುವ ಕುರಿತು ಹಿಂದಿನಿಂದಲೂ ದೂರುಗಳು ಇದ್ದವು. ಅಲ್ಲದೆ ಜಾತ್ಯಾತೀತ ದೇಶವೊಂದು ಒಂದು ನಿರ್ದಿಷ್ಟ ಧರ್ಮದ ಧಾರ್ಮಿಕ ಯಾತ್ರೆಗಾಗಿ ಜನರ ತೆರಿಗೆ ಹಣವನ್ನು ಬಳಸಿಕೊಳ್ಳುವುದು ಎಷ್ಟು ಸರಿ ಎಂಬ ಪ್ರಶ್ನೆಯೂ ಇತ್ತು. ಆದರೆ ಕೇಂದ್ರದಲ್ಲಿ ಈ ಮೊದಲು ಅಧಿಕಾರದಲ್ಲಿದ್ದ ಸರಕಾರಗಳಿಗೆ ಹಜ್‌ ಸಬ್ಸಿಡಿಯನ್ನು ರದ್ದು ಮಾಡಿದರೆ ಎಲ್ಲಿ ಮುಸ್ಲಿಮರ ಮತಗಳನ್ನು ಕಳೆದುಕೊಳ್ಳಬೇಕಾಗುವುದೋ ಎಂಬ ಭೀತಿಯಿತ್ತು. ಹೀಗಾಗಿ ಇಷ್ಟರತನಕ ಸಬ್ಸಿಡಿ ಅನೂಚಾನವಾಗಿ ನಡೆದುಕೊಂಡು ಬಂದಿದೆ. 

