ಸೈದ್ಧಾಂತಿಕ ನೆಲೆಗಟ್ಟು ಅಂತ್ಯವಾಗಬೇಕು

Team Udayavani, Oct 29, 2019, 5:48 AM IST

ಐಸಿಸ್‌ ಸ್ಥಾಪಕ ಹತ್ಯೆಯಾಗಿರುವುದರಿಂದ ಈ ಸಂಘಟನೆ ದುರ್ಬಲಗೊಳ್ಳುವುದು ನಿಶ್ಚಿತ. ಜಿಹಾದಿ ಸಂಘಟನೆಗಳಿಗೆ ಬಾಗ್ಧಾದಿ ಹತ್ಯೆ ದೊಡ್ಡ ಹೊಡೆತ ನೀಡಿದೆ. ಆದರೆ ಇಲ್ಲಿಗೆ ಐಸಿಸ್‌ ನಾಮಾವಶೇಷ ಆಗುತ್ತದೆ ಎನ್ನುವಂತಿಲ್ಲ. ಏಕೆಂದರೆ ಬಾಗ್ಧಾದಿ ಬಿತ್ತಿದ ವಿಷ ಬೀಜ ಜಗತ್ತಿನೆಲ್ಲೆಡೆ ಮೊಳಕೆಯೊಡೆದಿದೆ.

ಕಳೆದ ಸುಮಾರು ಒಂದು ದಶಕದಿಂದ ಲೋಕಕಂಟಕನಾಗಿ ಮೆರೆಯುತ್ತಿದ್ದ ಐಸಿಸ್‌ ಉಗ್ರ ಸಂಘಟನೆಯ ಸ್ಥಾಪಕ ಅಬು ಬಕ್ರ್ ಅಲ್‌ ಬಾಗ್ಧಾದಿಯನ್ನು ಸಾಯಿಸುವ ಮೂಲಕ ಅಮೆರಿಕ ಜಗತ್ತಿಗೆ ನೆಮ್ಮದಿ ನೀಡಿದೆ. ಪಾಕಿಸ್ಥಾನದಲ್ಲಿ ಅಡಗಿಕೊಂಡಿದ್ದ ಅಲ್‌-ಕಾಯಿದಾ ಸ್ಥಾಪಕ ಉಸಾಮ ಬಿನ್‌ ಲಾದೆನನ್ನು ಬೇಟೆಯಾಡಿದ ರೀತಿಯಲ್ಲೇ ಅಮೆರಿಕದ ಯೋಧರು ಬಾಗ್ಧಾದಿಯನ್ನು ಬೇಟೆಯಾಡಿದ್ದಾರೆ. ಈ ಮಾದರಿಯ ಕಾರ್ಯಾಚರಣೆಯಲ್ಲಿ ಅಮೆರಿಕದ ಯೋಧರಿಗೆ ಅವರೇ ಸಾಟಿ. ಮಾಹಿತಿ ಕಲೆ ಹಾಕುವುದು, ಕಾರ್ಯಾಚರಣೆಯ ರಹಸ್ಯ ಕಾಪಾಡುವುದು, ಕಾರ್ಯಾ ಚರಣೆಯ ತಯಾರಿ ನಡೆಸುವುದು ಹೀಗೆ ಎಲ್ಲ ರೀತಿಯಲ್ಲೂ ಅಮೆರಿಕದ ಯೋಧರು ಪರಿಪಕ್ವತೆಯನ್ನು ಕಾಯ್ದು ಕೊಂಡಿದ್ದರು. ಸುಮಾರು ಒಂದೂವರೆ ವರ್ಷದ ಹಿಂದೆಯೇ ಬಾಗ್ಧಾದಿ ಸಿರಿ ಯಾದ ವಾಯವ್ಯ ಭಾಗದಲ್ಲಿ ಅಡಗಿ ಕೊಂಡಿರುವ ಮಾಹಿತಿ ಸಿಕ್ಕಿದ ಬಳಿಕ ಗುಪ್ತಚರ ಪಡೆ ನಿರಂತರವಾಗಿ ಅವನ ಬೆನ್ನು ಬಿದ್ದಿತ್ತು. ಕೊನೆಗೂ ಶನಿವಾರ ಈ ನರರೂಪದ ರಕ್ಕಸನ ಕತೆ ಮುಗಿದಿದ್ದು, ಜಗತ್ತನ್ನು ದೊಡ್ಡದೊಂದು ಸಂಕಟ ದಿಂದ ಪಾರು ಮಾಡಿದ ಅಮೆರಿಕ ಯೋಧರ ಶೌರ್ಯವನ್ನು ಮೆಚ್ಚಲೇ ಬೇಕು.

