ಸೇನೆಗೆ ಮಹಿಳೆಯರ ನೇಮಕಾತಿ ಸ್ಫೂರ್ತಿದಾಯಕ ನಡೆ

Team Udayavani, Nov 5, 2019, 5:29 AM IST

ದೇಶದ ಮೊದಲ ಮಹಿಳಾ ಸೇನಾ ನೇಮಕಾತಿ ರ್ಯಾಲಿಯಲ್ಲಿ ಬೆಳಗಾವಿ ಜಿಲ್ಲೆಯ 7 ಮಂದಿ ಮತ್ತು ಧಾರವಾಡ ಜಿಲ್ಲೆಯ ಓರ್ವ ಯುವತಿ ಸೇರಿ 8 ಮಂದಿ ಆಯ್ಕೆಯಾಗಿರುವುದು ಒಂದು ಸಕಾರಾತ್ಮಕ‌ ಬೆಳವಣಿಗೆ. ಸೇನೆಯ ಜನರಲ್‌ ಡ್ನೂಟಿ ಹುದ್ದೆಗೆ ಮಹಿಳೆಯರನ್ನು ನೇಮಿಸುವ ಪ್ರಕ್ರಿಯೆಯ ಅಂಗವಾಗಿ ದಕ್ಷಿಣ ಭಾರತಕ್ಕೆ 20 ಹುದ್ದೆಗಳನ್ನು ನಿಗದಿ ಗೊಳಿಸಲಾಗಿತ್ತು. ಈ 20 ಹುದ್ದೆಗಳಿಗೆ ಕರ್ನಾಟಕದಿಂದಲೇ 8 ಮಂದಿ ಆಯ್ಕೆಯಾಗಿರುವುದು ನಮ್ಮ ರಾಜ್ಯದ ಪಾಲಿಗೆ ಹೆಮ್ಮೆಯ ವಿಚಾರ. ಸೇನೆಗೆ ಆಯ್ಕೆಯಾಗಿರುವ ಮಹಿಳೆಯರ ಸಂಖ್ಯೆ ಬೆರಳೆಣಿಕೆಯದ್ದೇ ಆಗಿರಬಹುದು. ಆದರೆ ಉಳಿದವರಿಗೆ ಅದು ನೀಡಲಿರುವ ಸ್ಫೂರ್ತಿ ಮಾತ್ರ ದೊಡ್ಡದು. ಈ ಕಾರಣಕ್ಕೆ ಈ ವನಿತೆಯರ ನೇಮಕಾತಿಗೆ ಮಹತ್ವವಿದೆ.

ಸೇನೆಗೆ ಮಹಿಳೆಯರನ್ನು ನೇಮಿಸಿಕೊಳ್ಳಬೇಕೆಂಬ ವಿಚಾರ ಪ್ರಸ್ತಾವಕ್ಕೆ ಬಂದು ಅನೇಕ ವರ್ಷಗಳಾಗಿದ್ದರೂ ಅದು ಕಾರ್ಯರೂಪಕ್ಕೆ ಬರುತ್ತಿರುವುದು ಈಗ. ಗಗನಯಾನದಿಂದ ಹಿಡಿದು ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಪುರುಷರಿಗೆ ಸರಿಸಮಾನರಾಗಿ ಕೆಲವೊಮ್ಮೆ ಮಿಗಿಲಾಗಿ ಕಾರ್ಯವೆಸಗುತ್ತಿರುವಾಗ ಸೇನೆಯಲ್ಲಿ ಏಕೆ ಸಾಧ್ಯವಿಲ್ಲ ಎಂಬ ಪ್ರಶ್ನೆ ಕೇಳಿ ಬರುತ್ತಿತ್ತು. ಈ ಪ್ರಶ್ನೆಗೆ ಉತ್ತರವಾಗಿ ಇದೀಗ ಮಹಿಳಾ ಯೋಧರ ನೇಮಕಾತಿ ನಡೆಯುತ್ತಿದೆ.

ನಮ್ಮ ಇತಿಹಾಸ ಮತ್ತು ಪುರಾಣಗಳಲ್ಲಿ ಅನೇಕ ವೀರನಾರಿಯರ ಕತೆಗಳು ಸಿಗುತ್ತವೆ. ಝಾನ್ಸಿಯ ರಾಣಿ, ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ ಮುಂತಾದವರು ರಣರಂಗಕ್ಕೆ ಧುಮುಕಿ ಶತ್ರುಗಳ ರುಂಡ ಚೆಂಡಾಡಿದ ಇತಿಹಾಸವನ್ನು ನಾವು ಓದಿದ್ದೇವೆ. ಗತಕಾಲದ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯರು ಸೇನೆಗೆ ಸೇರುವುದು ನಿಷಿದ್ಧವಾಗಿರಲಿಲ್ಲ ಎನ್ನುವುದು ಇದರಿಂದ ತಿಳಿಯುತ್ತದೆ. ಆದರೆ ಅನಂತರ ಸೇನೆ, ಯುದ್ಧದಂಥ ಕಠಿಣ ಕ್ಷೇತ್ರಗಳು ಮಹಿಳೆಯರಿಗೆ ತಕ್ಕುದಲ್ಲ ಎಂಬ ಭಾವನೆಯೊಂದು ಬೆಳೆದು ಬಂದಿದೆ. ಪುರುಷ ಪ್ರಾಬಲ್ಯದ ಸಾಮಾಜಿಕ ವ್ಯವಸ್ಥೆಯೂ ಇದಕ್ಕೆ ಕಾರಣವಾಗಿರಬಹುದು. ಇಂಥ ಸಾಮಾಜಿಕ ಕಟ್ಟು ಪಾಡುಗಳ ಹೊರತಾಗಿಯೂ ಮಹಿಳೆಯರು ಪೊಲೀಸ್‌ ಇಲಾಖೆ, ಸಿಆರ್‌ಪಿಎಫ್ ಮತ್ತಿತರ ವಿಭಾಗಗಳಲ್ಲಿ ಸಕ್ರಿಯವಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಸೇನೆಯಲ್ಲಿ ಇಷ್ಟರತನಕ ಆರ್ಮಿ ಮೆಡಿಕಲ್‌ ಕಾಪ್ಸ್‌ì, ಆರ್ಮಿ ಡೆಂಟಲ್‌ ಕಾಪ್ಸ್‌ì, ಮಿಲಿಟರಿ ನರ್ಸಿಂಗ್‌ ಸರ್ವಿಸ್‌ನಂಥ ಕೆಲವು ವಿಭಾಗಗಳಿಗೆ ಮಾತ್ರ ಮಹಿಳೆಯರ ನೇಮಕಾತಿಯಾಗುತ್ತಿತ್ತು. ಶಾರ್ಟ್‌ ಸರ್ವಿಸ್‌ ಕಮಿಶನ್‌ನಲ್ಲಿ ಮೊದಲ ಮಹಿಳಾ ಕಾಪ್ಸ್‌ì ಅಸ್ತಿತ್ವಕ್ಕೆ ಬಂದದ್ದು 1992ರಲ್ಲಿ.