ಪ್ರತಿ ವರ್ಷ ಹಜ್‌ ಸಬ್ಸಿಡಿಗಾಗಿ ಸರಕಾರದ ಬೊಕ್ಕಸದಿಂದ ಕೋಟಿಗಟ್ಟಲೆ ಹಣ ಖರ್ಚಾಗುತ್ತಿದೆ. ಕಳೆದ ಹತ್ತು ವರ್ಷಗಳ ಸಬ್ಸಿಡಿ ಮೊತ್ತವನ್ನು ನೋಡಿದರೆ ಸರಾಸರಿಯಾಗಿ ಸುಮಾರು 500 ಕೋ. ರೂ.ಯಂತೆ ಪ್ರತಿ ವರ್ಷ ಹಜ್‌ ಸಬ್ಸಿಡಿಗಾಗಿ ವಿನಿಯೋಗಿಸಲಾಗಿದೆ. 2016ರಲ್ಲಿ ಅಂದಾಜು 405 ಕೋ. ರೂ.ಯನ್ನು ಸಬ್ಸಿಡಿಗಾಗಿ ಬಳಸಿಕೊಳ್ಳಲಾಗಿದೆ. ಪ್ರತಿ ಹಜ್‌ ಯಾತ್ರಿಕನಿಗೆ ಸುಮಾರು 35,000 ರೂ. ತನಕ ಸಬ್ಸಿಡಿ ಸಿಗುತ್ತಿತ್ತು. ಇದೀಗ ಈ ಹಣವನ್ನು ಮುಸ್ಲಿಮ್‌ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಇನ್ನಿತರ ಸಾಮಾಜಿಕ ಸಬಲೀಕರಣ ಯೋಜನೆಗಳಿಗೆ ಬಳಸಿಕೊಳ್ಳುವುದಾಗಿ ಸರಕಾರ ಹೇಳುತ್ತಿದೆ. ಹಜ್‌ ಸಬ್ಸಿಡಿಗೆ ಸಾಂವಿಧಾನಿಕ ಮಾನ್ಯತೆ ಇದ್ದರೂ ಜೆದ್ದಾದ ರಿಟರ್ನ್ ಟಿಕೇಟ್‌ಗೆ ಏರ್‌ ಇಂಡಿಯಾ ಜುಜುಬಿ ದರ ವಸೂಲು ಪಡೆಯುವುದನ್ನು ಯಾವ ರೀತಿಯಲ್ಲೂ ಸಮರ್ಥಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಂದೇ ಹೇಳಿತ್ತು.  ಬ್ರಿಟಿಷರ ಆಳ್ವಿಕೆಯಿದ್ದ 1932ರಲ್ಲೇ ಹಜ್‌ ಯಾತ್ರೆಗೆ ಸಬ್ಸಿಡಿ ಸೌಲಭ್ಯ ಒದಗಿಸುವ ಪರಂಪರೆಯನ್ನು ಪ್ರಾರಂಭಿಸಲಾಗಿತ್ತು. ಸ್ವತಂತ್ರ ಭಾರತದ ಸರಕಾರಗಳೂ ಈ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿವೆ. 1959ರಲ್ಲಿ ರಚನೆಯಾದ ಹಜ್‌ ಕಾಯಿದೆಯಲ್ಲಿ ಸಬ್ಸಿಡಿ ಸೌಲಭ್ಯವನ್ನು ಮುಂದುವರಿಸುವ ಅಂಶವನ್ನು ಸೇರಿಸಿಕೊಳ್ಳಲಾಗಿತ್ತು. ಅಂದಿನಿಂದ ಅಧಿಕಾರದಲ್ಲಿರುವ ಪಕ್ಷಗಳಿಗೆ ಮುಸ್ಲಿಮರನ್ನು ಓಲೈಸಿ ಮತಗಳಿಸುವ ಅಸ್ತ್ರವಾಗಿತ್ತು ಸಬ್ಸಿಡಿ. ಏರ್‌ ಇಂಡಿಯಾ ವಿಮಾನದಲ್ಲಿ ರಿಯಾಯಿತಿ ಪ್ರಯಾಣ ಸೇರಿದಂತೆ ಹಲವು ರೂಪದಲ್ಲಿ ಸಬ್ಸಿಡಿ ಸೌಲಭ್ಯ ಒದಗಿಸಲಾಗುತ್ತಿದೆ. ವಿಶೇಷವೆಂದರೆ ಹಲವು ಮುಸ್ಲಿಮರೇ ಹಜ್‌ ಯಾತ್ರೆಗೆ ಸಬ್ಸಿಡಿ ನೀಡುವುದನ್ನು ವಿರೋಧಿಸುತ್ತಿದ್ದಾರೆ. 2012ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ಆದೇಶವನ್ನು ಸ್ವಾಗತಿಸಿದವರಲ್ಲಿ ಅಸಾದುದ್ದೀನ್‌ ಓವೈಸಿ ಕೂಡ ಒಬ್ಬರು.  ತಲಾಕ್‌ ನಿಷೇಧ, ಮಹಿಳೆಯರಿಗೆ ಮಾತ್ರ ಹಜ್‌ ಯಾತ್ರೆಗೈಯ್ಯಲು ಅನುಮತಿ, ಮದರಸ ಶಿಕ್ಷಣ ಸುಧಾರಣೆಗೆ ಕಾರ್ಯಕ್ರಮ ರೂಪಿಸಿರುವುದು ಸೇರಿದಂತೆ ನರೇಂದ್ರ ಮೋದಿ ಸರಕಾರ ಮುಸ್ಲಿಮರ ಸಾಮಾಜಿಕ ಪರಿಸ್ಥಿತಿ ಸುಧಾರಣೆಗಾಗಿ ಹಲವು ದಿಟ್ಟ ನಿರ್ಧಾರಗಳನ್ನು ಕೈಗೊಂಡಿದೆ. ಈ ಸಾಲಿಗೆ ಹಜ್‌ ಸಬ್ಸಿಡಿಯನ್ನೂ ಸೇರಿಸಬಹುದು. ಬಡವರಿಗೆ ಯಾವ ಪ್ರಯೋಜನವೂ ಇಲ್ಲದ ಬರೀ ದಲ್ಲಾಳಿಗಳ ಮೂಲಕ ಸೋರಿಕೆಯಾಗುತ್ತಿದ್ದ ಹಜ್‌ ಸಬ್ಸಿಡಿಯನ್ನು ರದ್ದುಪಡಿಸಿರುವುದನ್ನು ಸೇರಿಸಬಹುದು.  