ಇರಾಕ್‌ನಲ್ಲಿ ಹುಟ್ಟಿದ್ದ ಐಸಿಸ್‌ ಕ್ಷಿಪ್ರವಾಗಿ ಉಳಿದೆಡೆಗಳಿಗೂ ತನ್ನ ಜಾಲ ವಿಸ್ತರಿಸಿತ್ತು. ಇರಾಕ್‌, ಸಿರಿಯ ಮಾತ್ರ ವಲ್ಲದೆ ಈಜಿಪ್ಟ್, ಸೌದಿ ಅರೆಬಿಯ, ಯೆಮೆನ್‌, ನೈಜೀರಿಯ, ಅಫ್ಘಾನಿಸ್ಥಾನ, ಶ್ರೀಲಂಕ, ಇಂಡೋನೇಷ್ಯಾ, ಫಿಲಿಪೈನ್ಸ್‌ ಸೇರಿದಂತೆ ತೃತೀಯ ಜಗತ್ತಿನ ಹಲವು ದೇಶಗಳಲ್ಲಿ ಈ ಉಗ್ರ ಸಂಘಟನೆ ಸಕ್ರಿಯವಾಗಿದೆ. ಭಾರತದಲ್ಲಿ ಐಸಿಸ್‌ ತಳವೂರಿದ್ದು 2014ರಲ್ಲೇ ದೃಢವಾಗಿತ್ತು.

ಕಾಶ್ಮೀರ, ಮಹಾರಾಷ್ಟ್ರ, ಕೇರಳ, ಕರ್ನಾಟಕ ಸೇರಿದಂತೆ ಉತ್ತರ ಮತ್ತು ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಯುವಕರ ಬ್ರೈನ್‌ವಾಶ್‌ ಮಾಡಿ ಉಗ್ರ ಸಂಘಟನೆಗೆ ಸೇರಿಸಿಕೊಳ್ಳಲಾಗಿತ್ತು. ಕೇರಳದ 27 ಮಂದಿ ಐಸಿಸ್‌ ಸೇರಿದ್ದು ದೃಢವಾದಾಗ ಇಡೀ ದೇಶ ಬೆಚ್ಚಿ ಬಿದ್ದಿತ್ತು. ಅನಂತರವೂ ಐಸಿಸ್‌ ಸೇರುವವರ ಸಂಖ್ಯೆ ಹೆಚ್ಚುತ್ತಲೇ ಇತ್ತು. ಈ ರಾಜ್ಯವೊಂದರಿಂದಲೇ 100ಕ್ಕೂ ಹೆಚ್ಚು ಮಂದಿ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದರು. ಇದಕ್ಕಿಂತಲೂ ಹೆಚ್ಚು ಗಾಬರಿಯಾಗಿದ್ದು ಮೊದಲೇ ಉಗ್ರರ ಉಪಟಳದಿಂದ ಹೈರಾಣಾಗಿದ್ದ ಕಾಶ್ಮೀರದಲ್ಲಿ ಐಸಿಸ್‌ ನೆಲೆಯೂರಿದ ವಿಚಾರ ಬಹಿರಂಗವಾದಾಗ. ಅನಂತರದ ದಿನಗಳಲ್ಲಿ ಅಲ್ಲಿ ನಡೆಯುತ್ತಿದ್ದ ಪ್ರತಿಭಟನೆಗಳಲ್ಲಿ ಐಸಿಸ್‌ನ ಕಪ್ಪು ಧ್ವಜ ಹಾರುವುದು ಸಾಮಾನ್ಯ ದೃಶ್ಯವಾಗಿತ್ತು.