ಅಮೆರಿಕ, ಇಸ್ರೇಲ್‌, ರಷ್ಯಾ ಮುಂತಾದ ದೇಶಗಳು ಸೇನೆಗೆ ಮಹಿಳೆಯರನ್ನು
ಸೇರಿಸಲು ತೊಡಗಿ ಅನೇಕ ವರ್ಷಗಳಾಗಿವೆ. ಅಮೆರಿಕದ ಮಹಿಳಾ ಯೋಧ ರಂತೂ ಅಫ್ಘಾನಿಸ್ತಾನ, ಇರಾಕ್‌ನಂಥ ದುರ್ಗಮ ಯುದ್ಧ ಭೂಮಿಗಳಲ್ಲಿ ಪುರುಷರಷ್ಟೇ ಸಮರ್ಥವಾಗಿ ಹೋರಾಡುತ್ತಿರುವುದನ್ನು ನಾವು ನೋಡಿದ್ದೇವೆ.

ಸೇನೆಗೆ ಮಹಿಳೆಯರನ್ನು ನೇಮಿಸುವುದು ಮಹಿಳಾ ಸ್ವಾತಂತ್ರ್ಯದಲ್ಲಿ,
ಲಿಂಗ ಸಮಾನತೆಯಲ್ಲಿ ಮಹತ್ವದ ಹೆಜ್ಜೆ ಎಂದೆಲ್ಲ ಬಣ್ಣಿಸುವ ಅಗತ್ಯವಿಲ್ಲ.

ಹೀಗೆ ಲಿಂಗ ಸಮಾನತೆ ನೀಡಲು ಸೇನೆಯೇನೂ ಉದ್ಯೋಗ ಖಾತರಿ ಯೋಜನೆಯಲ್ಲ. ಇದು ದೇಶದ ಭದ್ರತೆಗೆ ಸಂಬಂಧಪಟ್ಟ ವಿಚಾರ. ಇಲ್ಲಿ ಪುರುಷರಷ್ಟೇ ಸಾಮರ್ಥ್ಯದಿಂದ ಮಹಿಳೆಯರೂ ಯುದ್ಧ ಭೂಮಿಯಲ್ಲಿ ಹೋರಾಡಬೇಕಿದೆ. ಈ ನೆಲೆಯಲ್ಲಿ ಹೇಳುವುದಾದರೆ ಮಹಿಳೆಯರಿಗೆ ಇದು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಸಿಕ್ಕಿರುವ ಅವಕಾಶ.

ಹೆಚ್ಚು ಕಡಿಮೆ ಪುರುಷರಷ್ಟೇ ಮಹಿಳಾ ಜನಸಂಖ್ಯೆಯಿರುವ ದೇಶದಲ್ಲಿ ಮಹಿಳೆಯರೂ ಇನ್ನೂ ಕೆಲವು ಕ್ಷೇತ್ರಗಳಿಂದ ಹೊರಗುಳಿದಿದ್ದಾರೆ ಎನ್ನುವುದು ಶೋಭೆ ತರುವ ವಿಚಾರವಲ್ಲ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಮಹಿಳೆಯರನ್ನು ಸೇನೆಗೆ ಸೇರಿಸಿಕೊಳ್ಳುವ ನಿರ್ಧಾರ ಸಣ್ಣದೇ ಆಗಿದ್ದರೂ ಭವಿಷ್ಯದಲ್ಲಿ ಅದು ದೇಶದ ಭದ್ರತಾ ವ್ಯವಸ್ಥೆಯಲ್ಲಿ ಮಾತ್ರವಲ್ಲದೆ ಸಾಮಾಜಿಕ ವ್ಯವಸ್ಥೆಯಲ್ಲೂ ಅಗಾಧವಾದ ಪರಿಣಾಮವನ್ನು ಬೀರಲಿದೆ. ಮೂರೂ ಸೇನೆಯ ಎಲ್ಲ ವಿಭಾಗಗಳಿಗೂ ಮಹಿಳೆಯರನ್ನು ನೇಮಿಸುವತ್ತ ಮುಂದಿನ ನಡೆಯಿರಬೇಕು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