ಕುರಾನಿನಲ್ಲೇ ಹಜ್‌ ಯಾತ್ರೆ ಮತ್ತು ಜಕಾತನ್ನು ಸಾಮರ್ಥ್ಯವಿದ್ದವರು ಮಾತ್ರ ಮಾಡಿದರೆ ಸಾಕು ಎಂದು ಹೇಳಲಾಗಿದೆ. ಧರ್ಮ ಜನರ ವೈಯಕ್ತಿಕ ಆಯ್ಕೆಯಾಗಿರುವುದರಿಂದ ಅದರಲ್ಲಿ ಸರಕಾರ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ. ಆದರೆ ರಾಜಕೀಯದಲ್ಲಿ ಧರ್ಮ ಬೆರೆಸಬಾರದು ಎಂದು ಹೇಳುವ ತಥಾಕಥಿತ ಜಾತ್ಯಾತೀತ ಪಕ್ಷಗಳೇ ಹಜ್‌ ಸಬ್ಸಿಡಿಯಂತಹ ಕೆಲವು ಓಲೈಕೆ ತಂತ್ರಗಳನ್ನು ಮಾತ್ರ ಪೋಷಿಸಿಕೊಂಡು ಬಂದಿರುವುದು ವಿಪರ್ಯಾಸ. ಹಜ್‌ ಸಬ್ಸಿಡಿ ರದ್ದುಗೊಳಿಸಿದ ಮಾದರಿಯಲ್ಲೇ ಕೆಲವು ರಾಜ್ಯ ಸರಕಾರಗಳು ಹಿಂದುಗಳನ್ನು ಖುಷಿಪಡಿಸಲು ರೂಪಿಸಿರುವ ದೇವಸ್ಥಾನಗಳಿಗೆ ತೀರ್ಥ ಯಾತ್ರೆ ಕೈಗೊಳ್ಳುವಂತಹ ಕಾರ್ಯಕ್ರಮಗಳನ್ನು ರದ್ದುಪಡಿಸುವ ಅಗತ್ಯವಿದೆ. ಜನರ ತೆರಿಗೆ ಹಣ ಜನಕಲ್ಯಾಣಕ್ಕೆ ಉಪಯೋಗವಾಗಬೇಕೆ ಹೊರತು ಈ ರೀತಿಯ ಕಾರ್ಯಕ್ರಮಗಳಿಗೆ ಬಳಕೆಯಾಗಬಾರದು. ಹೀಗಾಗಿ ಹಜ್‌ ಸಬ್ಸಿಡಿ ರದ್ದುಗೊಳಿಸಿದ ನಿರ್ಧಾರವನ್ನು ಧಾರ್ಮಿಕ ದೃಷ್ಟಿಕೋನದಿಂದ ನೋಡಬಾರದು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಅಮೆರಿಕ ಮತ್ತು ಇರಾಕ್‌ ನಡುವಿನ ಸಂಘರ್ಷ ಉಲ್ಬಣಿಸಿದೆ. ತೈಲ ಟ್ಯಾಂಕರ್‌ ಸ್ಫೋಟಿಸಿದ ಮತ್ತು ಅಮೆರಿಕ ಡ್ರೋನ್‌ ಅನ್ನು ಇರಾನ್‌ ಹೊಡೆದುರುಳಿಸಿದ ಬಳಿಕ ಉಭಯ ದೇಶಗಳು...

  • ಪ್ರಜಾಪ್ರಭುತ್ವದಲ್ಲಿ ವಿಪಕ್ಷಕ್ಕೆ ಹಾಗೂ ವಿಪಕ್ಷ ನಾಯಕನಿಗೆ ಬಹಳ ಮಹತ್ವವಿದೆ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಪಕ್ಷ ನಾಯಕನನ್ನು ಸರಕಾರದ ಅವಿಭಾಜ್ಯ...

  • ಸತ್ಯ ಎಲ್ಲಿದೆ... ಶಿಷ್ಯ ಕೇಳಿದ, ""ಸತ್ಯ ಎಲ್ಲಿದೆ?'' ಗುರು ಹೇಳಿದ, ""ಎಲ್ಲವನ್ನೂ ಅನುಮಾನಿಸುವ ಹತ್ತಿರದಲ್ಲೆಲ್ಲೋ ಸತ್ಯವಿದೆ!'' ""ಅಷ್ಟು ವಿಶ್ವಾಸದಿಂದ ಹೇಗೆ ಹೇಳುವೆ?'' ""ಇಲ್ಲ,...

  • ಕೇಂದ್ರ ಸರಕಾರ ರೈಲ್ವೇಯ ಭಾಗಶಃ ಸೇವೆಗಳನ್ನು ಖಾಸಗಿಯವರಿಗೊಪ್ಪಿಸುವ ಪ್ರಸ್ತಾವವನ್ನು ಕಾರ್ಯಗತಗೊಳಿಸುವ ಕುರಿತು ಚಿಂತಿಸುತ್ತಿದೆ. ರೈಲ್ವೇ ಸೇವೆಯನ್ನು...

  • ಬಿಹಾರದ ಮುಜಫ‌್ಫರಪುರದಲ್ಲಿ ಮಿದುಳು ಜ್ವರಕ್ಕೆ ಒಂದು ವಾರದಲ್ಲಿ 125ಕ್ಕೂ ಹೆಚ್ಚು ಮಕ್ಕಳು ಬಲಿಯಾಗಿರುವುದು ದೇಶ ತಲೆ ತಗ್ಗಿಸಬೇಕಾದ ಘಟನೆ. ದೇಶ ಸ್ವತಂತ್ರವಾಗಿ...

ಹೊಸ ಸೇರ್ಪಡೆ