ಐಸಿಸ್‌ ತನ್ನ ಕಲ್ಪನೆಯ ಖಲೀಫಾ ಸಾಮ್ರಾಜ್ಯದಲ್ಲಿ ಭಾರತವನ್ನೂ ಸೇರಿಸಿತ್ತು ಹಾಗೂ ಇದನ್ನು ಸಾಕಾರಗೊಳಿಸಲು ನಿರಂತರವಾಗಿ ಪ್ರಯತ್ನ ಗಳನ್ನು ನಡೆಸಿತ್ತು. ಎಲ್ಲ ಆಧುನಿಕ ಸಂಪರ್ಕ ಮಾಧ್ಯಮಗಳ ಮೂಲಕ ಅದು ಯುವಕ-ಯುವತಿಯರನ್ನು ಸೆಳೆಯಲು ಪ್ರಯತ್ನಿಸುತ್ತಿತ್ತು.

ಐಸಿಸ್‌ ಸ್ಥಾಪಕ ಹತ್ಯೆಯಾಗಿರುವುದರಿಂದ ಈ ಸಂಘಟನೆ ದುರ್ಬಲಗೊಳ್ಳುವುದು ನಿಶ್ಚಿತ. ಜಿಹಾದಿ ಸಂಘಟನೆಗಳಿಗೆ ಬಾಗ್ಧಾದಿ ಹತ್ಯೆ ದೊಡ್ಡ ಹೊಡೆತ ನೀಡಿದೆ. ಆದರೆ ಇಲ್ಲಿಗೆ ಐಸಿಸ್‌ ನಾಮಾವಶೇಷವಾಗುತ್ತದೆ ಎನ್ನುವಂತಿಲ್ಲ. ಏಕೆಂದರೆ ಬಾಗ್ಧಾದಿ ಬಿತ್ತಿದ ವಿಷ ಬೀಜ ಜಗತ್ತಿನೆಲ್ಲೆಡೆ ಮೊಳಕೆಯೊಡೆದಿದೆ. ಅದರ ಉಗ್ರ ಸಿದ್ಧಾಂತ ಇನ್ನೂ ಜೀವಂತವಾಗಿದೆ. ಅದು ಇನ್ನೊಂದು ರೂಪದಲ್ಲಿ ಮೊಳಕೆಯೊಡೆಯಬಹುದು. ಈಗಲೂ ಸುಮಾರು 18,000 ಐಸಿಸ್‌ ಉಗ್ರರು ಜೀವಂತವಾಗಿದ್ದಾರೆ ಎಂಬ ಮಾಹಿತಿ ಕಳೆದ ತಿಂಗಳಷ್ಟೇ ಬಹಿರಂಗವಾಗಿತ್ತು. ಅಲ್ಲದೆ ಐಸಿಸ್‌ನ ನೂರಾರು ಸುಪ್ತ ಘಟಕಗಳು ಈಗಲೂ ಸಕ್ರಿಯವಾಗಿವೆ. ಕೆಲ ಸಮಯದ ಹಿಂದೆ ಶ್ರೀಲಂಕದಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟವೇ ಈ ಸಂಘಟನೆ ಎಷ್ಟು ಅಪಾಯಕಾರಿ ಎನ್ನುವುದಕ್ಕೊಂದು ಉದಾಹರಣೆ. ಬಾಗ್ಧಾದಿ ಸತ್ತರೂ ಐಸಿಸ್‌ನ ಅಪಾಯ ಇನ್ನೂ ದೂರವಾಗಿಲ್ಲ. ಉಗ್ರ ಸಂಘಟನೆಗಳ ಸೈದ್ಧಾಂತಿಕ ನೆಲೆಗಟ್ಟನ್ನು ಸೋಲಿಸಿದಾಗಲೇ ಅವುಗಳಿಗೆ ಅಂತ್ಯ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